ಇತ್ತೀಚೆಗಷ್ಟೇ ಪಂಜಾಬ್ ಕಾಂಗ್ರೆಸ್‌ನಲ್ಲಿ ಉಂಟಾಗಿದ್ದ ಬಂಡಾಯವನ್ನು ಶಮನಗೊಳಿಸಿದ್ದ ಕಾಂಗ್ರೆಸ್‌ನ ಕೇಂದ್ರ ನಾಯಕತ್ವಕ್ಕೆ ಇದೀಗ ಹೊಸ ತಲೆನೋವು ಶುರುವಾಗಿದೆ. ಛತ್ತೀಸ್‌ಗಡದ ಮುಖ್ಯಮಂತ್ರಿ ಬದಲಾವಣೆಗೆ ಅಲ್ಲಿನ ಆರೋಗ್ಯ ಸಚಿವ ಟಿಎಸ್ ಸಿಂಗ್ ದಿಯೋ ಒತ್ತಾಯಿಸುತ್ತಿದ್ದಾರೆ. ಒಂದು ವೇಳೆ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಗದೆ ಇದ್ದರೆ ಅವರು ಸರ್ಕಾರದಿಂದ ಮಾತ್ರವಲ್ಲ, ಪಕ್ಷವನ್ನೂ ತೊರೆಯಲಿದ್ದಾರೆ ಎಂದು ಅವರ ಆಪ್ತರು ತಿಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಛತ್ತೀಸ್‌ಗಡದಲ್ಲಿ ಭೂಪೇಶ್ ಬಘೇಲ್ ನೇತೃತ್ವದ ಕಾಂಗ್ರೆಸ್ ಸರ್ಕಾರ ರಚನೆಯಾಗಿ ಜೂನ್ ತಿಂಗಳಿಗೆ ಎರಡು ವರ್ಷಗಳು ತುಂಬಿದೆ. “ಸರ್ಕಾರ ರಚೆನೆಯಾಗುವ ವೇಳೆಗೆ ಎರಡುವರೆ ವರ್ಷಗಳ ನಂತರ ಅಧಿಕಾರವನ್ನು ಹಸ್ತಾಂತರ ಮಾಡುವ ಬಗ್ಗೆ ಒಪ್ಪಂದವಾಗಿತ್ತು. ಮುಖ್ಯಮಂತ್ರಿ ಭೂಪೇಶ್ ಅವರೇ ಅದಕ್ಕೆ ಒಪ್ಪಿಕೊಂಡಿದ್ದರು” ಎಂದು ಬಂಡಾಯವೆದ್ದಿರುವ ಕಾಂಗ್ರೆಸ್ ನಾಯಕ ಟಿಎಸ್ ಸಿಂಗ್ ದಿಯೋ ಪ್ರತಿಪಾದಿಸುತ್ತಿದ್ದಾರೆ.
ಒಂದು ವೇಳೆ ಟಿಎಸ್ ಸಿಂಗ್ ದಿಯೋ ಅವರಿಗೆ ಅಧಿಕಾರ ಹಸ್ತಾಂತರವಾಗದಿದ್ದರೆ ಅವರು ಸರ್ಕಾರವನ್ನು ಮಾತ್ರವಲ್ಲ, ಕಾಂಗ್ರೆಸ್ ಪಕ್ಷವನ್ನೇ ತೊರೆಯಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ: ಯುವಕನ ಮೇಲೆ ಹಲ್ಲೆಗೈದು, ಮೊಬೈಲ್ ಹೊಡೆದುಹಾಕಿದ ಜಿಲ್ಲಾಧಿಕಾರಿ: ಕ್ರಮಕ್ಕೆ ಮುಂದಾದ ಛತ್ತೀಸ್ ಘಡ ಸಿಎಂ
ಆದರೆ ಅವರು ಬಿಜೆಪಿ ಸೇರುವುದಿಲ್ಲವಾದರೂ, ಭೂಪೇಶ್ ಅವರ ಅಡಿಯಲ್ಲಿ ಮಾತ್ರ ಕೆಲಸ ಮಾಡಲು ಸಾಧ್ಯವಿಲ್ಲ. ಪರಿಸ್ಥಿತಿ ಕೈಮೀರುವ ಹಂತದಲ್ಲಿದೆ ಎಂದು ಮೂಲಗಳು ತಿಳಿಸಿದೆ ಎಂದು ವರದಿಯಾಗಿದೆ. ಆದರೆ ಇಬ್ಬರು ನಾಯಕರು ಕೂಡಾ ತಮ್ಮ ಮುಂದಿನ ಯೋಜನೆ ಏನು ಎಂದು ಇದುವರೆಗೂ ಯಾವುದೆ ಮಾಹಿತಿಯನ್ನು ಅಧೀಕೃತವಾಗಿ ಬಿಟ್ಟುಕೊಟ್ಟಿಲ್ಲ.
ಅದಾಗ್ಯೂ ಇಬ್ಬರೂ ನಾಯಕರೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಭೇಟಿಯಾಗಲಿದ್ದಾರೆ ಎಂದು ವರದಿಯಾಗಿದೆ. ಮುಖ್ಯಮಂತ್ರಿ ಭೂಪೇಶ್ ಅವರು ರಾಹುಲ್ ಗಾಂಧಿಯನ್ನು ಭೇಟಿಯಾಗುವ ಸಮಯದಲ್ಲಿ ದಿಯೋ ಅವರು ಕೂಡಾ ಇರಲಿದ್ದಾರೆಯೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, “ರಾಹುಲ್ ಗಾಂಧಿ ಜೊತೆಗೆ ಮಾತ್ರ ನಮ್ಮ ಸಭೆ ನಡೆಯಲಿದೆ ಎಂದು ನನಗೆ ಸಿಕ್ಕ ಮಾಹಿತಿ” ಎಂದು ಹೇಳಿದ್ದಾರೆ.
2018 ರಲ್ಲಿ ಛತ್ತೀಸ್‌ಗಡ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದ ನಂತರ, ಮುಖ್ಯಮಂತ್ರಿ ರೇಸ್‌ನಲ್ಲಿ ಟಿಎಸ್ ಸಿಂಗ್ ದಿಯೋ ದೇವ ಮತ್ತು ತಾಮ್ರಧ್ವಾಜ್ ಸಾಹು ಮತ್ತು ಭೂಪೇಶ್ ಬಘೇಲ್ ಇದ್ದರು. ಅಂತಿಮವಾಗಿ ಭೂಪೇಶ್ ಮುಖ್ಯಮಂತ್ರಿಯಾಗಿ, ಉಳಿದ ಇಬ್ಬರಿಗೆ ಮಂತ್ರಿ ಸ್ಥಾನಗಳನ್ನು ನೀಡಲಾಗಿತ್ತು.
ಆದಾಗ್ಯೂ ಪಕ್ಷದ ನಾಯಕತ್ವವು ಕೇಳಿದರೆ ತನ್ನ ಸ್ಥಾನದಿಂದ ತಕ್ಷಣವೇ ಕೆಳಗಿಳಿಯುವುದಾಗಿ ಮುಖ್ಯಮಂತ್ರಿ ಭೂಪೇಶ್ ಹೇಳುತ್ತಲೆ ಬಂದಿದ್ದಾರೆ.
ಇದನ್ನೂ ಓದಿ: ಬಾಬಾ ರಾಮ್‌ದೇವ್ ವಿರುದ್ಧ ಎಫ್‌ಐಆರ್ ದಾಖಲಿಸಿದ ಛತ್ತೀಸ್‌ಗಢ ಪೊಲೀಸರು


