Homeಕರ್ನಾಟಕವೈಚಾರಿಕತೆಯನ್ನು ಕಡೆಗಣಿಸಿ ಅಬ್ಬರಿಸುವ ಜನಪ್ರಿಯ ನಟರ ಸಿನಿಮಾದಾಚೆಗಿನ ವಿಚಾರ

ವೈಚಾರಿಕತೆಯನ್ನು ಕಡೆಗಣಿಸಿ ಅಬ್ಬರಿಸುವ ಜನಪ್ರಿಯ ನಟರ ಸಿನಿಮಾದಾಚೆಗಿನ ವಿಚಾರ

- Advertisement -
- Advertisement -

ಸಂಸ್ಕೃತಿಯ ಎಳೆಗಳನ್ನು ಚಿತ್ರಿಸುವ ಮಾಧ್ಯಮಗಳಲ್ಲಿ ಸಿನಿಮಾ ಕೂಡ ಒಂದು. ಕನ್ನಡದಲ್ಲಿ ವೈಚಾರಿಕತೆ ಮತ್ತು ಅರಿವಿನ ನೆಲೆಯನ್ನು ವಿಸ್ತರಿಸುವಂತಹ ಸಿನಿಮಾಗಳ ಸಂಖ್ಯೆ ಇತ್ತೀಚೆಗೆ ಅಷ್ಟೇನೂ ಆಶಾದಾಯಕವಾಗಿಲ್ಲ. ಬಹುಶಃ ಸಿನಿಮಾ ನಿರ್ಮಾಣವೆಂಬುದು ಹಣ ಹೂಡಿಕೆ ಮತ್ತು ಹಣಗಳಿಕೆಯ ದೊಡ್ಡ ವ್ಯವಹಾರವಾಗಿ ಸಂಪೂರ್ಣವಾಗಿ ಬದಲಾಗಿದ್ದು ಇದಕ್ಕೆ ಮುಖ್ಯ ಕಾರಣವಾಗಿರಲೂಬಹುದು. ಆದರೆ ಕಲಾವಿದರೂ ಕೂಡ ವ್ಯಕ್ತಿಗತವಾಗಿ ವೈಚಾರಿಕತೆಯಿಂದ ದೂರ ಉಳಿದಿದ್ದಾರೆ ಎಂಬುದನ್ನು ಇತ್ತೀಚೆಗೆ ನಡೆದ ಕೆಲ ಘಟನೆಗಳು ಸ್ಪಷ್ಟಪಡಿಸುತ್ತವೆ. ಈಚೆಗೆ ಜನಪ್ರಿಯ ನಟರು, ಪತ್ರಕರ್ತರು ಮತ್ತು ಇತರರ ನಡುವಿನ ವಾಗ್ವಾದಗಳಲ್ಲಿ ಸಮಕಾಲೀನ ಸಂಸ್ಕೃತಿಯನ್ನು ಒರೆಗೆ ಹಚ್ಚುವ ಮಾತುಗಳು ಕೇಳಿಬಂದವು.

ನಟ ದರ್ಶನ್ ಪತ್ರಕರ್ತ ಇಂದ್ರಜಿತ್‌ರೊಂದಿಗಿನ ತಮ್ಮ ವಾಗ್ವಾದದಲ್ಲಿ ಆಡಿದ ಮಾತುಗಳು ಏನನ್ನು ಧ್ವನಿಸಿದವು ಎಂದು ನೋಡಬೇಕಿದೆ. ತಾನು ಹಲ್ಲೆ ಮಾಡಿರುವುದನ್ನು, ’ನಿಜಕ್ಕೂ ತನ್ನ ಅಪ್ಪನಿಗೆ ಹುಟ್ಟಿದವನಾಗಿದ್ದರೆ’ ಇಂದ್ರಜಿತ್ ಸಾಬೀತುಮಾಡಲಿ ಎಂದು ಅವರು ಹೇಳುತ್ತಾರೆ. ಈ ಮಾತಿನಲ್ಲಿರುವ ಗಂಡಾಳ್ವಿಕೆಯ ಧ್ವನಿಯ ಪ್ರಕಾರ ಒಬ್ಬ ಮಗಳು ಅಥವಾ ಮಗ ತನ್ನ ಅಮ್ಮನ ಗುರುತು/ಐಡೆಂಟಿಟಿಯ ಮೂಲಕವಷ್ಟೇ ಬದುಕಿದರೆ ಯಾವ ಕಾರಣಕ್ಕೂ ಸಾಲದು! ಈ ಮಾತು ಒಂದು ಮಗುವಿನ ಹುಟ್ಟು ಬೆಳವಣಿಗೆ ಮತ್ತು ವ್ಯಕ್ತಿತ್ವ ವಿಕಸನದಲ್ಲಿ ತಾಯಿಯ ಪಾತ್ರ ಮತ್ತು ಪಾಲುದಾರಿಕೆಯನ್ನು ಅಲ್ಲಗಳೆದಂತೆ ತೋರುತ್ತದೆ. ತನ್ನ ಜೈವಿಕ ತಂದೆ ಗೊತ್ತಿಲ್ಲದೆ ಬೆಳೆದ ಮಕ್ಕಳು ತುಂಬಾ ಇರಬಹುದು. ಅದಾವುದನ್ನೂ ಪರಿಗಣಿಸದ ಮೇಲಿನ ಹೇಳಿಕೆ ಹೆಣ್ಣಿನ
ಪ್ರೇಮ-ಕಾಮ ಭಾವನಾತ್ಮಕ ಸಂಬಂಧಗಳ ಸ್ವಾತಂತ್ರ್ಯವನ್ನು ನಿರಾಕರಿಸಿ ಆಕೆಯನ್ನು ಗುಲಾಮಗಿರಿಗೆ ಕಟ್ಟಿಹಾಕಿರುವುದರ ಪುರುಷಕೇಂದ್ರಿತ ಮಾನಸಿಕತೆಯ ಗುರುತಾಗಿದೆ.

ಹೆಣ್ಣಿನ ಇಡೀ ವ್ಯಕ್ತಿತ್ವ ಸಾಧನೆ-ಸಿದ್ಧಿಗಳನ್ನು ಗಂಡಿನ ಮೂಲಕವೇ ವ್ಯಾಖ್ಯಾನಿಸಲು ಪ್ರಯತ್ನಿಸಿದ ಗಂಡಾಳ್ವಿಕೆ ವ್ಯವಸ್ಥೆಯ ದಬ್ಬಾಳಿಕೆ ಇಲ್ಲಿ ಕಾಣುತ್ತದೆ. ಇನ್ನೊಂದೆಡೆ ತಂದೆ ಮತ್ತು ಮಕ್ಕಳು, ತಮ್ಮ ಸಂಬಂಧವನ್ನು ಒಪ್ಪಿಕೊಂಡಿದ್ದಾಗ (ಜೈವಿಕ ಸಂಬಂಧವಾಗಿರದಿದ್ದರೂ ಕೂಡ), ಆ ಸಂಬಂಧದ ಘನತೆಯನ್ನು, ಅದನ್ನು ಪೋಷಿಸಿಕೊಳ್ಳಲು ಅವರಿಗಿರುವ ಸ್ವಾತಂತ್ರ್ಯವನ್ನು ಪ್ರಶ್ನಿಸುವ ಮತ್ತು ಅವಮಾನಿಸುವ ಕ್ರಿಯೆ ಇಂಥ ಹೇಳಿಕೆಗಳಲ್ಲಿ ಕಾಣುತ್ತದೆ. ಮತ್ತೊಂದೆಡೆ, ’ಅಪ್ಪನಿಗೆ ಹುಟ್ಟಿದ್ದು ನಿಜವಿದ್ದರೆ’ ಎನ್ನುವ ಮಾತು ವ್ಯಕ್ತಿಯೊಬ್ಬನ ಮೇಲೆ ಎಸಗುವ ಮಾನಸಿಕ ಕ್ರೌರ್ಯ ತೀವ್ರವಾದದ್ದು. ತಾನು ಯಾರನ್ನು ತಂದೆ ಎಂದುಕೊಂಡಿದ್ದಾನೆಯೋ ಆತನೇ ಜೈವಿಕವಾಗಿ ತನ್ನ ತಂದೆಯಾಗಿರುವುದು ಅಥವಾ ಆಗಿರದಿರುವುದು ವ್ಯಕ್ತಿಯೊಬ್ಬನ ನಿಯಂತ್ರಣದಲ್ಲಿರುವ ವಿಷಯವೇ? ಇಲ್ಲವೆಂದಾದರೆ, ವ್ಯಕ್ತಿಯೊಬ್ಬನ ನಿಯಂತ್ರಣದಲ್ಲಿರದ ಸಂಗತಿಯನ್ನಿಟ್ಟುಕೊಂಡು ಅವನನ್ನು ಅವಮಾನಿಸುವುದು ಅಸ್ಪೃಶ್ಯತೆಯ ಆಚರಣೆಯಂತೆಯೇ ಒಂದು ಅಪರಾಧವಾಗುತ್ತದೆ. ಇದೆಲ್ಲದರ ಹೊರತಾಗಿಯೂ, ಇಲ್ಲಿಯ ಸವಾಲಿಗೆ ಉತ್ತರವಾಗಿ ತನಗೆ ಜನ್ಮ ನೀಡಿದ್ದು ತನ್ನ ಸಮಾಜ ಸಮ್ಮತ ತಂದೆಯೇ ಎಂದು ವ್ಯಕ್ತಿಯೊಬ್ಬ ಖಚಿತಪಡಿಸುತ್ತಾನೆ ಎಂದುಕೊಳ್ಳೋಣ. ವ್ಯಕ್ತಿಯೊಬ್ಬ ಉತ್ತಮ ನಾಗರಿಕನಾಗಲು ಅಷ್ಟು ಸಾಕೆ? ಅವನ ಉಳಿದೆಲ್ಲಾ ಅನ್ಯಾಯ ದುರ್ವರ್ತನೆಗಳನ್ನು ಅದು ಮಾನ್ಯಗೊಳಿಸುತ್ತದೆಯೇ? ಈ ಮಾತುಗಳು ಎಂಥ ವೈಚಾರಿಕತೆ ಮತ್ತು ಮೌಲ್ಯವ್ಯವಸ್ಥೆಯನ್ನು ಪ್ರತಿಪಾದಿಸುತ್ತಿವೆ?

ಇನ್ನು, “ನಮ್ಮನ್ನು ನಮ್ಮ ಅಪ್ಪಂದಿರು ಗಂಡಸರನ್ನಾಗಿಯೇ ಹುಟ್ಟಿಸಿರುವುದು; ಗಾಂಡುಗಳನ್ನಾಗಿ ಅಲ್ಲ ಎಂದು ದರ್ಶನ್ ಹೇಳುತ್ತಾರೆ. ಗಂಡಸಾದ್ದರಿಂದ ನನ್ನ ಮೇಲೆ ನಡೆಯುವ ಅನ್ಯಾಯ ದಬ್ಬಾಳಿಕೆಗಳನ್ನು ಎದುರಿಸಬಲ್ಲೆ ಎನ್ನುವ ಅರ್ಥ ಇಲ್ಲಿದೆ. ಆದರೆ ಅದೇ ರಭಸದಲ್ಲಿ ಟ್ರಾನ್ಸ್ ಲಿಂಗಿಗಳು ಅಥವಾ ಲೈಂಗಿಕ ಭಿನ್ನಾಸಕ್ತರು, ಮಹಿಳೆಯರು ತಮ್ಮ ಮೇಲಾಗುವ ಅನ್ಯಾಯ ದಬ್ಬಾಳಿಕೆ ಕ್ರೌರ್ಯಗಳನ್ನು ಮೌನವಾಗಿ ಸಹಿಸಿಕೊಳ್ಳುವುದು ಅನಿವಾರ್ಯ ಎನ್ನುವ ಧ್ವನಿಯನ್ನೂ ಈ ಮಾತು ಹೊರಡಿಸುತ್ತಿದೆ. ಈ ಮಾತಿನ ಹಿಂದಿರುವ ಧ್ವನಿ ನಮ್ಮನ್ನು
ನಾಗರಿಕತೆಯ ಕಾಲಘಟ್ಟದಿಂದ ಬಹು ಹಿಂದಕ್ಕೆ ತಳ್ಳುತ್ತದೆ. ಇಲ್ಲೂ ಕೂಡ ಗಂಡಸಲ್ಲದವರೆಲ್ಲ ಕನಿಷ್ಠ, ಕೀಳು, ದುರ್ಬಲ ಎಂಬ ಅಪ್ರಜ್ಞಾಪೂರ್ವಕ ಆದರೆ ಆಳವಾಗಿ ಬೇರೂರಿರುವ ಪೂರ್ವಾಗ್ರಹದ ಮನಸ್ಥಿತಿ ಕೆಲಸ ಮಾಡಿದೆ.

ನಿರ್ಮಾಪಕರು ಮತ್ತು ತಮ್ಮ ನಡುವಿನ ವಿವಾದದಲ್ಲಿ ಭಾಗೀದಾರರರಾಗಿದ್ದ ಮಹಿಳೆಯ ಬಗ್ಗೆ ಮಾತನಾಡುತ್ತಾ ‘ಒಬ್ಬ ಹೆಣ್ಣಾಗಿ ಹೀಗೆ ನಡೆದುಕೊಳ್ಳುವುದು ಎಷ್ಟು ಸರಿ?’ ಎಂದು ಈ ನಟ ಪ್ರಶ್ನಿಸುತ್ತಾರೆ. ಅಂದರೆ ಗಂಡಾಗಿದ್ದರೆ ಹೇಗೆ ಬೇಕಾದರೂ ನಡೆದುಕೊಳ್ಳಬಹುದೇ ಎಂಬ ಪ್ರತಿಪ್ರಶ್ನೆಯನ್ನು ಅದು ಹುಟ್ಟಿಸುತ್ತದೆ. ಆಕೆ ‘ಸತ್ಯಗಳನ್ನು ಬಹಿರಂಗಪಡಿಸಲಿ; ಆಕೆಗೆ ಬೇಕಾದ ಎಲ್ಲ ರಕ್ಷಣೆಯನ್ನು ನಾನೇ ನೀಡುತ್ತೇನೆ’ ಎಂಬರ್ಥದಲ್ಲಿ ಔದಾರ್ಯದಿಂದ ಕಾಯ್ವ ಕೃಪಾಲುವಿನಂತೆ ಭರವಸೆ ನೀಡುತ್ತಾರೆ. ಕಾಯುವ ಕೃಪಾಲುವಿನ ಔದಾರ್ಯಕ್ಕಿಂತ ಅದರೊಳಗಿರುವ ಗೌಡಿಕೆಯ ದನಿ ಯಾಕೋ ಅಸಹನೀಯವೆಂಬಂತೆ ಕಾಣುತ್ತದೆ. ಆಕೆ ತಪ್ಪಿತಸ್ಥಳೂ ಇರಬಹುದು. ಆ ಪ್ರಶ್ನೆ ಬೇರೆ. ಆದರೆ ಅರ್ಧಕೋಟಿಯಷ್ಟು ಅನುಯಾಯಿಗಳನ್ನು ಹೊಂದಿರುವ ಒಬ್ಬ ಜನಪ್ರಿಯ ಕಲಾವಿದ ಸಾರ್ವಜನಿಕವಾಗಿ ಮಾತನಾಡುವಾಗ ಜಂಡರ್ ಸೆನ್ಸಿಟಿವಿಟಿಯನ್ನು ಹೊಂದಿರದಿದ್ದರೆ ಅದು ಸಾರ್ವಜನಿಕವಾಗಿ ಬೀರುವ ದುಷ್ಪರಿಣಾಮದ ಪ್ರಶ್ನೆ ಇಲ್ಲಿ ಮುಖ್ಯವಾಗಿದೆ.

ಲಿಂಗಾಧಾರಿತ ತಾರತಮ್ಯವನ್ನು ಸಂಸ್ಕೃತಿಯ ಮೌಲ್ಯವೆಂಬಂತೆ ಒಪ್ಪಿಸಲಾಗಿರುವ, ವ್ಯಕ್ತಿಸ್ವಾತಂತ್ರ್ಯ ಮತ್ತು ಮುಕ್ತ ಆಲೋಚನೆಯನ್ನು ಗೌರವಿಸದ ನಮ್ಮಂತಹ ಮುಕ್ತವಲ್ಲದ ಸಮಾಜದಲ್ಲಿ ನಟರ ಈ ಮಾತುಗಳಿಗೆ ಹೆಚ್ಚಿನ ಆಕ್ಷೇಪಣೆಗಳು ಬರದೇ ಇರುವುದು ಆಶ್ಚರ್ಯವೇನೂ ಅಲ್ಲ. ಇದನ್ನು ಗಮನಿಸಿದರೆ ಈ ಚರ್ಚೆಯನ್ನು ನಟರ ಸಾರ್ವಜನಿಕ ನಡೆನುಡಿಯ ವಿಮರ್ಶೆಯನ್ನಾಗಷ್ಟೇ ನೋಡದೆ ನಾವು ಪೋಷಿಸಿಕೊಂಡು ಬಂದಿರುವ ಸಾಮಾಜಿಕ ವ್ಯವಸ್ಥೆಯ ಒಪ್ಪಿತ ಮೌಲ್ಯಗಳ ವಿಮರ್ಶೆಯಾಗಿಯೂ ನೋಡಬೇಕಿದೆಯೆನಿಸುತ್ತದೆ. ತಮ್ಮ ತಮ್ಮ ಜಾತಿ-ಮತಗಳ ಸಂಖ್ಯೆಯ ಶಾಸಕರ ಸಂಖ್ಯೆ ಹೆಚ್ಚಿರುವ ಕಾರಣಕ್ಕೆ ತಮ್ಮ ಜಾತಿಗೆ ಮಂತ್ರಿಸ್ಥಾನ-ಮುಖ್ಯಮಂತ್ರಿಸ್ಥಾನ ನೀಡಲೇಬೇಕೆಂದು ಒತ್ತಡ ಹೇರುತ್ತಿರುವ ಮಠಾಧೀಶರು, ಸ್ವಾಮೀಜಿಗಳು, ಕರ್ನಾಟಕದ ಒಟ್ಟಾರೆ ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರಿಗೆ ಮುಖ್ಯಮಂತ್ರಿ ಸ್ಥಾನ ಕೊಡಿ ಎಂದು ಒಮ್ಮೆಯೂ ಕೇಳದಿರುವುದು (ಕೊನೇಪಕ್ಷ, ಮಹಿಳೆಯೊಬ್ಬರು ಮುಖ್ಯಮಂತ್ರಿಯಾಗಬೇಕೆಂಬ ವಿಚಾರ ವಿದ್ಯಾವಂತ ಯುವಜನರಲ್ಲೂ ಕೂಡ ಗಂಭೀರ ಚರ್ಚೆಯ ವಿಷಯವಾಗಿರದೇ ಇರುವುದು!) ವ್ಯವಸ್ಥೆಯೇ ಒಪ್ಪಿಕೊಂಡಿರುವ ತಾರತಮ್ಯದ ತಾರತಮ್ಯದ ಮೌಲ್ಯಗಳ ಉತ್ತಮ ನಿದರ್ಶನ.

‘ಎಡಗೈ ಹೆಮ್ಮೆಯ ಬಲಗೈಯ ಜವಾಬ್ದಾರಿಯನ್ನು ಹಂಚಿಕೊಳ್ಳಲು ಕಲಿತರೆ, ರಾತ್ರಿಯ ಸಹಆಟಗಾರ್ತಿ ದಿನದ ಘನ ಕಾರ್ಯದಲ್ಲಿ (ಅಧಿಕಾರಯುತ) ಸಹಾಯಕಿಯಾಗಬಯಸಿದರೆ, ನಮ್ಮ ಧೀರಾತ್ಮ ಒಪ್ಪುತ್ತದೆಯೇ’? ಎಲ್ಲಾ ಸಾಮರ್ಥ್ಯವಿದ್ದೂ ಪಂಜರದ ಪಕ್ಷಿಯಾಗಲಿಚ್ಛಿಸದ, ಪ್ರಿಯತಮ ಅರ್ಜುನನನ್ನೂ ಕಳೆದುಕೊಳ್ಳಲಿಚ್ಛಿಸದ, ಟ್ಯಾಗೋರರ ನಾಯಕಿ ಚಿತ್ರಾಳ ನೋವು ದುಗುಡ ಸ್ವಾತಂತ್ರ್ಯಹರಣದ ಸಂವೇದನೆ ಬಹುಶಃ ಇಂದಿಗೂ ನಮ್ಮ ಸಮಾಜದ ಎಷ್ಟೋ ವಿದ್ಯಾವಂತ ಮಹಿಳೆಯರ ಅನುಭವವೇ ಆಗಿದೆ. ಗಂಡಾಳ್ವಿಕೆಯ ಮನಸ್ಥಿತಿಯನ್ನು ಪೋಷಿಸುತ್ತಿರುವ ಸಮಾಜ ಮತ್ತು ಇದನ್ನು ಬೆಂಬಲಿಸುತ್ತಿರುವ ನಟರ ಅಭಿಮಾನಿಗಳು, ತಮ್ಮನ್ನು ಮತ್ತು ತಮ್ಮ ಹಕ್ಕುಗಳನ್ನು ಕೂಡ ಸಮಾನವಾಗಿ ಗೌರವಿಸಿ ಎಂದು ಹೋರಾಡುತ್ತಿರುವ ಟ್ರಾನ್ಸ್ ಲಿಂಗಿಗಳನ್ನು ಯಾವ ದೃಷ್ಟಿಯಲ್ಲಿ ಕಂಡಾರು? ತಮ್ಮ ಅಸ್ಮಿತೆಯನ್ನು ಕೂಡ ಗೌರವಿಸಬೇಕು ಎನ್ನುತ್ತಿರುವ ಗೇ ಮತ್ತು ಲೆಸ್ಬಿಯನ್ ಮುಂತಾದ ಲೈಂಗಿಕ ಅಲ್ಪಸಂಖ್ಯಾತರ ಅಸ್ಮಿತೆಯನ್ನು ಇಂತಹ ಮನಸ್ಥಿತಿಯುಳ್ಳ ಜನ ಹೇಗೆ ಗೌರವಿಸಲು ಸಾಧ್ಯ ಎಂಬ ಪ್ರಶ್ನೆಗಳು ಹುಟ್ಟುತ್ತವೆ.

ಮಂಗಳಮುಖಿ ಮೇಘ ಅನಾಥರಾದ ಮತ್ತು ಬಡತನದಿಂದ ಬೀದಿಗೆ ಬಂದ ಸುಮಾರು ಹನ್ನೆರಡು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿ ತನ್ನವೇ ಮಕ್ಕಳೆಂಬಂತೆ ಸಾಕಿ ಬೆಳೆಸಿದ್ದಾರೆ; ತಾವೇ ದಿಕ್ಕಿಲ್ಲದ ಸ್ಥಿತಿಯಲ್ಲಿರುವಾಗ ಧೃತಿಗೆಡದೆ ದುಡಿಯುತ್ತಾ ಅನಾಥ ವೃದ್ಧರಿಗೆ ಮಾಸಿಕ ಪಿಂಚಣಿ ನೀಡಿ ಆರ್ಥಿಕವಾಗಿ ಆಸರೆಯಾಗಿದ್ದಾರೆ. ಇದೇ ಸಮುದಾಯದ ಅಕ್ಕಯ್ ಪದ್ಮಶಾಲಿಯವರ ಮಾನವ ಘನತೆಯ ಬಗೆಗಿನ ಒಳನೋಟವುಳ್ಳ ಮಾತುಗಳು, ಚಾಂದಿನಿಯವರ ಕವನಗಳು ನಮ್ಮನ್ನು ಇನ್ನಷ್ಟು ಹೆಚ್ಚು ಮಾನವೀಯಗೊಳಿಸಬಲ್ಲವು. ಒಂದು ಮಗುವಿನ ತಾಯಿಯಾದ ಅಕ್ಕಯ್ ಪದ್ಮಶಾಲಿ ಅದರ ಲಿಂಗವನ್ನು ಬಹಿರಂಗಗೊಳಿಸದೆ ತನ್ನ ಮಗು ಪ್ರಬುದ್ಧತೆಗೆ ಬಂದು ತಿಳುವಳಿಕೆ ಪಡೆದಾಗ ತನ್ನ ಜೆಂಡರ್ ಅನ್ನು ತಾನೇ ನಿರ್ಧರಿಸಿಕೊಳ್ಳಲಿ ಎನ್ನುತ್ತಾರೆ. ಗಂಡೆಂಬುದೇ ಒಂದು ಮೌಲ್ಯ ಎಂಬ ಅಪತಿಳುವಳಿಕೆಯಲ್ಲಿ ತೃತೀಯ ಲಿಂಗಿಗಳನ್ನೆಲ್ಲ ಕೀಳಿನ ಪಡಿಯಚ್ಚುಗಳನ್ನಾಗಿ ಗ್ರಹಿಸಿರುವ ಸಮಾಜ ಇನ್ನಾದರೂ ತನ್ನ ಅರಿವಿನ ಕಣ್ಣನ್ನು ತೆರೆಯಬೇಕಿದೆ. ‘ಕೂಟಕ್ಕೆ ಸತಿ-ಪತಿ ಎಂಬ ನಾಮವಲ್ಲದೆ ಅರಿವಿಂಗೆ ಬೇರೊಂದೊಡಲುಂಟೆ?‘ ಎನ್ನುವ ವಚನಕಾರ್ತಿ ಲಕ್ಕಮ್ಮನ ಮಾತು ನೆನಪಾಗುತ್ತದೆ.

ಇದು ದರ್ಶನ್ ಒಬ್ಬರ ಕಥೆಯೇನಲ್ಲ. ಸುದೀಪ್ ಆನ್‌ಲೈನ್ ರಮ್ಮಿ ಜಾಹೀರಾತಿನಲ್ಲಿ ಕಾಣಿಸಿಕೊಂಡು ಪ್ರೋತ್ಸಾಹಿಸುವುದು ತಪ್ಪು ಸಂದೇಶ ನೀಡುತ್ತದೆ ಎಂದು ಲೇಖಕ ಆಹೋರಾತ್ರ ಹೇಳಿದಾಗ, ಸುದೀಪ್ ಅಭಿಮಾನಿಗಳು ಅವರ ಮನೆ ನುಗ್ಗಿ ಗಲಾಟೆ ಮಾಡಿದ್ದರು. ಆಹೋರಾತ್ರ ನಿರ್ದಿಷ್ಟ ವ್ಯಕ್ತಿಗೆ ಆ ಆಟವನ್ನು ಆಡಲೇಬಾರದು, ಮದ್ಯವನ್ನು ಸೇವಿಸಲೇಬಾರದು ಎಂದು ನಿರ್ಬಂಧ ಹೇರುವುದು ಬೇರೆ. ಅದು ನೈತಿಕ ದಾದಾಗಿರಿಯಾದೀತು. ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ರೀತಿ ಗೌರವಯುತವಾಗಿರಲಿಲ್ಲ ಎಂಬುದು ನಿಜವೇ. ಹಾಗೆಯೇ ಅವರು ಪ್ರಸ್ತುತಪಡಿಸುತ್ತಿರುವ ಬೇರೆ ವಿಚಾರಗಳ ಬಗ್ಗೆ ತಕರಾರು ಕೂಡ ಇದೆ. ಇಷ್ಟಾಗಿಯೂ, ಸುದೀಪ್ ತಮ್ಮ ಇಷ್ಟದ ನಟನೆಂಬ ಕಾರಣಕ್ಕೆ ಅವರ ಬಗ್ಗೆ ಯಾವ ಭಿನ್ನಾಭಿಪ್ರಾಯಗಳನ್ನೂ ವ್ಯಕ್ತಪಡಿಸತಕ್ಕದ್ದಲ್ಲ ಎನ್ನೋದು ಅಭಿಮಾನವಲ್ಲ.

ಬದಲಾಗಿ ಸಂವಾದವನ್ನು ಇಚ್ಚಿಸದ ಅಸ್ವಸ್ಥ ಸಮಾಜವೊಂದರ ಲಕ್ಷಣ ಅದು. ಬೌದ್ಧಿಕವಾಗಿ ಪ್ರಬುದ್ಧ ಮತ್ತು ಸಂವೇದನಾಶೀಲ ನಟ ಎನ್ನಬಹುದಾದ ಸುದೀಪ್ ಕೂಡ ಕೆಲವೊಮ್ಮೆ ’ನಾವೇನು ಬಳೆ ತೊಟ್ಟುಕೊಂಡಿಲ್ಲ ಎಂದು ಸಂದರ್ಶನದಲ್ಲಿ ಸಾರ್ವಜನಿಕವಾಗಿ ಹೇಳಿರುವುದು ಈ ಕಾಲದಲ್ಲೂ ನಮ್ಮ ಸಮಾಜ ಜಂಡರ್ ಸೆನ್ಸಿಟಿವಿಟಿ ಬೆಳೆಸಿಕೊಂಡಿಲ್ಲದಿರುವುದರ ಲಕ್ಷಣ. ಇತ್ತೀಚೆಗೆ ನಟ ಉಪೇಂದ್ರ ‘ಜಾತಿ ವ್ಯವಸ್ಥೆಯ ಸಮಸ್ಯೆಯ ಕುರಿತು ಮಾತನಾಡುವುದು ಜಾತಿ ಇನ್ನೂ ಇದೆ ಎಂದು ತೋರಿಸಿದಂತಾಗುತ್ತದೆ; ಆ ಬಗ್ಗೆ ಮೌನವಾಗಿರುವುದರಿಂದ ಆ ಸಮಸ್ಯೆ ತಾನೇ ಇಲ್ಲವಾಗುತ್ತದೆ’ ಎಂಬರ್ಥದಲ್ಲಿ ಮಾತನಾಡಿದ್ದರು. ಇದೊಂದು ಅವೈಚಾರಿಕವಾದ ಹೇಳಿಕೆ. ಹಾಗಾದರೆ ಅತ್ಯಾಚಾರಗಳು ಭ್ರಷ್ಟಾಚಾರ ಇತ್ಯಾದಿಗಳ ಬಗ್ಗೆ ಮೌನವಾಗಿರುವುದರಿಂದ ಅವೆಲ್ಲ ಇಲ್ಲವಾಗಿವೆಯೆ? ಈ ಬಗ್ಗೆ ಧ್ವನಿಯೆತ್ತಿದವರನ್ನು ಉಪೇಂದ್ರ ಮತ್ತು ಸುದೀಪರ ಅಭಿಮಾನಿಗಳು ಟ್ರೋಲ್ ಮಾಡಿ ಅವಮಾನಿಸಲು ಮತ್ತು ಹತ್ತಿಕ್ಕಲು ಪ್ರಯತ್ನಿಸುತ್ತಾರೆ. ಇಷ್ಟಾಗಿಯೂ ಉಪೇಂದ್ರರಿಗಿರುವ ಸಹನೆ ಮತ್ತು ಸಂವಾದದ ಗುಣ ಅವರನ್ನು ಸಲಹಬಹುದು.

ಉಪೇಂದ್ರರ ಹೇಳಿಕೆ ಮಾಸುವ ಮುನ್ನವೇ ತಮಿಳು ನಟಿ ಮೀರಾ ಮಿಥುನ್ ’ಪರಿಶಿಷ್ಟ ಜಾತಿಯ ನಟರು ಮತ್ತು ನಿರ್ದೇಶಕರಿಂದ ಉದ್ಯಮ ಕೆಟ್ಟಿದ್ದು ಅವರನ್ನೆಲ್ಲ ಹೊರಹಾಕಬೇಕೆಂದು’ ಹೇಳಿ ಸಿನಿಮಾ ಉದ್ಯಮದಲ್ಲೂ ಇರುವ ಜಾತಿ ತರತಮದ ವ್ಯಸನವನ್ನು ದೃಢೀಕರಿಸಿದ್ದಾರೆ. ವ್ಯಂಗ್ಯವೆಂದರೆ, ಪಾತ್ರದವರು ಎಂದು ಅಸಡ್ಡೆಯಿಂದ ನೋಡಲಾಗುತ್ತಿದ್ದ ಮತ್ತು ಆರ್ಥಿಕವಾಗಿ ಲಾಭದಾಯಕವಲ್ಲದ ನಟನಾ ವೃತ್ತಿ, ಹಿಂದೆ ಮೂಲತಹ ಕುಶಲಕರ್ಮಿ ತಳಸಮುದಾಯಗಳ ಕಸುಬಾಗಿತ್ತು.

ನಟರ ಮಾತುಗಳಿಂದ ಪ್ರಚೋದಿತರಾದ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹೀರೋನ ಟೀಕಾಕಾರರನ್ನು ಟ್ರೋಲ್ ಮಾಡುತ್ತಾರೆ, ನೇರ ಜೀವಬೆದರಿಕೆ ಒಡ್ಡುತ್ತಾರೆ, ಶ್ರದ್ಧಾಂಜಲಿ ಸಲ್ಲಿಸುತ್ತಾರೆ. ಇಂಥ ನಟರ ಆರಾಧಕ ಯುವವಿದ್ಯಾರ್ಥಿಗಳಿರುವ ಕಾಲೇಜಿನ ತರಗತಿಯಲ್ಲಿ ‘ನನ್ನ ರಕ್ತಮಾಂಸ ಬಯಸಿದವರಿಗೆ ಪ್ರತಿಯಾಗಿ ಪ್ರೀತಿಯ ಹೊಳೆಯನ್ನೇ ಹರಿಸಿದೆ’ ಎನ್ನುವ ‘ಗಾಂಧಿ’ (ನಿರಂಜನ್ ಮೋಹಂತಿಯವರ) ಕವನದ ಸಾಲುಗಳನ್ನು ಹೇಗೆ ಅರ್ಥೈಸಬೇಕು? ವೈಯಕ್ತಿಕವಾಗಿ ಸ್ನೇಹಿತರು ಅಭಿಮಾನಿಗಳು ಕಷ್ಟದಲ್ಲಿದ್ದಾಗ ಈ ನಟರು ನೆರವಾಗಿರುವ ನಿದರ್ಶನಗಳು ತುಂಬಾ ಇರಬಹುದು; ಅದು ವೈಯಕ್ತಿಕ ನೆಲೆಯಲ್ಲಿ. ವೈಯಕ್ತಿಕ ನೆಲೆಯಲ್ಲಿ ನಡೆಯುವ ಶೋಷಣೆಗಳನ್ನು ಹೇಗೋ ಮೀರಬಹುದು; ಆದರೆ ಸಾಂಸ್ಥಿಕ ಶೋಷಣೆ ಭೀಕರವಾದದ್ದು. ಅದನ್ನು ವಿರೋಧಿಸುವುದು ಪ್ರಜ್ಞಾವಂತ ನಾಗರಿಕನ ಕರ್ತವ್ಯ. ಆದರೆ ಸ್ಥಾಪಿತವ್ಯವಸ್ಥೆಯ ಭಾಗವಾಗಿದ್ದಾರೇನೋ ಎನ್ನುವ ಅನುಮಾನ ಬರುವಂತೆ, ವ್ಯವಸ್ಥೆಯಿಂದ ಉಂಟಾಗುತ್ತಿರುವ ಯಾವ ಸಾಂಸ್ಥಿಕ ಶೋಷಣೆಯ ವಿರುದ್ಧವೂ ಧ್ವನಿಯೆತ್ತಿ ಮಾತನಾಡದ ಇವರು ತಮ್ಮ ವೈಯಕ್ತಿಕ ವಿಚಾರಗಳಿಗಾಗಿ ಅವೈಚಾರಿಕವಾಗಿ ಏನೇನೋ ಮಾತನಾಡುತ್ತಾರೆ.

ಕಲಾವಿದರಾಗಿ ಈ ನಟರು ತೋರಿರುವ ಪ್ರತಿಭೆ ಮತ್ತು ಸಾಧನೆಗಳ ಬಗ್ಗೆ ಇದು ವಿಮರ್ಶೆಯಲ್ಲ. ಕಲಾವಿದನೊಬ್ಬನಿಗೆ ಮನುಷ್ಯ ಬದುಕಿನ ಎಲ್ಲಾ ಸಂಕೀರ್ಣತೆಗಳ ಬೌದ್ಧಿಕ ಅರಿವಿರಬೇಕೆಂದೂ ಕೂಡ ನಿರೀಕ್ಷಿಸುತ್ತಿಲ್ಲ. ಆದರೆ ಸಾರ್ವಜನಿಕ ಜೀವನದಲ್ಲಿರುವವರು-ಅದರಲ್ಲೂ ಕನ್ನಡದ ಸಾಂಸ್ಕೃತಿಕ ರಾಯಭಾರಿಗಳಂತೆ ಮಾಧ್ಯಮಗಳಿಂದ ಬಿಂಬಿತವಾಗುವ ಈ ಕಲಾವಿದರು-ಮೇಲೆ ಹೇಳಲಾದ ಸಂದರ್ಭಗಳಲ್ಲಿ ತಮ್ಮ ಬಗೆಗಿನ ಭಿನ್ನಾಭಿಪ್ರಾಯಗಳಿಗೆ ಸ್ಪಂದಿಸಿದ ರೀತಿ ಅಸೂಕ್ಷ್ಮತೆಯಿಂದ ಕೂಡಿದೆ.

ಇಲ್ಲಿ ಚರ್ಚಿಸಿರುವ ವಿಚಾರ ಸಿನಿಮಾದಾಚೆಗಿನದಾದರೂ ಸಿನಿಮಾದ ಬಗೆಗಿನದೂ ಆಗುತ್ತದೆ. ಸಿನಿಮಾ ಒಂದು ಕಲೆ. ಕಲೆಯೆಂಬುದು ತನ್ನ ಸಹೃದಯರಿಗೆ ಅನೂಹ್ಯ ಆನಂದವನ್ನು ಹಂಚುವ ಮಾಧ್ಯಮ ಹೇಗೋ ಹಾಗೆಯೇ ಅವರನ್ನು ಹೆಚ್ಚೆಚ್ಚು ಸಂವೇದನಾಶೀಲರನ್ನಾಗಿ ಮತ್ತು ಚಿಂತನಶೀಲರನ್ನಾಗಿ ರೂಪಿಸುವ ಜವಾಬ್ದಾರಿಯೂ ಅದಕ್ಕಿದೆ. ಕಲಾವಿದರೇ ಸಂವೇದನಾಶೀಲರಾಗಿಲ್ಲ ಎಂದರೆ, ಒಂದೋ ಅದನ್ನವರು ಬರೀ ವ್ಯವಹಾರವೆಂದು ತೆಗೆದುಕೊಂಡಿರಬೇಕು, ಇಲ್ಲವೆಂದರೆ ಅವರ ಸಿನಿಮಾಗಳು ಮುಂದಿಡುತ್ತಿರುವ ಮೌಲ್ಯವ್ಯವಸ್ಥೆಯ ಬಗ್ಗೆಯೇ ಮರುಯೋಚಿಸಬೇಕು. ಸಿನಿಮಾಕ್ಕಿರುವ ವ್ಯವಹಾರಿಕ ಅಯಾಮವನ್ನೂ ಒಪ್ಪೋಣ. ಆದರೆ ಅದಕ್ಕಿರುವ ಜನಪರ, ನೈತಿಕ ಮತ್ತು ಅರಿವಿನ ಆಯಾಮಗಳಿಂದ ಬೇರ್ಪಡಿಸಿ ಅದನ್ನು ಬರೀ ವ್ಯವಹಾರವನ್ನಾಗಿ ನೋಡಿದರೆ, ಅದು ಉಳ್ಳವರ ಹಿತಾಸಕ್ತಿ ಕಾಯುವ ಸಾಧನವಾಗುವ ಅಪಾಯವೂ ಇದೆ. ಕನ್ನಡ ಸಿನಿಮಾ ಈಗಾಗಲೇ ಇಂತಹ ಅಪಾಯದಲ್ಲಿ ಸಿಲುಕಿದೆಯೇ?

ಸಿನಿಮಾದಲ್ಲಿ ಈ ನಟರು ಕೆಲವೊಮ್ಮೆ ತೋರುವ ವೈಚಾರಿಕತೆಗೂ ಮತ್ತು ವಾಸ್ತವದ ಬದುಕಿನಲ್ಲಿ ನೀಡುವ ಹೇಳಿಕೆಗಳಿಗೂ ಇರುವ ವೈರುಧ್ಯವನ್ನು ಗಮನಿಸಿದರೆ ಈ ಅನುಮಾನ ತುಸು ಹೆಚ್ಚಾಗುತ್ತದೆ. ಈ ಕುರಿತು ಹೆಚ್ಚಿನ ಚಿಂತನೆಯಾಗಬೇಕಿದೆ. ವಿದ್ಯಾವಂತ ಯುವಜನರಲ್ಲೂ ಕೂಡ ವ್ಯಕ್ತಿಪೂಜೆಯ ಉನ್ಮಾದವನ್ನು ಹೆಚ್ಚಿಸಿ ಮುಕ್ತ ಆಲೋಚನೆಯನ್ನು ನಿರುತ್ಸಾಹಗೊಳಿಸುತ್ತಿರುವ ಈ ಹೊತ್ತಿನ ರಾಜಕೀಯ ಮತ್ತು ಸಾಂಸ್ಕೃತಿಕ ಪರಿಸರದಲ್ಲಿ, ಜನಪ್ರಿಯ ಕಲಾವಿದರ ಈ ರೀತಿಯ ಹೇಳಿಕೆಗಳು ಸ್ಥಾಪಿತ ವ್ಯವಸ್ಥೆಯ ಇಕ್ಕಳದಲ್ಲಿ ಸಿಕ್ಕಿರುವ ದೊಡ್ಡ ಯುವ ಸಮೂಹವನ್ನು ಯಾವ ದಿಕ್ಕಿಗೆ ಕೊಂಡೊಯ್ಯುತ್ತವೆ ಎಂಬುದನ್ನು ಗಂಭೀರವಾಗಿ ಯೋಚಿಸಬೇಕಿದೆ. ಒಬ್ಬ ಕಲಾವಿದ, ಸಾಹಿತಿ, ರಾಜಕಾರಣಿಯನ್ನು ನಾವು ಇಷ್ಟಪಡುತ್ತಿರಬಹುದು. ಅದರರ್ಥ ಅವರ ಎಲ್ಲಾ ಸಾರ್ವಜನಿಕ ನಡೆ-ನುಡಿಗಳನ್ನು ಪ್ರಶ್ನಾತೀತವಾಗಿ ಒಪ್ಪಬೇಕೆಂದಲ್ಲ. ಅವರನ್ನ ವಿಮರ್ಶಾತ್ಮಕವಾಗಿ ನಮ್ಮವರನ್ನಾಗಿಸಿಕೊಳ್ಳುವುದು ಒಳ್ಳೆಯದು ಎನಿಸುತ್ತದೆ.

ಡಾ. ಸಿ. ಬಿ. ಐನಳ್ಳಿ

ಡಾ. ಸಿ. ಬಿ. ಐನಳ್ಳಿ
ಧಾರವಾಡದ ಕರ್ನಾಟಕ ಕಲಾ ಮಹಾವಿದ್ಯಾಲಯಲ್ಲಿ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೂಲತಃ ಬಳ್ಳಾರಿ ಜಿಲ್ಲೆಯವರು. ಇಂಡಿಯನ್-ಅಮೇರಿಕನ್ ಲೇಖಕಿ ‘ಜುಂಪಾ ಲಾಹಿರಿಯ ಕೃತಿಗಳಲ್ಲಿ ವಸ್ತು ಮತ್ತು ತಂತ್ರಗಳ ಅಧ್ಯಯನ’ಕ್ಕಾಗಿ ಕರ್ನಾಟಕ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿದೆ.


ಇದನ್ನೂ ಓದಿ: ಭಾರತದ ವಿವಿಧ ಭಾಷೆಗಳ ಇತ್ತೀಚಿನ ಸಿನಿಮಾಗಳಲ್ಲಿ ದಲಿತ ಕಥನಗಳು: ಭಾಗ-2

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...