ಸೆಪ್ಟಂಬರ್ 30 ರಂದು ಪಶ್ಚಿಮ ಬಂಗಾಳದ ಭವಾನಿಪುರ ಕ್ಷೇತ್ರಕ್ಕೆ ನಡೆಯುವ ಉಪಚುನಾವಣೆಯಲ್ಲಿ ಹಾಲಿ ಸಿಎಂ ಮತ್ತು ಟಿಎಂಸಿ ಅಭ್ಯರ್ಥಿ ಮಮತಾ ಬ್ಯಾನರ್ಜಿ ಎದುರು ಅಭ್ಯರ್ಥಿ ಹಾಕದಿರಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಸಿಎಂ ಆಗಿ ಮುಂದುವರೆಯಲು ಶಾಸಕರಾಗಿ ಆಯ್ಕೆಯಾಗಲೇಬೇಕಿದೆ. ಹಾಗಾಗಿ ಅವರು ತಮ್ಮ ಭದ್ರಕೋಟೆ ಭವಾನಿಪುರದಿಂದ ಚುನಾವಣೆಗೆ ಇಳಿಯುತ್ತಿದ್ದಾರೆ. ಇಲ್ಲಿ ಅವರಿಗೆ ಅನುಕೂಲ ಮಾಡಿಕೊಡಲು ಕಾಂಗ್ರೆಸ್ ಅಭ್ಯರ್ಥಿ ಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಕಾಂಗ್ರೆಸ್ ಪಕ್ಷವು ಒಂದು ವೇಳೆ ಅಭ್ಯರ್ಥಿ ಕಣಕ್ಕಿಳಿಸಿದರೆ ಮಮತಾ ಬ್ಯಾನರ್ಜಿಗೆ ಹಿನ್ನಡೆಯುಂಟಾಗುವ ಸಂಭವವಿದೆ. ಹಾಗಾಗಿ ಅವರ ವಿರುದ್ದ ಸ್ಪರ್ಧಿಸದಂತೆ ಹೈಕಮಾಂಡ್ ಸೂಚಿಸಿದೆ ಎಂದು ಬಂಗಾಳ ಕಾಂಗ್ರೆಸ್ ಮುಖ್ಯಸ್ಥ ಅಧೀರ್ ರಂಜನ್ ಚೌಧರಿ ತಿಳಿಸಿದ್ದಾರೆ.
2024 ರ ಲೋಕಸಭಾ ಚುಣಾವಣೆಯ ದೃಷ್ಟಿಯಿಂದಲೂ ಬಿಜೆಪಿಯನ್ನು ಸಂಘಟಿತವಾಗಿ ಎದುರಿಸಲು ಕಾಂಗ್ರೆಸ್ ಮತ್ತು ಟಿಎಂಸಿ ನೋಡುತ್ತಿವೆ. ಹಾಗಾಗಿ ಸೌಜನ್ಯದ ದೃಷ್ಟಿಯಿಂದ ಮಮತಾ ಬ್ಯಾನರ್ಜಿ ಆಯ್ಕೆಗೆ ಕಾಂಗ್ರೆಸ್ ಸಹಕರಿಸುತ್ತಿದೆ.
ಈ ಮೊದಲು ಕಾಂಗ್ರೆಸ್ ಟಿಎಂಸಿಯ ಮಮತಾ ಬ್ಯಾನರ್ಜಿ ಎದುರು ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂದು ಹಲವು ಕಾರ್ಯಕರ್ತರು ಪಟ್ಟು ಹಿಡಿದಿದ್ದರು. ಹಾಗಾಗಿ ಅಂತಿಮ ನಿರ್ಧಾರವನ್ನು ಹೈಕಮಾಂಡ್‌ಗೆ ಬಿಡಲಾಗಿತ್ತು. ಹೈಕಮಾಂಡ್ ಸ್ಪರ್ಧಿಸದಂತೆ ನಿರ್ಧಾರ ತೆಗೆದುಕೊಂಡಿದೆ ಎಂದು ಅವರು ತಿಳಿಸಿದ್ದಾರೆ.
ಇನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಡಪಕ್ಷಗಳು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದವು. ಆದರೆ ಇಬ್ಬರಿಗೂ ತೀವ್ರ ಸೋಲು ಉಂಟಾಗಿತ್ತು. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಸ್ಪರ್ಧಿಸದಿದ್ದರೆ ತಾವು ಸ್ಪರ್ಧಿಸುವುದಾಗಿ ಎಡಪಕ್ಷಗಳು ತಿಳಿಸಿದ್ದವು. ಈಗ ಕಾಂಗ್ರೆಸ್ ತೀರ್ಮಾನದ ನಂತರ ಅವರು ಯಾವ ನಿಲುವು ತೆಗೆದುಕೊಳ್ಳುತ್ತಾರೆ ಎಂಬುದು ಕುತೂಹಲ ಹುಟ್ಟಿಸಿದೆ.
ಮಾರ್ಚ್-ಏಪ್ರಿಲ್‌ನಲ್ಲಿ ನಡೆದ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತನ್ನ ಸ್ವಕ್ಷೇತ್ರ ಭವಾನಿಪುರ ಬಿಟ್ಟು, ಟಿಎಂಸಿ ತೊರೆದು ಬಿಜೆಪಿ ಸೇರಿದ್ದ ಸುವೆಂದು ಅಧಿಕಾರಿ ವಿರುದ್ಧ ನಂದಿಗ್ರಾಮದಿಂದ ಮಮತಾ ಬ್ಯಾನರ್ಜಿ ಸ್ಪರ್ಧಿಸಿದ್ದರು. ಕಡಿಮೆ ಅಂತರದಲ್ಲಿ ಸೋಲುಂಡಿದ್ದರು. ನಂದಿಗ್ರಾಮ ಫಲಿತಾಂಶದ ವಿರುದ್ಧ ಮಮತಾ ಬ್ಯಾನರ್ಜಿಯವರು ಅರ್ಜಿ ಸಲ್ಲಿಸಿದ್ದು, ವಿಚಾರಣೆ ನಡೆಯುತ್ತಿದೆ. ಇದೇ ಸಮಯದಲ್ಲಿ ತಮ್ಮ ಸಿಎಂ ಸ್ಥಾನ ಉಳಿಸಿಕೊಲ್ಳುವ ಸಲುವಾಗಿ ತಮ್ಮ ಭದ್ರಕೋಟೆ ಭವಾನಿಪುರದಿಂದ ಕಣಕ್ಕಿಳಿಯುತ್ತಿದ್ದಾರೆ.
ಸದ್ಯ ಬಂಗಾಳದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಸೆಪ್ಟಂಬರ್ 30 ರಂದು ನಡೆಯಲಿರುವ ಉಪಚುನಾವಣೆಗೆ ಟಿಎಂಸಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಅಕ್ಟೋಬರ್ 3 ರಂದು ಫಲಿತಾಂಶ ಘೋಷಣೆಯಾಗಲಿದೆ.
ಇದನ್ನೂ ಓದಿ; ಕರ್ನಾಲ್: ಮುಂದುವರೆದ ರೈತ ಪ್ರತಿಭಟನೆ, ಸರ್ಕಾರಿ ಕಚೇರಿಗಳ ಹೊರಗೆ ಜಮಾಯಿಸಿರುವ ರೈತರು



ನಮಗೆ ತಿಳಿಯಲಾರದ ಏಷ್ಟೋ ವಿಚಾರಗಳನ್ನು ತಿಳಿಸುತ್ತಿರುವ ನಿಮಗೆ ಎನ್ನ ಹೃದಯ ಪೂರ್ವಕ ಅಭಿನಂದನೆಗಳು ಸರ್.
ಇ ನಿರ್ದಾರ ಅಸೆಂಬ್ಲಿ ಚುನಾವಣೇಲಿ ತಗೋಬೇಕಾಗಿತ್ತು.