ಕೊರೊನಾ ಮೂರನೆ ಅಲೆಯ ಆಂತಕದ ನಡುವೆ ದೇಶದಲ್ಲಿ ಹಬ್ಬಗಳು ಪ್ರಾರಂಭವಾಗಿದೆ. ಈ ಹಿನ್ನಲೆಯಲ್ಲಿ ಹೇಳಿಕೆ ನೀಡಿರುವ ಒಕ್ಕೂಟ ಸರ್ಕಾರ, “ಸಾಮೂಹಿಕ ಸಭೆಗಳನ್ನು ಕಡಿಮೆಗೊಳಿಸಬೇಕು. ಆದರೆ ಇಂತಹ ಸಭೆಗಳಿಗೆ ಹಾಜರಾಗಲೆ ಬೇಕು ಎಂದಿದ್ದರೆ, ಸಂಪೂರ್ಣ ಲಸಿಕೆ ಹಾಕುವುದು ಅತ್ಯಗತ್ಯವಾಗಿರಬೇಕು” ಎಂದು ಗುರುವಾರ ಹೇಳಿದೆ.
ಜನರು ಲಸಿಕೆಗಳನ್ನು ಪಡೆಯುವಂತೆ ಮತ್ತು ವಿಶೇಷವಾಗಿ ಹಬ್ಬದ ಸಮಯದಲ್ಲಿ ಕೋವಿಡ್ ನಿಯಮಗಳನ್ನು ಅನುಸರಿಸುವಂತೆ ಒಕ್ಕೂಟ ಸರ್ಕಾರ ಜನರನ್ನು ಒತ್ತಾಯಿಸಿದೆ. ಸಾಪ್ತಾಹಿಕ ಪಾಸಿಟಿವ್ ಸರಾಸರಿ ದರ ಕಡಿಮೆಯಾಗುತ್ತಿದ್ದರೂ, ಭಾರತದಲ್ಲಿ ಕೊರೊನಾ ಎರಡನೇ ಅಲೆ ಇನ್ನೂ ಕೊನೆಗೊಂಡಿಲ್ಲ ಎಂದು ಒಕ್ಕೂಟ ಸರ್ಕಾರ ಎಚ್ಚರಿಸಿದೆ.
ಆಗಸ್ಟ್ 31 ಕ್ಕೆ ಕೊನೆಗೊಂಡ ವಾರದಲ್ಲಿ ದೇಶದ 39 ಜಿಲ್ಲೆಗಳು 10% ಸಾಪ್ತಾಹಿಕ ಕೋವಿಡ್ ಪಾಸಿಟಿವಿಟಿ ದರವನ್ನು ವರದಿಯಾಗಿವೆ. 38 ಜಿಲ್ಲೆಗಳಲ್ಲಿ ಇದು 5% ರಿಂದ 10% ದಷ್ಟು ಇದೆ ಎಂದು ಸರ್ಕಾರ ಹೇಳಿದೆ.
ಇದನ್ನೂ ಓದಿ: ‘ನಮ್ಮದು ಕೊರೊನಾ ವಿರೋಧಿ ಸರ್ಕಾರವೇ ಹೊರತು, ಹಿಂದೂ ವಿರೋಧಿಯಲ್ಲ’ – BJP ಗೆ ತಿರುಗೇಟು ನೀಡಿದ ಉದ್ದವ್ ಠಾಕ್ರೆ
ಭಾರತದ ವಯಸ್ಕ ಜನಸಂಖ್ಯೆಯ 16% ದಷ್ಟು ಜನರು ಕೊರೊನಾ ಲಸಿಕೆಯ ಎರಡು ಡೋಸ್‌ಗಳನ್ನು ಪಡೆದಿದ್ದಾರೆ ಮತ್ತು 54% ದಷ್ಟು ಜನರಿಗೆ ಮೊದಲ ಡೋಸ್ ಅನ್ನು ನೀಡಲಾಗಿದೆ ಎಂದು ಒಕ್ಕೂಟ ಸರ್ಕಾರ ಪ್ರತಿಪಾದಿಸಿದೆ.
“ಸಿಕ್ಕಿಂ, ದಾದ್ರಾ ಮತ್ತು ನಾಗರ್ ಹವೇಲಿ ಮತ್ತು ಹಿಮಾಚಲ ಪ್ರದೇಶದಲ್ಲಿ ಎಲ್ಲಾ ವಯಸ್ಕ ಜನಸಂಖ್ಯೆಯು ಕನಿಷ್ಠ ಒಂದು ಡೋಸ್ ಕೋವಿಡ್ ಲಸಿಕೆಯನ್ನು ಪಡೆದುಕೊಂಡಿದೆ” ಎಂದು ಸರ್ಕಾರ ಹೇಳಿದೆ.
ದೇಶವನ್ನು ಆವರಿಸಿರುವ ಕೋವಿಡ್ ಸೋಂಕಿನ ಮೂರನೇ ಅಲೆಯ ಆತಂಕದ ನಡುವೆ ಮುಂಬರುವ ಹಬ್ಬದ ಋತುವಿನ ದೃಷ್ಟಿಯಿಂದ, ಸಾಮೂಹಿಕ ಸಭೆಗಳನ್ನು ಕಡಿಮೆಗೊಳಿಸಬೇಕು ಎಂದು ಒಕ್ಕೂಟ ಸರ್ಕಾರ ಹೇಳಿದ್ದು, ಅಂತಹ ಸಭೆಗೆ ಹಾಜರಾಗುವುದು ಅಗತ್ಯವಿದ್ದಲ್ಲಿ ಸಂಪೂರ್ಣ ವ್ಯಾಕ್ಸಿನೇಷನ್ ಪೂರ್ವಾಪೇಕ್ಷಿತವಾಗಿರಬೇಕು ಎಂದು ತಿಳಿಸಿದೆ.
“ಜನರು ಮನೆಯಲ್ಲಿ ಹಬ್ಬಗಳನ್ನು ಆಚರಿಸಬೇಕು, ಕೋವಿಡ್‌ನ ಸೂಕ್ತ ನಿಯಮಗಳನ್ನು ಅನುಸರಿಸಬೇಕು ಮತ್ತು ಲಸಿಕೆಯನ್ನು ಪಡೆದುಕೊಳ್ಳಬೇಕು” ಎಂದು ಸರ್ಕಾರ ಹೇಳಿದೆ. ಭಾತರದಲ್ಲಿ ಇದುವರೆಗೆ SARS-CoV-2 ನ ಡೆಲ್ಟಾ ಪ್ಲಸ್ ರೂಪಾಂತರದ ಸುಮಾರು 300 ಪ್ರಕರಣಗಳು ಪತ್ತೆಯಾಗಿವೆ ಎಂದು ಸರ್ಕಾರ ಹೇಳಿದೆ.
ಇದನ್ನೂ ಓದಿ: ಕೇರಳ: ಕೊರೊನಾದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ 3 ಲಕ್ಷ ರೂ. ಆರ್ಥಿಕ ನೆರವು


