ಗೌರಿ ಲಂಕೇಶ್ ಅವರು ಹಿಂದುತ್ವವಾದಿಗಳ ಗುಂಡಿಗೆ ಎದೆಯೊಡ್ಡಿ ಹುತಾತ್ಮರಾಗಿ ನಾಲ್ಕು ವರ್ಷಗಳಾಗಿವೆ. ಭಾನುವಾರದಂದು ಅವರ ನೆನಪಿನಲ್ಲಿ ಹಲವಾರು ಕಾರ್ಯಕ್ರಮಗಳು ನಡೆದಿವೆ. ಈ ಮೂಲಕ ದಿಟ್ಟ ಪತ್ರಕರ್ತೆಯನ್ನು ವಿಶ್ವದಾದ್ಯಂತ ಜನರು ನೆನಪಿಸಿಕೊಂಡಿದ್ದಾರೆ.
ಗೌರಿ ಲಂಕೇಶ್ ಅವರ ಹತ್ಯೆಯಾಗಿ ನಾಲ್ಕು ವರ್ಷಗಳಾಗಿರುವ ಹಿನ್ನೆಲೆಯಲ್ಲಿ ‘ವಾರ್ತಾಭಾರತಿ’ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ‘ನಾನೂ ಗೌರಿ’ ಕಿರುಚಿತ್ರವನ್ನು ಭಾನುವಾರ ಸಂಜೆ ಬಿಡುಗಡೆಗೊಳಿಸಿದೆ. ಈ ಮೂಲಕ ಗೌರಿ ಲಂಕೇಶ್ ಅವರಿಗೆ ವಾರ್ತಾಭಾರತಿ ಪತ್ರಿಕೆ ತಮ್ಮ ಗೌರವ ಸಲ್ಲಿಸಿದೆ. ಈಗಾಗಲೆ ಸಾವಿರಾರು ಜನರು ಕಿರುಚಿತ್ರವನ್ನು ವೀಕ್ಷಿಸಿದ್ದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಗೌರಿ ಲಂಕೇಶ್ ದಿನ: ಗೌರಿಯನ್ನು ನೆನೆಯುತ್ತಾ…ಸಾವಿರಾರು ಗೌರಿಯರ ಮಾತುಗಳು…!
ಇಬ್ಬರು ವ್ಯಕ್ತಿಗಳು ಯಾರದೋ ‘ಅಣತಿ’ಯಂತೆ ಗೌರಿ ಲಂಕೇಶ್ ಅವರನ್ನು ಕೊಂದು, ‘ಕೆಲಸ ಮುಗಿಯಿತು’ ಎಂದು ತಿಳಿಸುತ್ತಾರೆ. ಆದರೆ ಈ ಸಮಯದಲ್ಲಿ ಸಮಾಜ ಅವರಿಗೆ ಏನು ಹೇಳುತ್ತದೆ ಎಂಬುವುದು ಕಿರು ಚಿತ್ರದಲ್ಲಿ ತಿಳಿಸಲಾಗಿದೆ.
ಚಿತ್ರದ ನಿರ್ದೇಶನವನ್ನು ವಾರ್ತಾಭಾರತಿಯ ಪತ್ರಕರ್ತರಾದ ಬಾತಿಶ್ ಅವರು ನಿರ್ವಹಿಸಿದ್ದಾರೆ. ಚಿತ್ರಕ್ಕೆ ಸ್ಕ್ರಿಪ್ಟ್ ಮತ್ತು ಸಾಹಿತ್ಯವನ್ನು ಕೂಡಾ ಅವರೇ ಬರೆದಿದ್ದಾರೆ. ಕಿರುಚಿತ್ರವನ್ನು ಕೆಳಗೆ ವೀಕ್ಷಿಸಬಹುದಾಗಿದೆ.
ಕಿರುಚಿತ್ರ ಮಾತ್ರವಲ್ಲದೆ, ವಾರ್ತಾಭಾರತಿ ಪತ್ರಿಕೆಯು ಗೌರಿ ಲಂಕೇಶ್ ನೆನಪಿನಲ್ಲಿ ಸಂದರ್ಶನ, ಕವನ ವಾಚನ, ಸಂವಾದ ಸೇರಿದಂತೆ ದಿನವಿಡಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು.
ಗೌರಿ ಲಂಕೇಶ್ ಅವರ ನೆನಪಿನಲ್ಲಿ ಭಾನುವಾರ (ಸೆಪ್ಟಂಬರ್ 05) ಗೌರಿ ಮೆಮೋರಿಯಲ್ ಟ್ರಸ್ಟ್‌ನಿಂದ ‘ಗೌರಿ ನೆನಹು’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹುತಾತ್ಮರಾದ ಗೌರಿ ಲಂಕೇಶ್ ಅವರಿಗೆ ಹೋರಾಟದ ವಂದನೆಗಳನ್ನು ಅವರ ಸಮಾಧಿ ಬಳಿಗೆ ತೆರಳಿ ಸಲ್ಲಿಸಲಾಯಿತು.
ಇದನ್ನೂ ಓದಿ: ಗೌರಿ ಲಂಕೇಶ್ ದಿನ: ’ಗೌರಿ ನೆನಹು’ ಕಾರ್ಯಕ್ರಮದ ಚಿತ್ರಗಳು



ತುಂಬಾ ಚೆನ್ನಾಗಿದೆ. ಮೂಲಭೂತವಾದಿಗಳ ವಿರುದ್ಧದ ಮಾನವೀಯ ಧ್ವನಿ ಎಂದಿಗೂ ಸಾಯದು ಎಂಬ ಎಚ್ಚರಿಕೆಯನ್ನು ಈ ಕಿರು ಚಿತ್ರದ ಮೂಲಕ ನೀಡಿದ್ದೀರಿ. ಧನ್ಯವಾದಗಳು.-ವೆಂಕಟೇಶ ಮಾನು