Homeಅಂಕಣಗಳುಇತಿಹಾಸ ಮತ್ತು ಪ್ರಸ್ತುತದ ಹಲವು ’ಹಾರರ್‌'ಗಳ ನಡುವೆ ಬದುಕುತ್ತಿರುವ ನಾವು!

ಇತಿಹಾಸ ಮತ್ತು ಪ್ರಸ್ತುತದ ಹಲವು ’ಹಾರರ್‌’ಗಳ ನಡುವೆ ಬದುಕುತ್ತಿರುವ ನಾವು!

- Advertisement -
- Advertisement -

ಅಮೆರಿಕ ದೇಶದಲ್ಲಿ ಹ್ಯಾಲೋವೀನ್ ಹಬ್ಬ ಅಂತ ಒಂದಿದೆ. ಹಾಲಿವುಡ್‌ನ ಹಲವು ಧಾರಾವಾಹಿಗಳಲ್ಲಿ ಮತ್ತು ಸಿನಿಮಾಗಳಲ್ಲಿ ಈ ಹಬ್ಬವನ್ನು ಬಿಂಬಿಸಲಾಗುತ್ತದೆ. ಪಾತ್ರಧಾರಿಗಳು ಭಯಾನಕ ವೇಷಭೂಷಣಗಳನ್ನು ತೊಟ್ಟು, ಮತ್ತೊಬ್ಬರನ್ನು ಬೆದರಿಸುವ ದೃಶ್ಯಗಳು ಅದರಲ್ಲಿ ಸಾಮಾನ್ಯವಾಗಿರುತ್ತವೆ. ಬೆದರಿಕೆಯ ಜೊತೆಗೆ ಅದರಲ್ಲಿ ಹಾಸ್ಯವೂ ಸೇರಿರುತ್ತದೆ. ಅದರ ಮಾತು ಬೇರೆ. ಅಕ್ಟೋಬರ್ 31ರಂದು ಆಚರಿಸುವ ಈ ಹಬ್ಬ, ಬೇಸಿಗೆಯಿಂದ ತೀವ್ರ ಮತ್ತು ಕರಾಳ ಚಳಿಗಾಲಕ್ಕೆ ಕಾಲಿಡುವ ಹಾಗೂ ಬದುಕುವುದರ ಮತ್ತು ಸಾಯುವುದರ ನಡುವಿನ ವ್ಯತ್ಯಾಸವನ್ನು ಅಳಿಸುವ ವಿದ್ಯಮಾನವನ್ನು ಸಂಕೇತಿಸುತ್ತದೆ ಎನ್ನಲಾಗುತ್ತದೆ. ಸತ್ತ ಆತ್ಮಗಳು ಭೂಮಿಗೆ ಬರುವುದನ್ನೂ ಸಂಕೇತಿಸುವ ಈ ಹಬ್ಬ ಒಟ್ಟಿನಲ್ಲಿ ಬದುಕಿನ ’ಹಾರರ್’ಗಳನ್ನು ನೆನಪಿಸುವ ಹಬ್ಬವಾಗಿದೆ. ಆದರೆ ಈಗ ಹಾರರ್ ಸಂಕೇತಗಳನ್ನಷ್ಟೇ ಸಂಭ್ರಮಿಸುವ ಹಬ್ಬವಾಗಿ ಮಾರ್ಪಾಡಾಗಿ ಹೋಗಿದೆ.

ಅಮೆರಿಕ ಮತ್ತು ಪಶ್ಚಿಮದ ಸಂಸ್ಕೃತಿ ಭಾರತವನ್ನು ಬಹಳವಾಗಿ ಪ್ರಭಾವಿಸಿದ್ದರೂ, ಅದೇಕೋ ಈ ’ಹ್ಯಾಲೋವೀನ್’ ಎನ್ನುವ ಹಾರರ್ ಹಬ್ಬ ಇಲ್ಲಿ ಪ್ರಭಾವಿಸಿದ್ದು ಕಡಿಮೆ. ಅದೂ ಅಲ್ಲದೆ ಜನಸಾಮಾನ್ಯರ ದಿನನಿತ್ಯದ ಭಾಗವಾಗಿರುವ ’ಹಾರರ್’ಗಳಿಗೇ ಇನ್ನೂ ಮುಕ್ತಿ ಇಲ್ಲ, ಇನ್ನು ಹಾರರ್ ಹಬ್ಬ ಬೇರೆ ಬೇಕೇ ಎನ್ನುವುದು ಕೂಡ ಇರಬಹುದು.

ಇರಲಿ, ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರು ಸ್ವಾತಂತ್ರ್ಯ ದಿನಾಚರಣೆಗೂ ಮುನ್ನಾ ದಿನವಾದ ಆಗಸ್ಟ್ 14ರನ್ನು ’ಪಾರ್ಟಿಶನ್ ಹಾರರ್‍ಸ್ ರಿಮೆಂಬ್ರೆನ್ಸ್ ಡೇ’ಯಾಗಿ ನೆನಪಿಸಿಕೊಳ್ಳುವಂತೆ ಕರೆ ನೀಡಿದ್ದಾರೆ. ದೇಶವಿಭಜನೆಯ ಕರಾಳ ನೆನಪುಗಳನ್ನು ಈಗೇಕೆ ಕೆದಕಬೇಕು, ಅದನ್ನು ಮರೆಯಬೇಕಲ್ಲವೇ, ಮುಂದೆ ಹೋಗಬೇಕಲ್ಲವೇ ಎಂದು ಕೆಲವರು ವಾದಿಸುತ್ತಿದ್ದಾರೆ. ದೇಶವಿಭಜನೆಯಲ್ಲಿ ನೆಚ್ಚಿನ ಸಂಬಂಧಿಗಳನ್ನು ಕಳೆದುಕೊಂಡವರಿಗೆ, ಮನೆಮಠಗಳನ್ನು ಕಳೆದುಕೊಂಡವರಿಗೆ ಈ ನೆನಪು ಖಂಡಿತಾ ನೋವನ್ನುಂಟುಮಾಡುತ್ತದೆ. ಆದರೆ ಇವತ್ತಿನ ಯುವಪೀಳಿಗೆ ಈ ಭಯಾನಕ ಸಂಗತಿಗಳನ್ನು ಮರೆಯದಂತೆ ನೋಡಿಕೊಳ್ಳುವುದು ಕೂಡ ಮುಖ್ಯವಾಗಿದೆ. ಆದರೆ ಅದನ್ನು ನೆನಪಿಸಿಕೊಳ್ಳಬೇಕಿರುವುದು ಸಂಘಪರಿವಾರವು ಸತ್ಯ ಸಂಗತಿಗಳನ್ನು ತಿರುಚಿದ ಇತಿಹಾಸದ ನೆರಳಿನಲ್ಲಿ ಅಲ್ಲ. ಉಭಯ ಧರ್ಮೀಯರ ವಿರುದ್ಧ ಕಂದಕ ಹೆಚ್ಚಿಸುವ ರೀತಿಯಲ್ಲಲ್ಲ. ಬದಲಾಗಿ ಈ ’ಹಾರರ್’ಗಳಲ್ಲಿ ಭಾಗಿಯಾಗಿದ್ದ ಎಲ್ಲ ಧರ್ಮಗಳ ತೀವ್ರ ಕೋಮುವಾದಿಗಳ ಪ್ರತಿಪಾದನೆಗಳನ್ನು ತಿರಸ್ಕರಿಸುವ ರೀತಿಯಲ್ಲಿ, ಕೋಮು ಸೌಹಾರ್ದವನ್ನು ಮತ್ತೆ ಉತ್ತೇಜಿಸುವ ರೀತಿಯಲ್ಲಿ, ಅಂತಹ ಹಾರರ್ ಮತ್ತೆ ಮರುಕಳಿಸದಂತೆ ನೋಡಿಕೊಳ್ಳುವ ನೆಲೆಯಲ್ಲಿ ದೇಶವಿಭಜನೆಯ ಕ್ರೌರ್ಯಗಳನ್ನು ನಾವು ನೆನಪಿಸಿಕೊಂಡು ಸುಧಾರಿಸಿಕೊಳ್ಳಬೇಕಿದೆ.

ಸರಿ, ಮೋದಿಯವರು ಮುಂದಿನ ವರ್ಷವೋ ಅದರ ಮುಂದಿನ ವರ್ಷವೋ ಜೂನ್ ಒಂದು ದಿನವನ್ನು ಎಮರ್ಜೆನ್ಸಿ ಹಾರರ್‌ಗಳ ನೆನಪಿನ ದಿನವನ್ನಾಗಿಯೂ ಆಚರಿಸಲು ಕರೆ ನೀಡುವ ಸಾಧ್ಯತೆ ಇದೆ! ನವೆಂಬರ್‌ನಲ್ಲಿ ಸಿಖ್ ನರಮೇಧದ ಹಾರರ್ ದಿನವನ್ನಾಗಿ ಕೂಡ ನೆನಪಿಸಿಕೊಳ್ಳುವ ಅಗತ್ಯ ಇದ್ದೇಇದೆ. ಆದರೆ ಮೋದಿಯವರು ಅಗತ್ಯವಾಗಿ ಕರೆ ನೀಡಬೇಕಿರುವುದು ಫೆಬ್ರವರಿಯಲ್ಲಿ ಗುಜರಾತ್ ಮುಸ್ಲಿಂ ಹತ್ಯಾಕಾಂಡದ ಹಾರರ್ ದಿನವನ್ನು ನೆನಪಿಸಿಕೊಳ್ಳಲು! ಈ ದೇಶದಲ್ಲಿ ನಿತ್ಯವೂ ಎಂಬಂತೆ ಜರುಗುವ ದಲಿತರ ಮೇಲಿನ ಹಿಂಸೆಯನ್ನು ನೆನಪಿಸಿಕೊಳ್ಳಲು ಯಾವ ದಿನವನ್ನು ನಿಗದಿಪಡಿಸುವುದು ಎಂಬುದನ್ನು ಕೂಡ ಮಾನ್ಯ ಪ್ರಧಾನಿಗಳೇ ನಿಶ್ಚಯಿಸಲಿ! ಅದು ಖೈರ್ಲಾಂಜಿ ಹತ್ಯಾಕಾಂಡ ನಡೆದ ದಿನವಾಗಬೇಕೋ, ಕಂಬಾಲಪಲ್ಲಿ, ಕರಮ್‌ಚೇಡು, ಚುಂಡೂರು ಹೀಗೆ ಯಾವ ಹತ್ಯಾಕಾಂಡದ ದಿನ ದಲಿತ ಹತ್ಯಾಕಾಂಡದ ಹಾರರ್‌ಅನ್ನು ನೆನಪಿಸಿಕೊಳ್ಳೋಣ ಎಂಬುದನ್ನೂ ಅವರೇ ಸೂಚಿಸಲಿ. ಇನ್ನು ಲೈಂಗಿಕ ದೌರ್ಜನ್ಯದ ಹಾರರ್‌ಗಳಿಗೂ ಒಂದು ದಿನ ನಿಗದಿಪಡಿಸಬೇಕಾಗುತ್ತದೆ. ಡಿಮಾನೆಟೈಸೇಶನ್, ಲಾಕ್‌ಡೌನ್ ಹಾರರ್‌ಗಳನ್ನು ನೆನಪಿಸಿಕೊಳ್ಳಲು?

ಈ ಮೂಲಕವಾದರೂ ಈ ದೇಶವನ್ನು ಬಹುಸಂಖ್ಯಾತ ಧರ್ಮದ, ಶೋಷಕ ಜಾತಿಯ ಹಿಡಿತದ, ಪುರುಷ ಪ್ರಧಾನ ಚಿಂತನೆಯಿಂದ, ಸರ್ವಾಧಿಕಾರಿ ಧೋರಣೆಯಿಂದ ಮುಕ್ತಿಗೊಳಿಸಲು ಈ ದಿನಗಳ ನೆನಪುಗಳು ಸಹಕರಿಸಲಿ. ಆ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರ ಪಕ್ಷ ಮತ್ತು ಅದನ್ನು ಬೆಂಬಲಿಸುವ ಸಂಘ ಪರಿವಾರ ಕೂಡ ಸುಧಾರಣೆಗೊಳ್ಳಲಿ.

ಸುಪ್ರೀಂಕೋರ್ಟನ್ನೂ ಬೆಚ್ಚಿಬೀಳಿಸಿದೆ ಸಂಸತ್ತಿನಲ್ಲಿ ಚರ್ಚೆಯಾಗದೆ ಜಾರಿಗೊಂಡ ಮಸೂದೆಗಳು!

ಈ ಬಾರಿಯ ಮಾನ್ಸೂನ್ ಸಂಸತ್ ಅಧಿವೇಶನ ಹಲವು ಪ್ರಜ್ಞಾವಂತ ನಾಗರಿಕರನ್ನು ಬೆಚ್ಚಿಬೀಳಿಸಿದೆ. ಯಾವುದೇ ಮಸೂದೆ ಸಂಸತ್ತಿನ ಉಭಯ ಸದನಗಳಲ್ಲಿ ಜಾರಿಯಾಗಿ ಕಾನೂನು-ಕಾಯ್ದೆಯಾಗುವುದಕ್ಕೂ ಮೊದಲು, ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಅದರ ಬಗ್ಗೆ ಗುಣಮಟ್ಟದ ಚರ್ಚೆಗಳು ನಡೆದು, ಜನಪ್ರತಿನಿಧಿಗಳ ಆಕ್ಷೇಪಗಳಿಗೆ ಆಳುವ ಸರ್ಕಾರ ಉತ್ತರಿಸಿ, ಅಗತ್ಯವೆನಿಸಿದರೆ ಅವುಗಳಿಗೆ ತಿದ್ದುಪಡಿ ತಂದು ಜಾರಿ ಮಾಡುವ ಪರಂಪರೆ ಆರೋಗ್ಯಪೂರ್ಣ ಪ್ರಜಾಪ್ರಭುತ್ವದ ಲಕ್ಷಣ. ಆದರೆ ಇತ್ತೀಚೆಗಷ್ಟೇ ತರಾತುರಿಯಲ್ಲಿ ಮುಗಿದು ಅನಿರ್ದಿಷ್ಟ ಕಾಲದವರೆಗೆ ಮುಂದೂಡಲಾದ ಮುಂಗಾರಿನ ಅಧಿವೇಶನದಲ್ಲಿ ಬಹುತೇಕ ಚರ್ಚೆಯಿಲ್ಲದೆ ಹಲವು ಮಸೂದೆಗಳು ಜಾರಿಯಾಗಿ ಹೋದವು. ಈ ಅಧಿವೇಶನದಲ್ಲೇ ಮಂಡಿಸಿದ ಸುಮಾರು 15 ಮಸೂದೆಗಳನ್ನೂ ಸೇರಿಸಿ ಒಟ್ಟು 20 ಮಸೂದೆಗಳು ಜಾರಿಯಾಗಿ ಹೋದವು. ’ಟ್ರಿಬ್ಯುನಲ್ ರಿಫಾರ್ಮ್ಸ್ ಬಿಲ್, 2021’ ರಂತಹ ಮಹತ್ವದ ಮಸೂದೆ ಸೇರಿದಂತೆ ಹಲವು ಬಿಲ್‌ಗಳು ಚರ್ಚೆಯಿಲ್ಲದೆ ಲೋಕಸಭೆಯಲ್ಲಿ ಜಾರಿಯಾಗಿ ಹೋದವು.

ಟ್ರಿಬ್ಯುನಲ್ ರಿಫಾರ್ಮ್ಸ್ ಬಿಲ್, 2021ರ ಒಂದು ಭಾಗವನ್ನು ಇಲ್ಲಿ ನಾವು ಅವಲೋಕಿಸಬಹುದಾದರೆ, ಈ ಮಸೂದೆಯಲ್ಲಿ ಸಿನಿಮ್ಯಾಟೋಗ್ರಾಫ್ ಆಕ್ಟ್‌ನಡಿ ಬರುವ ಫಿಲ್ಮ್ ಸರ್ಟಿಫಿಕೇಶನ್ ಅಪೆಲೇಟ್ ಟ್ರಿಬ್ಯುನಲ್‌ಅನ್ನು (ಎಫ್‌ಸಿಎಟಿ) ವಿಸರ್ಜಿಸಿ ಅದರ ಕೆಲಸಗಳನ್ನು ಹೈಕೋರ್ಟ್‌ಗೆ ವರ್ಗಾಯಿಸಲಾಗಿದೆ. ಇದರ ಬಗ್ಗೆ ಹಲವು ಸಿನಿಮಾ ನಿರ್ದೇಶಕರು ಮತ್ತು ಸಂಬಂಧಿತ ವ್ಯಕ್ತಿಗಳು ಆಕ್ಷೇಪ ಎತ್ತಿದ್ದರು. ಒಂದು ವೇಳೆ ಸೆನ್ಸಾರ್ ಮಂಡಲಿ ಯಾವುದಾದರೂ ಸಿನಿಮಾಗೆ ಪ್ರಮಾಣಪತ್ರವನ್ನು ನಿರಾಕರಿಸಿದರೆ, ಅದರ ವಿರುದ್ಧ ಅಪೀಲ್ ಹೋಗಲು ಮತ್ತು ವ್ಯಾಜ್ಯವನ್ನು ಪರಿಹರಿಸಿಕೊಳ್ಳಲು ಲಭ್ಯವಿದ್ದ ಎಫ್‌ಸಿಎಟಿಅನ್ನು ಈಗ ವಿಸರ್ಜಿಸಲಾಗಿದೆ. ಈಗ ಅದರ ಸಲುವಾಗಿ ಹೈಕೋರ್ಟ್ ಮೆಟ್ಟಿಲು ಹತ್ತಬೇಕಾದರೆ ಎಷ್ಟು ಜನಕ್ಕೆ ಅದರ ವೆಚ್ಚವನ್ನು ಭರಿಸುವ ಶಕ್ತಿ ಇರುತ್ತದೆ? ಈಗಾಗಲೇ ಹೈಕೋರ್ಟ್‌ಗಳಿಗೆ ಕೈತುಂಬಾ ಕೆಲಸವಿದ್ದು ಈ ಹೆಚ್ಚುವರಿ ಕೆಲಸ ಹೊರೆಯಾಗುವುದಿಲ್ಲವೇ ಎಂಬಂತಹ ಆಕ್ಷೇಪಗಳು ಇದ್ದರೂ, ಇವ್ಯಾವುದನ್ನೂ ಲೋಕಸಭೆಯಲ್ಲಿ ಚರ್ಚಿಸದೆ, ಅವುಗಳಿಗೆ ಉತ್ತರ ನೀಡನೆ ಧ್ವನಿಮತದ ಮೂಲಕ ಇದನ್ನು ಜಾರಿ ಮಾಡಿರುವುದು ’ಹಾರರ್’ ಅಲ್ಲದೆ ಮತ್ತೇನು? ಟ್ರಿಬ್ಯುನಲ್ ಸುಧಾರಣೆ ಕಾಯ್ದೆಯಲ್ಲಿ ಎಫ್‌ಸಿಎಟಿ ಮಾತ್ರವಲ್ಲದೆ ಹಲವು ಟ್ರಿಬ್ಯುನಲ್‌ಗಳನ್ನು ವಜಾ ಮಾಡಿ ಕೆಲಸಗಳನ್ನು ಬೇರೆ ಸಂಸ್ಥೆಗೆ ವರ್ಗಾಯಿಸಲಾಗಿದೆ. ಹೀಗೆ ಚರ್ಚೆಯಿಲ್ಲದೆ ಜಾರಿಯಾಗಿರುವ ಈ ಮಸೂದೆಯ ಬಗ್ಗೆ ವಿಪಕ್ಷದವರು, ಜನಸಾಮಾನ್ಯರು ಮಾತ್ರವಲ್ಲದೆ ಸುಪ್ರೀಂಕೋರ್ಟ್ ಕೂಡ ಆಘಾತ ವ್ಯಕ್ತಪಡಿಸಿದೆ.

ರಾಜ್ಯಸಭಾ ಸದಸ್ಯರಾದ ಜೈರಾಮ್ ರಮೇಶ್ ಅವರು ಸುಪ್ರೀಂಕೋರ್ಟ್‌ನಲ್ಲಿ ಇದರ ಬಗ್ಗೆ ಅರ್ಜಿ ಸಲ್ಲಿಸಿದ್ದು, ಆಗಸ್ಟ್ 16ರಂದು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ತನ್ನ ನಿರ್ದೇಶನಗಳನ್ನು ಗಾಳಿಗೆ ತೂರಿರುವ ಬಗ್ಗೆ ಕಳವಳಿ ವ್ಯಕ್ತಪಡಿಸಿದ್ದು “ನಿಜ, ಶಾಸಕಾಂಗಕ್ಕೆ ಕಾನೂನುಗಳನ್ನು ರಚಿಸುವ ಪರಮಾಧಿಕಾರ ಇದೆ. ಈ ಕೋರ್ಟ್ ಸುಗ್ರೀವಾಜ್ಞೆಯನ್ನು ವಜಾಗೊಳಿಸಿದ್ದರೂ, ಮಸೂದೆಯನ್ನು ಮಂಡಿಸಿರುವ ಕಾರಣವನ್ನಾದರೂ ಕೊನೆಪಕ್ಷ ನಮಗೆ ತಿಳಿಸಬೇಕಿದೆ… ಸಂಸತ್ತಿನಲ್ಲಿ ಇದರ ಸಲುವಾಗಿ ನಡೆದ ಯಾವ ಚರ್ಚೆಯ ಬಗ್ಗೆಯೂ ನಮಗೆ ತಿಳಿದಿಲ್ಲ. ನಮಗೆ ದಯವಿಟ್ಟು ಇದರ ಬಗ್ಗೆ ಆದ ಚರ್ಚೆಗಳು, ಕಾರಣಗಳು ಇವೆಲ್ಲವನ್ನೂ ತೋರಿಸಿ” ಎಂದು ಮುಖ್ಯ ನ್ಯಾಯಾಧೀಶರಾದ ಎನ್ ವಿ ರಮಣ ಅವರನ್ನು ಒಳಗೊಂಡಿದ್ದ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.

ಟ್ರಿಬ್ಯುನಲ್ ಬಿಲ್ ಬಗ್ಗೆ ಚರ್ಚೆಯಾದದ್ದನ್ನು ಸಾರ್ವಜನಿಕರು ಎಲ್ಲಾದರೂ ಕಂಡರೆ? ಇದರಿಂದ ಒದಗಬಹುದಾದ ಅಪಾಯಗಳ ಬಗ್ಗೆ ಮಾಧ್ಯಮಗಳಲ್ಲಿ ವಿಸ್ತೃತವಾಗಿ ಚರ್ಚೆಯಾಯಿತೇ? ಸರ್ಕಾರ ಇದಕ್ಕೆ ಉತ್ತರ ಹೇಳಿ ಸಮಜಾಯಿಷಿ ನೀಡಲು ಪ್ರಯತ್ನಿಸಿತೇ? ಪ್ರಶ್ನೆಗಳೆ ’ಹಾರರ್’ ರೂಪ ತಳೆಯಬಹುದು – ಸರ್ವಾಧಿಕಾರಿ ಧೋರಣೆಯ ಪ್ರಭುತ್ವ ಜಾರಿಯಿದ್ದಾಗ!

ಆಫ್ಘಾನಿಸ್ತಾನದ ಚಿತ್ರಗಳು ಧಾರ್ಮಿಕ ಮೂಲಭೂತವಾದದ ಮತ್ತು ಮಿಲಿಟರಿ ಹಸ್ತಕ್ಷೇಪದ ಹಾರರ್‌ಗಳನ್ನು ತೋರಿಸುತ್ತಿವೆ.

ಇತಿಹಾಸದ ದೇಶವಿಭಜನೆಯಿಂದ ಪ್ರಾರಂಭವಾಗಿ, ಪ್ರಸ್ತುತ ಸಂದರ್ಭದ ’ಹಾರರ್’ಗಳ ಆಗಸ್ಟ್ ಮಾತ್ರ ಇದಾಗಿರದೇ, ಕಳೆದ ಕೆಲವು ದಿನಗಳಿಂದ ಅಫ್ಘಾನಿಸ್ತಾನ ದೇಶದಲ್ಲಿ ಉದ್ಭವಿಸಿರುವ ಮಹಾ ಮಾನವೀಯ ಬಿಕ್ಕಟ್ಟು ಇನ್ನೂ ಭೀಕರವಾದ ’ಹಾರರ್’ ಕತೆಗಳನ್ನು ಜಗತ್ತಿನ ಮುಂದೆ ತೆರೆದಿಟ್ಟಿದೆ. ಒಂದು ಕಡೆ ಆಫ್ಘಾನಿಸ್ತಾನದಲ್ಲಿ ಇಸ್ಲಾಂ ಮೂಲಭೂತವಾದಿಗಳ ಸಂಘಟನೆಯಾದ ತಾಲಿಬಾನ್ ಸೃಷ್ಟಿಸಿದ್ದ ನರಕ ಮರುಹುಟ್ಟು ಪಡೆಯುತ್ತಿದ್ದರೆ, ಮುಂಬರುವ ಕರಾಳ ದಿನಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿ ಭಯಭೀತಿಯಿಂದ ಹಾರುತ್ತಿದ್ದ ಏರೋಪ್ಲೇನ್ ರೆಕ್ಕೆಗಳನ್ನು ಹಿಡಿದ ಜನ ಕೆಳಗೆ ಬಿದ್ದು ಸಾಯುತ್ತಿರುವ ದೃಶ್ಯಗಳು ಹೃದಯವಿದ್ರಾವಕವಾಗಿವೆ. ಈ ಭಯೋತ್ಪಾದನೆಯ ವಿರುದ್ಧ ನಿರರ್ಥಕ ಯುದ್ಧ ಮಾಡಿ ಲಕ್ಷಾಂತರ ಜನರ ಪ್ರಾಣಹಾನಿಗೆ ಕಾರಣವಾದ ಅಮೆರಿಕ ಕಾಲ್ಕಿತ್ತಿದೆ.

ಪ್ರಜಾಪ್ರಭುತ್ವ ಉಳಿಸುವ, ಭಯೋತ್ಪಾದನೆಯ ವಿರುದ್ಧ ಯುದ್ಧ ಹೀಗೆ ರಂಗುರಂಗಿನ ಹೆಸರಿನಲ್ಲಿ ಲ್ಯಾಟಿನ್ ಅಮೆರಿಕ ದೇಶಗಳಿರಲಿ, ಹಲವು ಇಸ್ಲಾಮಿಕ್ ದೇಶಗಳಿರಲಿ ಅಮೆರಿಕ ನಡೆಸಿರುವ ನೇರ ಮತ್ತು ಪರೋಕ್ಷ ಯುದ್ಧಗಳು ಇಡೀ ಜಗತ್ತಿನ ಪಾಲಿಗೆ ನೈಜ ಹಾರರ್ ಶೋ! ಅಮೆರಿಕ ಪ್ರಭುತ್ವದ ದುಷತ್ಯಗಳಿಗೆ ಜಗತ್ತು ಇನ್ನು ಎಷ್ಟು ಬೆಲೆ ತೆರಬೇಕೋ ತಿಳಿದವರಿಲ್ಲ!

ಧಾರ್ಮಿಕ ಮೂಲಭೂತವಾದ ಅತಿರೇಕಕ್ಕೆ ಹೋದರೆ ಯಾವ ಪರಿಣಾಮ ಎದುರಿಸಬೇಕಾದೀತು ಎಂಬ ಉದಾಹರಣೆಯಾಗಿ ಆಫ್ಘಾನಿಸ್ತಾನದ ಪರಿಸ್ಥಿತಿ ನಮ್ಮ ಮುಂದಿದೆ. ಕೆಲವೇ ದಿನಗಳ ಹಿಂದೆ ಭಾರತದ ಕಾರ್ಯನಿರತ ಫೋಟೋ ಜರ್ನಲಿಸ್ಟ್ ಡ್ಯಾನಿಶ್ ಸಿದ್ದಿಕಿಯವರನ್ನು ತಾಲಿಬಾನಿ ಪಡೆಗಳು ಕೊಂದಿದ್ದವು. ಡ್ಯಾನಿಶ್ ಇಲ್ಲಿ ಭಾರತದ ಪ್ರಭುತ್ವದ ಹಲವು ವೈಫಲ್ಯಗಳನ್ನು ಕೂಡ ಸೆರೆಹಿಡಿದಿದ್ದವರು. ಇದೇ ಕಾರಣಕ್ಕಾಗಿ ಇಲ್ಲಿನ ಆಡಳಿತ ವ್ಯವಸ್ಥೆಯನ್ನು ಬೆಂಬಲಿಸುವ ಬಹುಸಂಖ್ಯಾತ ಧರ್ಮೀಯ ಕೆಲವು ತೀವ್ರವಾದಿ ಸಂಘಟನೆಗಳು ಮತ್ತು ವ್ಯಕ್ತಿಗಳು ಅವರ ಸಾವನ್ನು ಸಂಭ್ರಮಿಸಿದ್ದರು. ಈಗ ಅದೇ ತಾಲಿಬಾನ್ ಆಫ್ಘಾನಿಸ್ತಾನದ ಇನ್ನೂ ಎಷ್ಟೋ ಭಾರತೀಯ ಜನರಿಗೆ ಅಪಾಯ ತಂದೊಡ್ಡಿದೆ. ಧಾರ್ಮಿಕ ಮೂಲಭೂತವಾದ ಯಾರಿಗೆ ಯಾವ ಕ್ಷಣದಲ್ಲಿ ಯಾವ ರೀತಿಯಲ್ಲಿ ಅಪಾಯ ತಂದೊಡ್ಡುತ್ತದೆ ಎಂದು ಊಹಿಸುವುದು ಕಷ್ಟ. ಕ್ಷೇಮವೆಂದು ಕಾಣುತ್ತಿದ್ದರೂ ಧುತ್ತೆಂದು ಕಾಡುವಂತೆ ಪರಿವರ್ತನೆಯಾಗಬಹುದು. ಈ ನಿಟ್ಟಿನಲ್ಲಿ ಇಲ್ಲಿ ಬಹುಸಂಖ್ಯಾತ ಧಾರ್ಮಿಕ ಮೂಲಭೂತವಾದವನ್ನು ನೀರೆರೆದು ಪೋಷಿಸುವ ಜನ ಮರುಚಿಂತನೆ ಮಾಡಿ, ಮಾನವೀಯತೆಯ, ಪ್ರೀತಿಯ ಜಗತ್ತನ್ನು ಕಟ್ಟಿಕೊಳ್ಳುವತ್ತ ಚಿಂತಿಸುವುದು ಅಗತ್ಯವಾದೀತು.

ಈ ಜಗತ್ತು, ಈ ದೇಶದ ಜನ ಈ ’ಹಾರರ್’ ಸಂಗತಿಗಳಿಂದ ಮುಕ್ತಗೊಳ್ಳಬೇಕಾದರೆ ’ನೆನಪಿನ ದಿನಗಳನ್ನು’ ನಾಮಕರಣಗೊಳಿಸುವುದಕ್ಕೆ ಸೀಮಿತಗೊಳಿಸಿದರೆ ಸಾಲುವುದಿಲ್ಲ. ಅದರ ಜೊತೆಗೆ ಕ್ರೂರಿಗಳು ಸೃಷ್ಟಿಸಿರುವ ಹಾರರ್ ಜಗತ್ತನ್ನು ಭ್ರಾತೃತ್ವದ, ಬಹುತ್ವದ, ಪ್ರೀತಿಯ ಜಗತ್ತನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ.


ಇದನ್ನೂ ಓದಿ:

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...