ಮಹಾರಾಷ್ಟ್ರದಲ್ಲಿ ಆಡಳಿತದಲ್ಲಿರುವ ಶಿವಸೇನೆ ಮತ್ತು ಪ್ರತಿಪಕ್ಷ ಬಿಜೆಪಿ ನಡುವೆ ಮತ್ತೆ ವಾಕ್ಸಮರ ಆರಂಭವಾಗಿದೆ. ಹಿಂದೊಮ್ಮೆ ಮಿತ್ರಪಕ್ಷಗಳಾಗಿದ್ದು ಇವು ಈಗ ದಿನನಿತ್ಯ ಕಚ್ಚಾಟದಲ್ಲಿ ತೊಡಗಿವೆ. ಬಿಜೆಪಿ ಮುಖಂಡ, ಕೇಂದ್ರ ಸಚಿವ ನಾರಾಯಣ ರಾಣೆಯವರು ಶಿವಸೇನೆಯ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಪ್ರತಿಮೆಗೆ ನಮಿಸಿದ್ದರು. ನಂತರ ಅದನ್ನು ಶಿವಸೇನೆ ಕಾರ್ಯಕರ್ತರು ಗೋಮೂತ್ರ ಸಿಂಪಡಿಸಿ ‘ಶುದ್ಧಿ’ ಮಾಡುವ ಮೂಲಕ ಅವಮಾನಿಸಿದ್ದಾರೆ. ಇದಕ್ಕೆ ಬಿಜೆಪಿ ಕೆಂಡಕಾರಿದ್ದು ವಿವಾದ ಭುಗಿಲೆದ್ದಿದೆ.
ಬಿಜೆಪಿಯು ಜನಾರ್ಶೀವಾದ ಯಾತ್ರೆ ಮಾಡುತ್ತಿರುವುದು ಸರಿಯಷ್ಟೇ. ಆದರೆ ಮಹಾರಾಷ್ಟ್ರದಲ್ಲಿ ಅದರ ಉದ್ಘಾಟನೆಯ ಸಂದರ್ಭದಲ್ಲಿ ಭಾರೀ ಜನ ಸೇರಿದ್ದರು. ಆಗ ಕೇಂದ್ರ ಸಚಿವ ನಾರಾಯಣ ರಾಣೆಯವರು ಶಿವಸೇನೆಯ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಪ್ರತಿಮೆಗೆ ನಮಸ್ಕರಿಸಿ ಅಲ್ಲಿಂದಲೇ ಯಾತ್ರೆ ಆರಂಭಿಸಿದ್ದರು. ಈ ಕುರಿತು ಶಿವಸೇನೆ ನೇತೃತ್ವದ ಮೈತ್ರಿ ಸರ್ಕಾರ ಬಿಜೆಪಿ ಕಾರ್ಯಕರ್ತರ ಮೇಲೆ ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಿದೆ. ಅದೇ ಸಂದರ್ಭದಲ್ಲಿ ಶಿವಸೇನಾ ಕಾರ್ಯಕರ್ತರು ಪ್ರತಿಮೆಯ ಸುತ್ತ ಗೋಮೂತ್ರ ಸಿಂಪಡಿಸಿ ಶುದ್ದಿ ಮಾಡಿದ್ದಾರೆ.
ಈ ಕ್ರಮಕ್ಕೆ ಬಿಜೆಪಿ ಕೆಂಡಾಮಂಡಲವಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಸಚಿವ ನಾರಾಯಣ ರಾಣೆ “ನಾವು ರಾಜಕೀಯ ರ್ಯಾಲಿ ಮಾಡುತ್ತಿಲ್ಲ. ಜನರ ಕಷ್ಟಗಳನ್ನು ಅರಿತುಕೊಳ್ಳಲು ಹೋಗುತ್ತಿದ್ದೇವೆ. ಬಿಜೆಪಿ ಕೇಂದ್ರದಲ್ಲಿ ಅಧಿಕಾರದಲ್ಲಿದೆ ಎಂಬುದನ್ನು ಶಿವಸೇನೆ ಮರೆಯಬಾರದು. ಇಲ್ಲಿನ ಮೈತ್ರಿ ಸರ್ಕಾರ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಕಾರ್ಯಕ್ರಮ ನಡೆಸಿರುವ ಹಲವು ದಾಖಲೆಗಳು ನಮ್ಮಲ್ಲಿವೆ. ಅವರು ಕೇವಲ ರಾಜ್ಯದಲ್ಲಿದ್ದಾರೆ ಅಷ್ಟೇ. ನಾವು ಅವರ ಮೇಲಿದ್ದೇವೆ” ಎಂದು ಬಹಿರಂಗ ಬೆದರಿಕೆ ಹಾಕಿದ್ದಾರೆ.
ಪ್ರತಿಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮಾತನಾಡಿ, “ಶುದ್ಧೀಕರಣ”ದಲ್ಲಿ ತೊಡಗಿಸಿಕೊಂಡವರಿಗೆ ಮೂಲ ಶಿವಸೇನೆ ಅರ್ಥವಾಗುವುದಿಲ್ಲ. ಬಾಳಾಸಾಹೇಬ್ ಠಾಕ್ರೆ ಅವರನ್ನು ಬಂಧಿಸಲು ಪ್ರಯತ್ನಿಸಿದ ಜನರೊಂದಿಗೆ ಶಿವಸೇನೆ ಅಧಿಕಾರ ಹಂಚಿಕೊಳ್ಳುತ್ತಿರುವುದು ಮತ್ತು ಅವರಿಗೆ ಗೌರವ ಸಲ್ಲಿಸುತ್ತಿರುವ ಜನರ ಮೇಲೆ ದಾಳಿ ಮಾಡುವುದು ವಿಚಿತ್ರವಾಗಿದೆ. ಶುದ್ಧೀಕರಣವು ಸಂಕುಚಿತ ಮನೋಭಾವದ ಸೂಚನೆಯಾಗಿದೆ. ಇದು ಮಹಾರಾಷ್ಟ್ರದ ಸಂಸ್ಕೃತಿಯಲ್ಲ” ಎಂದಿದ್ದಾರೆ.
ಈ ಹಿಂದೆ ನಾರಾಯಣ ರಾಣೆಯವರನ್ನು ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಬಾಳಾಸಾಹೇಬ್ ಠಾಕ್ರೆ ಪಕ್ಷದಿಂದ ಉಚ್ಛಾಟನೆ ಮಾಡಿದ್ದರು. ಹಾಗಾಗಿ ಶಿವಸೈನಿಕರು ಅವರ ಮೇಲೆ ಕಿಡಿಕಾರುತ್ತಿದ್ದಾರೆ. ಇನ್ನು 1992-93ರ ಗಲಭೆಯ ಆರೋಪದ ಮೇಲೆ ಕಾಂಗ್ರೆಸ್-ಎನ್‌ಸಿಪಿ ನೇತೃತ್ವದ ಸರ್ಕಾರವು ಬಾಳಾಸಾಹೇಬ್ ಠಾಕ್ರೆ ಬಂಧಿಸಲು ಮುಂದಾಗಿತ್ತು. ಹಾಗಾಗಿ ಸದ್ಯದ ಶಿವಸೇನೆ-ಕಾಂಗ್ರೆಸ್-ಎನ್‌ಸಿಪಿ ಮೈತ್ರಿಕೂಟವನ್ನು ಬಿಜೆಪಿ ವಿರೋಧಿಸುತ್ತಿದೆ.
ಕಳೆದ ತಿಂಗಳ ಜುಲೈ 5 ರಂದು ದೇವೇಂದ್ರ ಫಡ್ನವಿಸ್ ‘ಶಿವಸೇನೆ ಎಂದಿಗೂ ಬಿಜೆಪಿಯ ಶತ್ರುವಲ್ಲ‘ ಎಂಬ ಹೇಳಿಕೆ ನೀಡಿದ್ದರು. ಅದೇ ರೀತಿಯಲ್ಲಿ ಶಿವಸೇನೆಯ ಸಂಸದ ಮತ್ತು ವಕ್ತಾರ ಸಂಜಯ್ ರಾವತ್ ‘ಬಿಜೆಪಿ-ಶಿವಸೇನೆ ಸಂಬಂಧ ಅಮಿರ್ ಖಾನ್ ಮತ್ತು ಕಿರಣ್ ರಾವ್ ಥರ‘ ಎಂಬ ಹೇಳಿಕೆ ನೀಡಿದ್ದರು. ಒಂದು ತಿಂಗಳಲ್ಲಿಯೇ ಮತ್ತೆ ಅವರ ಆರೋಪ ಪ್ರತ್ಯಾರೋಪಗಳು ಜೋರಾಗಿವೆ.
ಇದನ್ನೂ ಓದಿ: ಬಿಜೆಪಿ ಶಿವಸೇನೆ ಮತ್ತು ಎನ್‌ಸಿಪಿಗೆ ಧನ್ಯವಾದ ಹೇಳಬೇಕು- ಸಂಜಯ್ ರಾವತ್


