ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ನಿನ್ನೆ ಶಿಫಾರಸ್ಸುಗೊಂಡಿರುವ ನ್ಯಾಯಾಧೀಶರುಗಳಿಗಿಂತ ಹಿರಿಯರಾದ ತ್ರಿಪುರ ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರಾದ ಜಸ್ಟೀಸ್ ಖುರೇಷಿ ಯವರನ್ನು ಏಕೆ ಸುಪ್ರೀಂ ನ್ಯಾಯಮೂರ್ತಿಯಾಗಿ ಆಯ್ಕೆ ಮಾಡಲಿಲ್ಲ?
ಮೋದಿ ಸರ್ಕಾರ ಪೆಗಾಸಸ್ ಬೇಹು ತಂತ್ರಜ್ಞಾನ ಖರೀದಿಸಿತ್ತೋ ಇಲ್ಲವೋ ಎಂದು ಉತ್ತರಿಸುವುದು ರಾಷ್ಟ್ರ ಭದ್ರತೆಯ ವಿಷಯವೇ?
ಜಸ್ಟೀಸ್ NV ರಮಣ ಅವರು ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಮೋದಿ ಸರ್ಕಾರದ ಮುಲಾಜಿಲ್ಲದೆ ಕೊಟ್ಟ ಕೆಲವು ಸ್ವತಂತ್ರ ತೀರ್ಮಾನಗಳು ಉನ್ನತ ನ್ಯಾಯಾಂಗದ ಬಗ್ಗೆ ಮತ್ತೆ ಭರವಸೆಗಳನ್ನು ಮೂಡಿಸಿತ್ತಷ್ಟೇ..
ಆದರೆ ಸುಪ್ರೀಂ ಕೋರ್ಟಿನ ಹಾಗೂ ದೇಶದ ಭವಿಷ್ಯದ ದಿಕ್ಕಿನ ಮೇಲೆ ಪ್ರಭಾವ ಬೀರಬಹುದಾದ ಎರಡು ಪ್ರಮುಖ ನಿರ್ಣಯಗಳಲ್ಲಿ ಮತ್ತೆ ಮೋದಿ ಸರ್ಕಾರದ ಕರಾಳ ನೆರಳುಗಳು ಕಾಣಿಸಿಕೊಳ್ಳುತ್ತಿರುವುದು ಆತಂಕ ಮೂಡಿಸುವಂತಿದೆ.
1. ತ್ರಿಪುರಾದ ಮುಖ್ಯ ನ್ಯಾಯಮೂರ್ತಿ ಖುರೇಷಿಯವರನ್ನು ಸುಪ್ರೀಂ ಕೋರ್ಟಿಗೆ ಪದೋನ್ನತಿಗೆ ಪರಿಗಣಿಸದಿರುವುದರ ಹಿಂದಿನ ಕಾರಣವೇನು?
– ಕಳೆದ 22 ತಿಂಗಳಿಂದ ಸುಪ್ರೀಂ ಕೋರ್ಟಿಗೆ ಹೊಸ ನ್ಯಾಯಾಧೀಶರಾರು ನೇಮಕವಾಗಿರಲಿಲ್ಲ. ಏಕೆಂದರೆ ಅದರ ಬಗ್ಗೆ ಶಿಫಾರಸ್ಸು ಮಾಡಬೇಕಿದ್ದ ಸುಪ್ರೀಂ ಕೋರ್ಟಿನ ಐವರು ಅತಿ ಹಿರಿಯ ನ್ಯಾಯಾಧೀಶರ ಕೊಲಿಜಿಯಂ ನಲ್ಲಿ ಒಂದು ಹೆಸರಿನ ಬಗ್ಗೆ ಏಕಾಭಿಪ್ರಾಯವಿರಲಿಲ್ಲ.
ಆ ಹೆಸರು ಈಗ ತ್ರಿಪುರಾದ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿರುವ ನ್ಯಾಯಾಧೀಶ ಅಖಿಲ್ ಖುರೇಷಿಯವರದ್ದು.
ಈಗ ಸುಪ್ರೀಂಕೋರ್ಟಿನ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದಿರುವ ಒಂಭತ್ತು ನ್ಯಾಯಾಧೀಶರಲ್ಲಿ ಬಹುಪಾಲು ನ್ಯಾಯಮೂರ್ತಿಗಳಿಗಿಂತ ಖುರೇಷಿಯವರು ಹಿರಿಯರು. ಆದರೂ ಅವರಿಗ್ಯಾಕೆ ಬಡ್ತಿ ಕೊಡಲಿಲ್ಲ?
ಕಾರಣ ನಿಗೂಢವೇನಲ್ಲ. ಖುರೇಷಿಯವರು ಬಾಂಬೆ ಹೈಕೋರ್ಟಿನ ಹಿರಿಯ ನ್ಯಾಯಾಧೀಶರಾಗಿದ್ದಾಗ ಗುಜರಾತಿನಲ್ಲಿ ಶೊಹ್ರಾಬುದ್ದೀನ್ ಏನ್ಕೌಂಟರ್ ಪ್ರಕರಣದಲ್ಲಿ ಆಪಾದಿತರಾಗಿದ್ದ ಈಗಿನ ಗೃಹಮಂತ್ರಿ ಅಮಿತ್ ಷಾ ರವರನ್ನು ವಿಚಾರಣೆಗೆಂದು ಸಿಬಿಐ ಕಸ್ಟಡಿಗೆ ಒಪ್ಪಿಸಿದ್ದರು.
2014ರಲ್ಲಿ ಬಿಜೆಪಿಯೇ ಅಧಿಕಾರಕ್ಕೆ ಬಂದ ನಂತರ ಈ ಸೇಡನ್ನು ಕಾಪಿಟ್ಟುಕೊಂಡಿದ್ದ ಮೋದಿ-ಶಾ ಸರ್ಕಾರ ಎಲ್ಲ ಹಂತದಲ್ಲೂ ಖುರೇಷಿಯವರಿಗೆ ತೊಂದರೆ ಕೊಡಲು ಪ್ರಾರಂಭಿಸಿತು.
2019ರಲ್ಲಿ ಖುರೇಷಿಯರನ್ನು 40 ನ್ಯಾಯಾಧೀಶರಿರುವ ಮಧ್ಯಪ್ರದೇಶದ ಹೈಕೋರ್ಟಿಗೆ ಮುಖ್ಯ ನ್ಯಾಯಮೂರ್ತಿಯಾಗಿ ಪದೋನ್ನತಿ ವರ್ಗಾವಣೆ ಮಾಡಿ ಕೊಲಿಜಿಯಂ ಕಳಿಸಿದ್ದ ಶಿಪಾರಸ್ಸನ್ನು ಮೋದಿ ಸರ್ಕಾರ ಒಪ್ಪಿಕೊಳ್ಳಲೇ ಇಲ್ಲ.
ಆ ನಂತರ ಮೋದಿ ಸರ್ಕಾರದ ಒತ್ತಡಕ್ಕೆ ಮಣಿದ ಸುಪ್ರೀಂಕೋರ್ಟ್ ಖುರೇಷಿಯವರನ್ನು ಕೇವಲ 4 ನ್ಯಾಯಾಧೀಶರಿರುವ ತ್ರಿಪುರಾದ ಹೈಕೋರ್ಟಿಗೆ ಮುಖ್ಯ ನ್ಯಾಯಾಧೀಶರಾಗಿ ವರ್ಗಾವಣೆ ಮಾಡಿತು.
ನಂತರ 2020ರಲ್ಲಿ ಸುಪ್ರೀಂ ಕೋರ್ಟಿಗೆ ಹೈಕೋರ್ಟಿನಿಂದ ಪದೋನ್ನತಿ ಪಡೆಯಬೇಕಾದ ಮುಖ್ಯ ನ್ಯಾಯಾಧೀಶರ ಪಟ್ಟಿಯಲ್ಲಿ ಯಾವಾಗಲೂ ಖುರೇಷಿಯವರ ಹೆಸರೇ ಪ್ರಥಮವಾಗಿರುತ್ತಿತ್ತು.
ಆದರೆ ಆಗಿನ ಮುಖ್ಯ ನ್ಯಾಯಾಧೀಶರಾಗಿದ್ದ ಬೋಬಡೆಯವರು ನ್ಯಾಯದ ಪ್ರತಿನಿಧಿಯಾಗದೆ ಮೋದಿಯ ಪ್ರತಿನಿಧಿಯಾಗಿ ವರ್ತಿಸುತ್ತಾ ಖುರೇಷಿಯವರ ಹೆಸರನ್ನು ಕೈಬಿಟ್ಟು ಉಳಿದವರನ್ನು ಸೂಚಿಸುತ್ತಿದ್ದರು.
ಆದರೆ the wire ನಂತ ಕೆಲವು ಪತ್ರಿಕೆಗಳ ಅಧ್ಯಯನ ವರದಿಗಳು ಸೂಚಿಸುವಂತೆ, ಆಗ ಸುಪ್ರೀಂ ಕೋರ್ಟಿನ ಕೊಲಿಜಿಯಂನಲ್ಲಿದ್ದ ನ್ಯಾಯಮೂರ್ತಿ ರೊಹಿಂಗ್ಟನ್ ನಾರಿಮನ್ ಅವರು ಈ ಅನ್ಯಾಯವನ್ನು ಖಡಾಖಂಡಿತವಾಗಿ ವಿರೋಧಿಸುತ್ತ ಬಂದಿದ್ದರು.
ಹೀಗಾಗಿ ನಾರಿಮನ್ ಅವರು ಕೊಲಿಜಿಯಂನಲ್ಲಿ ಇರುವ ತನಕ ಖುರೇಶಿಯವರ ಜೊತೆಗೆ ಯಾರ ಪದೋನ್ನತಿಯೂ ಆಗಿರಲಿಲ್ಲ. ಮೊನ್ನೆ ಆಗಸ್ಟ್ 12 ರಂದು ನಾರಿಮನ್ ಅವರು ನಿವೃತ್ತರಾದರು.
ಅವರ ನಿವೃತ್ತಿಯೊಂದಿಗೆ ಮುಖ್ಯ ನ್ಯಾಯಮೂರ್ತಿ ರಮಣ, ನ್ಯಾಯಮೂರ್ತಿ ಕಾನ್ವಿಲ್ಕರ್, ಲಲಿತ್, ಚಂದ್ರಚೂಡ್, ಮತ್ತು ನಾಗೇಶ್ವರರಾವ್ ಅವರನ್ನೊಳಗೊಂಡ ಹೊಸ ಕೊಲಿಜಿಯಂ ರೂಪುಗೊಂಡಿತು.
ನ್ಯಾಯಮೂರ್ತಿ ನಾರಿಮನ್ ಇಲ್ಲದ ಹೊಸ ಕೊಲಿಜಿಯಂನ ಮೊತ್ತ ಮೊದಲ ಸಭೆಯಲ್ಲೇ ಅತ್ಯಂತ ಹಿರಿಯರಾದ ನ್ಯಾಯಮೂರ್ತಿ ಖುರೇಷಿಯವರನ್ನು ಕೈಬಿಟ್ಟು ಅವರಿಗಿಂತ ಕಿರಿಯರಾದ ಒಂಭತ್ತು ನ್ಯಾಯಾಧೀಶರನ್ನು ಸುಪ್ರೀಂ ಕೋರ್ಟಿಗೆ ಆಯ್ಕೆ ಮಾಡಲಾಗಿದೆ.
ನ್ಯಾಯಮೂರ್ತಿ ಖುರೇಷಿಯವರನ್ನು ಕೈಬಿಟ್ಟಿರುವುದಕ್ಕೆ ಯಾವ ಕಾರಣವನ್ನು ಈವರೆಗೆ ಸುಪ್ರೀಂ ಕೋರ್ಟಿನ ಹಿರಿಯ ನ್ಯಾಯಾಧೀಶರ ಕೊಲಿಜಿಯಂ ಒದಗಿಸಿಲ್ಲ.
ಅಂದರೆ… ಮತ್ತೊಮ್ಮೆ ಮೋದಿ ಸರ್ಕಾರದ ಒತ್ತಡಕ್ಕೆ ಉನ್ನತ ನ್ಯಾಯಾಂಗ ಮಣಿಯಿತೇ?
2. ಪೆಗಾಸಸ್ ಅನ್ನು ಭಾರತ ಸರ್ಕಾರ ಖರೀದಿಸಿದೆಯೇ ಇಲ್ಲವೇ ಎಂಬ ಮಾಹಿತಿ ದೇಶದ ಭದ್ರತೆಯ ವಿಷಯವೇ?
– ಪೆಗಾಸಸ್ ಗೂಢಚರ್ಯೆ ಪ್ರಕರಣ ಹೇಗೆ ಈ ದೇಶದ ಸಾರ್ವಭೌಮತೆ ಯನ್ನೂ ಹಾಗು ಈ ದೇಶದ ಮಾಧ್ಯಮ ಹಾಗೂ ಭಿನ್ನಮತದ ಸ್ವಾತಂತ್ರ್ಯವನ್ನು ಉಲ್ಲಂಘಿಸಿದೆ ಎಂಬುದು ಈಗ ಎಲ್ಲರಿಗೂ ಗೊತ್ತಿರುವ ವಿಚಾರ .
ಈಗ ಆ ಪ್ರಕರಣ ಸುಪ್ರೀಂ ಕೋರ್ಟಿನಲ್ಲಿ ಮುಖ್ಯ ನ್ಯಾಯಮೂರ್ತಿ ರಮಣ ಅವರ ಪೀಠದ ಮುಂದಿದೆ.
ಮೋದಿ ಸರ್ಕಾರ ಈ ಪ್ರಕರಣದಲ್ಲಿ ಅಡಕತ್ತರಿಯಲ್ಲಿ ಸಿಲುಕಿಕೊಂಡಿದೆ.
ಏಕೆಂದರೆ ಈಗಾಗಲೇ ಪೆಗಾಸಸ್ ಅನ್ನು ಬಳಸಿ ಕೆಲವು ಪತ್ರಕರ್ತರ ಮೇಲೆ ಬೇಹುಗಾರಿಕೆ ನಡೆಸಿರುವುದಕ್ಕೆ ನಿರಾಕರಿಸಲಾಗದ ಪುರಾವೆಗಳು ಸಿಕ್ಕಿದೆ. ಮತ್ತೊಂದು ಕಡೆ ಪೆಗಾಸಸ್ ಮಾರುವ ಇಸ್ರೇಲಿನ NSO ಕಂಪನಿ ಅದನ್ನು ಸರ್ಕಾರಗಳಿಗೆ ಮಾತ್ರವೇ ಮಾರಿರುವುದಾಗಿ ಸ್ಪಷ್ಟಪಡಿಸಿದೆ.
ಹೀಗಾಗಿ ಭಾರತದಲ್ಲಿ ಪೆಗಾಸಸ್ ಬಳಕೆಯಾಗಿದೆ ಎಂದರೆ ಅದನ್ನು ಭಾರತ ಸರ್ಕಾರವೇ ಖರೀದಿಸಿರಬೇಕು. ಹೀಗಾಗಿ ಪತ್ರಕರ್ತರ ಮೇಲೆ ಬೇಹುಗಾರಿಕೆ ನಡೆಸಲು ಸರ್ಕಾರವೇ ಬಳಸಿರಬೇಕು.
ಆದರೆ ಇದಕ್ಕೆ ಯಾವುದೇ ಕಾನೂನಿನ ಬೆಂಬಲವಿಲ್ಲ. ಹೀಗಾಗಿ ಸರ್ಕಾರ ಮಾಡಿದ್ದರೆ ಅದು ಕಾನೂನು ಬಾಹಿರ, ಸಂವಿಧಾನ ವಿರೋಧಿ…
ಹೀಗಾಗಿ ಸುಪ್ರೀಂ ಕೋರ್ಟಿನಲ್ಲಿ ದಾವೆ ಹೂಡಿರುವ ಅರ್ಜಿದಾರರು ಭಾರತ ಸರ್ಕಾರವು ಪೆಗಾಸಸ್ ಅನ್ನು ಖರೀದಿಸಿದೆಯೋ ಇಲ್ಲವೋ ಎಂಬ ಸರಳ ಪ್ರಶ್ನೆಗೆ ಮೋದಿ ಸರ್ಕಾರದಿಂದ ಉತ್ತರ ಬಯಸುತ್ತಿದ್ದಾರೆ…
ಆದರೆ ಸರ್ಕಾರ ಆ ಮಾಹಿತಿ ದೇಶದ ಭದ್ರತೆಗೆ ಸಂಬಂಧಪಟ್ಟ ವಿಷಯವಾದ್ದರಿಂದ ಉತ್ತರ ಕೊಡಲು ಸಾಧ್ಯವಿಲ್ಲ ಎಂದು ಜಾರಿಕೊಳ್ಳುತ್ತಿದೆ.
ಈ ಬಗ್ಗೆ ಪ್ರಶ್ನಿಸುವ ಅಧಿಕಾರ ಹೊಂದಿರುವ ಸದನದ ಸಮಿತಿಯ ಮುಂದೆ ಅಧಿಕಾರಿಗಳು ಹಾಜರಾಗದಂತೆ ತಡೆಯುತ್ತಿದೆ. ಮತ್ತೊಂದು ಕಡೆ ಬೇಕಿದ್ದರೆ ಈ ವಿಷಯದ ಬಗ್ಗೆ ತನಿಖೆ ಮಾಡಲು ಸಿದ್ಧ ಎಂದು ಹೇಳುತ್ತಿದೆ.
ಅಂದರೆ ತಾನು ಮಾಡಿರಬಹುದಾದ ಅಪರಾಧದ ಬಗ್ಗೆ ತಾನೇ ‘ಆತ್ಮನಿರ್ಭರ’ ತನಿಖೆ ಮಾಡಿಕೊಳ್ಳುವುದು! ಈ ವಾದ ಮೋದಿ ಸರ್ಕಾರ ಎದುರಾಗಿರುವ ಕುತ್ತಿನಿಂದ ಬಚಾವಾಗಲು ಬಳಸುತ್ತಿರುವ ತಂತ್ರ ಎಂದು ಎಂಬುದು ಸ್ಪಷ್ಟ.
ಹೀಗಾಗಿ ದೇಶದ ಸಾರ್ವಭೌಮತೆಗೆ ಸಂಬಂಧಪಟ್ಟ ಈ ವಿಷಯದಲ್ಲಿ ಸುಪ್ರೀಂಕೋರ್ಟ್ ಸರ್ಕಾರದ ಬಗ್ಗೆ ಕಠಿಣ ನಿಲುವು ತಳೆಯಬಹುದು ಎಂದು ನಿರೀಕ್ಷಿಸಲಾಗಿತ್ತು.
ಆದರೆ ಮುಖ್ಯ ನ್ಯಾಯಮೂರ್ತಿಗಳ ಪೀಠ ಈ ಬಗ್ಗೆ ಸರ್ಕಾರ ಮುಂದಿಟ್ಟಿರುವ ಆಳವಾದ ತನಿಖೆಯ ಪ್ರಸ್ತಾಪದಿಂದ ತೃಪ್ತವಾದಂತೆ ಕಾಣುತ್ತಿದೆ.
ಹಾಗೂ “ದೇಶದ ಭದ್ರತೆಗೆ ಸಂಬಂಧಪಟ್ಟ ವಿಷಯದ ಬಗ್ಗೆ ಯಾವುದೇ ಮಾಹಿತಿಯನ್ನು ಕೊಡಬೇಕೆಂದು ಕೋರ್ಟು ಕಡ್ಡಾಯ ಮಾಡುವುದಿಲ್ಲ” ವೆಂದು ಭರವಸೆಯನ್ನೂ ನೀಡಿದೆ.
ಆ ಮೂಲಕ, ಮೋದಿ ಸರ್ಕಾರ ದೇಶದ ಭದ್ರತೆಯ ವಿಷಯದಲ್ಲಿ ಮಾಡಿರಬಹುದಾದ ಅಪರಾಧದಿಂದ ಬಚಾವಾಗಲು ಸುಪ್ರೀಂ ಕೋರ್ಟು ಅವಕಾಶ ಕೊಟ್ಟಂತಾಗಲಿಲ್ಲವೇ?
ಪೆಗಾಸಸ್ ಅನ್ನು ಬಳಸಿ ಯಾರ್ಯಾರ ಮೇಲೆ ಬೇಹುಗಾರಿಕೆ ನಡೆಸಲಾಗಿದೆ ಎಂಬ ವಿವರ ಹೇಳುವುದು ದೇಶದ ಭದ್ರತೆಗೆ ಸಂಬಂಧಪಟ್ಟ ವಿಷಯವಾಗಬಹುದಾಗಲೀ, ಪೆಗಾಸಸ್ ಅನ್ನು ದೇಶ ಕೊಂಡಿದೆಯೋ ಇಲ್ಲವೋ ಎಂಬುದು ಹೇಗೆ ದೇಶ ಭದ್ರತೆಯ ವಿಷಯವಾದೀತು?
ಅದರಲ್ಲೂ ಮೋದಿ ನಿಲುವುಗಳನ್ನು ವಿರೋಧಿಸುವ ಪತ್ರಕರ್ತರ ಮೇಲೆ ನಡೆಸುವ ಬೇಹುಗಾರಿಕೆ ದೇಶರಕ್ಷಣೆಯ ವಿಷಯ ಹೇಗಾದೀತು?
ಇತ್ತೀಚಿನ ಈ ಎರಡು ಪ್ರಕರಣಗಳು ಏನಾದರೂ ಸಂದೇಶ ಕೊಡುತ್ತಿವೆಯೇ?
ಮುಖ್ಯ ನ್ಯಾಯಮೂರ್ತಿ ರಮಣ ಹಾಗೂ ನ್ಯಾಯಮೂರ್ತಿ ಚಂದ್ರಚೂಡರ ಸ್ವತಂತ್ರ ನ್ಯಾಯ ನಿರ್ಣಯಗಳು ಸುಪ್ರೀಂಕೋರ್ಟಿನ ಬಗ್ಗೆ ಹುಟ್ಟಿಸಿದ್ದ ಭರವಸೆಗಳು ಉತ್ಪ್ರೇಕ್ಷಿತವಾಗಿದ್ದವೇ?
– ಶಿವಸುಂದರ್
ಇದನ್ನೂ ಓದಿ: ಇತಿಹಾಸ ಮತ್ತು ಪ್ರಸ್ತುತದ ಹಲವು ’ಹಾರರ್’ಗಳ ನಡುವೆ ಬದುಕುತ್ತಿರುವ ನಾವು!


