ಟಿ.ಎನ್ ಷಣ್ಮುಖ |
ಕೋಟೆ ನಾಡು ಚಿತ್ರದುರ್ಗ ಜಿಲ್ಲೆ ತನ್ನ ಪಾರಂಪರಿಕ `ಕೈ’ ಪ್ರಾಬಲ್ಯವನ್ನೇ ಈ ಸಲವೂ ಮುಂದುವರೆಸುವ ಲಕ್ಷಣಗಳು ಗೋಚರಿಸುತ್ತಿವೆ. ಕಳೆದ ಎಲೆಕ್ಷನ್‍ನಲ್ಲಿ ಆರು ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದರೆ ತಲಾ ಒಂದರಲ್ಲಿ ಬಿಜೆಪಿ ಮತ್ತು ಬಿಎಸ್‍ಆರ್ ಕಾಂಗ್ರೆಸ್ ಹುರಿಯಾಳುಗಳು ವಿಜಯಪತಾಕೆ ಹಾರಿಸಿದ್ದರು.
ಬಳ್ಳಾರಿ ಗಣಿ ಮಾಫಿಯಾದ ಶ್ರೀರಾಮುಲು ಮೊಳಕಾಲ್ಮೂರಿನಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರೋದು ಕುತೂಹಲದ ಸಂಗತಿ. ಆತನಿಗೆ ಎದುರಾಗಿ ಕಾಂಗ್ರೆಸ್‍ನಿಂದ ಯೋಗೀಶ್ ಬಾಬು, ಜೆಡಿಎಸ್‍ನಿಂದ ಸತತ ನಾಲ್ಕು ಬಾರಿ ಸೋತಿರುವ ಯತ್ನಟ್ಟಿ ಗೌಡ ಕಣದಲ್ಲಿದ್ದಾರೆ. ಇಲ್ಲಿ ರಾಮುಲು ಸ್ಪರ್ಧೆ ಸಂಚಲನ ಮೂಡಿಸಿದ್ದರೂ ಗೆಲುವು ಅಷ್ಟು ಸುಲಭದ ತುತ್ತಲ್ಲ. ಬಿಜೆಪಿ ಟಿಕೇಟ್ ಕೈತಪ್ಪಿದ್ದಕ್ಕೆ ಬಂಡಾಯವೆದ್ದಿರುವ ತಿಪ್ಪೇಸ್ವಾಮಿಯ ಬಂಡಾಯ ಶ್ರೀರಾಮುಲುಗೆ ಬಿಸಿ ತುಪ್ಪವಾಗುವ ಸಾಧ್ಯತೆಯಿದೆ. ಯಾವ ನಾಯಕರ ಸ್ವಜಾತಿ ಮತಗಳನ್ನು ನಂಬಿ ರಾಮುಲು ಇಲ್ಲಿಗೆ ಕಾಲಿಟ್ಟಿದ್ದಾನೊ ಆ ಸಮುದಾಯದ ಒಳಜಾತಿ ಬೇಗುದಿಗೆ ತಿಪ್ಪೇಸ್ವಾಮಿ ಒಳಗಿಂದೊಳಗೇ ತುಪ್ಪ ಸುರಿಯುವ ಯತ್ನ ನಡೆಸಿದ್ದಾನೆ. ಜಾತ್ಯಸ್ಥ ಚಿತ್ರನಟ ಸುದೀಪ್‍ನನ್ನು ಕರೆಸಿ ಒಂದುಸುತ್ತು ಪ್ರಚಾರ ನಡೆಸಿರುವ ರಾಮುಲು ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿರುವಂತೆ ಕಂಡುಬಂದರೂ ಕಾಂಗ್ರೆಸ್‍ನ ಬಾಬು ಟಫ್ ಕಾಂಪಿಟೇಶನ್ ಕೊಡುತ್ತಿದ್ದಾನೆ.
ಚಳ್ಳಕೆರೆಯಲ್ಲಿ ಖುದ್ದು ಅಮಿತ್ ಶಾನೇ ಸ್ಪರ್ಧಿಸಿದರೂ ಕಾಂಗ್ರೆಸಿನ ರಘುಮೂರ್ತಿಯೆದುರು ಗೆಲ್ಲುವುದು ಕಷ್ಟ ಅಂತ ಅಲ್ಲಿನ ಜನ ಮಾತಾಡಿಕೊಳ್ಳುತ್ತಿದ್ದಾರೆ. ಬಿಜೆಪಿಯಿಂದ ಮಾಜಿ ಸಚಿವ ತಿಪ್ಪೇಸ್ವಾಮಿ ಮಗ ಕೆಟಿ ಕುಮಾರಸ್ವಾಮಿ ಹಾಗೂ ಜೆಡಿಎಸ್‍ನಿಂದ ರವೀಶ್ ಕುಮಾರ್‍ರ ಸ್ಪರ್ಧೆ, ಶಾಸಕನಾಗಿ ರಘುಮೂರ್ತಿ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳ ಮುಂದೆ ಸಪ್ಪೆ ಎನಿಸುವಂತಿದೆ.
ಹಿರಿಯೂರು ಕ್ಷೇತ್ರದಲ್ಲಿ ಹಾಲಿ ಶಾಸಕ ಕಾಂಗ್ರೆಸಿನ ಸುಧಾಕರ್‍ಗೆ ಎದುರಾಗಿ ಬಿಜೆಪಿಯಿಂದ ಪೂರ್ಣಿಮಾ ಶ್ರೀನಿವಾಸ್, ಜೆಡಿಎಸ್‍ನಿಂದ ಯಶೋಧರ ಕಣದಲ್ಲಿದ್ದಾರೆ. ತನ್ನ ತಂದೆ ಕೃಷ್ಣಪ್ಪನ ನಾಮಬಲದ ಮೇಲೆ ಸ್ಪರ್ಧಿಸಿರುವ ಪೂರ್ಣಿಮ ಸ್ವಜಾತಿ ಯಾದವರ ಮತವನ್ನು ನಂಬಿಕೊಂಡಿದ್ದಾರೆ. ಮತ್ತೊಂದೆಡೆ ಜೆಡಿಎಸ್‍ನ ಯಶೋಧರ ಒಕ್ಕಲಿಗ ಮತ ನಂಬಿ ಕಣದಲ್ಲಿದ್ದಾರೆ. ಜನ ಬಳಕೆ ಮತ್ತು ಅಭಿವೃದ್ಧಿ ಕಾಮಗಾರಿಗಳಲ್ಲಿ ಸೈ ಎನಿಸಿಕೊಂಡಿರುವ ಕೈ ಪಾರ್ಟಿಯ ಸುಧಾಕರನದ್ದೇ ಇಲ್ಲಿ ಹವಾ ಜೋರಾಗಿದೆ.
ಹೊಸದುರ್ಗದಲ್ಲಿ ಕಾಂಗ್ರೆಸ್‍ನಿಂದ ಹಾಲಿ ಶಾಸಕ ಗೋವಿಂದಪ್ಪ, ಬಿಜೆಪಿಯಿಂದ ಮಾಜಿ ಸಚಿವ ಗೂಳಿಹಟ್ಟಿ ಶೇಖರ್, ಜೆಡಿಎಸ್‍ನಿಂದ ಚಿತ್ರನಟ ಶಶಿಕುಮಾರ್ ಕಣದಲ್ಲಿದ್ದಾರೆ. ಶಶಿಕುಮಾರ್ ಒಂದಷ್ಟು ಕಾಂಗ್ರೆಸ್‍ನ ಮತಗಳಿಗೇ ಲಗ್ಗೆ ಹಾಕುವ ಸಾಧ್ಯತೆ ಇರೋದರಿಂದ ಈ ಬಾರಿ ಗೋವಿಂದಪ್ಪನಿಗೆ ಗೂಳಿ ಗುಮ್ಮುವ ಲಕ್ಷಣಗಳು ದಟ್ಟವಾಗಿವೆ.
ಚಿತ್ರದುರ್ಗದಲ್ಲಿ ಕಾಂಗ್ರೆಸ್‍ನ ಹನುಮಲಿ ಷಣ್ಮುಖಪ್ಪ, ಜೆಡಿಎಸ್‍ನ ವಿರೇಂದ್ರ ಬಿಜೆಪಿಯ ಹಾಲಿ ಶಾಸಕ ತಿಪ್ಪಾರೆಡ್ಡಿಯ ಬೆವರಿಳಿಸುತ್ತಿದ್ದಾರೆ. ಷಣ್ಮುಖಪ್ಪ ಮತ್ತು ವೀರೇಂದ್ರ ಕುಮಾರ ಅಲಿಯಾಸ್ ಪಪ್ಪಿ,ಇಬ್ಬರೂ ಲಿಂಗಾಯತರಾದ್ದರಿಂದ ಲಿಂಗಾಯತ ಮತಗಳು ಹಂಚಿಹೋಗುವ ಸಾಧ್ಯತೆಯಿದೆ. ಆದಾಗ್ಯೂ ಕ್ಷೇತ್ರದಲ್ಲಿ ದಟ್ಟವಾಗಿರುವ ಮುಸ್ಲಿಂ, ನಾಯಕರು, ಕುರುಬರು, ದಲಿತರು ಮೊದಲಾದ ಅಹಿಂದ ಮತಗಳು ಷಣ್ಮುಖಪ್ಪನತ್ತ ದೃಷ್ಟಿ ಹರಿಸುತ್ತಿವೆ. ತ್ರಿಕೋನ ಸ್ಪರ್ಧೆಯಂತೆ ಕಂಡುಬಂದರೂ ಗೆಲುವು ಬಿಜೆಪಿ, ಕಾಂಗ್ರೆಸ್ ನಡುವೆ ತೂಗಾಡುತ್ತಿದೆ.
ಹೊಳಲ್ಕೆರೆಯಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿ ಆಂಜನೇಯ ಮತ್ತು ಬಿಜೆಪಿಯ ಮಾಜಿ ಶಾಸಕ ಚಂದ್ರಪ್ಪನ ನಡುವೆಯೇ ನೇರ ಹಣಾಹಣಿ. ಜೆಡಿಎಸ್‍ನ ಶ್ರೀನಿವಾಸ್ ಗದ್ದಿಗೆ ಆಟಕ್ಕುಂಟು ಲೆಕ್ಕಕ್ಕಿಲ್ಲ. ಸದ್ಯದ ಮಟ್ಟಿಗೆ ಆಂಜನೇಯರ ಗೆಲುವೇ ಎದ್ದು ಕಾಣುತ್ತಿದೆ. ಬಿಜೆಪಿ ಟಿಕೇಟ್ ಸಿಗದ ಕಾರಣಕ್ಕೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಹನುಮಕ್ಕನಿಗೆ ಬಿಜೆಪಿಯವರೇ ಸಾಥ್ ನೀಡುತ್ತಿರೋದು ಚಂದ್ರಪ್ಪನನ್ನು ಗೆಲುವಿನಿಂದ ದೂರಾಗಿಸಿದೆ.


