ಕನ್ನಡ ಚಿತ್ರರಂಗದಲ್ಲಿ ವೈವಿಧ್ಯಮಯ ಪಾತ್ರಗಳಿಗೆ ಜೀವ ತುಂಬುವ ಮೂಲಕ ಗುರುತಿಸಿಕೊಂಡಿರುವ ನಟ ಧನಂಜಯಗೆ ಇಂದು (ಆಗಸ್ಟ್ 23) ಹುಟ್ಟುಹಬ್ಬದ ಸಂಭ್ರಮ. ಕನ್ನಡ, ತೆಲುಗು ಚಿತ್ರಗಳಲ್ಲಿ ತನ್ನ ಛಾಪು ಮೂಡಿಸಿರುವ ನಟ, ಟಗರು ಬಳಿಕ ಡಾಲಿ ಎಂದೇ ಚಿರಪರಿಚಿತರಾಗಿದ್ದಾರೆ.
ನಾಯಕ ನಟನಾಗಿ, ಖಳನಾಯಕನಾಗಿ ಕನ್ನಡ, ತೆಲುಗು, ತಮಿಳು ಮತ್ತು ಮಲೆಯಾಳಂ ಚಿತ್ರೋದ್ಯಮದಲ್ಲಿ ಮಿಂಚುತ್ತಿರುವ ಕಲಾವಿದನಿಗೆ ಎಲ್ಲಾ ಚಿತ್ರರಂಗದ ಕಲಾವಿದರು, ಚಿತ್ರ ಕರ್ಮಿಗಳು ಸೇರಿದಂತೆ ಅಭಿಮಾನಿಗಳು ಶುಭಾಶಯದ ಮಹಾಪೂರವನ್ನೇ ಹರಿಸಿದ್ದಾರೆ. ಕೊರೊನಾ ಕಾರಣದಿಂದ ಈ ಬಾರಿ ನಟ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ ಎನ್ನಲಾಗಿದೆ.
ಧನಂಜಯ ಜನ್ಮದಿನದ ಹಿನ್ನೆಲೆಯಲ್ಲಿ ಅವರ ಸಾಲು ಸಾಲು ಚಿತ್ರಗಳ ಘೋಷಣೆಯಾಗಿದೆ. ಮೂರು ದಿನಗಳ ಹಿಂದೆಯೇ ’ರತ್ನನ್ ಪ್ರಪಂಚ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಡಾಲಿ ನಿರ್ಮಾಣದ ಮೊದಲ ಚಿತ್ರ ಹೆಡ್ ಬುಷ್’ ಸಿನಿಮಾದ ಟೀಸರ್ ಕೂಡ ಬಿಡುಗಡೆಯಾಗಿದೆ.
ಇದನ್ನೂ ಓದಿ: ಮೆಗಾಸ್ಟಾರ್ ಚಿರಂಜೀವಿ ಹುಟ್ಟುಹಬ್ಬ: ಅಪ್ಪಾ, ಆಚಾರ್ಯ ನೀನೇ ಎಂದ ರಾಮ್ ಚರಣ್
ಹೆಡ್ ಬುಷ್ ಚಿತ್ರದ ಕಥೆಯನ್ನು ಅಗ್ನಿ ಶ್ರೀಧರ್ ಬರೆದಿದ್ದಾರೆ. ಚಿತ್ರದಲ್ಲಿ ಡಾನ್ ಎಂಪಿ ಜಯರಾಜ್ ಅವರ ಪಾತ್ರದಲ್ಲಿ ಧನಂಜಯ ಕಾಣಿಸಿಕೊಳ್ಳಲಿದ್ದಾರೆ.
ಬಡವ ರಾಸ್ಕಲ್, ಮಾನ್ಸೂನ್ ರಾಗ, ರತ್ನನ್ ಪ್ರಪಂಚ, ಮಲಯಾಳಂನ 21 ಅವರ್ಸ್, ಹೆಡ್ ಬುಷ್, ಬೈರಾಗಿ, ತೋತಾಪುರಿ, ಕಾಲಾಪತ್ಥರ್ ಸೇರಿದಂತೆ ಹಲವು ಚಿತ್ರಗಳಲ್ಲಿ ಡಾಲಿ ಧನಂಜಯ ಸಕ್ರಿಯರಾಗಿದ್ದಾರೆ. ನಟ ವಿಜಯ್ ನಟನೆಯ ಸಲಗದಲ್ಲಿ ಧನಂಜಯ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದು, ಬಿಡುಗಡೆಗೆ ಸಿದ್ಧವಾಗಿದೆ.
ಈ ಹಿಂದೆ ಕೊರೊನಾ ವಿಚಾರವಾಗಿ ಧರ್ಮವನ್ನ ಎಳೆ ತಂದು ಟ್ವೀಟ್ ಮಾಡಿದ ಚಕ್ರವರ್ತಿ ಸೂಲಿಬೆಲೆಗೆ ಡಾಲಿ ಧನಂಜಯ “ಏನಾದರು ಆಗು ಮೊದಲು ಮಾನವನಾಗು” ಎಂಬ ಕುವೆಂಪು ಅವರ ಸಾಲಿನ ಮೂಲಕ ಪಾಠ ಮಾಡಿದ್ದರು.
ಕರ್ನಾಟಕದ ಮಹತ್ವದ ಕವಿ, ಚಿಂತಕ, ಲೇಖಕ ರಾಷ್ಟ್ರಕವಿ ಕುವೆಂಪುರವರ ಹೇಳಿಕೆಯನ್ನು ಬರೆಯುವ ಮೂಲಕ ಮಾನವ ಧರ್ಮಕ್ಕಿಂತ ಮಿಗಲಾದ ಧರ್ಮವಿಲ್ಲ ಎಂದು ಧನಂಜಯ ಪ್ರತಿಕ್ರಿಯಿಸಿದ್ದರು. ಇತರ ಧರ್ಮಗಳನ್ನು ತೆಗಳುವುದನ್ನು ಬಿಟ್ಟು ಮಾನವರಾಗೋಣ ಎಂದು ಸಾರಿದ್ದರು. ಈ ಮೂಲಕ ಕೋಟ್ಯಾಂತರ ಜನರ ಮನಗೆದ್ದಿದ್ದರು.
ಇದನ್ನೂ ಓದಿ: ಏನಾದರು ಆಗು ಮೊದಲು ಮಾನವನಾಗು : ಸೂಲಿಬೆಲೆಗೆ ಡಾಲಿ ಧನಂಜಯ್ ಪಾಠ..