ಶನಿವಾರ ಹರಿಯಾಣದ ಕರ್ನಲ್ ಬಳಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಪೊಲೀಸರು ನಡೆಸಿದ ಲಾಠಿ ಚಾರ್ಜ್ ಇದೀಗ ವಿವಾದದ ಕೇಂದ್ರವಾಗಿ ಮಾರ್ಪಟ್ಟಿದೆ. ಘಟನೆಯಲ್ಲಿ ಹತ್ತು ಜನ ರೈತರು ತೀವ್ರವಾಗಿ ಗಾಯಗೊಂಡಿದ್ದಾರೆ. ಈ ನಡುವೆ, ಕರ್ನಲ್‌ನ ಸಬ್ ಡಿವಿಸನಲ್ ಮ್ಯಾಜಿಸ್ಟ್ರೇಟ್(ಎಸ್‌ಡಿಎಂ) ಆಗಿರುವ ಆಯುಷ್ ಸಿನ್ಹಾ ಅವರು ಲಾಠಿ ಚಾರ್ಜ್‌ಗೂ ಮುನ್ನ ಪೊಲೀಸರೊಂದಿಗೆ “ರೈತರ ತಲೆ ಒಡೆಯಿರಿ” ಎಂದು ಹೇಳಿರುವ ವಿಡಿಯೊ ವೈರಲ್ ಆಗಿದೆ.
ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಹರಿಯಾಣ ಸರ್ಕಾರದ ವಿರುದ್ದ ಸಾರ್ವಜನಿಕರ ಆಕ್ರೋಶ ಭುಗಿಲೆದ್ದಿದ್ದು, “ಲಾಠಿ ಚಾರ್ಜ್” ಎಂಬುವುದು ಮೊದಲೇ ತಯಾರಾಗಿದ್ದ ಕಾರ್ಯಸೂಚಿಯೆ ಎಂಬ ಸಂಶಯ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ‘ರೈತರ ತಲೆ ಬುರುಡೆ ಒಡೆಯಿರಿ’ – ಪೊಲೀಸರಿಗೆ ಆದೇಶ ನೀಡುತ್ತಿರುವ ಅಧಿಕಾರಿಯ ವಿಡಿಯೊ ವೈರಲ್!
ಘಟನೆಯಲ್ಲಿ ಆಯುಷ್ ಸಿನ್ಹಾ ನಾಗರಿಕರ ವಿರುದ್ಧ ತೀವ್ರ ದೈಹಿಕ ಹಿಂಸೆ ಎಸಗುವಂತೆ ಆದೇಶ ನೀಡಿದ್ದಾರೆ. ಅಲ್ಲದೆ ಅವರ ಆದೇಶವು ಜನರ ಪ್ರಾಣ ಮತ್ತು ವ್ಯಕ್ತಿ ಸ್ವಾತಂತ್ಯ್ರಕ್ಕೆ ಸಂಬಧಿಸಿದ್ದಾಗಿದೆ. ಈ ಹಿನ್ನಲೆಯಲ್ಲಿ ಅವರ ಕಾನೂನು ಬಾಹಿರ ಆದೇಶದ ವಿರುದ್ದ ಕ್ರಮ ಕೈಗೊಳ್ಳಲಾಗಿದೆಯೆ ಎಂದು ಹೋರಾಟಗಾರ ಸಾಕೇತ್ ಗೋಖಲೆ ಆರ್‌ಟಿಐ ಕಾಯ್ದೆಯ ಅಡಿಯಲ್ಲಿ ಪ್ರಶ್ನಿಸಿದ್ದಾರೆ.
ಸಾಕೇತ್ ಗೋಖಲೆ ತಮ್ಮ ಆರ್‌ಟಿಐ ಅರ್ಜಿಯಲ್ಲಿ, ಒಟ್ಟು ನಾಲ್ಕು ಪ್ರಶ್ನೆಗಳನ್ನು ಕೇಳಿದ್ದಾರೆ.
- “ಆಯುಷ್ ಸಿನ್ಹಾ ವಿರುದ್ಧ ಕರ್ನಲ್ ಜಿಲ್ಲಾಡಳಿತ, ಯಾವುದೇ ಔಪಚಾರಿಕ ದೂರನ್ನು ಸ್ವೀಕರಿಸಿದೆಯೆ?”
- ಆಯುಷ್ ಸಿನ್ಹಾ ಅವರು ಬಹಿರಂಗವಾಗಿ ಹಿಂಸಾಚಾರಕ್ಕೆ ಪ್ರಚೋದಿಸಿದ ಈ ಆಘಾತಕಾರಿ ಘಟನೆಯ ಬಗ್ಗೆ ಕರ್ನಲ್ ಜಿಲ್ಲಾಡಳಿತ ಯಾವುದೆ ಕ್ರಮ ತೆಗೆದುಕೊಂಡಿದೆಯೆ? ಒಂದು ವೇಳೆ ಕ್ರಮ ತೆಗೆದುಕೊಳ್ಳದಿದ್ದರೆ, ಅದರ ಕಾರಣಗಳನ್ನು ತಿಳಿಸಿ
- ಕೇಂದ್ರ ನಾಗರಿಕ ಸೇವೆಗಳ (ನಡವಳಿಕೆ) ನಿಯಮಗಳು, 1964 ಮತ್ತು ಇತರ ಸಂಬಂಧಿತ ನಿಯಮಗಳ ಅಡಿಯಲ್ಲಿ ಅಗತ್ಯವಿರುವಂತೆ ಇಲಾಖಾ ವಿಚಾರಣೆಗೆ SDM ಆಯುಷ್ ಸಿನ್ಹಾ ಅವರಿಗೆ ಶೋ ಕಾಸ್ ನೋಟಿಸ್ ನೀಡಲಾಗಿದೆಯೇ?
- “ಘಟನೆಗೆ ಸಂಬಂಧಿಸಿದಂತೆ ಕರ್ನಲ್ ಜಿಲ್ಲಾಡಳಿತ ಸ್ವೀಕರಿಸಿದ ಅಥವಾ ಕಳುಹಿಸಿದ ಎಲ್ಲಾ ದಾಖಲೆಗಳನ್ನು ದಯವಿಟ್ಟು ಒದಗಿಸಿ” ಎಂದು ಸಾಕೇತ್ ಗೋಖಲೆ ಆರ್‌ಟಿಐ ಕಾಯ್ದೆಯ ಅಡಿಯಲ್ಲಿ ಕೇಳಿದ್ದಾರೆ.
ಇದನ್ನೂ ಓದಿ: ರೈತರ ಮೇಲಿನ ಲಾಠಿ ಚಾರ್ಜ್ ಸಮರ್ಥಿಸಿಕೊಂಡ ಹರಿಯಾಣ ಸಿಎಂ
ಅಷ್ಟೆ ಅಲ್ಲದೆ, “ಆಯುಷ್ ಸಿನ್ಹಾ ಅವರು ನಾಗರಿಕರ ವಿರುದ್ಧ ತೀವ್ರ ದೈಹಿಕ ಹಿಂಸೆಗೆ ಆದೇಶ ನೀಡುತ್ತಿರುವುದರಿಂದ ಜನರ ಪ್ರಾಣ ಮತ್ತು ವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಘಟನೆಯಾಗಿದೆ ಇದು” ಎಂದು ಸಾಕೇತ್ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ತಾನು ಅರ್ಜಿ ಸಲ್ಲಿಸಿರುವುದನ್ನು ಟ್ವಿಟರ್‌ನಲ್ಲಿ ಮಾಹಿತಿ ನೀಡಿರುವ ಸಾಕೇತ್, “ಎಸ್‌ಡಿಎಂ ಆಯುಷ್ ಸಿನ್ಹಾ ಐಎಎಸ್ ಮತ್ತು ಸಾರ್ವಜನಿಕ ಸೇವಕನಾಗಲು ಅರ್ಹನಲ್ಲ. ಅವರನ್ನು ಸೇವೆಯಿಂದ ವಜಾ ಮಾಡಲೇಬೇಕು ಎಂದು” ಆಗ್ರಹಿಸಿದ್ದಾರೆ.
Filed an RTI with Divisional Commissioner Karnal asking:
1. Whether cognizance taken of SDM Ayush Sinha asking police to "break heads of protestors"
2. Whether show-cause notice has been issued under rules.
Ayush Sinha is unfit to be IAS/public servant.
He MUST be dismissed. pic.twitter.com/e9XARoQwu4
— Saket Gokhale (@SaketGokhale) August 30, 2021
ಇದನ್ನೂ ಓದಿ: ಹರಿಯಾಣ: ಪ್ರತಿಭಟನಾ ನಿರತ ರೈತರ ಮೇಲೆ ಲಾಠಿ ಚಾರ್ಜ್; 10 ಜನರಿಗೆ ಗಾಯ
ರೈತರ ಮೇಲೆ ಲಾಠಿ ಚಾರ್ಜ್ ಆಗುವುದಕ್ಕಿಂತಲೂ ಮುಂಚೆಯೆ ಆಯುಷ್ ಸಿನ್ಹಾ, “ಇದು ತುಂಬಾ ಸರಳ ಮತ್ತು ಸ್ಪಷ್ಟವಾಗಿದೆ. ಅವರು ಯಾರಾದರೂ ಆಗಿರಲಿ, ಎಲ್ಲಿಂದ ಬಂದಿರಲಾಗಿರಲಿ ಯಾರೊಬ್ಬರೂ ಬ್ಯಾರಿಕೇಡ್‌ನಿಂದ ಮುಂದೆ ಹೋಗಬಾರದು. ಒಂದು ವೇಳೆ ಬಂದರೆ ಅವರ ತಲೆಬುರುಡೆಯನ್ನು ಒಡೆಯಿರಿ. ಯಾವುದೇ ಸೂಚನೆ ಅಥವಾ ನಿರ್ದೇಶನದ ಅಗತ್ಯವಿಲ್ಲ. ನಮ್ಮಲ್ಲಿ ಸಾಕಷ್ಟು ಪೊಲೀಸ್ ಪಡೆಯಿದೆ” ಎಂದು ಕರ್ನಾಲ್‌ನಲ್ಲಿ ಪ್ರತಿಭಟನಾ ನಿರತ ರೈತರನ್ನು ನಿಭಾಯಿಸಲು ನಿಯೋಜಿಸಲಾದ ಪೊಲೀಸರಿಗೆ ಹೇಳಿದ್ದರು.
ರೈತರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವ ಹೊರತಾಗಿಯೂ ಲಾಠಿ ಚಾರ್ಜ್‌ನಲ್ಲಿ ಹತ್ತಾರು ರೈತರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ರೈತ ಸಂಘಟನೆ ಆರೋಪಿಸಿದೆ.
ಹರಿಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಭಾಗವಹಿಸಿದ್ದ ಸಭೆಯನ್ನು ವಿರೋಧಿಸಿ ರೈತರು ಕರ್ನಾಲ್ ಬಳಿಯ ಬಸ್ತಾರಾ ಟೋಲ್ ಪ್ಲಾಜಾದಲ್ಲಿ ಜಮಾಯಿಸಿದ್ದರು. ಈ ವೇಳೆ ಪೊಲೀಸರು ಅವರ ಮೇಲೆ ಲಾಠಿ ಚಾರ್ಜ್ ನಡೆಸಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ರೈತರ ರಕ್ತಸಿಕ್ತವಾಗಿರುವ ದೇಹಗಳ ಹಲವಾರು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಇದನ್ನೂ ಓದಿ: ‘ರೈತರ ತಲೆ ಒಡೆಯಿರಿ’ ಎಂದು ಆದೇಶಿಸಿದ ಅಧಿಕಾರಿಯ ವಿರುದ್ಧ ಕ್ರಮ: ಹರಿಯಾಣ ಡಿಸಿಎಂ ಹೇಳಿಕೆ


