Homeಅಂಕಣಗಳುತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನಾನು ಮೊದಲ ಕೆಲಸಕ್ಕೆ ಸೇರಿದ್ದು ಹೀಗೆ: ಪ್ರಸಾದ್ ರಕ್ಷಿದಿ

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನಾನು ಮೊದಲ ಕೆಲಸಕ್ಕೆ ಸೇರಿದ್ದು ಹೀಗೆ: ಪ್ರಸಾದ್ ರಕ್ಷಿದಿ

- Advertisement -
- Advertisement -

ಕಳೆದು ಹೋದ ದಿನಗಳು – 12

1971 ರಲ್ಲಿ ಹೊಸ ಭರವಸೆಗಳೊಂದಿಗೆ ಬಂದ ಇಂದಿರಾ ಸರ್ಕಾರ  ಭೂಸುಧಾರಣೆ, ಮತ್ತಷ್ಟು ಬ್ಯಾಂಕುಗಳ ರಾಷ್ಟ್ರೀಕರಣ ಮುಂತಾದ ಕೆಲವು ಕ್ರಾಂತಿಕಾರಿ ಕಾರ್ಯಕ್ರಮಗಳನ್ನೇನೋ ತಂದಿತು. ಆದರೆ ರಾಜಕೀಯವಾಗಿ ಹಲವು ತಪ್ಪುಗಳನ್ನು ಮಾಡುತ್ತ ಸಾಗಿತು. ಮುಖ್ಯವಾಗಿ ರಾಜ್ಯಗಳ ನಾಯಕರು ಕಡೆಗಣಿಸಲ್ಪಟ್ಟರು. ಇಂದಿರಾ ಸರ್ವೋಚ್ಛ ನಾಯಕಿಯಾಗಿ ಪಕ್ಷ ಜೀ ಹುಜೂರ್‌ಗಳ ಸಂತೆಯಾಗತೊಡಗಿತು. ವಿರೋಧ ಪಕ್ಷಗಳನ್ನು ವ್ಯವಸ್ಥಿತವಾಗಿ ದಮನ ಮಾಡುವ ಕಾರ್ಯ ಆರಂಭವಾಗಿತ್ತು. ಮುಖ್ಯವಾಗಿ ಎಡಪಕ್ಷಗಳನ್ನು ಮತ್ತು ಕಾರ್ಯಕರ್ತರನ್ನು ಹಣಿಯಲಾರಂಭಿಸಿದರು. ಎಡಪಕ್ಷಗಳ ಒಂದು ವಿಭಾಗ ಇಂದಿರಾ ಜೊತೆಯಲ್ಲೇ ಇದ್ದರೂ ಅವರಲ್ಲೂ ಕೆಲವರಿಗೆ ಭ್ರಮನಿರಸನವಾಗುತ್ತಿತ್ತು. ಪಶ್ಚಿಮ ಬಂಗಾಳದಲ್ಲಿ ಸಿದ್ಧಾರ್ಥ ಶಂಕರ್ ರಾಯ್ ಅವರ ಸರ್ಕಾರವಂತೂ ಎನ್ ಕೌಂಟರ್ ಸ್ಪೆಶಲಿಸ್ಟ್ ಸರ್ಕಾರವಾಗಿ 1977ರ ತುರ್ತು ಪರಿಸ್ಥಿತಿಯನ್ನು 71 ರಿಂದಲೇ ಜಾರಿಗೆ ತಂದಿತ್ತು.

ಇದರೊಂದಿಗೆ ಇತರ ಸಾಮಾಜಿಕ ಸಮಸ್ಯೆಗಳಿದ್ದವು. ಬೆಲೆಗಳು ಒಂದೇ ಸಮನೆ ಏರತೊಡಗಿತ್ತು. 1971ರಲ್ಲಿ ಇಂದಿರಾ ಬೆಂಬಲಕ್ಕೆ ನಿಂತಿದ್ದ ಯುವ ಸಮೂಹದಲ್ಲೂ ಅತೃಪ್ತಿ ಬೆಳೆಯುತ್ತಿತ್ತು. ವಿದ್ಯಾರ್ಥಿ ಚಳುವಳಿಗಳು ನಿರಂತರವಾಗಿ ನಡೆಯತೊಡಗಿದವು.

ದಕ್ಷಿಣದ ರಾಜ್ಯಗಳಲ್ಲಿ ಇದರ ಬಿಸಿ ಬೇಗ ತಟ್ಟಲಿಲ್ಲ. ಕಾರಣ ಕರ್ನಾಟಕದಲ್ಲಿ ದೇವರಾಜ ಅರಸರ ಜನಪರ ಕೆಲಸಗಳು, ಹಾಗೇ ದಕ್ಷಿಣದ ಇತರ ರಾಜ್ಯಗಳಲ್ಲಿದ್ದ ಬೇರೆ ಬೇರೆ ಪಕ್ಷಗಳ ಸರ್ಕಾರಗಳು ಕೂಡಾ ಒಂದಷ್ಟು ಜನಪರವಾಗಿಯೇ ಇದ್ದವು.

ಈ ಸಮಯದಲ್ಲಿ ಗಮನಿಸಬೇಕಾದ ವಿಚಾರವೆಂದರೆ ಅದು ಭಾರತದ ಸಾಂಸ್ಕೃತಿಕ ವಲಯದ ಚಟುವಟಿಕೆಗಳು. ಆ ಸಮಯದಲ್ಲಿ, ಸಾಹಿತಿಗಳು, ನಾಟಕಕಾರರು, ರಂಗಭೂಮಿಯವರು, ಚಿಂತಕರು ಸಿನಿಮಾ ಮತ್ತು ಪತ್ರಿಕಾ ಮಾಧ್ಯಮದವರು ಹೀಗೆ ಎಲ್ಲ ವಿಭಾಗಗಳವರೂ ಹೊಸ ಹೊಸ ವಿಚಾರಗಳೊಂದಿಗೆ ಪ್ರಯೋಗಶೀಲರಾಗಿ ಹೊರಹೊಮ್ಮಿದ್ದರು. ಇವೆರಲ್ಲರ ವಿಚಾರವೂ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿತ್ತು.

ಬಸವಳಿದು ಕುಳಿತಂತಿದ್ದ ವಿರೋಧ ಪಕ್ಷಗಳು ಆಗ ಮತ್ತೊಮ್ಮೆ ದೇಶದ ರಾಜಕೀಯದಲ್ಲಿ ಮತ್ತೆ ಹೊಸ ಪ್ರಯೋಗಗಳಿಗೆ ತೊಡಗಿದರು. ಒಂದು ಕಡೆ ಎಡಪಕ್ಷಗಳು, ಲೋಹಿಯಾವಾದಿ ಪಕ್ಷಗಳು ಒಂದಾಗಿ ಹೋರಾಡಬೇಕೆಂದು ಯೋಚಿಸುತ್ತಿದ್ದರೆ, ಉದಾರವಾದಿ ಬಲಪಂಥೀಯ ಪಕ್ಷಗಳು, ರೈತ ಸಂಘಟನೆಗಳು ಸೇರಿ ಹೊಸ ಗುಂಪಾಗುವ ಚಿಂತನೆಯಲ್ಲಿದ್ದವು. ರಾಷ್ಟ್ರವಾದಿ ಪಕ್ಷ ಜನಸಂಘ ತನ್ನದೇ ಸಂಘಟನೆಯನ್ನು ಬಲಪಡಿಸುವ ಪ್ರಯತ್ನದಲ್ಲಿತ್ತು.

ಆ ಸಂದರ್ಭದಲ್ಲಿ 1974 ರಲ್ಲಿ ಹುಟ್ಟಿದ್ದು ಚರಣ್ ಸಿಂಗ್ ಅವರ ನೇತೃತ್ವದಲ್ಲಿ ಏಳು ಪಕ್ಷಗಳು ಜೊತೆಗೂಡಿದ ಭಾರತೀಯ ಲೋಕದಳ. ರಾಜಾಜಿಯವರು ಸ್ಥಾಪಿಸಿದ್ದ ಸ್ವತಂತ್ರ ಪಕ್ಷ ಅದರಲ್ಲಿ ವಿಲೀನವಾಯಿತು. ಲೋಕದಳ ಹಳೆಯ ಕಾಂಗ್ರೆಸ್ಸಿನ ಜೋಡೆತ್ತಿನ ಚಿನ್ಹೆಯನ್ನು ಪಡೆದುಕೊಂಡಿತು. ಭಾರತೀಯ ಲೋಕದಳದ ಕರ್ನಾಟಕ ರಾಜ್ಯದ ಅಧ್ಯಕ್ಷರಾಗಿ ಗಣಪಯ್ಯನವರೇ ಆಯ್ಕೆಯಾದರು.

ಗಣಪಯ್ಯ ಮತ್ತೆ ಮೊದಲಿಗಿಂತ ಹೆಚ್ಚು ಉತ್ಸಾಹದಿಂದ ಪಕ್ಷ ಕಟ್ಟುವ ಕೆಲಸದಲ್ಲಿ ತೊಡಗಿಕೊಂಡರು.

1958ರಲ್ಲಿ ಗಣಪಯ್ಯನವರ ಮಗ ರವೀಂದ್ರನಾಥರ ವಿವಾಹವಾಗಿತ್ತು.(ಪತ್ನಿ ಕಮಲಾ ರವೀಂದ್ರನಾಥ) ಅವರು ಹಾರ್ಲೆಯ ಪಕ್ಕದಲ್ಲಿರುವ ಇವರದ್ದೇ ಆದ ವೊಡ್‌ಗಲ್ ತೋಟದಲ್ಲಿ ವಾಸಿಸುತ್ತಿದ್ದರು. ರವೀಂದ್ರನಾಥ ದಂಪತಿಗೆ ಮೂವರು ಮಕ್ಕಳು. ಮಕ್ಕಳು ಬೆಂಗಳೂರಿನಲ್ಲಿ ಓದುತ್ತಿದ್ದರಿಂದ ರವೀಂದ್ರನಾಥರು ಕೆಲಕಾಲ ಬೆಂಗಳೂರಿನಲ್ಲಿಯೂ ಇರುತ್ತಿದ್ದರು.

ರವೀಂದ್ರನಾಥ ಅವರು 1972ರ ಸಮಯದಲ್ಲಿ ಪ್ರಥಮಬಾರಿಗೆ ಸಕಲೇಪುರದಲ್ಲಿ ಒಂದು ಕೋಳಿಫಾರಂ ಅನ್ನು ಪ್ರಾರಂಭಿಸಿದ್ದರು. ಕೆಲಕಾಲ ಅದನ್ನು ನಡೆಸಿದರು. ಮಲೆನಾಡಿನ ಸಕಲೇಶಪುರದಲ್ಲಿ ಅದು ಚೆನ್ನಾಗಿ ನಡೆಯಲಿಲ್ಲ. ಅದನ್ನು ನಿಲ್ಲಿಸಿ ನಂತರ ಪಶುಸಂಗೋಪನೆಗೆ ತೊಡಗಿದರು. ಸಕಲೇಶಪುರಕ್ಕೆ ಮಿಶ್ರತಳಿ ಹಸುಗಳನ್ನು ತಂದು ಸಾಕಲು ಪ್ರಾರಂಬಿಸಿದ ಮೊದಲಿಗರಲ್ಲಿ ಇವರೂ ಪ್ರಮುಖರು. ಮೊದಲು ಸಕಲೇಶಪುರ ನಗರದಲ್ಲಿ ಪ್ರಾರಂಭಿಸಿ ನಿಧಾನವಾಗಿ ಹಾರ್ಲೆ ಎಸ್ಟೇಟ್, ಹಾಗೂ ಇವರದ್ದೇ ಉಸ್ತುವಾರಿಯ ಹಲವು ತೋಟಗಳಲ್ಲಿ ಪಶುಸಾಕಣೆಯನ್ನು ವಿಸ್ತರಿಸಿದರು. ರವೀಂದ್ರನಾಥರ ಪ್ರಯತ್ನದಿಂದಾಗಿ ಸಕಲೇಶಪುರ ಹಾಲು ಉತ್ಪಾದಕರ ಸಂಘ ಅಸ್ತಿತ್ವಕ್ಕೆ ಬಂದಿತು. ಹೈನುಗಾರಿಕೆ ಸಕಲೇಶಪುರ ತಾಲ್ಲೂಕಿನಲ್ಲಿ ಕಾಫಿಯ ಜೊತೆ ಒಂದು ಉಪವೃತ್ತಿಯಾಗಿ ಬೆಳೆಯುವಲ್ಲಿ ರವೀಂದ್ರನಾಥರ ಕೊಡುಗೆ ದೊಡ್ಡದು.

ಡೈರಿ ಹಸುಗಳು

ರವೀಂದ್ರನಾಥರು ರೋಟರಿ ಸಂಸ್ಥೆಯ ಸದಸ್ಯರಾಗಿದ್ದರು. ಅವರ ರೋಟರಿ ಸಂಸ್ಥೆ ಮತ್ತು ಅದರಿಂದ ಲಭ್ಯವಾದ ಜನ ಸಂಪರ್ಕಗಳನ್ನು ಅವರ ಅನೇಕ ಜನಪರ ಕೆಲಸಗಳಿಗೆ ವೇದಿಕೆಯಾಗಿ ಬಳಸಿಕೊಂಡರು. ಪಶುಸಂಗೋಪನೆಯ ಹಲವಾರು ತಜ್ಞರುಗಳನ್ನು ಕರೆಸಿ ಭಾಷಣ, ವಿಚಾರ ಸಂಕಿರಣ, ಪ್ರಾತ್ಯಕ್ಷಿಕೆ, ಅದಕ್ಕೆ ಸಂಬಂಧಪಟ್ಟ ಚಲನಚಿತ್ರ ಪ್ರದರ್ಶನಗಳು ನಡೆಯತೊಡಗಿದವು. ನಮ್ಮ ಜನಸಂಖ್ಯೆಯ ಪ್ರಮಾಣಕ್ಕೆ ತಕ್ಕಂತೆ ಅದರಲ್ಲಿಯೂ ಮಕ್ಕಳಿಗೆ ಹಾಲು ಸಿಗುತ್ತಿಲ್ಲ, ಇದರಿಂದಾಗಿ ಪೋಷಕಾಂಶದ ಕೊರತೆ ದೊಡ್ಡ ಪ್ರಮಾಣದಲ್ಲಿದೆ. ಒಂದು ನಿಶ್ಶಕ್ತ ಪೀಳಿಗೆಯನ್ನಿಟ್ಟುಕೊಂಡು ನಾವು ಅಭಿವೃದ್ಧಿಯನ್ನು ಸಾಧಿಸಲಾರೆವು ಒಬ್ಬನಿಗೆ ಕನಿಷ್ಟ  ದಿನವೊಂದಕ್ಕೆ ಇನ್ನೂರು ಮಿ.ಲೀಟರ್ ನಷ್ಟಾದರೂ ಹಾಲು ದೊರಯುವಂತಾಗಬೇಕು ಎಂದು ಪ್ರತಿಪಾದಿಸುತ್ತಿದ್ದರು.

ಮುಂದಿನ ದಿನಗಳಲ್ಲಿ ಈ ತಂದೆ ಮತ್ತು ಮಗ ಇವರ ಸಾಮಾಜಿಕ ಕೆಲಸಗಳು ಹೊಸ ವಿಸ್ತಾರ ಮತ್ತು ಎತ್ತರಗಳನ್ನು ಪಡೆದವು.

ದೇಶಾದ್ಯಂತ ಚಳುವಳಿಗಳು ಹೆಚ್ಚಾಗುತ್ತ ನಡೆದಿದ್ದವು. ಜಯಪ್ರಕಾಶ ನಾರಾಯಣ ಅವರ ಸಂಪೂರ್ಣ ಕ್ರಾಂತಿಯ ಮೊಳಗುವಿಕೆ ಯುವಕರನ್ನು ಅಪಾರ ಪ್ರಮಾಣದಲ್ಲಿ ಬೀದಿಗಿಳಿಯುವಂತೆ ಮಾಡಿತು.

1974ರಲ್ಲಿ ನನ್ನ ಕಾಲೇಜು ವಿದ್ಯೆಯನ್ನು ಮುಗಿಸಿ ನಾನು ಮನೆಗೆ ಬಂದೆ, ಮುಂದೇನು ? ಎಂಬ ಗುರಿ ನನಗೂ ಇರಲಿಲ್ಲ. ಆಗಲೇ ಸಾಕಷ್ಟು ವಿದ್ಯಾರ್ಥಿ ಚಳುವಳಿಗಳಲ್ಲಿ ಭಾಗವಹಿಸಿದ್ದೆ. ಚೂರು ಪಾರು ಸಾಹಿತ್ಯ ಮತ್ತು ರಂಗಭೂಮಿಯ ಆಸಕ್ತಿ ಬೆಳೆಸಿಕೊಂಡಿದ್ದೆ. ಮನೆಗೆ ಬಂದರೆ ಅಪ್ಪನಿಗೆ ನಿವೃತ್ತಿಯ ವಯಸ್ಸಾಗಿತ್ತು. ನಾನು ಕೂಡಲೇ ದುಡಿಮೆಗೆ ತೊಡಗುವ ಅಗತ್ಯವಿತ್ತು. ಬಿಟ್ಟು ಬೇರೆಡೆಗೆ ಹೋಗಲು ಯಾವ ನೆಲೆಯೂ ಇರಲಿಲ್ಲ.

ಮನೆಗೆ ಬಂದ ನಂತರ ಕೆಲವು ತಿಂಗಳು ಅಲ್ಲಿ ಇಲ್ಲಿ ಕೆಲಸ ಹುಡುಕುವುದರಲ್ಲಿ ಕಳೆಯಿತು. ಆ ಸಮಯದಲ್ಲಿ ತೋಟಕ್ಕೆ ಬಂದ ಸಿ.ಎಂ.ಪೂಣಚ್ಚನವರು ನನ್ನನ್ನು ನೋಡಿ  ನೀವು ಯಾಕೆ ಮಿಲಿಟರಿ ಸೇರಬಾರದು? ಎಂದರು.

“ಸೆಲೆಕ್ಟ್ ಆದರೆ ಖಂಡಿತ ಸೇರತ್ತೇನೆ. ಆದರೆ ಈಗ ರಿಕ್ರೂಟ್ ಮೆಂಟ್ ಇಲ್ಲವಲ್ಲ” ಎಂದೆ.

“ನೀವು ಬೆಂಗಳೂರಿಗೆ ಹೋಗಿ ಅಲ್ಲಿ ಪ್ರತಿದಿನ ಆಯ್ಕೆ ನಡೆಯುತ್ತಿದೆ. ನಮ್ಮ ಮಗಳ ಮನೆ ಇದೆ ಅಲ್ಲಿ ನೀವು ಉಳಿದುಕೊಳ್ಳಬಹುದು” ಎಂದರು. ಅಂತೆಯೇ ನನಗೊಂದು ಪತ್ರ ಬರೆದುಕೊಟ್ಟು ಬೆಂಗಳೂರಿಗೆ ಹೋಗುವಂತೆ ತಿಳಿಸಿದರು.

ಇಲ್ಲಿ ನಾನು ಇನ್ನೊಂದು ವಿಚಾರವನ್ನು ತಿಳಿಸಬೇಕು. ಪೂಣಚ್ಚನವರು ನನ್ನನ್ನು ಪ್ರಾಥಮಿಕ ಶಾಲೆಯ ಹುಡುಗನಾಗಿದ್ದಾಗಲೇ ಕಂಡವರು. ಅವರು ನನ್ನನ್ನು “ನೀವು” ಎಂದದ್ದಕ್ಕೆ ನಾನು “ಸರ್ ನೀವು ನನ್ನನ್ನು ನೀನು ಎಂದೇ ಕರೆಯಿರಿ” ಎಂದೆ.

ಆಗ ಅವರು “ಇಲ್ಲ ಆಗ ನೀವು ಚಿಕ್ಕವರಿದ್ದಿರಿ, ಈಗ ಹಾಗಲ್ಲ ಪ್ರತಿಯೊಬ್ಬರಿಗೂ ಒಂದು ವ್ಯಕ್ತಿತ್ವವಿರುತ್ತದೆ, ನಾವು ಅದನ್ನು ಗೌರವಿಸಬೇಕು” ಎಂದರು.

ನಾನು ಬೆಂಗಳೂರಿನಲ್ಲಿ ಕೆಲವು ದಿನಗಳ ಕಾಲ ಪೂಣಚ್ಚನವರ ಮಗಳು ವಿಜಯಾ (ಪತಿ ಬ್ರಿಗೇಡಿಯರ್ ಕೆ.ಎಂ.ಮುತ್ತಣ್ಣ) ಅವರ ಮನೆಯಲ್ಲಿದ್ದೆ. ಸೈನ್ಯಕ್ಕೆ ಆಯ್ಕೆಯೂ ಆದೆ.

ನಾನು ಬೆಂಗಳೂರಿನಲ್ಲಿ ಇರುವಾಗಲೇ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಯಿತು. ಮಹಾತ್ಮ ಗಾಂಧಿ ರಸ್ತೆಯ ಪ್ರಜಾವಾಣಿ ಕಛೇರಿ ಮುಂದೆ ವಿಷಯ ತಿಳಿದುಕೊಳ್ಳಲು ಜನ ಗುಂಪು ಸೇರಿದ್ದರು.

ನಾನು ಮನೆಗೆ ಬಂದೆ. ಕಾರಣಾಂತರದಿಂದ ನನಗೆ ಸೈನಕ್ಕೆ ಹೋಗಲು ಸಾಧ್ಯವಾಗಲಿಲ್ಲ. ನಾನು ಇಲ್ಲೇ ಉಳಿದುಬಿಟ್ಟೆ.

ನಂತರ ಪೂಣಚ್ಚನವರಿಗೆ ವಿಷಯ ತಿಳಿಯಿತು. ಸರಿ ನೋಡೋಣ ಎಂದರು.

ಆ ವೇಳೆಗಾಗಲೇ ರವೀಂದ್ರನಾಥ ಅವರು ಪೂರ್ಣಿಮಾ ಎಸ್ಟೇಟ್‌ನಲ್ಲಿಯೂ ಪಶುಸಂಗೋಪನೆ ಪ್ರಾರಂಭಿಸಿದ್ದರು.

ಅದನ್ನು ನೋಡಿಕೊಳ್ಳುತ್ತಿದ್ದವರೊಬ್ಬರು ಬಿಟ್ಟುಹೋಗಿದ್ದರು. ಆಗ ರವೀಂದ್ರನಾಥರು ನೀನು ಇಲ್ಲೇ ಯಾಕೆ ಕೆಲಸ ಮಾಡಬಾರದು ಎಂದು ಕೇಳಿದರು. ನನಗೂ ಒಂದು ಕೆಲಸದ ಅನಿವಾರ್ಯವಿತ್ತು. ನನಗೆ ಆ ಸಂದರ್ಭದಲ್ಲಿ ಬೇರೆ ಆಯ್ಕೆ ಇರಲಿಲ್ಲವಾದ್ದರಿಂದ ಒಪ್ಪಿದೆ. ಸದ್ಯಕ್ಕೆ ನಿನಗೆ ಹೆಚ್ಚು ಸಂಬಳ ಕೊಡಲು ಸಾಧ್ಯವಾಗದು. ಕೆಲಸ ಚೆನ್ನಾಗಿ ಕಲಿ ಮುಂದೆ ನೋಡೋಣ ಎಂದಿದ್ದರು. 1975 ಸೆಪ್ಟಂಬರ್‌ನಲ್ಲಿ ಪೂರ್ಣಿಮಾ ಡೈರಿಯಲ್ಲಿ ದಿನಗೂಲಿ ನೌಕರನಾಗಿ ಸೇರಿಕೊಂಡೆ.

ಹಾರ್ಲೆ ತೋಟಗಳ ಸಮೂಹದಲ್ಲಿ ನನ್ನ ದಿನಚರಿ ಪ್ರಾರಂಭವಾಯಿತು. ಆ ನಂತರ ಗಣಪಯ್ಯ ಮತ್ತು ರವೀಂದ್ರನಾಥರ ಹತ್ತಿರದ ನೋಟ ಲಭ್ಯವಾಯಿತು.

ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ರೈಲ್ವೇ ಮಾರ್ಗ ಮಲೆನಾಡಿನ ಸಾವಿರಾರು ಎಕರೆ ಪರಿಸರ ನುಂಗಿದ್ದು ಹೀಗೆ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಿಐಟಿಯು ಕಾನೂನು ಹೋರಾಟಕ್ಕೆ ಮೊದಲ ಜಯ: ಕನಿಷ್ಠ ವೇತನ ತಡೆಹಿಡಿದಿದ್ದ ಸರ್ಕಾರದ ಮೂರು ಸುತ್ತೋಲೆಗಳಿಗೆ ಹೈಕೋರ್ಟ್ ತಡೆ

ಸರ್ಕಾರಿ ಇಲಾಖೆಗಳು ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಲಕ್ಷಾಂತರ ಕಾರ್ಮಿಕರ ಹೊಸ ಕನಿಷ್ಠ ವೇತನವನ್ನು ತಡೆಹಿಡಿದಿದ್ದ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದೆ. ಹೊಸ ವೇತನ ನೀಡುವುದನ್ನು ಅಮಾನತಿನಲ್ಲಿಟ್ಟಿದ್ದ ಸರ್ಕಾರದ ಮೂರು...

ಟಿಎಂಸಿ ಹೆಸರು, ಚಿಹ್ನೆ ಫ್ರೀಜ್: ಮಮತಾ ಬ್ಯಾನರ್ಜಿಗೆ ‘ಫುಟ್‌ಬಾಲ್ ಪ್ಲೇಯರ್’, ಬಂಡಾಯ ಬಣಕ್ಕೆ ‘ಲಕೋಟೆ’ ಚಿಹ್ನೆ ನೀಡಿದ ಚುನಾವಣಾ ಆಯೋಗ

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂಲ ಹೆಸರು ಮತ್ತು ಸಾಂಪ್ರದಾಯಿಕ 'ಹೂವು-ಹುಲ್ಲು' ಚಿಹ್ನೆಯನ್ನು ಮುಟ್ಟುಗೋಲು (ಫ್ರೀಜ್) ಹಾಕಿದ ನಂತರ, ಭಾರತೀಯ ಚುನಾವಣಾ ಆಯೋಗವು ಶುಕ್ರವಾರ ಎರಡೂ ಎದುರಾಳಿ ಬಣಗಳಿಗೆ ಪ್ರತ್ಯೇಕ ಮಧ್ಯಂತರ ಹೆಸರು...

‘ರೋಹಿತ್ ವೇಮುಲಾ ಸ್ಥಿತಿ ನನಗೆ ಬಾರದಿರಲಿ..’; ವಿದೇಶದಲ್ಲಿ ಕಷ್ಟಕ್ಕೆ ಸಿಲುಕಿದ ತಮಿಳುನಾಡಿನ ದಲಿತ ಸಂಶೋಧಕ

ಮಲೇಷ್ಯಾದಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿರುವ ತಮಿಳುನಾಡಿನ ದಲಿತ ಸಂಶೋಧನಾ ವಿದ್ಯಾರ್ಥಿ ಭಾರತಿ ದಾಸನ್ ರಾಮನ್, ತಮಿಳುನಾಡು ಸರ್ಕಾರದ ಸಾಮಾಜಿಕ ನ್ಯಾಯ ಇಲಾಖೆಯು ನನ್ನನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ ಎಂದು 'ದಿ ನ್ಯೂಸ್‌ ಮಿನಿಟ್'...

DUSU ಚುನಾವಣೆ: ಮತದಾನ ಆರಂಭ; ವಿಜಯೋತ್ಸವ ಮೆರವಣಿಗೆಗೆ ದೆಹಲಿ ಹೈಕೋರ್ಟ್ ತಡೆ

ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ (DUSU) 2026-27ನೇ ಸಾಲಿನ ಚುನಾವಣೆಗೆ ಶುಕ್ರವಾರ (ಸೆ.18) ಮತದಾನ ಆರಂಭವಾಗಿದೆ. ಬೆಳಗಿನ ಅವಧಿಯ ಕಾಲೇಜುಗಳ ವಿದ್ಯಾರ್ಥಿಗಳಿಗೆ ಬೆಳಿಗ್ಗೆ 8:30ರಿಂದ ಮಧ್ಯಾಹ್ನ 1ರವರೆಗೆ ಹಾಗೂ ಸಂಜೆ ಕಾಲೇಜುಗಳ ವಿದ್ಯಾರ್ಥಿಗಳಿಗೆ...

ಕರಾವಳಿ ಇತಿಹಾಸದಲ್ಲೇ ಪ್ರಥಮ: ಮಂಗಳೂರಿನಲ್ಲಿ ಸಿಎಂ ‘ಡಿ.ಕೆ ಶಿವಕುಮಾರ್’ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ

ಕರಾವಳಿ ಕರ್ನಾಟಕದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ರಾಜ್ಯ ಸಚಿವ ಸಂಪುಟ (Cabinet) ಸಭೆಯು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಪಡೀಲ್‌ನಲ್ಲಿರುವ ನೂತನ 'ಪ್ರಜಾ ಸೌಧ'ದಲ್ಲಿ (ಜಿಲ್ಲಾಡಳಿತ ಸೌಧ) ಶುಕ್ರವಾರ ವಿಜೃಂಭಣೆಯಿಂದ ಆರಂಭವಾಗಿದೆ....

ಟಿಎಂಸಿ ಹೆಸರು, ಚಿಹ್ನೆ ಬಳಕೆಗೆ ತಡೆ: ಚುನಾವಣಾ ಆಯೋಗದ ಆದೇಶ ‘ಕಾನೂನಿಗೆ ವಿರುದ್ಧ’ ಎಂದ ಮಮತಾ ಬಣ, ಆದೇಶ ಸ್ವಾಗತಿಸಿದ ಬಂಡಾಯ ಪಾಳಯ 

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತ ರಾಜಕಾರಣದಲ್ಲಿ ಪ್ರಮುಖ ಶಕ್ತಿಯಾಗಿರುವ ತೃಣಮೂಲ ಕಾಂಗ್ರೆಸ್‌ (ಟಿಎಂಸಿ)ಯ ಆಂತರಿಕ ಬಿಕ್ಕಟ್ಟು ಇದೀಗ ಪಕ್ಷದ ಹೆಸರು ಮತ್ತು ಚುನಾವಣಾ ಚಿಹ್ನೆಯ ಮೇಲಿನ ಹಕ್ಕಿನ ಸಂಘರ್ಷವಾಗಿ ತೀವ್ರಗೊಂಡಿದೆ. ಟಿಎಂಸಿಯ ಎರಡು...

ಅಕ್ರಮ ಕಲ್ಲು ಗಣಿಗಾರಿಕೆ ಆರೋಪ: ಸಚಿವ ರುದ್ರಪ್ಪ ಲಮಾಣಿಗೆ 3 ಕೋಟಿ ರೂ. ದಂಡ

ಕಲ್ಲು ಗಣಿಗಾರಿಕೆ ನಡೆಸುವ ವೇಳೆ ಸಾಲು ಸಾಲು ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ಜವಳಿ ಮತ್ತು ಸಕ್ಕರೆ ಖಾತೆ ಸಚಿವ ಶ್ರೀ ರುದ್ರಪ್ಪ ಮಾನಪ್ಪ ಲಮಾಣಿ ಅವರಿಗೆ ಗಣಿ ಮತ್ತು...

ಪಶ್ಚಿಮ ಬಂಗಾಳ SIR: 38 ಲಕ್ಷ ಮೇಲ್ಮನವಿಗಳಲ್ಲಿ ವಿಲೇವಾರಿಯಾಗಿದ್ದು ಕೇವಲ 1 ಲಕ್ಷ

ಪಶ್ಚಿಮ ಬಂಗಾಳದಲ್ಲಿ ನಡೆದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ (SIR) ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಬೃಹತ್ ಪ್ರಮಾಣದ ಮೇಲ್ಮನವಿಗಳ ಪೈಕಿ ವಿಲೇವಾರಿಯಾದ ಅರ್ಜಿಗಳ ಸಂಖ್ಯೆ ತೀರಾ ಕನಿಷ್ಠ ಮಟ್ಟದಲ್ಲಿದೆ ಎಂಬ ಆಘಾತಕಾರಿ ಮಾಹಿತಿ...

ಕರ್ನಾಟಕ ಎಸ್‌ಐಆರ್: ತಡವಾಗಿ ತಲುಪಿದ ನೋಟಿಸ್‌ಗಳಿಂದ ವಿಚಾರಣಾ ಕೇಂದ್ರಗಳಲ್ಲಿ ಜನದಟ್ಟಣೆ; ಮತದಾರರಲ್ಲಿ ಗೊಂದಲ

ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ನೋಟಿಸ್‌ಗಳನ್ನು ಮತದಾರರಿಗೆ ತಲುಪಿಸುವಲ್ಲಿ ಉಂಟಾಗುತ್ತಿರುವ ವಿಳಂಬವು ಹಲವು ಕಡೆ ವಿಚಾರಣಾ ಕೇಂದ್ರಗಳಲ್ಲಿ ಜನದಟ್ಟಣೆ ಮತ್ತು ಗೊಂದಲಕ್ಕೆ ಕಾರಣವಾಗುತ್ತಿದೆ. ‘ನೋ-ಮ್ಯಾಪಿಂಗ್’...

ನಾಸಿಕ್‌| ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು ಬಿಟ್ಟ ಪ್ರತಿಭಟನಾಕಾರರು

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ನಿಫಾದ್ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿಯನ್ನು ಖಂಡಿಸಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿದ ಪ್ರತಿಭಟನಾಕಾರರ ಗುಂಪೊಂದು ನಗರ ಪಂಚಾಯತ್ ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು...