ಸಫಾಯಿ ಕರ್ಮಚಾರಿಗಳ ನಿಯೋಜನೆ ನಿಷೇಧ ಹಾಗೂ ಸಫಾಯಿಗಳ ಪುನರ್ವಸತಿ ಅಧಿನಿಯಮ 2013ರನ್ನು ಕಡ್ಡಾಯವಾಗಿ ಪಾಲಿಸಬೇಕು ಹಾಗೂ ಸ್ವಚ್ಛತಾ ಕಾರ್ಯದಲ್ಲಿ ಕಡ್ಡಾಯವಾಗಿ ಯಂತ್ರೋಪಕರಣ ಬಳಸಬೇಕು ಎಂದು ಕರ್ನಾಟಕ ಹೈಕೋರ್ಟ್ ಸೂಚಿಸಿದೆ.
2013ರ ಕಾನೂನಿನ ಅನ್ವಯ ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಗಳಿಗೆ ಒದಗಿಸಿರುವ ಯಂತ್ರೋಪಕರಣಗಳ ವರದಿ ಸಲ್ಲಿಸಬೇಕು. ಕಾನೂನು ಪಾಲನೆ ಆಗಿಲ್ಲದಿದ್ದರೆ ಕಾರಣವನ್ನು ನೀಡಬೇಕು ಎಂದು ಜಸ್ಟೀಸ್ ಸತೀಶ್ ಚಂದ್ರ ಹಾಗೂ ಜಸ್ಟೀಸ್ ಸಚಿನ್ ಶಂಕರ್ ಮಗದುಮ್ ಇದ್ದ ವಿಭಾಗೀಯ ಪೀಠ ನಿರ್ದೇಶಿಸಿದೆ.
ರಾಜ್ಯದಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ನಿಷೇಧ ಕಾನೂನು ಉಲ್ಲಂಘನೆಯಾಗುತ್ತಿರುವ ಸಂಬಂಧ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಅಥಾರಿಟಿ ಹಾಗೂ ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ (AICCTU) ಸಂಘಟನೆಗಳು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದವು.
ಕೊಳಚೆ ತೆಗೆಯುವ ಕಾರ್ಯದಲ್ಲಿ ತೊಡಗಿರುವ ವ್ಯಕ್ತಿಯ ರಕ್ಷಣೆಗಾಗಿ ಕಡ್ಡಾಯವಾಗಿ 40 ಹೆಚ್ಚು ರಕ್ಷಣಾತ್ಮಕ ಕ್ರಮ ಹಾಗೂ ಸಲಕರಣೆಗಳನ್ನು ಒದಗಿಸಬೇಕೆಂದು 2013ರ ಕಾನೂನು ಹೇಳಿದೆ. ಸ್ಥಳೀಯ ಸಂಸ್ಥೆಗಳಲ್ಲಿ 14 ಯಂತ್ರೋಪಕರಣಗಳಾದರೂ ಇರಬೇಕು ಎಂದು ಕಾನೂನು ಹೇಳುತ್ತದೆ. ಈ ಸಂಬಂಧ 2013ರ ಡಿಸೆಂಬರ್ ನಲ್ಲಿ ಹೈಕೋರ್ಟ್ ಎಚ್ಚರಿಸಿತ್ತು. ಆದರೂ ಮಲದಗುಂಡಿಗೆ ಇಳಿದಿದ್ದ ಇಬ್ಬರು ಸಫಾಯಿ ಕರ್ಮಚಾರಿಗಳು ಸಾವನ್ನಪ್ಪಿದ್ದ ಪ್ರಕರಣಗಳು ಘಟಿಸಿದ್ದವು. ಜನವರಿಯಲ್ಲಿ ಕಲುಬುರಗಿ ಜಿಲ್ಲೆಯಲ್ಲಿ ಒಬ್ಬರು, ಜೂನ್‌ನಲ್ಲಿ ರಾಮನಗರ ಜಿಲ್ಲೆಯ ಒಬ್ಬರು ಸಾವನ್ನಪ್ಪಿದ್ದರು. ಇದನ್ನು ಪ್ರಸ್ತಾಪಿಸಿರುವ ಹೈಕೋರ್ಟ್, ಕಾನೂನು ಪಾಲನೆಯಲ್ಲಿ ಲೋಪವಾಗಿದ್ದಲ್ಲಿ ಅಕ್ಟೋಬರ್ 4ರಂದು ನಡೆಯುವ ವಿಚಾರಣೆಯಲ್ಲಿ ಈ ಎರಡು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕೆಂದು ಆದೇಶಿಸಿದೆ.
“ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ಸಂಬಂಧ ಮೊದಲು ಕಾನೂನು ಬಂದಿದ್ದು 1993ರಲ್ಲಿ. ಹೊಸ ಕಾನೂನು 2013ರಲ್ಲಿ ಬಂದಿತು. ಇಷ್ಟಾದರೂ ಸಫಾಯಿಗಳ ಸರ್ವೇ ಕಾರ್ಯ ನಡೆದಿಲ್ಲ. ಸಫಾಯಿಗಳನ್ನು ಗುರುತಿಸದಿದ್ದಲ್ಲಿ ಪುನರ್ವಸತಿ ಕಲ್ಪಿಸಲು ಸಾಧ್ಯವಾಗದು. ಅವರು ಆರ್ಥಿಕ ದುಸ್ಥಿತಿಯಿಂದಾಗಿ ಒತ್ತಾಯಪೂರ್ವಕವಾಗಿ ಈ ಕೆಲಸವನ್ನು ಮಾಡುತ್ತಾರೆ. ಯಂತ್ರಗಳನ್ನು ಬಳಸುತ್ತಿದ್ದರೂ ಇವರನ್ನು ಕಟ್ಟಕಡೆಯ ಕಾರ್ಮಿಕರನ್ನಾಗಿ ನೋಡಲಾಗುತ್ತದೆ. ಅತ್ಯಂತ ಕೆಳವರ್ಗದವರು ಈ ಕೆಲಸದಲ್ಲಿ ತೊಡಗುವುದರಿಂದ ಅಧಿಕಾರ ವರ್ಗ ಎಷ್ಟರ ಮಟ್ಟಿಗೆ ಕಾನೂನು ಪಾಲನೆ ಮಾಡುತ್ತಿದೆ ಎಂಬ ಪ್ರಶ್ನೆಯೂ ಏಳುತ್ತದೆ” ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತೆ ಮತ್ತು AICCTU ಪದಾಧಿಕಾರಿ ಮೈತ್ರೇಯಿ ಕೃಷ್ಣನ್.
ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ಅವರು, “ಎಫ್‌ಐಆರ್ ಆದರೂ ಮುಂದಿನ ಕ್ರಮಗಳು ಜರುಗುವುದಿಲ್ಲ. ಸಫಾಯಿ ಕಾರ್ಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವು ನಿರ್ದೇಶನಗಳನ್ನು ಹೈಕೋರ್ಟ್ ನೀಡಿದೆ. ಸಫಾಯಿಗಳ ಸಮೀಕ್ಷೆ ಹೇಗೆ ಮಾಡಬೇಕೆಂದೂ ತಿಳಿಸಲಾಗಿದೆ. ನಾವು ಮುಖ್ಯವಾಗಿ ಗಮನಿಸಬೇಕಾದ ಅಂಶವೇನೆಂದರೆ ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ಹೊಸ ಹೊಸ ರೂಪದಲ್ಲಿ ಬರುತ್ತಿದೆ. ಸ್ವಚ್ಛ ಭಾರತ ಕಾರ್ಯಕ್ರಮದಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಯಿತು. ಆದರೆ ಒಳಚರಂಡಿ ವ್ಯವಸ್ಥೆಯನ್ನು ನಿರ್ಲಕ್ಷಿಸಲಾಯಿತು. ಈ ಮೂಲಕ ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ಪ್ರೋತ್ಸಾಹಿಸಲಾಯಿತು. ಪೌರಕಾರ್ಮಿಕರನ್ನೂ ಸ್ಕ್ಯಾವೆಂಜಿಂಗ್‌ಗೆ ದೂಡಲಾಗುತ್ತಿದೆ. ಮಂಡ್ಯದಲ್ಲಿ ಒಬ್ಬರು ಆತ್ಮಹತ್ಯೆಯನ್ನೂ ಮಾಡಿಕೊಂಡಿದ್ದರು” ಎಂದು ವಿಷಾಧ ವ್ಯಕ್ತಪಡಿಸಿದರು.
ಈಗ ಹೈಕೋರ್ಟ್ ಮ್ಯಾನುವಲ್ ಸ್ಕಾವೇಂಜಿಗ್ ನಿಷೇಧಿಸಿ, ಕಡ್ಡಾಯವಾಗಿ ಯಂತ್ರೋಪಕರಣಗಳನ್ನು ಬಳಸಬೇಕೆಂದು ಸರ್ಕಾರಕ್ಕೆ ಸ್ಪಷ್ಟ ನಿರ್ದೇಶನ ನೀಡಿದೆ. ಅಲ್ಲದೇ ಮುಂದಿನ ವಿಚಾರಣೆಯ ದಿನ ಕರ್ತವ್ಯಲೋಪ ಎಸಗಿರುವ ಜಿಲ್ಲಾಧಿಕಾರಿಗಳು ಖುದ್ದು ಹಾಜರಿರಬೇಕೆಂದು ಸೂಚಿಸಿದೆ. ಇನ್ನಾದರೂ ಸರ್ಕಾರಗಳು, ಸ್ಥಳೀಯ ಆಡಳಿತಗಳು ಈ ಕುರಿತು ಎಚ್ಚೆತ್ತುಕೊಳ್ಳಬೇಕಿದೆ. ಪ್ರತಿಯೊಬ್ಬ ಕಾರ್ಮಿಕನಿಗೂ ಘನತೆಯ ಜೀವನ ನಡೆಸಲು ಅವಕಾಶ ನೀಡಬೇಕು ಮತ್ತು ಅನ್ಯಾಯದ ಸಾವುಗಳನ್ನು ತಡೆಗಟ್ಟಬೇಕಿದೆ.
ಇದನ್ನೂ ಓದಿ: LPG ಗ್ಯಾಸ್ ಬೆಲೆ ಮತ್ತೆ 25ರೂ ಹೆಚ್ಚಳ: 15 ದಿನಗಳಲ್ಲಿ ಎರಡು ಬಾರಿ ಬೆಲೆ ಏರಿಕೆ!


