ತೇಜಸ್ವಿಯವರ ನಿಧನದ ಸುದ್ದಿಯಿದ್ದ ‘ಪ್ರಜಾವಾಣಿ’ಯಲ್ಲಿ ಆಕಸ್ಮಿಕವೆಂಬಂತೆ ಇನ್ನೊಂದು ವರದಿಯಿತ್ತು. ಅದು ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡಲು ಬಂದ ರಾಜಕಾರಣಿಗಳನ್ನು ಹೆಜ್ಜೇನು ನೊಣಗಳು ಭಾಷಣ ಮಾಡಲು ಬಿಡದೆ ಕಚ್ಚಿ ಓಡಿಸಿದ್ದು. ತೇಜಸ್ವಿ ಬದುಕಿದ್ದರೆ ಇದನ್ನು ಆನಂದದಿಂದ ಓದಿರುತ್ತಿದ್ದರು. ‘ಕರ್ವಾಲೊ’ದಲ್ಲಿ ಇಂತಹುದೇ ಸನ್ನಿವೇಶವಿದೆ. ತೇಜಸ್ವಿ ಸಾಹಿತ್ಯದಲ್ಲಿ, ಜೇನುಹುಳ ಪ್ರಾಣಿ ಪಕ್ಷಿ ನದಿ ಕಾಡ್ಗಿಚ್ಚು ಮುಂತಾದುವು, ನಿರಂಕುಶಮತಿಯೂ ಸಹಜವೂ ಆದ ತಮ್ಮ ವರ್ತನೆಯಿಂದ ಮನುಷ್ಯರನ್ನು ಕಂಗೆಡಿಸುವ ಸನ್ನಿವೇಶಗಳು ಮತ್ತೆ ಮತ್ತೆ ಬರುತ್ತವೆ. ಭೂಮಿಯ ಮೇಲಿನ ‘ಬಲಿಷ್ಠಜೀವಿ’ ಎಂದುಕೊಂಡಿರುವ ಮನುಷ್ಯರ ಹಿಡಿತಕ್ಕೆ ಸಿಗದೆ, ನಿಸರ್ಗ ಅತೀತವಾಗಿ ವರ್ತಿಸುವುದನ್ನು ಮತ್ತು ಕಂಗಾಲು ಮಾಡುವುದನ್ನು ಅವರ ಸಾಹಿತ್ಯ ವಿಚಿತ್ರ ಖುಶಿಯಲ್ಲಿ ಚಿತ್ರಿಸುತ್ತದೆ. ಇದನ್ನು ‘ಕರ್ವಾಲೊ’ನ ಹಾರುವ ಓತಿ, ‘ಚಿದಂಬರ ರಹಸ್ಯದ ಕಾಡ್ಗಿಚ್ಚು, ‘ನಿಗೂಢ ಮನುಷ್ಯರು’ ಕತೆಯ ಗುಡ್ಡದ ಕುಸಿತ, ‘ಕಿರಗೂರಿನ ಗಯ್ಯಾಳಿಗಳು’ ಕಥೆಯಲ್ಲಿ ಉರುಳಿ ಬರುವ ಹೆಬ್ಬಂಡೆ, ‘ಮಾಯಾಲೋಕ’ದ ಹೊಳೆಗಳ ಚಿತ್ರಗಳಲ್ಲಿ ನೋಡಬಹುದು. ಇಲ್ಲಿ ನಿಸರ್ಗ ಅಜೇಯವಾಗಿ ಮಾತ್ರವಲ್ಲ, ಮಾನವರಿಗೆ ಪೂರ್ತಿ ಅರ್ಥವಾಗದೆ ವಿಸ್ಮಯವಾಗಿ ಉಳಿಯುವಂತಹ ನಿಗೂಢ ಒಗಟು ಕೂಡ.

ತೇಜಸ್ವಿ ಸಾಹಿತ್ಯವು ತನ್ನದೇ ಲಯದಲ್ಲಿ ಸ್ವತಂತ್ರವಾಗಿ ವರ್ತಿಸುವ ನಿಸರ್ಗದ ವಿದ್ಯಮಾನಗಳನ್ನು, ತಾನೇ ನಿರ್ಮಿಸಿಕೊಂಡ ಕಟ್ಟುಕಟ್ಟಳೆಗಳಲ್ಲಿ ಸಿಲುಕಿರುವ ಮಾನವ ಸಮಾಜದ ಎದುರು ಮುಖಾಮುಖಿ ಮಾಡುತ್ತದೆ. ಈ ಮುಖಾಮುಖಿಯಲ್ಲಿ ಸಮಾಜ ಮತ್ತು ನಿಸರ್ಗಗಳ ಚಲನಶೀಲತೆಯನ್ನು ಗ್ರಹಿಸುತ್ತದೆ. ಪ್ರಕೃತಿಯ ಅನಿಯಂತ್ರಿತ ವಿದ್ಯಮಾನಗಳು ಜೀವಿವಿಕಾಸದ ಚರಿತ್ರೆಯುದ್ದಕ್ಕೂ ನಾಶ ಹಾಗೂ ಹೊಸಹುಟ್ಟಿನ ಲಯವನ್ನು ನಿರ್ಮಿಸಿವೆ. ಅದರ ವಿಶಾಲ ಹಾಸಿನಲ್ಲಿ ಮಾನವ ಬದುಕನ್ನಿಟ್ಟು ಅದರ ಜೀವಂತಿಕೆ ಮತ್ತು ಕ್ಷುದ್ರತೆಗಳನ್ನು ಶೋಧಿಸುತ್ತದೆ. ಈ ಶೋಧವೇ ತೇಜಸ್ವಿ ಸಾಹಿತ್ಯದ ಹೊಸ ಸಮಾಜದ ಕಲ್ಪನೆಗೂ ದಾರ್ಶನಿಕ ಹುಡುಕಾಟಕ್ಕೂ ಕಾರಣವಾಗಿದೆ.

ಆಧುನಿಕ ವಿಜ್ಞಾನವು ಜೀವವಿಕಾಸದ ಬಗ್ಗೆ ಸೃಷ್ಟಿಸಿರುವ ಜ್ಞಾನವನ್ನು ವರ್ತಮಾನದ ರಾಜಕೀಯ ಸಾಮಾಜಿಕ ಪ್ರಜ್ಞೆಯೊಂದಿಗೆ ಬೆಸೆದು ನೋಡುವ ಅಪೂರ್ವ ಪ್ರಯೋಗವನ್ನು ತೇಜಸ್ವಿ ಮಾಡಿದರು. ಹೀಗಾಗಿಯೇ ಅವರನ್ನು ಪರಿಸರವಾದಿ ಬರೆಹಗಾರ ಎಂದೊ ಜನಪ್ರಿಯ ವಿಜ್ಞಾನದ ಲೇಖಕ ಎಂದೊ ಕರೆಯುವುದು ಸರಳೀಕರಣವಾಗುತ್ತದೆ.

ನಿಗೂಢತೆಯು ನಿಸರ್ಗದಲ್ಲಿ ಮಾತ್ರವಲ್ಲ, ಮಾನವ ಬದುಕಲ್ಲೂ ಇದೆ. ‘ಅವನತಿ’ ‘ಅಬಚೂರಿನ ಪೋಸ್ಟಾಫೀಸು’ ‘ನಿಗೂಢ ಮನುಷ್ಯರು’ ‘ಕುಬಿ ಮತ್ತು ಇಯಾಲ’ ಮುಂತಾದ ಕತೆಗಳು ಇದನ್ನು ಶೋಧಿಸುತ್ತವೆ. ಮನುಷ್ಯರಿಗೆ ದಕ್ಕದೆ ಸವಾಲಿನಂತೆ ಉಳಿವ ನಿಸರ್ಗ ಹಾಗೂ ಮಾನವ ಬದುಕಿನ ನಿಗೂಢವನ್ನು ಕುತೂಹಲದಲ್ಲಿ ಹುಡುಕುತ್ತಲೇ ಇರಬೇಕು. ಈ ಹುಡುಕಾಟದಲ್ಲೆ ನಿಸರ್ಗ ಮತ್ತು ಮಾನವರ ಸೃಜನಶೀಲತೆ ಪ್ರಕಟವಾಗುತ್ತದೆ ಎನ್ನುವುದು ತೇಜಸ್ವಿ ಸಾಹಿತ್ಯದ ಆಶಯ. ಇಲ್ಲಿ ಹುಡುಕಾಟದ ಮಾನವ ಪ್ರಯತ್ನ ಮುಖ್ಯವೇ ಹೊರತು, ಅದರಿಂದ ಪಡೆಯುವ ಉತ್ತರವಲ್ಲ. ಕೆಲವೊಮ್ಮೆ ಉತ್ತರಗಳು ಸಿಗುವುದೇ ಇಲ್ಲ. ಈ ಹಿನ್ನೆಲೆಯಲ್ಲಿ ‘ನಿರುತ್ತರ’ ಎಂಬ ಅವರ ಮನೆಯ ಹೆಸರು ಸಾಂಕೇತಿಕವಾಗಿದೆ. ‘ಕರ್ವಾಲೊ’ನಲ್ಲಿ ಎಲ್ಲರೂ ಸೇರಿ ಹುಡುಕುವ ಹಾರುವ ಓತಿ ಕೊನೆಗೂ ಸಂಶೋಧಕರ ಕೈಗೆ ಸಿಕ್ಕುವುದಿಲ್ಲ; ‘ಮಾಯಾಲೋಕ’ದಲ್ಲಿ ಕೂಡ ನದಿಯ ಮೂಲವನ್ನು ಅರಸಲು ಸಾಧ್ಯವಾಗುವುದಿಲ್ಲ.

ತೇಜಸ್ವಿ ಸಾಹಿತ್ಯದಲ್ಲಿ ಬೇಟೆಯಾಡುವ ನಾಯಿ, ಮುಖ್ಯ ಪಾತ್ರವಾಗಿ ಬರುವುದನ್ನು ಇದೇ ನೆಲೆಯಲ್ಲಿ ಅರ್ಥಮಾಡಿಕೊಳ್ಳಬೇಕು. ನಿಗೂಢತೆಯನ್ನು ಬಿಡಿಸುವ ಗುಣದಿಂದ ಅವರ ಬರೆಹಕ್ಕೆ ‘ಪತ್ತೇದಾರಿತನ’ ಒದಗಿದೆ. ಈ ಪತ್ತೇದಾರಿತನವು ಆಧುನಿಕ ವಿಜ್ಞಾನದ ಸಾಹಸಗಳಿಂದ ಪ್ರೇರಿತವಾದುದು. ತೇಜಸ್ವಿ ಹದಿಹರೆಯದ ಓದುಗರ ಮೆಚ್ಚಿನ ಲೇಖಕರಾಗಲು ಇದೂ ಒಂದು ಕಾರಣ. ಆದರೆ ತಮ್ಮ ದಾರ್ಶನಿಕ ಗುಣವೇ ಅವರನ್ನು ಥ್ರಿಲ್ಲರ್ ಲೇಖಕರಾಗುವ ಅಪಾಯದಿಂದ ಪಾರುಮಾಡಿತು. ನಿಸರ್ಗದ ವಿದ್ಯಮಾನಗಳ ಹುಡುಕಾಟದಲ್ಲಿ ತನ್ಮಯವಾಗಿ ಕಳೆದುಹೋಗುವಂತೆ ಕಾಣುತ್ತಿದ್ದ ಅವರಿಗೆ, ಆಧುನಿಕ ವಿಜ್ಞಾನ ಹಾಗೂ ತಂತ್ರಜ್ಞಾನದ ಬಗ್ಗೆ ಸೆಳೆತವಿತ್ತು.

ಜೇನ್ನೊಣದ ಅಥವಾ ನಾಯಿಯ ಹಾಗೆ ಅವರ ಕಾದಂಬರಿಗಳಲ್ಲಿ ಜೀಪೋ ಸ್ಕೂಟರೋ ನೀರೆತ್ತುವ ಇಂಜಿನ್ನೋ ಒಂದು ಪಾತ್ರವಾಗಿ ಬರುವುದನ್ನು ಗಮನಿಸಬೇಕು. ಆಧುನಿಕ ವಿಜ್ಞಾನ, ತಂತ್ರಜ್ಞಾನ ಹಾಗೂ ವೈಚಾರಿಕತೆಗಳ ಒಲವು ಅವರನ್ನು ಸದಾ ಹೊಸತನ್ನು ಶೋಧಿಸುವ ಲೇಖಕನನ್ನಾಗಿಸಿಟ್ಟವು. ಯೂರೋಪಿನ ವೈಜ್ಞಾನಿಕ ಸಂಶೋಧಕರು ಮಾಡಿದ ಸಾಹಸ ಹಾಗೂ ಸಾಧನೆಗಳ ಬಗ್ಗೆ ಅವರಿಗೆ ಅಪಾರ ಗೌರವ. ಕರ್ವಾಲೊ ಒಬ್ಬ ಯೂರೋಪಿಯನ್ ಮನಸ್ಸಿನ ವೈಚಾರಿಕತೆ, ಮಾನವೀಯತೆ, ಆಧುನಿಕತೆ ಗುಣವುಳ್ಳ ವಿಜ್ಞಾನಿ ಎಂಬುದು ಗಮನಾರ್ಹ. ನೈಲ್ ನದಿಯ ಶೋಧನೆ ಮಾಡಿದ ಕಥನದಲ್ಲಿ, ಶೋಧ ಮಾಡುವ ಪ್ರಕ್ರಿಯೆಯಲ್ಲಿ ತನ್ನ ಪ್ರಾಣವನ್ನೇ ಬಲಿಗೊಟ್ಟ ಲೀವಿಂಗ್‌ಸ್ಟೋನ್ ಕುರಿತ ತೇಜಸ್ವಿಯವರ ಆದರವನ್ನು ಗಮನಿಸಬೇಕು. ಪಶ್ಚಿಮ ಘಟ್ಟಗಳ ಜೀವವೈವಿಧ್ಯದ ರಕ್ಷಣೆ, ಕನ್ನಡಕ್ಕೊಂದು ಸಾಫ್ಟ್‌ವೇರ್ ರೂಪಿಸುವುದು, ಹಕ್ಕಿಯೊಂದರ ಜೀವನ ಕ್ರಮದಲ್ಲಿ ಆಸಕ್ತಿ ತಾಳುವುದು, ಸ್ಕೂಟರನ್ನು ಬಿಚ್ಚಿ ಮತ್ತೆ ಜೋಡಿಸುವುದು-ಇವು ಅವರಿಗೆ ಪರಸ್ಪರ ವಿರುದ್ಧ ಸಂಗತಿಗಳಾಗಿಲಿಲ್ಲ. ಸಾಮಾನ್ಯವಾಗಿ ಪರಿಸರವಾದಿಗಳು ಆಧುನಿಕತೆ, ಆಧುನಿಕ ವಿಜ್ಞಾನ ಹಾಗೂ ತಂತ್ರಜ್ಞಾನದ ವಿರೋಧಿಗಳು; ಸಾಂಪ್ರದಾಯಿಕ ಸಮಾಜಕ್ಕೆ ಮರಳಿ ಹೋಗಬೇಕೆನ್ನುವವರು. ತೇಜಸ್ವಿ ಇದಕ್ಕೆ ವಿಭಿನ್ನ. ಅವರು ನಗರ ಬದುಕಿನ ಗೊಂದಲ ಕೃತಕತೆ ಬಿಟ್ಟು ಕಾಡಿಗೆ ಹೋಗಿ ನೆಲೆಸಿದ್ದರೂ-ಅಥವಾ ಹಾಗೆ ನೆಲೆಸಿದ್ದ ಕಾರಣದಿಂದಲೇ- ಅವರಿಗೆ
ನಾಡಿನ ಸೆಳೆತವಿತ್ತು. ಅವರೊಬ್ಬ ಆಧುನಿಕತೆ ಮತ್ತು ತಂತ್ರಜ್ಞಾನದ ಅವಿಮರ್ಶಾತ್ಮಕ ಆರಾಧಕರೂ ಆಗಿದ್ದರು.

ತೇಜಸ್ವಿ ಸಾಹಿತ್ಯದಲ್ಲಿ ದೊಡ್ಡ ಶಕ್ತಿಸ್ರೋತವಾಗಿರುವ ವೈಚಾರಿಕತೆ ಹಾಗೂ ಸಂಪ್ರದಾಯ ವಿರೋಧವನ್ನು ಇಲ್ಲೇ ವಿಶ್ಲೇಷಿಸಬೇಕು. ಅವರಿಗೆ ಸಾಂಪ್ರದಾಯಿಕ ಜಾತಿಧರ್ಮಗಳ ಬಗ್ಗೆ ಅತೀವ ಆಕ್ರೋಶವಿತ್ತು. ಅವು ಸೃಜನಶೀಲವಾದುದನ್ನು ಹುಟ್ಟಿಸಲಾರವು; ಮಾತ್ರವಲ್ಲ, ಸೃಜನಶೀಲ ವ್ಯಕ್ತಿಗಳು ಹೊಸಪ್ರಯೋಗ ಮಾಡುವುದನ್ನು ನಿರ್ಬಂಧಿಸುತ್ತವೆ ಎಂದು ನಂಬಿದ್ದರು. ನಾಗರಿಕ ಸಮಾಜ ಸೃಷ್ಟಿಸಿಕೊಂಡಿರುವ ಶಿಷ್ಟಾಚಾರ ಹಾಗೂ ಯಾಂತ್ರಿಕ ಶಿಸ್ತುಗಳು ಕೂಡ ಈ ಸಂಪ್ರದಾಯದ ಭಾಗವಾದ್ದರಿಂದ, ಅವರು ಅವನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸುತ್ತಿದ್ದರು. ಅವನ್ನು ಉಲ್ಲಂಘಿಸುವುದು ಸೃಜನಶೀಲತೆ ಪ್ರಕಟಿಸುವ ವಿಧಾನವೆಂದು ನಂಬಿದ್ದರು. ಇದನ್ನು ಸೃಜನಶೀಲ ಸೀಮೋಲ್ಲಂಘನೆ ಎನ್ನಬಹುದು.

ಈ ಹಿನ್ನೆಲೆಯಲ್ಲಿ ಅವರ ಕತೆ-ಕಾದಂಬರಿಗಳಲ್ಲಿ ಬರುವ ನಿರಂಕುಶಮತಿಯರಾದ ತರುಣ-ತರುಣಿಯರ ಪಾತ್ರಗಳನ್ನು ಗಮನಿಸಬೇಕು. ಅವರ ಸಾಹಿತ್ಯದಲ್ಲಿ ಜನಜಂಗುಳಿಯು ಯಾವಾಗಲೂ ಜಡ ಮತ್ತು ನೇತ್ಯಾತ್ಮಕ; ಗುಂಪಿನಲ್ಲಿ ಸೇರದೆ ಒಂಟಿಯಾಗಿರುವ ಸ್ವತಂತ್ರ ಮನೋಧರ್ಮದವರು ವಿಶಿಷ್ಟ ವ್ಯಕ್ತಿಗಳು; ಇವರು ತಮಗೆ ಸರಿಕಂಡಂತೆ ಚಿಂತಿಸುವವರು ಹಾಗೂ ಬದುಕುವರು; ವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಊರು ಮನೆ ಬಿಟ್ಟು ಹೊರ ನಡೆದವರು; ಸಂಸಾರದ ನಿತ್ಯ ರಗಳೆಯಿಂದ ತಪ್ಪಿಸಿಕೊಂಡ ಅಲೆಮಾರಿಗಳು; ಲೋಕದ ಕಣ್ಣಲ್ಲಿ ಪೋಲಿ ಎನಿಸಿಕೊಂಡ ಸಾಮಾಜಿಕವಾಗಿ ಪ್ರತಿಷ್ಠೆಯಿಲ್ಲದವರೇ ಅವರ ಕಥಾನಾಯಕರು; ಇಂತಹವರಿಂದಲೇ ಹೊಸತರ ಸೃಷ್ಟಿ ಸಾಧ್ಯ ಎಂದು ತೇಜಸ್ವಿ ಸಾಹಿತ್ಯ ಧ್ವನಿಸುತ್ತದೆ. ಅಲ್ಲಿ ಪ್ರಯಾಣ ಅಥವಾ ಸುತ್ತಾಟವು ಸೃಜನಶೀಲ ಸಂಗತಿಯಾಗಿದೆ. ನಗರ ಸಂಸ್ಕೃತಿಯಿಂದ ತೇಜಸ್ವಿ ಕಾಡಿನ ಪರಿಸರಕ್ಕೆ ಬರಲು ಇದೂ ಕಾರಣ.

ತಮ್ಮಿಚ್ಛೆಯಂತೆ ಹಾರುವ ಬದುಕುವ ಹಕ್ಕನ್ನು ಚಲಾಯಿಸುವ ಹಕ್ಕಿಗಳು ತೇಜಸ್ವಿಯವರಿಗೆ
ಪ್ರತೀಕಗಳಾಗಿರುವುದರಿಂದಲೇ, ಅವರು ಅವುಗಳ ಬಗ್ಗೆ ಮತ್ತೆಮತ್ತೆ ಬರೆಯುತ್ತಾರೆ ಎಂದು ಕೆ. ಪುಟ್ಟಸ್ವಾಮಿ ವ್ಯಾಖ್ಯಾನಿಸಿರುವರು. ಇದು ದಿಟ. ತೇಜಸ್ವಿಯವರು ಪರಿಸರದ ಬಗ್ಗೆ ಬರೆಯುವುದಕ್ಕೂ ಅವರ ಸಾಮಾಜಿಕ ಬಂಡುಕೋರತನಕ್ಕೂ ಸುಪ್ತ ಸಂಬಂಧಗಳಿವೆ. ಇವೆರಡೂ ಆಯಾಮಗಳಲ್ಲಿ ಅವರ ಜೀವನ ಮೀಮಾಂಸೆ ಅಡಗಿದೆ. ಅವರ ಬಂಡುಕೋರತನವು ಅವರು ಕನ್ನಡದ ಇಬ್ಬರು ದೊಡ್ಡ ಲೇಖಕರಾದ ಕುವೆಂಪು ಹಾಗೂ ಕಾರಂತರಿಂದ ಪಡೆದ ಕಸುವಾಗಿದೆ. ಜಾತ್ಯತೀತವಾಗಿ ಬದುಕುವ ಮತ್ತು ಸಮಾಜ ಹಾಕುವ ಪ್ರತಿಬಂಧಗಳಾಚೆ ಸ್ವತಂತ್ರವಾಗಿ ಚಿಂತಿಸುವ ಗುಣವನ್ನು ತೇಜಸ್ವಿ ಇವರಿಬ್ಬರಿಂದಲೂ ಪಡೆದರು. ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಕರೆಯನ್ನು ತೇಜಸ್ವಿ ತಮ್ಮದೇ ರೀತಿಯಲ್ಲಿ ಬದುಕಿದರು.

ತೇಜಸ್ವಿ ಮೂಲತಃ ದಾರ್ಶನಿಕ ಹುಡುಕಾಟದ ಲೇಖಕರಾದರೂ ಬರೆಹವನ್ನು ಜಟಿಲಗೊಳಿಸಲಿಲ್ಲ. ಇದಕ್ಕೆ ಒಂದು ಕಾರಣ, ಬದುಕನ್ನು ತೇಜಸ್ವಿ ವ್ಯಂಗ್ಯವಾಗಿ ತಮಾಶೆಯಲ್ಲಿ ನೋಡುತ್ತ ಸೃಷ್ಟಿಸಿರುವ ಭಾಷೆ ಮತ್ತು ಕಥನಶೈಲಿ. ಅವರ ಸಾಹಿತ್ಯದಲ್ಲಿನ ಈ ವಿನೋದ ಪ್ರಜ್ಞೆಯು ವ್ಯವಸ್ಥೆಯಲ್ಲಿ ಅಡಗಿಕೊಂಡಿರುವ ವೈರುಧ್ಯಗಳನ್ನು ಗುರುತಿಸುವ ಮತ್ತು ವಿಮರ್ಶಿಸುವ ಸಾಧನವಾಗಿ ಒದಗಿತು; ದುರ್ಭರ ಪರಿಸ್ಥಿತಿಯಲ್ಲೂ ಬದುಕನ್ನು ಪಾಸಿಟಿವ್ ಆಗಿ ನೋಡುವ ದೃಷ್ಟಿಕೋನವಾಗಿ ಕೆಲಸ ಮಾಡಿತು; ಬರೆಹಕ್ಕೆ ಲವಲವಿಕೆ ತಂದುಕೊಟ್ಟಿತು. ಅವರ ಜನಪ್ರಿಯತೆಯು ಸಾಂಪ್ರದಾಯಿಕ ಮನೋಧರ್ಮಕ್ಕೆ ಬದಲು, ವೈಚಾರಿಕ ವೈಜ್ಞಾನಿಕ ಹಾಗೂ ಜೀವನಪ್ರೀತಿಯ ಮೌಲ್ಯಗಳನ್ನು ತುಂಬಿತು. ಹೊಸತಲೆಮಾರಿನ ಬಹಳಷ್ಟು ಮಂದಿಯಲ್ಲಿ ಸಾಹಿತ್ಯಾಸಕ್ತಿ ಉಳಿದುಕೊಂಡಿದ್ದರೆ ಅದಕ್ಕೆ ಕಾರಣ, ತೇಜಸ್ವಿ ಬರೆಹವು ಅವರಿಗೆ ಯಾವುದೊ ಹಂತದಲ್ಲಿ ಪಠ್ಯವಾಗಿದ್ದುದೇ ಆಗಿದೆ. ಈ ಹೊತ್ತಿಗೂ ಹೊಸತಲೆಮಾರಲ್ಲಿ ಸಾಹಿತ್ಯಾಸಕ್ತಿ ಹುಟ್ಟಿಸಬೇಕೆಂದಿದ್ದರೆ, ತೇಜಸ್ವಿಯವರ ಪುಸ್ತಕಗಳ ಮೂಲಕ ಅದನ್ನು ಶುರುಮಾಡಬಹುದು. ತೇಜಸ್ವಿ ಅವರಂತೆ ಏಕಕಾಲಕ್ಕೆ ಖುಷಿಗಾಗಿ ಓದುವ ಓದುಗರಿಗೂ ಗಂಭೀರ ಜಿಜ್ಞಾಸೆ ಮಾಡುವ ಚಿಂತಕರಿಗೂ ಸಲ್ಲುವ ದ್ವಿಸ್ತರದ ಬರೆಹ ಮಾಡಿ ಯಶ ಕಂಡವರು ಕಡಿಮೆ.

ತೇಜಸ್ವಿ ಸಾಹಿತ್ಯದಲ್ಲಿ, ಬದುಕಿನ ದುರ್ಭರ ಸನ್ನಿವೇಶದಲ್ಲೂ ಚೈತನ್ಯ ಪ್ರಕಟಿಸುವ ಸಾಮಾನ್ಯರಿದ್ದಾರೆ. ಆದರೆ ಅವರ ಬರೆಹವು ಈ ದುರ್ಭರತೆಗೆ ಕಾರಣವಾಗಿರುವ ಊಳಿಗಮಾನ್ಯ ಪದ್ಧತಿಯನ್ನು ವಿಮರ್ಶಾತ್ಮಕವಾಗಿ ಕಾಣಿಸುವುದಿಲ್ಲ. ಕುವೆಂಪು ಕಾದಂಬರಿಗಳು ಸಾಮಾನ್ಯರ ಚೈತನ್ಯಶೀಲತೆ ಪ್ರಕಟಿಸುವಾಗ, ಅವರ ಬದುಕನ್ನು ಆವರಿಸಿರುವ ಆರ್ಥಿಕ ಸಾಮಾಜಿಕ ಯಜಮಾನಿಕೆಯ ಕ್ರೌರ್ಯದ ಹಿನ್ನೆಲೆಯನ್ನು ತಪ್ಪದೆ ಚಿತ್ರಿಸುತ್ತವೆ. ವಿಶಿಷ್ಟ ವ್ಯಕ್ತಿಗಳ ಚೈತನ್ಯಶೀಲತೆಯ ಬಗ್ಗೆ ಆಸ್ಥೆಯಿದ್ದ ತೇಜಸ್ವಿ ಅವರಿಗೆ, ಸಮಾಜವನ್ನು ತನ್ನ ಸಂಘಟಿತವಾದ ಕ್ರಿಯೆಯಿಂದ ಬದಲಾಯಿಸುವ ಸಾಮೂಹಿಕ ಚಳುವಳಿಯಲ್ಲಾಗಲಿ ರಾಜಕೀಯ ಕ್ರಿಯೆಯಲ್ಲಾಗಲಿ ವಿಶೇಷ ನಂಬಿಕೆ ಇರಲಿಲ್ಲ ಎಂತಲೇ ಅವರ ಬರೆಹದಲ್ಲಿ ಚಳುವಳಿಗಾರರು ವ್ಯಂಗ್ಯಚಿತ್ರಗಳಾಗಿ ಕಾಣಿಸುತ್ತಾರೆ. ಮೇಲಾಗಿ ಅವರ ಸಾಹಿತ್ಯದಲ್ಲಿ ಸಮಾಜದ ಕಟ್ಟುಪಾಡು ಮೀರಿ ಚೈತನ್ಯ ಪ್ರಕಟಿಸುವ ವ್ಯಕ್ತಿಗಳೂ ಸಾಮಾನ್ಯವಾಗಿ ಗಂಡಸರು. ಇದನ್ನು ಮೀರಲೆಂದೊ ಏನೊ ಮಹಿಳೆಯರೆ ನಾಯಕಿಯರಾಗುವ ಕೃತಿಗಳನ್ನು ಕೊನೆಯ ಘಟ್ಟದಲ್ಲಿ ರಚಿಸಿದರೂ, ಅದು ಅವರ ಸಹಜ ಲಯಗಾರಿಕೆಯ ಬರೆಹವೆನಿಸುವುದಿಲ್ಲ. ಯೂರೋಪಿನ ಆಧುನಿಕತೆ ವೈಚಾರಿಕತೆ ವೈಜ್ಞಾನಿಕ ಶೋಧಕ ಗುಣ ಇವುಗಳ ಬಗ್ಗೆ ಒಲವಿದ್ದ ತೇಜಸ್ವಿ ಅವರಿಗೆ, ಯೂರೋಪು ತನ್ನ ಬಂಡವಾಳಶಾಹಿ ವ್ಯವಸ್ಥೆಯ ಭಾಗವಾಗಿ ಹೇಗೆ ಬಡದೇಶಗಳ ಸಂಪತ್ತಿನ ದೋಚುವಿಕೆಗೂ ಹಿಂಸೆಗೂ ಕಾರಣವಾದ ಚರಿತ್ರೆಯ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಯೂರೋಪಿನ ಬಗ್ಗೆ ಅವರೆಷ್ಟು ಪಾಸಿಟಿವ್ ಆಗಿದ್ದರು ಎಂದರೆ, ಪ್ರಸ್ತುತ ಭಾರತದ ರಾಜಕಾರಣದ ಬಗ್ಗೆ ವಿಮರ್ಶೆಗೆ ಅದೊಂದು ನಿಕಷವಾಗಿತ್ತು. ಕಾರಂತರ ‘ಅಪೂರ್ವ ಪಶ್ಚಿಮ’ದ ಪರಿಕಲ್ಪನೆಯೂ ಇಂತಹುದೇ. ಅವರ ‘ತಬರನ ಕತೆ’ಯು ಮಾನವೀಯ ಸಂವೇದನೆ ಕಳೆದುಕೊಂಡಿರುವ ಭಾರತೀಯ ಆಡಳಿತಶಾಹಿಯನ್ನು ವಿಮರ್ಶಿಸುತ್ತಲೇ, ಪರೋಕ್ಷವಾಗಿ ವಸಾಹತುಶಾಹಿ ಕಾಲದ ಆಡಳಿತ ವ್ಯವಸ್ಥೆಯ ಬಗ್ಗೆ ಸಣ್ಣದಾಗಿ ಮೂಡಿಸುವ ಮೆಚ್ಚುಗೆಯನ್ನು ಗಮನಿಸಬೇಕು.

ಕಳೆದರ್ಧ ಶತಮಾನದ ಕರ್ನಾಟಕದ ಬದುಕಿನಲ್ಲಿ ತಮ್ಮ ಬರೆಹ ಮಾತು ಕ್ರಿಯೆಗಳ ಮೂಲಕ ವಾಗ್ವಾದ ಹುಟ್ಟಿಸಿ, ಜನರ ಮನಸ್ಸನ್ನು ಕಟ್ಟಿದ ತೇಜಸ್ವಿ, ನಂಜುಂಡಸ್ವಾಮಿ, ಲಂಕೇಶ್, ಕೆ. ರಾಮದಾಸ್, ಅನಂತಮೂರ್ತಿ, ಕಾರ್ನಾಡ್ ಒಬ್ಬೊಬ್ಬರಾಗಿ ನಿರ್ಗಮಿಸಿದರು. ಸದಾ ತುಂಟತನದ ವ್ಯಂಗ್ಯದಲ್ಲಿ ಲೋಕವನ್ನು ನೋಡುತ್ತ, ಜೀವಂತಿಕೆಯಿಂದ ಬರೆಯುತ್ತ, ಓದುಗರನ್ನು ವ್ಯಾಮೋಹಕ್ಕೆ ಒಳಪಡಿಸಿದ್ದ ತೇಜಸ್ವಿಯವರ ನಿರ್ಗಮನ, ಒಂದು ದೊಡ್ಡ ಶೂನ್ಯವನ್ನು ಸೃಷ್ಟಿಸಿತು. ತಮಗನಿಸಿದ್ದನ್ನು ನೇರವಾಗಿ ಹೇಳುತ್ತಿದ್ದ, ನಾಗರಿಕ ಶಿಷ್ಟಾಚಾರಗಳನ್ನು ಗೇಲಿ ಮಾಡುತ್ತಿದ್ದ, ಸಭೆಗಳನ್ನು ದೂರವಿಟ್ಟಿದ್ದ, ನಗರಗಳನ್ನು ಇಷ್ಟಪಡದಿದ್ದ, ವಿದೇಶಿ ಪ್ರವಾಸಕ್ಕೆ ಬಯಸದ, ಕೆಲವೊಮ್ಮೆ ಅಸೂಕ್ಷ್ಮವಾಗಿ ವಾದ ಮಾಡುತ್ತಿದ್ದ ಹಾಗೂ ತಮಗೆ ಸರಿಕಂಡಂತೆ ಬದುಕಿದ ತೇಜಸ್ವಿ, ಕರ್ನಾಟಕ ಕಂಡ ವಿಶಿಷ್ಟ ಸಾರ್ವಜನಿಕ ವ್ಯಕ್ತಿತ್ವ. ಖಾಸಗಿ ಬದುಕು ಹಾಗೂ ವ್ಯಕ್ತಿವಿಶಿಷ್ಟತೆಯನ್ನು ರಕ್ಷಿಸಿಕೊಳ್ಳಲೆಂದೇ ಒರಟುತನ ರೂಢಿಸಿಕೊಂಡಂತಿದ್ದ ಅವರು, ಆಳದಲ್ಲಿ ಸೂಕ್ಷ್ಮ ಸಂವೇದನೆಯ ಮಾನವೀಯ ಲೇಖಕರಾಗಿದ್ದರು. ಸಾಹಿತ್ಯ ಸಂವೇದನೆಯಿಲ್ಲದ ಓದುಗರು ರಾಜಕೀಯ ಸಿದ್ಧಾಂತಕ್ಕಾಗಿ ಹೆಣೆದ ಬರೆಹಗಳನ್ನು ತಲೆಯ ಹೊತ್ತು ತಿರುಗುತ್ತಿರುವ ಹೊತ್ತಲ್ಲಿ, ಅವರ ಸಾಹಿತ್ಯವು ನಿರ್ವಹಿಸಿರುವ ಸಾಂಸ್ಕೃತಿಕ ಹೊಣೆಗಾರಿಕೆ ಬಹಳ ದೊಡ್ಡದು.

  • ಪ್ರೊ. ರಹಮತ್ ತರೀಕೆರೆ

ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ.


ಇದನ್ನೂ ಓದಿ: ಪೂರ್ಣಚಂದ್ರ ತೇಜಸ್ವಿ ಜನ್ಮದಿನ: ಅವರ ಜೀವನದ ಕುರಿತೊಂದು ಆಪ್ತ ಬರಹ..

LEAVE A REPLY

Please enter your comment!
Please enter your name here