Homeಕರ್ನಾಟಕಗೌರಿ ಲಂಕೇಶ್ ದಿನ: ಗೌರಿಯನ್ನು ನೆನೆಯುತ್ತಾ...ಸಾವಿರಾರು ಗೌರಿಯರ ಮಾತುಗಳು...

ಗೌರಿ ಲಂಕೇಶ್ ದಿನ: ಗೌರಿಯನ್ನು ನೆನೆಯುತ್ತಾ…ಸಾವಿರಾರು ಗೌರಿಯರ ಮಾತುಗಳು…

ಇಂದಿನ ಸ್ಥಿತಿಯಲ್ಲಿ ಅಪ್ಪ (ಲಂಕೇಶ್), ಗೌರಿ ಇದ್ದಿದ್ದರೆ ಏನು ಮಾಡುತ್ತಿದ್ದರು ಎಂಬ ಆಲೋಚನೆ ನನ್ನನ್ನು ಸದಾ ಕಾಡುತ್ತದೆ- ಕವಿತಾ ಲಂಕೇಶ್

- Advertisement -
- Advertisement -

ಗೌರಿ ಲಂಕೇಶ್ ಅಮರ್‌ ರಹೇ….ಅಮರ್‌ ರಹೇ…ಅಮರ್‌ ರಹೇ…ಗೌರಿ ಲಂಕೇಶ್ ಆಶಯಗಳನ್ನು ಈಡೇರಿಸೋಣ..ಈಡೇರಿಸೋಣ…ನಾನುಗೌರಿ..ನಾವೇಲ್ಲ ಗೌರಿ…ನೂರು ಗುಂಡುಗಳು ತೂರಿ ಬಂದರೂ ಗುಡು ಗುಡು ಗುಡು ಗುಡುಗುವೆವು…

ಈ ಎಲ್ಲಾ ಘೋಷಣೆಗಳು ಕೇಳಿ ಬಂದಿದ್ದು, ಚಾಮರಾಜಪೇಟೆಯಲ್ಲಿರುವ ಗೌರಿ ಲಂಕೇಶ್‌ರವರ ಸಮಾಧಿ ಬಳಿ…ಹೌದು, ಇಂದು ಹಿಂದೂತ್ವವಾದಿಗಳ ಗುಂಡಿಗೆ ಎದೆಯೊಡ್ಡಿ ಹುತಾತ್ಮರಾದ ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್‌ ಅವರು ನಮ್ಮನ್ನಗಲಿ ನಾಲ್ಕು ವರ್ಷ.

ಗೌರಿ ಲಂಕೇಶ್ ಅವರ ನೆನಪಿನಲ್ಲಿ ಇಂದು (ಸೆಪ್ಟಂಬರ್ 05) ಗೌರಿ ಮೆಮೋರಿಯಲ್ ಟ್ರಸ್ಟ್‌ನಿಂದ ‘ಗೌರಿ ನೆನಹು’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹುತಾತ್ಮರಾದ ಗೌರಿ ಲಂಕೇಶ್ ಅವರಿಗೆ ಹೋರಾಟದ ವಂದನೆಗಳನ್ನು ಸಲ್ಲಿಸಲಾಯಿತು.

ಗೌರಿ ನೆನಹುನಲ್ಲಿ ಮಾತನಾಡಿದ ಸಹೋದರಿ ಕವಿತಾ ಲಂಕೇಶ್ ಅವರು, “ಆ ಘಟನೆ ಇನ್ನು ನೆನ್ನೆ, ಮೊನ್ನೆ ಆದ ಹಾಗೆ ಕಣ್ಣ ಮುಂದಿದೆ. ಆಕೆಯ ಹೋರಾಟ ಮುಂದುವರೆಯುತ್ತಿದೆ. ಕಡಿಮೆ ಸ್ಥಳ ಸಿಕ್ಕರೂ ಜನ ಮಾತನಾಡುತ್ತಿದ್ದಾರೆ, ಗೌರಿ ಅಂತಹ ಜನ ಇನ್ನೂ ಇದ್ದಾರಲ್ಲ ಎಂಬುದೇ ಹೆಮ್ಮೆಯ ವಿಷಯ. ಪರಿಸ್ಥಿತಿ ಅಂದಿಗಿಂತಲೂ ಇಂದು ಹೆಚ್ಚು ಹದಗೆಟ್ಟಿದೆ. ಪತ್ರಕರ್ತರ ಮೇಲೆ ಹಲ್ಲೆಗಳಾಗುತ್ತಿವೆ. ಸರ್ಕಾರದ ವಿರುದ್ಧ ಬರೆಯಲಾಗದ ಸ್ಥಿತಿ ತಂದಿದ್ದಾರೆ. ಇಂತ ಸ್ಥಿತಿಯಲ್ಲಿ ಅಪ್ಪ (ಲಂಕೇಶ್), ಗೌರಿ ಇದ್ದಿದ್ದರೇ ಏನು ಮಾಡುತ್ತಿದ್ದರು ಎಂಬ ಆಲೋಚನೆ ನನ್ನನ್ನು ಕಾಡುತ್ತದೆ” ಎಂದಿದ್ದಾರೆ.

ಇದನ್ನೂ ಓದಿ: ಇಂದು ಗೌರಿ ದಿನ: ಗೌರಿ ಲಂಕೇಶ್ ನೆನಪಿನಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ಸಂವಾದ ಕಾರ್ಯಕ್ರಮಗಳು

ಹೋರಾಟಗಾರ್ತಿ, ಚಿಂತಕಿ, ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯ್ಕ್ ಮಾತನಾಡಿ, “ಧಾರ್ಮಿಕ ಸಂಘಟನೆಗಳು ಹೆಚ್ಚಾಗಿ ಹೇಗೆ ರಾಜಕೀಯ ಮಾಡುತ್ತಿವೆ ಎಂಬುದನ್ನು ಲಂಕೇಶರು, ಗೌರಿ ಲಂಕೇಶರು ತಮ್ಮ ಬರಹಗಳ ಮೂಲಕ, ಚಿಂತನೆ ಮೂಲಕ ತಮ್ಮದೇ ರೀತಿಯಲ್ಲಿ ತಿಳಿಸಿದ್ದಾರೆ. ಈ ದಿನ ಗೌರಿ ಆಶಯದಲ್ಲಿ ಮುನ್ನಡೆಯುತ್ತಿರುವವರು, ನಾವೆಲ್ಲರೂ ಅದನ್ನು ಪಾಲಿಸಬೇಕಿದೆ. ಅನ್ಯಾಯ ಖಂಡಿಸುವ ಕೆಲಸ ಮಾಡುವವರಿಗೆ ಗುಂಡೇಟು ಬೀಳುವುದು ದುರಂತದ ವಿಷಯ. ಇವತ್ತಿಗೂ ಅದು ಇದೆ. ಅದು ಮುಂದೆಯೂ ಮುಂದುವರೆಯಲಿದೆ. ಆದರೆ, ನಾವ್ಯಾರು ಎದೆಗುಂದಬಾರದು. ಅವರಿದ್ದ ಕಾಲಕ್ಕಿಂತಲೂ ಕೆಟ್ಟ ಕಾಲ ಈಗ ಇದೆ. ಜಾತಿಯತೆ, ಕೋಮುದೌರ್ಜನ್ಯ ಹೆಚ್ಚಾಗುತ್ತಿದೆ. ಮತ್ತೆ ಗೌರಿ, ಲಂಕೇಶ್ ಅವರನ್ನು ನೆನೆಯುತ್ತಾ ಈ ಸವಾಲು ಸ್ವೀಕರಿಸಬೇಕಾಗಿದೆ. ಯಾವುದಕ್ಕೂ ಜಗ್ಗದೆ, ಅನ್ಯಾಯ ಸಹಿಸುವುದಿಲ್ಲ ಎಂಬ ಸಂಕಲ್ಪ ತೆಗೆದುಕೊಳ್ಳಬೇಕಾಗಿದೆ”  ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಗೌರಿ ನೆನಹು ಕಾರ್ಯಕ್ರಮ ಆಯೋಜಿಸಿದ್ದ ಗೌರಿ ಮೆಮೋರಿಯಲ್ ಟ್ರಸ್ಟ್ ಸದಸ್ಯರಾದ ನೂರ್ ಶ್ರೀಧರ್, ಹೇಗೆ ಗೌರಿ ಲಂಕೇಶ್ ಅವರ ಹತ್ಯೆಯಿಂದ ಜನ ಸಿಡಿದೆದ್ದರು ಎಂಬುದನ್ನು ತಿಳಿಸಿದರು.

“ಈ ಹೇಡಿಗಳು ಪನ್ಸಾರೆ, ದಾಬೊಲ್ಕರ್‌ ಅವರನ್ನು ಕೊಂದ ನಂತರ ಕಲ್ಬುರ್ಗಿ ಅವರನ್ನು ಟಾರ್ಗೆಟ್ ಮಾಡಿದರು. ನಂತರ ಗೌರಿ ಅವರನ್ನು ಟಾರ್ಗೆಟ್ ಮಾಡಿದರು. ಹೆಣ್ಣು ಜರ್ನಲಿಸ್ಟ್ ಏನು ಮಾಡಲು ಸಾಧ್ಯ ಎಂದು ಕೊಂಡಿದ್ರು. ಆ ಸಣ್ಣ ದೇಹದಲ್ಲಿನ ಗೌರಿ ಒಂದು ಜೀವ ಸೆಲೆ ಎಂಬುದು ಅವರಿಗೆ ತಿಳಿಯಲಿಲ್ಲ. ಅವರ ದೊಡ್ಡ ತಪ್ಪು ಗೌರಿ ಲಂಕೇಶ್ ಅವರನ್ನು ಟಾರ್ಗೆಟ್ ಮಾಡಿದ್ದು. ಗೌರಿ ಇಷ್ಟು ದೊಡ್ಡ ವ್ಯಕ್ತಿತ್ವ ಎಂಬುದು ಅವರಿಗೆ ತಿಳಿದಿರಲಿಲ್ಲ. ಗೌರಿ ಎಲ್ಲ ಜನರ ಹೃದಯದಲ್ಲಿ ಇದ್ದವರು ಎಂದು ಅವರಿಗೆ ತಿಳಿಯಲಿಲ್ಲ. ಹಾಗಾಗಿ ಅವರು ಗೌರಿ ಅವರ ಎದೆಗೆ ಹೊಡೆದ ಗುಂಡು ದೇಶ, ವಿದೇಶಗಳ ಸಹೃದಯರ ಹೃದಯಗಳಿಗೆ ತಾಗಿತ್ತು. ಅದು ಗೌರಿ ಘರ್ಜನೆಯಾಯಿತು. ಅದು ಭಯದ ಬದಲು ಇನ್ನು ವಿಶ್ವಾಸ, ಹೋರಾಟದ ಸಂಕಲ್ಪಕ್ಕೆ ನಾಂದಿಯಾಯಿತು. ನಾನುಗೌರಿ..ನಾವೆಲ್ಲಾ ಗೌರಿ ಎಂಬುದು ತಾನಾಗೆ ಹುಟ್ಟಿಕೊಂಡ ಒಂದು ಹೋರಾಟವಾಯಿತು” ಎಂದರು.

“ಈ ಘರ್ಜನೆಯಿಂದ ಈ ಹಂತಕರ ಪಡೆಗೆ ಮುಳುವಾಯಿತು. ಅಂದಿನ ಸರ್ಕಾರ ಕೂಡ ಈ ಒತ್ತಡಕ್ಕೆ ಒಳಗಾಗಬೇಕಾಯಿತು. ಸಂಘ ಪರಿವಾರದ ಷಡ್ಯಂತರ ಎಷ್ಟು ಕೆಲಸ ಮಾಡಿದರೂ ಕೂಡ ಆರೋಪಿಗಳನ್ನು ಬಿಡಿಸಲು ಸಾಧ್ಯವಾಗಲಿಲ್ಲ. ಇಂದು ನಮ್ಮನ್ನೆಲ್ಲಾ ಕಾಪಾಡಿದ್ದು ಈ ಗೌರಿ ಘರ್ಜನೆ. ಗೌರಿ ಆಶಯಗಳನ್ನು ಹೊತ್ತ ಗೌರಿ ತಂಡ ಕೆಲಸ ನಿಲ್ಲಿಸಲಿಲ್ಲ. ಕೆಲಸ ಮುಂದುವರೆಸಿದೆ. ಗೌರಿ ಆಶಯಗಳನ್ನು ಮುಂದುವರೆಸಲು ನಾನಾ ರೀತಿಯ ಚಿಂತನೆ ನಡೆಯುತ್ತಿದೆ. ಮುಂದೆ ಪತ್ರಿಕೋದ್ಯಮದಲ್ಲಿ ದಟ್ಟ ಅಲೆ ಸೃಷ್ಟಿಯಾಗಲಿದೆ” ಎಂದು ಗೌರಿ ಮೆಮೋರಿಯಲ್ ಟ್ರಸ್ಟ್ ಸದಸ್ಯರಾದ ನೂರ್ ಶ್ರೀಧರ್ ತಿಳಿಸಿದ್ದಾರೆ.

ಇದನ್ನೂ ಓದಿ: ಗೌರಿ ಲಂಕೇಶ್ ಹತ್ಯೆ ಆರೋಪಿಗಳ ಮೇಲಿನ KCOCA ಕಾಯ್ದೆ ಕೈಬಿಡದಂತೆ ಸುಪ್ರೀಂ ಆದೇಶ

ಹೋರಾಟಗಾರರಾದ ಮಲ್ಲೂ ಕುಂಬಾರ್‌ ಗೌರಿಯವರನ್ನು ನೆನೆಯುತ್ತಾ, “ಲೈಂಗಿಕ ಅಲ್ಪ ಸಂಖ್ಯಾತರ ಬಗ್ಗೆ ಯಾರು ದನಿ ಎತ್ತದ ಕಾಲದಲ್ಲಿ ತುಂಬಾ ಸೂಕ್ಷ್ಮವಾಗಿ ಮಾತಾಡುತ್ತಿದ್ದವರು ಗೌರಿ. ಗೌರಿ ಕೊಲ್ಲಲ್ಪಟ್ಟಿದ್ದಾಳೆ. ಆದರೆ ಸತ್ತಿಲ್ಲ. ಎಲ್ಲಾ ಶೋಷಿತರು ತಮ್ಮ ಈಗೋಗಳನ್ನು ಬಿಟ್ಟು ಒಂದಾಗಿ ಗೌರಿ ಆಶಯಕ್ಕೆ ಗೌರವ ಸಲ್ಲಿಸಬೇಕಿದೆ” ಎಂದು ಆಗ್ರಹಿಸಿದ್ದಾರೆ.

ಕರ್ನಾಟಕ ಜನಶಕ್ತಿ ಮತ್ತು ಮಹಿಳಾ ಮುನ್ನಡೆ ಕಾರ್ಯಕರ್ತೆ ಚೆನ್ನಮ್ಮ ಮಾತನಾಡುತ್ತಾ, “ಒಂದು ಒಳ್ಳೆ ಬದುಕು ಕಟ್ಟಿ ಕೊಳ್ಳಲು ಸಹಾಯ ಮಾಡಿದವರು ಗೌರಿ ಅವರು. ಒಬ್ಬ ಮಹಿಳೆ ಹೇಗೆ ದಿಟ್ಟವಾಗಿ ಹೋರಾಟ ಮಾಡಬಹುದು ಎಂಬುದಕ್ಕೆ ಆದರ್ಶವಾಗಿದ್ದಾರೆ. ಇಷ್ಟೊಂದು ಎದುರಾಳಿಗಳ ನಡುವೆ ಸತ್ಯವನ್ನು ಬರೆಯಲು ಮನಸ್ಸು ಮಾಡಿದವರು ಅವರು. ಪೆನ್ನಿನ ಮೂಲಕ ಅವರ ತಪ್ಪುಗಳನ್ನು ಹೊರ ಹಾಕವುದನ್ನು ಕಲಿಸಿಕೊಟ್ಟಿದ್ದಾರೆ. ನಗರದಲ್ಲಷ್ಟೇ ಅಲ್ಲ ನಾವು ಹೋಗುವ ಪ್ರತಿ ಹಳ್ಳಿಯ ಜನರ ಮನಸ್ಸಿನಲ್ಲಿಯೂ ಅವರು ಆಳವಾಗಿ ಬೇರೂರಿದ್ದಾರೆ” ಎಂದು ಗೌರಿ ಲಂಕೇಶ್ ಅವರು ಜನರ ಮನಸ್ಸಲ್ಲಿ ವಿಸ್ತರಿಸಿರುವ ಬಗೆಯನ್ನು ವಿವರಿಸಿದ್ದಾರೆ.

ಗೌರಿ ಲಂಕೇಶ್ ಅವರ ತಾಯಿ ಇಂದಿರಾ ಲಂಕೇಶ್, ಸಹೋದರಿ ಕವಿತಾ ಲಂಕೇಶ್, ಗೌರಿ ಮೆಮೋರಿಯಲ್ ಟ್ರಸ್ಟ್‌ ಕಾರ್ಯದರ್ಶಿ ದೀಪು, ಕೆ.ಎಲ್, ಅಶೋಕ್, ಚಿಂತಕರಾದ ಶಿವಸುಂದರ್‌, ಹೋರಾಟಗಾರರಾದ ಸಿರಿಮನೆ ನಾಗರಾಜು, ವಾಸು, ಮಲ್ಲಿಗೆ ಸಿರಿಮನೆ, ಪ್ರೋ. ನಗರಿ ಬಾಬಯ್ಯ, ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಸರೋವರ್‌ ಬೆಂಕಿಕೆರೆ, ಹೇಮಂತ್ ಸೇರಿದಂತೆ, ಚಿಂತಕರು ಸಾಮಾಜಿಕ ಹೋರಾಟಗಾರರು ಭಾಗವಹಿಸಿದ್ದರು.

ಇದನ್ನೂ ಓದಿ: ನಾನು ನಾಲ್ಕನೇ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಮಾಧ್ಯಮವನ್ನು ಜನರ ತೆಕ್ಕೆಗೆ ಮರಳಿ ಪಡೆಯುವ ಬಗ್ಗೆ ಎರಡು ಮಾತು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...