Homeಮುಖಪುಟ'ಚಹರೆಗಳೆಂದರೆ ಗಾಯಗಳೂ ಹೌದು' ಒಂದು ಸಕಾಲಿಕ ಮೌಲಿಕ ಕೃತಿ - ನಾ ದಿವಾಕರ

‘ಚಹರೆಗಳೆಂದರೆ ಗಾಯಗಳೂ ಹೌದು’ ಒಂದು ಸಕಾಲಿಕ ಮೌಲಿಕ ಕೃತಿ – ನಾ ದಿವಾಕರ

- Advertisement -
- Advertisement -

ಸಾಮಾನ್ಯವಾಗಿ ನಮ್ಮ ನಿತ್ಯ ಬದುಕಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಕಥನಗಳಲ್ಲಿ ಮತ್ತು ಬೌದ್ಧಿಕ ವಲಯಗಳ ಚರ್ಚೆಗಳಲ್ಲಿ ಬುಡಕಟ್ಟು ಸಮುದಾಯಗಳ ಅಥವಾ ಆದಿವಾಸಿಗಳ ಬದುಕು, ಬವಣೆ, ಸಂಕಷ್ಟ, ಸಮಸ್ಯೆಗಳು ಮುನ್ನೆಲೆಗೆ ಬರುವುದು ಅಪರೂಪ. ಜಾತಿ-ಮತಧರ್ಮಗಳ ಚೌಕಟ್ಟಿನಲ್ಲಿ ನಿತ್ಯ ಬೆಳವಣಿಗೆಗಳಲ್ಲಿ ಕಾಣುವ ಸಂಕೀರ್ಣತೆಗಳು ಯಾವುದೋ ಒಂದು ರೀತಿಯಲ್ಲಿ ಸಾರ್ವಜನಿಕ ಚರ್ಚೆಗೊಳಗಾಗುತ್ತಿರುತ್ತವೆ. ನಮ್ಮ ಸುತ್ತಲಿನ ಸಾಮಾಜಿಕ ಮತ್ತು ಸಾಂಸ್ಕøತಿಕ ಸವಾಲುಗಳನ್ನು ಆಧುನಿಕತೆಗೆ ಮುಖಾಮುಖಿಯಾಗಿಸಿ, ಗಟ್ಟಿಯಾಗುತ್ತಿರುವ ಬಂಡವಾಳಶಾಹಿ ವ್ಯವಸ್ಥೆಯ ಸಂಕೀರ್ಣತೆಗಳೊಡನೆ ಅನುಸಂಧಾನ ಮಾಡುವ ಸಂದರ್ಭದಲ್ಲೂ ಆದಿವಾಸಿಗಳ ಸಮಸ್ಯೆಗಳು ಹೆಚ್ಚಾಗಿ ಚರ್ಚೆಗೊಳಗಾಗುವುದಿಲ್ಲ. ಇದನ್ನು ಮತ್ತೊಂದು ಮಜಲಿನಿಂದ ನೋಡುವುದಾದರೆ, ಬಂಡವಾಳಶಾಹಿ ಅರ್ಥವ್ಯವಸ್ಥೆಯ ಅಭಿವೃದ್ಧಿ ಪಥದಲ್ಲಿ ಎದುರಾಗುವ ಸಾಮಾಜಿಕ ಸಮಸ್ಯೆಗಳಿಗೆ ಸಮಾಜ ಮುಖಾಮುಖಿಯಾದಾಗ ನಮ್ಮ ನಡುವಿನ ಸಾರ್ವಜನಿಕ ಚರ್ಚೆಗಳು, ಕೃಷಿ ಭೂಮಿ, ಮೂಲ ಸೌಕರ್ಯಗಳು ಮತ್ತು ನಿತ್ಯ ಬದುಕಿನ ಸವಾಲುಗಳು ಪ್ರಧಾನವಾಗಿ ಚರ್ಚೆಗೊಳಗಾಗುತ್ತವೆ.

ಆದರೆ ಡಿಜಿಟಲ್ ಯುಗ ಅಥವಾ ನವ ಉದಾರವಾದ-ಜಾಗತೀಕರಣದ ನಾಲ್ಕನೆಯ ಔದ್ಯೋಗಿಕ ಕ್ರಾಂತಿಯ ಪೂರ್ವದಲ್ಲೂ, ಬಂಡವಾಳಶಾಹಿ ಅಭಿವೃದ್ಧಿ ಪಥದಲ್ಲಿ ನಿರಂತರ ಶೋಷಣೆಗೊಳಗಾಗುತ್ತಿರುವುದು ನಮ್ಮ ಬೌದ್ಧಿಕ ಚಿಂತನಾ ವಲಯಗಳಿಂದಾಚೆಗಿರುವ ಬುಡಕಟ್ಟು ಸಮುದಾಯಗಳು ಅಥವಾ ಆದಿವಾಸಿಗಳು. ಜಾತಿ-ಉಪಜಾತಿ ಮತ್ತು ಮತಧಾರ್ಮಿಕ ಚೌಕಟ್ಟುಗಳನ್ನೂ ಮೀರಿದ ವ್ಯಾಪ್ತಿಯುಳ್ಳ ಈ ಸಮುದಾಯಗಳು ಎದುರಿಸುವ ನಿತ್ಯ ಬದುಕಿನ ಸಮಸ್ಯೆಗಳಿಗೂ, ಆಧುನಿಕ ಬಂಡವಾಳ ವ್ಯವಸ್ಥೆಯ ಅಭಿವೃದ್ಧಿ ಮಾರ್ಗಗಳಿಗೂ ನಿರಂತರವಾದ ಸಂಘರ್ಷ ಇದ್ದೇ ಇರುವುದನ್ನು ನಾವು ಗಮನಿಸುತ್ತಲೇ ಇರುತ್ತೇವೆ. ಆದರೆ ಇದು ಸಾರ್ವಜನಿಕ ಸಂಕಥನದ ಒಂದು ಭಾಗವಾಗುವುದು ಯಾವುದೋ ಒಂದು ಜಲವಿದ್ಯುತ್ ಯೋಜನೆ, ಅಣೆಕಟ್ಟು, ಅಣುವಿದ್ಯುತ್ ಘಟಕ ಮುಂತಾದ ಸ್ಥಾವರಗಳ ನಿರ್ಮಾಣವಾಗುವ ಸಂದರ್ಭದಲ್ಲಿ. ಅಥವಾ ಅಭಯಾರಣ್ಯ, ವನ್ಯಜೀವಿ ತಾಣಗಳನ್ನು ನಿರ್ಮಿಸುವ ಸಂದರ್ಭದಲ್ಲಿ.

ಈ ಸನ್ನಿವೇಶಗಳ ಹೊರತಾಗಿಯೂ ಭಾರತದ ಬುಡಕಟ್ಟು ಸಮುದಾಯಗಳು ಸ್ವಾತಂತ್ರ್ಯ ಪೂರ್ವದಿಂದಲೂ ಸಹ ಆಳುವ ವರ್ಗಗಳ ದಮನಕಾರಿ ಆರ್ಥಿಕ ನೀತಿ, ಕರಾಳ ಶಾಸನಗಳು ಮತ್ತು ನಿಸರ್ಗವಿರೋಧಿ ಆರ್ಥಿಕ ನೀತಿಗಳಿಂದ ತಮ್ಮ ಬದುಕು ಅಸ್ಥಿರವಾಗುವ ಸಂದರ್ಭಗಳನ್ನು ಎದುರಿಸುತ್ತಲೇ ಇರುವುದನ್ನು, ಬಾಹ್ಯ ಸಮಾಜ ಕಂಡೂ ಕಾಣದಂತಿದ್ದುಬಿಡುತ್ತದೆ. ಇದಕ್ಕೆ ಕಾರಣ ನಾವು ಈ ಆದಿವಾಸಿ ಸಮುದಾಯಗಳನ್ನು ‘ಅನ್ಯರ’ ಪಟ್ಟಿಗೆ ಸೇರಿಸಿರುವುದೋ ಅಥವಾ ‘ನಾವು’ ಎಂದು ಪರಿಭಾವಿಸಲಾಗುವ ನಾಗರಿಕ ಸಮಾಜದ ಪರಿಧಿಯಿಂದ ಅಪ್ರಜ್ಞಾಪೂರ್ವಕವಾಗಿ ಬುಡಕಟ್ಟು ಸಮುದಾಯಗಳನ್ನು ಹೊರಗಿಟ್ಟಿರುವುದೋ ಎನ್ನುವ ಜಿಜ್ಞಾಸೆ ಪ್ರತಿಯೊಬ್ಬ ಸಮಾಜಮುಖಿ ಚಿಂತಕರನ್ನು ಕಾಡಬೇಕಾಗಿದೆ. ಭಾರತದ ಶ್ರೇಣೀಕೃತ ಸಮಾಜದಲ್ಲಿ ದಲಿತರ, ಅಸ್ಪೃ ಶ್ಯರ, ಅಲ್ಪಸಂಖ್ಯಾತರ ಮತ್ತು ಕೆಲವು ಸಂದರ್ಭಗಳಲ್ಲಿ ಮಹಿಳೆಯರ ಸಮಸ್ಯೆಗಳು ‘ಅವರ ‘ ಸಮಸ್ಯೆಗಳಾಗುವಂತೆಯೇ, ಆದಿವಾಸಿಗಳ ಸಮಸ್ಯೆಗಳೂ ಸಹ ಪರಕೀಯತೆಯನ್ನು ಅನುಭವಿಸುವುದನ್ನು ಗಮನಿಸಬೇಕಿದೆ.

ಇನ್ನು ಭಾರತದ ಶ್ರೇಣೀಕೃತ ಸಮಾಜದ ಸಾಂಪ್ರದಾಯಿಕ ನೆಲೆಯಲ್ಲಿ ನಿಂತು ನೋಡುವಾಗ ನಮ್ಮ ಸಮಾಜದೊಳಗಿನ ಕೆಲವು ಮನಸುಗಳಾದರೂ ಆದಿವಾಸಿಗಳನ್ನು, ಬುಡಕಟ್ಟು ಸಮುದಾಯಗಳನ್ನು, ‘ನಾವು’ ಪರಿಭಾವಿಸುವ ‘ನಾಗರಿಕ‘ ಜಗತ್ತಿನ ಹೊರಗಿಟ್ಟೇ ನೋಡುತ್ತವೆ. ಕೈಗಾ ಅಣುಸ್ಥಾವರವಾಗಲೀ, ಕೂಡಂಕುಲಂ ಆಗಲೀ ಅಥವಾ ನರ್ಮದಾ ಕಣಿವೆಯ ಆಕ್ರಂದನವಾಗಲೀ, ಹಿತವಲಯದ, ಮೇಲ್ವರ್ಗದ ಸಮಾಜದಲ್ಲಿ ‘ನಮ್ಮದಲ್ಲದ’ ಅಥವಾ ‘ಅವರ‘ ಸಮಸ್ಯೆಗಳಾಗಿಯೇ ಕಾಣುವುದು ಸಹಜ ಅಭಿವ್ಯಕ್ತಿಯಾಗಿ ಕಂಡುಬರುತ್ತದೆ. ಹಾಗಾಗಿಯೇ ಆದಿವಾಸಿಗಳನ್ನು ನೇರವಾಗಿಯೇ ಕಾಡುವ ‘ಪರಿಸರಕಾಳಜಿ’ ಮತ್ತು ‘ಪರಿಸರವಾದ’ ಎನ್ನುವುದೂ ಸಹ ನಮ್ಮ ಸುಶಿಕ್ಷಿತ ಹಿತವಲಯದ ಸಮಾಜದಲ್ಲಿ ‘ನಮದಲ್ಲದ’ ಪರಕೀಯತೆಯನ್ನು ಅನುಭವಿಸುತ್ತದೆ. “ಅವರಿಗೇನಂತೆ ಹೇಗಾದರೂ ಬದುಕುತ್ತಾರೆ” ಎನ್ನುವ ಮೂದಲಿಕೆಯ ಮಾತುಗಳು ನಗರವಾಸಿ ಸ್ಲಂಗಳಿಗೆ ಅನ್ವಯಿಸುವಷ್ಟೇ ಆದಿವಾಸಿಗಳ ಬದುಕಿಗೂ ಅನ್ವಯಿಸುವುದನ್ನು ನಾಗರಿಕ ಸಮಾಜದ ಸಂಕಥನಗಳಲ್ಲಿ ಕಾಣಬಹುದು.

ಮೇಲಿನ ಆಲೋಚನೆಗಳು ಸಹಜವಾಗಿ, ಸಾಂದರ್ಭಿಕವಾಗಿ ಮೂಡುವಂತಹುದೇ ಆದರೂ, ಈ ಗಂಭೀರ ಬೌದ್ಧಿಕ ಕಸರತ್ತಿಗೆ ಕಾರಣವಾದದ್ದು ಡಾ. ಎ.ಎಸ್ ಪ್ರಭಾಕರ್ ಅವರ ಅಧ್ಯಯನ-ಸಂಶೋಧನಾ ಗ್ರಂಥ “ಚಹರೆಗಳೆಂದರೆ ಗಾಯಗಳೂ ಹೌದು”. ಹೌದು ಇಂದಿನ ಸಂಕೀರ್ಣ ಸಂದರ್ಭದಲ್ಲಿ ಅತ್ಯಗತ್ಯವಾಗಿದ್ದ, ಬುಡಕಟ್ಟು ಸಮುದಾಯಗಳ, ಆದಿವಾಸಿಗಳ ಬದುಕು, ಜೀವನ ಕ್ರಮ, ನೈಸರ್ಗಿಕ ಸವಾಲುಗಳು ಮತ್ತು ಆಳುವ ವರ್ಗಗಳಿಂದ ಈ ನಿರ್ಲಕ್ಷಿತ ಸಮುದಾಯಗಳು ಎದುರಿಸುತ್ತಿರುವ ಸವಾಲುಗಳನ್ನು ಕುರಿತಂತಹ, ಬೌದ್ಧಿಕ ಚಿಂತನೆಗಳನ್ನು, ಸಮಾಜಮುಖಿ ಆಲೋಚನೆಗಳನ್ನು ಮತ್ತು ಕಾಡಬಹುದಾದ ಜಿಜ್ಞಾಸೆಗಳನ್ನು, ಡಾ ಪ್ರಭಾಕರ್ ಅವರ ಈ ಕೃತಿಯಲ್ಲಿನ ಲೇಖನಗಳು ಒಮ್ಮೆಲೆ ಒರೆಹಚ್ಚಿ ನೋಡುತ್ತವೆ.

ಲೇಖಕರು ಹೇಳುವಂತೆ ಹೊರ ಪ್ರಪಂಚದಲ್ಲಿರುವ ನಮಗೆ, ಆದಿವಾಸಿಗಳು, ಬುಡಕಟ್ಟು ಸಮುದಾಯಗಳು ಎಂದೋ ಒಮ್ಮೆ, ಎಲ್ಲೋ ಒಂದು ಕಡೆ ಕಾಣಿಸಿಕೊಳ್ಳುವ ವಿಶಿಷ್ಟ ಚಹರೆಗಳಂತೆ ಕಾಣುತ್ತವೆ. ನಗರವಾಸಿಗಳಿಗೆ ಕೆಲವೊಮ್ಮೆ ಈ ಚಹರೆಗಳು ವಿಶಿಷ್ಟವಾಗಿ ಕಂಡುಬಿಡುತ್ತವೆ. ತಮ್ಮ ಕೌಶಲ್ಯದಿಂದ, ಕರಕುಶಲ ಉತ್ಪನ್ನಗಳಿಂದ ಮತ್ತು ಕೆಲವೊಮ್ಮೆ ಕೆಲವು ವೃತ್ತಿಪರ ಕ್ರೀಡೆ ಅಥವಾ ಹವ್ಯಾಸಗಳಿಂದ ಬಾಹ್ಯ ಸಮಾಜದಲ್ಲಿ ಬದುಕಲು ಯತ್ನಿಸುವ ಈ ಜನಸಮುದಾಯಗಳನ್ನು ಭೌತಿಕವಾಗಿ ಮತ್ತು ಮಾನಸಿಕವಾಗಿ ಹೊರಗಿಟ್ಟು ನೋಡುವುದು ನಮ್ಮ ಸುತ್ತಲಿನ ಸಮಾಜದ ವಾಸ್ತವ. ಇದು ಒಂದು ರೀತಿಯಲ್ಲಿ ದುರಂತ ಎನಿಸಿದರೆ ಮತ್ತೊಂದೆಡೆ ನಮ್ಮ ಗ್ರಹಿಕೆಯ ದೋಷ ಎನಿಸುವುದೂ ಉಂಟು.

ಡಾ ಪ್ರಭಾಕರ್ ಅವರ ಪುಸ್ತಕವನ್ನು ಓದುತ್ತಾ ಹೋದಂತೆ, ಇದೇ ಬಾಹ್ಯ ಪ್ರಪಂಚದ ಭಾಗವಾಗಿ ಬೆಳೆದ ನನ್ನಂಥವನಿಗೆ ಎಲ್ಲೋ ಒಂದು ಕಡೆ ಪಾಪಪ್ರಜ್ಞೆಯೂ ಕಾಡುತ್ತಾ ಹೋಗುತ್ತದೆ. ತಮ್ಮ ಪುಸ್ತಕದಲ್ಲಿ ಒಂದು ಕಡೆ ಲೇಖಕರು “ಆದಿವಾಸಿಗಳ ಅಂತಸ್ಥ ಜಗತ್ತಿನಲ್ಲಿ ಮರ್ಯಾದಸ್ಥ ಸಮಾಜದ ಔನ್ನತ್ಯವಿದೆ, ಮೊಗೆದಷ್ಟೂ ವಿಕಾಸವಾಗುವ ತಿಳುವಳಿಕೆ ಇದೆ,,,” (ಪು -3) ಎಂದು ಹೇಳುವಾಗ ಈ ಪಾಪಪ್ರಜ್ಞೆಯ ತಲೆಯ ಮೇಲೆ ಮೊಟಕಿದಂತಾಗುತ್ತದೆ. ಅಷ್ಟೇ ಖುಷಿಯಾಗುವ ವಿಚಾರ ಎಂದರೆ ಡಾ. ಪ್ರಭಾಕರ್ ಅವರು ತಮ್ಮ ಈ ಅಧ್ಯಯನ ಕ್ರಮದಲ್ಲಿ ಅನುಸರಿಸಿರುವ ಮಾದರಿ ಮತ್ತು ಅವರ ಪರಿಶ್ರಮ. ಬುಡಕಟ್ಟು ಸಮುದಾಯಗಳನ್ನು “ನಮ್ಮದೇ ಸಮಾಜದ ಬೇರುಗಳು,,,, ”( ಪುಟ 33) ಎಂದು ಗುರುತಿಸುವ ಮೂಲಕ ಡಾ ಪ್ರಭಾಕರ್ ಆಧುನಿಕ ಸುಶಿಕ್ಷಿತ ಸಮಾಜದಲ್ಲೂ ಇಂದಿಗೂ ಉಂಟಾಗಬೇಕಾದ ಸಂವೇದನಾಶೀಲ ಜಾಗೃತಿಯ ಬಗ್ಗೆ ಮುನ್ನೆಚ್ಚರಿಕೆಯನ್ನೂ ಕೊಡುತ್ತಾರೆ.

ಆದಿವಾಸಿಗಳ ಬದುಕಿನ ಶೈಲಿ, ಅವರ ಜೀವನ ಕ್ರಮ, ಕಾಡುಮೇಡುಗಳಲ್ಲಿ, ಬೆಟ್ಟ ಕಣಿವೆಗಳಲ್ಲಿ ಮತ್ತು ಗ್ರಾಮಾಂತರ ಹಾಗೂ ನಗರ ಪ್ರದೇಶಗಳ ಹೊರವಲಯದಲ್ಲಿ ತಮ್ಮದೇ ಆದ ಪ್ರಪಂಚದಲ್ಲಿ ಬದುಕುವ ಈ ಸಮುದಾಯಗಳು, ಶ್ರೇಣೀಕೃತ ಸಮಾಜದ ಚೌಕಟ್ಟಿನಿಂದಲೂ ಹೊರತಾಗಿ ತಮ್ಮ ಅಸ್ತಿತ್ವವನ್ನು ಗುರುತಿಸಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿರುವುದನ್ನು ಲೇಖಕರು ತಮ್ಮ ಅಧ್ಯಯನದ ಮೂಲಕ ಸಾಕ್ಷೀಕರಿಸುತ್ತಾರೆ. ಈ ಸಮುದಾಯಗಳು ದಿನನಿತ್ಯ ಎದುರಿಸುವ ಬದುಕಿನ ಸಮಸ್ಯೆಗಳೊಂದಿಗೇ, ಹೊರ ಸಮಾಜದ ಅಭಿವೃದ್ಧಿ ಮತ್ತು ಪ್ರಗತಿಯ ಮೂಸೆಯಲ್ಲಿ ಅಧಿಕಾರಸ್ಥ ರಾಜಕಾರಣ ಕೈಗೊಳ್ಳುವ ಪರಿಸರ ವಿರೋಧಿ ಯೋಜನೆಗಳಿಂದ ಎದುರಿಸುವ ಅಸ್ತಿತ್ವದ ಸಮಸ್ಯೆಗಳನ್ನೂ ಹಲವು ಅಧ್ಯಾಯಗಳಲ್ಲಿ, ವಿಭಿನ್ನ ಆಯಾಮಗಳಲ್ಲಿ ಚರ್ಚೆಗೊಳಪಡಿಸುತ್ತಾರೆ.

ಉತ್ಪಾದನಾ ಸಂಬಂಧಗಳು, ಉತ್ಪಾದನಾ ಮೂಲಗಳ ಒಡೆತನ ಮತ್ತು ಉತ್ಪಾದಕ ಶಕ್ತಿಗಳ ಬಳಕೆ ಈ ಮೂರೂ ಆಯಾಮಗಳನ್ನು ಮಾರ್ಕ್ಸ್‌ವಾದಿ ನೆಲೆಯಲ್ಲಿ ವಿಶ್ಲೇಷಿಸುವ ಹಲವು ಲೇಖನಗಳು ಈ ಕೃತಿಯಲ್ಲಿವೆ. ಈ ಸಾಮಾಜಿಕಾರ್ಥಿಕ ವಿದ್ಯಮಾನಗಳನ್ನು, ಭೂಮಿಯೊಡನೆ, ನಿಸರ್ಗದೊಡನೆ ಅತ್ಯಂತ ನಿಕಟ ಸಂಬಂಧ ಹೊಂದಿರುವ ಜನಸಮುದಾಯಗಳ ಬದುಕಿನ ಮೂಸೆಯಲ್ಲಿ ವಿಶ್ಲೇಷಿಸುವಾಗ ಡಾ ಪ್ರಭಾಕರ್ ತಮ್ಮ ಸೈದ್ಧಾಂತಿಕ ನಿಲುವನ್ನು ಸಮರ್ಪಕವಾಗಿಯೇ ಬಳಸಿ, ಬಂಡವಾಳಶಾಹಿ ವ್ಯವಸ್ಥೆಯ ಶೋಷಕ ವಿಧಾನಗಳನ್ನು ಬಯಲುಮಾಡುತ್ತಾರೆ. ಇದು ಈ ಇಡೀ ಕೃತಿಯ ಒಂದು ವೈಶಿಷ್ಟ್ಯವೂ ಹೌದು, ಮೆರುಗೂ ಹೌದು.

ಬುಡಕಟ್ಟು ಸಮುದಾಯಗಳ, ಆದಿವಾಸಿಗಳ ಬದುಕಿನ ಅಧ್ಯಯನ ಮಾಡುವ ಸಂದರ್ಭದಲ್ಲಿ ಬೌದ್ಧಿಕ ವಲಯದಲ್ಲಿ ಉಂಟಾಗುವ ಜಿಜ್ಞಾಸೆಗಳನ್ನೂ ಸಹ ಲೇಖನಗಳ ಮೂಲಕ ಡಾ ಪ್ರಭಾಕರ್ ಅದ್ಭುತವಾಗಿ ಪರಾಮರ್ಶಿಸುತ್ತಾರೆ. ‘ತಮ್ಮದಲ್ಲದ’ ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆಗಳ ತಳಮಟ್ಟದ ಅಧ್ಯಯನ ಮಾಡುವಾಗ ‘ಒಳಗಿನರಾಗಿ’ ಆ ಜನಸಮುದಾಯಗಳಲ್ಲಿ ಒಂದಾಗಿ ಬೆರೆತು ಅಧ್ಯಯನ ನಡೆಸಬೇಕಾದ ಅನಿವಾರ್ಯತೆಗಳನ್ನೂ ಉದಾಹರಣೆಗಳ ಸಮೇತ ನಿರೂಪಿಸುತ್ತಾ ಹೋಗುತ್ತಾರೆ. ಬುಡಕಟ್ಟು ಸಮುದಾಯಗಳ ನಡುವೆ ಕಳೆದ ಮೂರು ದಶಕಗಳಲ್ಲಿ ಹೆಚ್ಚಾಗಿ ಸಕ್ರಿಯವಾಗಿರುವ ಎನ್ಜಿಒಗಳ ಉದ್ದೇಶಗಳು ಎಷ್ಟೇ ಉದಾತ್ತತೆಯಿಂದ ಕೂಡಿದ್ದರೂ, ಮೂಲತಃ ಉತ್ಪಾದನಾ ಸಂಬಂಧಗಳು ಮತ್ತು ಭೂ ಸಂಬಂಧಗಳನ್ನು ಅಧ್ಯಯನ ಮಾಡುವ ಸಂದರ್ಭದಲ್ಲಿ ಎದುರಾಗಬಹುದಾದ ಹಲವು ಸಮಸ್ಯೆಗಳನ್ನು ಈ ಕೃತಿ ತೆರೆದಿಡುತ್ತದೆ. ಹಾಗೆಯೇ ಈ ಸಮಸ್ಯೆಗಳಿಗೆ ಪರಿಹಾರದ ಆಯಾಮಗಳನ್ನೂ ತೆರೆದಿಡುವುದು ಡಾ ಪ್ರಭಾಕರ್ ಅವರ ಅಧ್ಯಯನದ ಹಿರಿಮೆ ಎಂದೇ ಹೇಳಬಹುದು.

ಆಳುವ ವರ್ಗಗಳು ಅಥವಾ ಅಧಿಕಾರಸ್ಥ ಪಕ್ಷಗಳು ಬಂಡವಾಳಶಾಹಿ ಮಾರುಕಟ್ಟೆ ವ್ಯವಸ್ಥೆಯೊಡನೆ ರಾಜಿಯಾದಷ್ಟೂ ಅತ್ಯಂತ ಹೆಚ್ಚು ಶೋಷಣೆಗೊಳಗಾಗುವುದು ಈ ಆದಿವಾಸಿ ಸಮುದಾಯಗಳು ಎನ್ನುವುದನ್ನು ನಿಖರವಾಗಿ ಪ್ರತಿಪಾದಿಸುವ ಕೃತಿ ಇದಾಗಿದೆ. ಸಾಂವಿಧಾನಿಕ ಹಕ್ಕುಗಳಿಂದಲೂ ವಂಚಿತರಾಗಿ,, ಸವಲತ್ತುಗಳಿಂದಲೂ ವಂಚಿತರಾಗಿ, ಆಡಳಿತ ವ್ಯವಸ್ಥೆಯಲ್ಲಿ ಪ್ರಾತಿನಿಧ್ಯವೂ ಇಲ್ಲದಂತಹ ಸಾವಿರಾರು ಬುಡಕಟ್ಟು ಸಮುದಾಯಗಳು ಇನ್ನೂ ಈ ದೇಶದಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಶ್ರಮಿಸುತ್ತಿವೆ ಎನ್ನುವುದೇ ಚಿಂತೆಗೀಡುಮಾಡುವ ವಿಚಾರ. ಮೀಸಲಾತಿಯನ್ನೂ ಒಳಗೊಂಡಂತೆ, ಹಲವು ಸಾಂವಿಧಾನಿಕ ಸೌಲಭ್ಯ ಮತ್ತು ಸವಲತ್ತುಗಳ ಪರಿಚಯವೇ ಇಲ್ಲದ ನೂರಾರು ಸಮುದಾಯಗಳು ಇಲ್ಲಿ ಎದುರಾಗುತ್ತವೆ. ಈ ಜನತೆಯ ಬದುಕು ನೇರವಾಗಿ ತಮ್ಮ ಪಾರಂಪರಿಕ ವೃತ್ತಿ, ನಿಸರ್ಗ ಮತ್ತು ನಿಸರ್ಗ ಸಂಪತ್ತಿನೊಡನೆ ಮುಖಾಮುಖಿಯಾಗುತ್ತಾ ಸವೆಯುತ್ತಿರುತ್ತದೆ. ಇವರ ಬದುಕಿನ ಒಂದು ಸಮಗ್ರ ಚಿತ್ರಣಕ್ಕಾಗಿ ಮನ ಹಂಬಲಿಸುವಂತೆ ಮಾಡುವುದು ಡಾ ಪ್ರಭಾಕರ್ ಅವರ ಅಧ್ಯಯನದ ಹಿರಿಮೆ ಎನ್ನಲಡ್ಡಿಯಿಲ್ಲ.

ಕೃತಿಯ ಹೆಸರೇ ಸೂಚಿಸುವಂತೆ “ಚಹರೆಗಳೆಂದರೆ ಗಾಯಗಳೂ ಹೌದು,,,”. ಆದರೆ ‘ಒಳಗಿನವರಾಗದೆ ’ ಬಾಹ್ಯ ಪ್ರಪಂಚವನ್ನು ಪ್ರತಿನಿಧಿಸುತ್ತಾ, ನಾವು ಎದುರುಗೊಳ್ಳುತ್ತಿರುವ ಅಭಿವೃದ್ಧಿ ಅಥವಾ ಪ್ರಗತಿಯೇ ಸಮಾಜದ ಔನ್ನತ್ಯಕ್ಕೆ ಕನ್ನಡಿ ಹಿಡಿದಂತೆ ಎಂದು ಭಾವಿಸುತ್ತಾ, ಹಿತವಲಯದ ಚೌಕಟ್ಟುಗಳಲ್ಲಿ ಬಂಧಿತರಾಗುವ ನಮ್ಮ ಸಮಾಜದ ಬೃಹತ್ ವರ್ಗಕ್ಕೆ ‘ಚಹರೆ’ಯೂಕಾಣುತ್ತಿಲ್ಲ, ‘ಗಾಯ’ಗಳಿರುವ ಪರಿವೆಯೂ ಇಲ್ಲ ಎನ್ನುವುದು ಈ ಸಂದರ್ಭದ ದುರಂತ.

ನಾನು ವಿಮರ್ಶಕನಲ್ಲ ಹಾಗಾಗಿ ಈ ಕೃತಿಯ ವಿಮರ್ಶೆ ಮಾಡುವ ಅರ್ಹತೆಯಾಗಲೀ, ಉದ್ದೇಶವಾಗಲೀ ನನಗಿಲ್ಲ ಎಂದೇ ವಿನಮ್ರತೆಯಿಂದ ಒಪ್ಪಿಕೊಳ್ಳುತ್ತೇನೆ. ಆದರೆ ಒಬ್ಬ ಬರಹಗಾರನಾಗಿ, ಸಾಮಾಜಿಕ, ರಾಜಕೀಯ, ಆರ್ಥಿಕ ವಿಶ್ಲೇಷಕನಾಗಿ ಈ ಕೃತಿ ನನ್ನಲ್ಲಿ ಮೂಡಿಸಿದ ಅನಿಸಿಕೆಗಳಿಗೆ ಈ ಮೂಲಕ ಅಕ್ಷರ ರೂಪ ನೀಡಲು ಪ್ರಯತ್ನಿಸಿದ್ದೇನೆ.

ಡಾ ಎ ಎಸ್ ಪ್ರಭಾಕರ್ ಅವರ ಈ ಕೃತಿ ಅಧ್ಯಯನ ಯೋಗ್ಯ ಎಂದಷ್ಟೇ ಹೇಳುವುದು ಕ್ಲೀಷೆಯಾಗುತ್ತದೆ. ಇದು ನಮ್ಮ ಸಮಾಜದ ಆಂತರ್ಯದಲ್ಲಿ ಕಾಣಬೇಕಾದ ಗ್ರಹೀತಗಳ ಕೊರತೆಯನ್ನು ಬಿಂಬಿಸುವಷ್ಟೇ ಪರಿಣಾಮಕಾರಿಯಾಗಿ, ನಮ್ಮ ಸಾಮಾಜಿಕ ಚೌಕಟ್ಟಿನಿಂದ ಹೊರಗಿನ ಸತ್ಯಾಂಶಗಳನ್ನು, ವಾಸ್ತವಗಳನ್ನು ಮತ್ತು ನಮ್ಮ ಕಣ್ಣೆದುರಿನಲ್ಲೂ ನಡೆಯುತ್ತಿದ್ದರೂ ನಮಗೆ ಕಾಣದಾಗಿರುವ ದುರಂತಗಳನ್ನು ಅನಾವರಣಗೊಳಿಸುವ ಒಂದು ಮೌಲಿಕ ಕೃತಿ.

ಡಾ ಎ ಎಸ್ ಪ್ರಭಾಕರ್ ಅಭಿನಂದನಾರ್ಹರು. ಈ ಕೃತಿ ಸಮಸ್ತ ಕನ್ನಡಿಗರನ್ನು ತಲುಪುವಂತಾಗಲಿ, ಸಾಧ್ಯವಾದರೆ ಅನ್ಯ ಭಾಷೆಗಳಿಗೂ ತರ್ಜುಮೆಗೊಂಡು ಎಲ್ಲರನ್ನು ತಲುಪುವಂತಾಗಿ, ನಮ್ಮೊಳಗೆ ಮಲಗಿರುವ ಸಂವೇದನಾಶೀಲ ಪ್ರಜ್ಞೆಯನ್ನು ಬಡಿದೆಬ್ಬಿಸುವಂತಾಗಲಿ ಎಂದು ಹೃದಯಪೂರ್ವಕವಾಗಿ ಆಶಿಸುತ್ತೇನೆ.

  • ನಾ ದಿವಾಕರ
  • ಪುಸ್ತಕ ಕೊಳ್ಳಲು ಬಯಸುವವರು ಕೆಳಗಿನ ಕೊಂಡಿ ಬಳಸಿ

    ಚಹರೆಗಳೆಂದರೆ ಗಾಯಗಳೂ ಹೌದು -ಸಮುದಾಯ ಅಧ್ಯಯನ ಕುರಿತ ಕಥನಗಳು
    ಲೇಖಕರು- ಡಾ.ಎ.ಎಸ್.ಪ್ರಭಾಕರ್
    ಬೆಲೆ- 250/-
    ಗೂಗಲ್ ಪೆ- 9880302817

    ಆನ್‌ಲೈನ್ ಮೂಲಕ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ


ಇದನ್ನೂ ಓದಿ: ಅಂತರಂಗದ ದನಿ ಇದು: ‘ಚಹರೆಗಳೆಂದರೆ ಗಾಯಗಳೂ ಹೌದು’ ಪುಸ್ತಕ ಲೋಕಾರ್ಪಣೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...