ಒಕ್ಕೂಟ ಸರ್ಕಾರವು ತನ್ನ ಆಸ್ತಿಯನ್ನು ಮಾನಿಟೈಸೇಶನ್ ಪಾಲಿಸಿಯ ಹೆಸರಿನಲ್ಲಿ ಮಾರಾಟ ಮಾಡಲು ಯೋಜಿಸುತ್ತಿದ್ದು, ಕಳೆದ 70 ವರ್ಷಗಳಲ್ಲಿ ನಿರ್ಮಿಸಲಾಗಿರುವ ಎಲ್ಲವನ್ನೂ ಆಯ್ದ ಕೆಲವರ ಕೈಗೆ ಒತ್ತೆ ಇಡಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಶುಕ್ರವಾರ ಆಕ್ರೊಶ ವ್ಯಕ್ತಪಡಿಸಿದ್ದಾರೆ.
ಒಕ್ಕೂಟ ಸರ್ಕಾರ ಇತ್ತೀಚೆಗೆ, ಅಂದಾಜು 6 ಲಕ್ಷ ಕೋಟಿ ರೂ. ನ್ಯಾಷನಲ್ ಮಾನಿಟೈಸೇಶನ್ ಪೈಪ್‌ಲೈನ್ (NMP) ನೀತಿಯನ್ನು ಅನಾವರಣಗೊಳಿಸಿದೆ. ಕಂದಾಯ ಹಕ್ಕುಗಳನ್ನು ಖಾಸಗಿ ವಲಯಕ್ಕೆ ವರ್ಗಾಯಿಸುವ ಮೂಲಕ ಬ್ರೌನ್ ಫೀಲ್ಡ್ ಯೋಜನೆಗಳಲ್ಲಿ ಮೌಲ್ಯವನ್ನು ಅನ್ಲಾಕ್ ಮಾಡುವ ಉದ್ದೇಶವನ್ನು ಈ ನೀತಿ ಹೊಂದಿದೆ. ಆಸ್ತಿಗಳ ಮಾಲೀಕತ್ವವು ಸರ್ಕಾರದಲ್ಲಿ ಉಳಿಯುತ್ತದೆ. ಪಾಲಿಸಿಯ ಮೂಲಕ ಉತ್ಪತ್ತಿಯಾದ ಹಣವನ್ನು ದೇಶದಲ್ಲಿ ಮೂಲಸೌಕರ್ಯ ಸೃಷ್ಟಿಗೆ ಬಳಸಲಾಗುವುದು ಎಂದು ಸರ್ಕಾರ ಹೇಳಿದೆ.
ಇದನ್ನೂ ಓದಿ: ಮಾನಿಟೈಸೇಶನ್‌ನಿಂದ ಕೆಲವೇ ಕ್ರೋನಿ ಕ್ಯಾಪಿಟಲಿಸ್ಟ್‌ಗಳಿಗೆ ಅನುಕೂಲವಾಗಿದೆ: ರಾಹುಲ್
ಮಾಜಿ ವಿತ್ತ ಸಚಿವರೂ ಆಗಿರುವ ಪಿ. ಚಿದಂಬರಂ ಅವರು ನೀತಿಯ ಕುರಿತು ಸಂಸತ್ತಿನಲ್ಲಿ ಯಾವುದೇ ಸಮಾಲೋಚನೆ ಅಥವಾ ಚರ್ಚೆ ನಡೆದಿಲ್ಲ ಎಂದು ಹೇಳಿದ್ದಾರೆ. “ಪ್ರಧಾನಿ ನರೇಂದ್ರ ಮೋದಿಯಾಗಲಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆಗಲಿ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ” ಎಂದು ಅವರು ತಿಳಿಸಿದ್ದಾರೆ.
ನಾಲ್ಕು ಬಾರಿ ಹಣಕಾಸು ಸಚಿವರಾಗಿದ್ದ ಪಿ. ಚಿದಂಬರಂ ಅವರು, ಸರ್ಕಾರಕ್ಕೆ ಆದಾಯವನ್ನು ಉಂಟುಮಾಡುತ್ತದೆ ಎಂದು ಆಸ್ತಿಗಳನ್ನು ಮಾರಾಟ ಮಾಡುವುದರ ಹಿಂದಿನ ತಾರ್ಕಿಕತೆಯನ್ನು ಪ್ರಶ್ನಿಸಿದ್ದಾರೆ. ಈ ಆಸ್ತಿಗಳು ಗಳಿಸುತ್ತಿರುವ ಆದಾಯವನ್ನು ಒಕ್ಕೂಟ ಸರ್ಕಾರ ಬಹಿರಂಗಪಡಿಸುತ್ತಿಲ್ಲ. ಯಾಕೆಂದರೆ ಇದನ್ನು ಮಾರಾಟ ಮಾಡುವುದರಿಂದ 1.5 ಲಕ್ಷ ರೂ.ಗಳನ್ನು ಪಡೆಯುತ್ತಾರೆ ಎಂದು ಅವರು ಆರೋಪಿಸಿದ್ದಾರೆ.
“ಈ ಆಸ್ತಿಗಳು ಪ್ರಸ್ತುತ ಸುಮಾರು 1.3 ಲಕ್ಷ ಕೋಟಿ ರೂಪಾಯಿಗಳನ್ನು ಗಳಿಸುತ್ತಿವೆ ಎಂದು ನಾನು ನಂಬಿದ್ದೇನೆ. ಆದ್ದರಿಂದ, 70 ವರ್ಷಗಳಲ್ಲಿ ನಿರ್ಮಿಸಲಾದ ಸ್ವತ್ತುಗಳನ್ನು ಕೇವಲ 20,000 ಕೋಟಿ ಲಾಭಕ್ಕಾಗಿ ಮಾರಾಟ ಮಾಡುವುದು ಸರಿಯಲ್ಲ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಒಕ್ಕೂಟ ಬಜೆಟ್ 2021-22: ಉಳ್ಳವರನ್ನು, ಉದ್ಯಮಪತಿಗಳನ್ನು, ವಾಣಿಜ್ಯೋದ್ಯಮಿಗಳನ್ನು ತಣಿಸಲು ಪ್ರಯತ್ನಿಸಿರುವ ವೈಭವದ ಮಾತಿನ ಬಜೆಟ್


