ನೀಲ್ ಕಮಲ್ ಸಂಸ್ಥೆಯು ‘ಪಾಕಿಸ್ತಾನ್ ಮುರ್ದಾಬಾದ್’ (ಪಾಕಿಸ್ತಾನಕ್ಕೆ ಧಿಕ್ಕಾರ) ಘೋಷಣೆಯನ್ನು ಪಾಕಿಸ್ತಾನದ ಬಾವುಟದೊಂದಿಗೆ ತನ್ನ ಉತ್ಪನ್ನದ ಮೇಲೆ ಮುದ್ರಿಸಿದೆ ಎಂಬ ಚಿತ್ರವೊಂದು ಇತ್ತೀಚೆಗೆ ವೈರಲ್ ಆಗಿದೆ.
ರೈಲ್ವೆ ನಿಲ್ದಾಣವೊಂದರ ಕಸದಬುಟ್ಟಿಯ ಮೇಲೆ ಈ ರೀತಿಯ ಘೋಷಣೆ ಹಾಗೂ ಭಾವುಟದ ಚಿತ್ರವಿದ್ದು, ಶಿಪ್ರಾ ದತ್ ಎಂಬುವವರು, “ಪ್ಲಾಸ್ಟಿಕ್ ಉತ್ಪನ್ನ ಸಂಸ್ಥೆ ನೀಲ್ ಕಮಲ್, ಬಹಳ ಸಂತೋಷ ತರುವ ಕೆಲಸ ಮಾಡಿದೆ” ಎಂಬ ಒಕ್ಕಣೆಯಲ್ಲಿ ತಮ್ಮ ಟ್ಟಿಟರ್ ಖಾತೆಯಲ್ಲಿ ಈ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅದನ್ನು ತಕ್ಷಣದಲ್ಲೇ ನೂರಾರು ಮಂದಿ ರೀಟ್ವೀಟ್ ಮಾಡಿದ್ದಾರೆ.
*नीलकमल प्लास्टिक वाले ने तो दिल खुश कर दिया*? pic.twitter.com/hj2MNRyqI7
— शिप्रा दत्ता ???????? (@ShipraDUTTA16) August 31, 2021
नीलकमल प्लास्टिक वाले ने तो दिल खुश कर दिया*??? pic.twitter.com/j6F0Q0aVnR
— Kangana Ranaut?? (@Nationalisti41) September 1, 2021
ಬಿಜೆಪಿಯ ಪರ ಸದಾ ಬ್ಯಾಟಿಂಗ್ ಮಾಡುವ ನಟಿ ಕಂಗನಾ ರಣಾವತ್ ಅಭಿಮಾನಿಗಳು, ಇದೇ ಅರ್ಥದಲ್ಲಿಯೇ ಚಿತ್ರವನ್ನು ತಮ್ಮ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ. ಗುಂಜೇಶ್ ಗೌತಮ್ ಝಾ, ಹಮ್‌ಲೋಗ್ ಇಂಡಿಯಾ, ಪಿ.ಎನ್.ರಾಯ್, ಜೀತೇಂದ್ರ ಭಾರದ್ವಾಜ್ ಸೇರಿದಂತೆ ಇನ್ನಿತರರೂ ಈ ಚಿತ್ರವನ್ನು ಹಂಚಿಕೊಂಡಿದ್ದಾರೆ. ಫೇಸ್ ಬುಕ್‌ನಲ್ಲೂ ಚಿತ್ರ ವೈರಲ್ ಆಗಿದೆ.
ಸತ್ಯಾಂಶವೇನು?
ನಿಜಾಂಶವನ್ನು ಬೇಧಿಸಿರುವ ಆಲ್ಟ್ ನ್ಯೂಸ್, ಸಾಮಾಜಿಕ ಮಾಧ್ಯಮಗಳಲ್ಲಿ ಬಿಂಬಿಸಿರುವಂತೆ, ’ನೀಲ್ ಕಮಲ್ ಸಂಸ್ಥೆ ಈ ರೀತಿಯ ಘೋಷಣೆಯೊಂದಿಗೆ ಕಸದಬುಟ್ಟಿಯನ್ನು ಉತ್ಪಾದಿಸಿಲ್ಲ’ ಎಂದು ಸ್ಪಷ್ಟಪಡಿಸಿದೆ.
ಫೆ.22, 2019ರಲ್ಲಿ ಈ ಚಿತ್ರ ’ಪತ್ರಿಕಾ’ ಜಾಲತಾಣದಲ್ಲಿ ವರದಿಯಾಗಿದೆ. ಪುಲ್ವಾಮ ದಾಳಿಯಾದ ಹಿನ್ನೆಲೆಯಲ್ಲಿ ಯಾರೋ ಅಪರಿಚಿತರು, ’ಪಾಕಿಸ್ತಾನ ಮುರ್ದಾಬಾದ್’ ಸ್ಟಿಕ್ಕರ್‌ಗಳನ್ನು 10ರಿಂದ 12 ಕಸದಬುಟ್ಟಿಗಳ ಮೇಲೆ ಉದಯಪುರ್ ರೈಲ್ವೆ ನಿಲ್ದಾಣದಲ್ಲಿ ಅಂಟಿಸಿದ್ದಾರೆ. ಅಧಿಕಾರಿಗಳು ಸೂಚನೆ ನೀಡಿದ ಬಳಿಕ ಆ ಸ್ಟಿಕ್ಕರ್ಗಳನ್ನು ತೆರವು ಮಾಡಲಾಗಿದೆ. ಸ್ಟಿಕ್ಕರ್ ಅಂಟಿಸಿರುವ ಸಂಬಂಧ ಸ್ಥಳೀಯ ಮಾಧ್ಯಮ ’ಉದಯಪುರ್ ಟೈಮ್ಸ್’ ಕೂಡ ವರದಿ ಮಾಡಿತ್ತು. 2019ರ ವರದಿಯನ್ನು ತಿರುಚಿ, ಬೇರೊಂದು ಒಕ್ಕಣೆಯೊಂದಿಗೆ ಇತ್ತೀಚೆಗೆ ಈ ಚಿತ್ರವನ್ನು ವೈರಲ್ ಮಾಡಲಾಗಿದೆ.
ಇದನ್ನೂ ಓದಿ: ಇದು ಭಯೋತ್ಪಾದಕರನ್ನು ಬಂಧಿಸುವ ದೃಶ್ಯವಲ್ಲ!
ನೀಲ್ ಕಮಲ್ ಸಂಸ್ಥೆಯು, “ಈ ಥರದ ಯಾವುದೇ ಉತ್ಪನ್ನಗಳನ್ನು ನಾವು ತಯಾರಿಸಿಲ್ಲ. ಯಾವುದೇ ಸ್ಟಿಕ್ಕರ್‍ಗಳನ್ನೂ ಅಂಟಿಸಿಲ್ಲ” ಎಂದು ಆಲ್ಟ್ ನ್ಯೂಸ್‌ಗೆ ತಿಳಿಸಿದೆ. ಕಂಪೆನಿಯ ಹೆಸರು, ಲೋಗೋ, ಸಂಪರ್ಕ ಮಾಹಿತಿ ಮಾತ್ರ ಉತ್ಪನ್ನದ ಮೇಲೆ ಮುದ್ರಿಸಿರುವುದಾಗಿ ಸ್ಪಷ್ಟಪಡಿಸಿದೆ.


