ಕಳೆದುಹೋದ ದಿನಗಳು – 28
ಸಕಲೇಶಪುರಕ್ಕೆ ಬಂದ ನಂತರ ಗಣಪಯ್ಯನವರ ಕೊನೆಯ ದಿನಗಳವರೆಗೂ ಆಪ್ತ ಬಳಗದವರೆಂದು ಪರಿಗಣಿತವಾಗಿ ಇದ್ದವರು ಇಬ್ಬರು. ಒಬ್ಬರು ಸಿ.ಎಂ.ಪೂಣಚ್ಚ ಇನ್ನೊಬ್ಬರು ಗ್ರೆಗೊರಿ ಮಥಾಯಿಸ್, ಪೂಣಚ್ಚನವರ ಪೂರ್ಣಿಮಾ ಎಸ್ಟೇಟ್ ಮತ್ತು ಗ್ರೆಗೊರಿ ಮಥಾಯಿಸ್ ಅವರ ಶ್ರೀನಿವಾಸ ಎಸ್ಟೇಟ್ ಇವೆರಡೂ ತೋಟಗಳು ಐವತ್ತರ ದಶಕದಿಂದಲೇ ಹಾರ್ಲೆ ಮ್ಯಾನೇಜ್ಮೆಂಟ್ ಸರ್ವಿಸಸ್ ಅಡಿಯಲ್ಲೇ ಇದ್ದವು. ಮಥಾಯಿಸ್ ಅವರು ಕೆಲಕಾಲ ಅಮೆರಿಕಾದಲ್ಲಿಯೂ ನಂತರ ಕರ್ನಾಟಕ ಮತ್ತು ಭಾರತ ಸರ್ಕಾರಗಳ ಹಿರಿಯ ಅಧಿಕಾರಿಯೂ ಆಗಿ ಇದ್ದುದರಿಂದ ತೋಟಕ್ಕೆ ಬರುತ್ತಿದ್ದುದು ಕಡಿಮೆಯೇ. ಅವರ ನಿವೃತ್ತಿಯ ನಂತರ ಕೆಲವು ಸಲ ತೋಟಕ್ಕೆ ಬಂದು ಇರುತ್ತಿದ್ದರು. ಅವರ ಮಗ ಜೆರೋಮ್ ಪೀಟರ್ ಮಥಾಯಿಸ್ ಹೃದ್ರೋಗ ತಜ್ಞ ವೈದ್ಯರಾಗಿ ಅಮೆರಿಕಾದಲ್ಲಿ ನೆಲೆಸಿದ್ದಾರೆ. ಶ್ರೀನಿವಾಸ ಎಸ್ಟೇಟ್‌ನ ಒಡೆತನವನ್ನು ಇನ್ನೂ ಉಳಿಸಿಕೊಂಡಿದ್ದಾರೆ.
ಪೂಣಚ್ಚನವರು ರಾಜಕೀಯದಿಂದ ನಿವೃತ್ತರಾದನಂತರ ಒಮ್ಮೊಮ್ಮೆ ತೋಟಕ್ಕೆ ಬರುತ್ತಿದ್ದರು.
ಸಾಹಿತ್ಯದ ಅಭ್ಯಾಸಿಯಾಗಿದ್ದ ಅವರು ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದು ಮಡಿಕೇರಿಯ “ಕೊಡಗು” ಪತ್ರಿಕೆಯ ಸಂಪಾದಕರಾಗಿ. ನಂತರ ಅವರು ರಾಜಕಾರಣದಲ್ಲಿ ತೊಡಗಿದರು. ಆದ್ದರಿಂದ ಅವರಿಗೆ ಸಾಂಸ್ಕೃತಿಕ ಚುಟುವಟಿಕೆಗಳಲ್ಲಿಯೂ ಒಲವಿತ್ತು.
ಪೂಣಚ್ಚನವರು ಕೇಂದ್ರ ಸಚಿವರಾಗಿದ್ದಾಗ ಮತ್ತು ನಂತರ ರಾಜ್ಯಪಾಲರಾಗಿದ್ದ ಅವಧಿಯಲ್ಲಿಯೂ ನಮ್ಮ ನಾಟಕ ಪ್ರದರ್ಶನವಿದ್ದಾಗ ಅದರ ಆಹ್ವಾನ ಪತ್ರವನ್ನಿಟ್ಟು ಅವರಿಗೆ ಕಾಗದ ಬರೆಯುತ್ತಿದೆ. ಅವರ ಅಷ್ಟೆಲ್ಲ ಕೆಲಸಕಾರ್ಯಗಳ ನಡುವೆಯೂ ನಮ್ಮ ನಮ್ಮ ನಾಟಕಕ್ಕೆ ಶುಭಹಾರೈಸಿ ಪತ್ರ ಬರೆಯುತ್ತಿದ್ದರು.
ಒಮ್ಮೆ ಪೂಣಚ್ಚನವರು ತೋಟಕ್ಕೆ ಬಂದಾಗ ನಾನು ಇದುವರೆಗೆ ನಿಮ್ಮ ನಾಟಕಗಳನ್ನು ನೋಡಲಾಗಲಿಲ್ಲ. ಇನ್ನೊಮ್ಮೆ ಬಂದಾಗ ಸಾಧ್ಯವಾದರೆ ನೋಡುತ್ತೇನೆ ಎಂದಿದ್ದರು. ನೀವು ಬರುವ ಕಾರ್ಯಕ್ರಮವನ್ನು ಒಂದು ತಿಂಗಳಿಗೆ ಮೊದಲು ತಿಳಿಸಿದರೆ ನಾನು ಏನಾದರೂ ಮಾಡಬಹುದು ಎಂದಿದ್ದೆ.
ಆ ವರ್ಷ ನಾವು ಮಹದೇವ ಬಣಕಾರ ಅವರ “ಮಕ್ಕಳಿರಲವ್ವ ಮನೆತುಂಬ” ಎಂಬ ನಾಟಕವನ್ನು ತೆಗೆದುಕೊಂಡಿದ್ದೆವು. ಮೊದಲ ಪ್ರದರ್ಶನವಾದಾಗ ಎಂದಿನಂತೆ ಪೂಣಚ್ಚನವರಿಗೆ ಪತ್ರ ಬರೆದಿದ್ದೆ. ಅವರಿಗೆ ಬರಲು ಸಾಧ್ಯವಾಗಿರಲಿಲ್ಲ. ಕೆಲವೇ ದಿನಗಳಲ್ಲಿ “ಮುಂದಿನ ತಿಂಗಳ ಮೊದಲವಾರದಲ್ಲಿ ಬರುತ್ತೇನೆ, ನಾಟಕ ಪ್ರದರ್ಶನ ಮಾಡಲು ಸಾಧ್ಯವೇ?” ಎಂದು ಪತ್ರಬರೆದಿದ್ದರು.
ನಾವು ಮತ್ತೆ ಉತ್ಸಾಹದಿಂದ ತಾಲೀಮು ಪ್ರಾರಂಭಿಸಿದೆವು. ಅವರಿಗಾಗಿ ಒಂದು ಪ್ರದರ್ಶನ ಮಾಡಲು ಸಿದ್ಧರಾದೆವು.

ಪೂಣಚ್ಚ ದಂಪತಿ (ಶ್ರೀಮತಿ ಗಂಗವ್ವ ಪೂಣಚ್ಚ) ತೋಟದಲ್ಲೇ ಬಂದು ಉಳಿದಿದ್ದರು. ತೋಟದ ಕಾಫಿ ಕಣದ ಪಕ್ಕದಲ್ಲೇ ನಾವು ರಂಗವೇದಿಕೆಯನ್ನು ಸಿದ್ಧಮಾಡಿಕೊಂಡು, ಸಾರ್ವಜನಿಕರಿಗೂ ಮುಕ್ತ ಪ್ರವೇಶ ಇಟ್ಟೆವು. ಈ ಪದ್ಧತಿ ಹಾರ್ಲೆ ಗುಂಪಿನ ಎಲ್ಲ ಸಂಸ್ಥೆಗಳಲ್ಲೂ ನಡೆದು ಬಂದ ರೀತಿ. ಹಾರ್ಲೆ ಎಸ್ಟೇಟಿನಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿ ಅಲ್ಲಿ ಸುತ್ತಲಿನ ಗ್ರಾಮಸ್ಥರಿಗೂ ಮುಕ್ತ ಪ್ರವೇಶ.
ನಮ್ಮ ನಾಟಕ ಪ್ರದರ್ಶನಕ್ಕೆ ಅಂದು ಗಣಪಯ್ಯನವರೂ ಬಂದರು. ಅವರಿಗೆ ಬೆಂಗಳೂರಿನಲ್ಲಿ ಆದ ರಸ್ತೆ ಅಪಘಾತದಿಂದ ಕಾಲಿಗೆ ಪೆಟ್ಟಾದದ್ದು ಇನ್ನೂ ವಾಸಿಯಾಗಿರಲಿಲ್ಲ. ಕಾಲಿಗೆ ಕಟ್ಟಿದ ಪಟ್ಟಿಗಳು ಹಾಗೇ ಇದ್ದವು. ಆದರೂ ಸಂಜೆ ಬಂದು ಗೆಳೆಯನ ಜೊತೆ ಕುಳಿತು ಇಡೀ ನಾಟಕ ನೋಡಿದರು.
ನಾವು ಆಡಿದ ನಾಟಕ ಮಕ್ಕಳಿರಲವ್ವ ಮನೆತುಂಬ ಜನಸಂಖ್ಯಾ ನಿಯಂತ್ರಣದ ಅಗತ್ಯದ ಬಗ್ಗೆ ಇತ್ತು. ನಾಟಕದ ನಂತರ ಮಾತಾಡಿದ ಪೂಣಚ್ಚ ಸಂಜಯ ಗಾಂಧಿಯ ಪ್ರಸ್ತಾಪ ಮಾಡಿ, “ನಾವು ಸಂಜಯಗಾಂಧಿಯವರ ರಾಜಕೀಯವನ್ನು ಮತ್ತು ಅನೇಕ ಕ್ರಮಗಳನ್ನು ವಿರೋಧಿಸಬಹುದು, ಆದರೆ ಅವರ ಕಾರ್ಯಕ್ರಮಗಳಲ್ಲಿ ಎರಡು ವಿಚಾರಗಳಿಗೆ ನಮ್ಮ ವಿರೋಧ ಇರಬಾರದು. ಆ ಕಾರ್ಯಕ್ರಮಗಳನ್ನು ಜಾರಿಗೊಳಿಸುವಾಗ ಆದ ತಪ್ಪುಗಳನ್ನು ತಿದ್ದಿಕೊಳ್ಳಬೇಕು. ಆದರೆ ಜನಸಂಖ್ಯಾ ನಿಯಂತ್ರಣ ಮತ್ತು ವ್ಯಾಪಕವಾದ ಅರಣ್ಯೀಕರಣ ಇವೆರಡು ವಿಷಯಗಳನ್ನು ನಾವು ಎಲ್ಲ ರಾಜಕಾರಣವನ್ನು ಬದಿಗಿಟ್ಟು ಮುಕ್ತವಾಗಿ ಮುನ್ನಡೆಸಬೇಕು. ಇಲ್ಲದಿದ್ದರೆ ಮುಂದೆ ದೊಡ್ಡ ಅನಾಹುತ ಕಾದಿದೆ. ಇದು ಭಾರತಕ್ಕೆ ಮಾತ್ರವಲ್ಲ ವಿಶ್ವಕ್ಕೇ ಅನ್ವಯಿಸುವ ವಿಷಯ” ಎಂದರು.

ಅದು ಈ ಗೆಳೆಯರಿಬ್ಬರು ಒಟ್ಟಿಗೆ ಕುಳಿತು ಮಾತಾಡಿದ ಕೊನೆಯ ಸಂದರ್ಭವಾಗಿತ್ತು. ನಂತರ ಮೊದಲು ಅಗಲಿದವರು ಗಣಪಯ್ಯನವರೇ.
ಇಬ್ಬರೂ ಗಾಂಧಿ ಅನುಯಾಯಿಗಳು, ಆದರೆ ರಾಜಕೀಯವಾಗಿ ವಿಭಿನ್ನ ಹಾದಿ ಹಿಡಿದವರು. ಪೂಣಚ್ಚ ಕೊನೆಯವರೆಗೂ ಗಣಪಯ್ಯನವರನ್ನು ತನ್ನ ಗುರುಗಳೆಂದೇ ಹೇಳುತ್ತಿದ್ದರು.
ಅಂದಿನ ದಿನಗಳ ಸೊಬಗಿದು.
ಗಾಂಧಿಯಿಂದ ಪ್ರಭಾವಿತರಾಗಿ ಸರಳ ಜೀವನ ನಡೆಸುತ್ತಾ ರಾಜಾಜಿ ಅನುಯಾಯಿಯೂ ಆಗಿ ನಿಜವಾದ ಅರ್ಥದ ಬಲಪಂಥೀಯ ಆರ್ಥಿಕ ಚಿಂತನೆಯ ಸ್ವತಂತ್ರ ಪಾರ್ಟಿಯಲ್ಲಿ ಇದ್ದು ಕಾಂಗ್ರೆಸ್‌ನ ಕಡು ವಿರೋಧಿಯೂ ವೈಯಕ್ತಿಕವಾಗಿ ಸಮಾಜ ಸೇವಕರೂ ಆಗಿದ್ದ ಗಣಪಯ್ಯ.
ಕಾಂಗ್ರೆಸ್‌ನ ಅನುಯಾಯಿಯಾಗಿ ಇಂದಿರಾ ಸರ್ಕಾರದಲ್ಲಿ ಮಂತ್ರಿಯಾಗಿ ನಂತರ ತುರ್ತುಸ್ಥಿತಿ ಯನ್ನು ವಿರೋಧಿಸಿದರೂ ನಂತರ ಮತ್ತೆ ಇಂದಿರಾ ಸರ್ಕಾರ ಬಂದಾಗಲೂ ಮತ್ತೆ ರಾಜ್ಯಪಾಲರಾಗಿ ಮುಂದುವರಿದ ಪೂಣಚ್ಚ ಇವರಿಬ್ಬರಲ್ಲಿ ರಾಜಕೀಯವನ್ನು ಮೀರಿದ ಸ್ನೇಹ ಸಾಧ್ಯವಾಗಿತ್ತು.
ತನ್ನನ್ನು ವಿರೋಧಿಸಿ ಜನತಾ ಪಾಳೆಯ ಸೇರಿದ ಪೂಣಚ್ಚ ಜನತಾ ಸರ್ಕಾರದಿಂದ ರಾಜ್ಯಪಾಲರಾಗಿ ನಿಯುಕ್ತರಾಗಿದ್ದರೂ ಇಂದಿರಾಗಾಂಧಿ ಮತ್ತೆ ತನಗೆ ಅಧಿಕಾರ ಬಂದಾಗ ಅವರನ್ನು ರಾಜ್ಯಪಾಲರಾಗಿ ಮುಂದುವರೆಸಿದ್ದು…..
ಇದು ಕೃಪೆಯಲ್ಲ ಯಾಕೆಂದರೆ ಪೂಣಚ್ಚನವರ ಪ್ರಾಮಾಣಿಕತೆಯ ಬಗ್ಗೆ ಇಂದಿರಾಗಾಂಧಿಗೂ ಅರಿವಿತ್ತು.
ಪೂಣಚ್ಚನವರು ತೀರಿಕೊಂಡಾಗ ಸಾಮಾನ್ಯವಾಗಿ ಮತ್ತು ಸುಲಭವಾಗಿ ಯಾವ ರಾಜಕಾರಣಿಗಳನ್ನು ಹೊಗಳದ ಲಂಕೇಶ್ “ಸದಾ ಬಿಳಿ ಉಡುಪನ್ನು ಧರಿಸುತ್ತಿದ್ದ ಪೂಣಚ್ಚ ಕೊಳೆ ಮಾಡಿಕೊಳ್ಳದೆ, ಶುಭ್ರವಾಗಿಯೇ ನಿರ್ಗಮಿಸಿದರು” ಎಂದು ಬರೆದರು.
ಇಂತಹ ಸಂಬಂಧಗಳೇ ಮರೆಯಾಗುತ್ತ ಭಿನ್ನಾಭಿಪ್ರಾಯ ಹೊಂದಿದವರೆಲ್ಲ ನಮ್ಮ ಶತ್ರುಗಳು ಎಂದುಕೊಳ್ಳುವ ಕಾಲದಲ್ಲಿ ನಾವೀಗ ಬದುಕುತ್ತಿದ್ದೇವೆ.
- ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)
ಇದನ್ನೂ ಓದಿ: ‘ನಮ್ಮ ಎಲುಬುಗಳ ಮೇಲೆ’ – ನಾವು ಪ್ರದರ್ಶಿಸಿದ ಮೊದಲ ನಾಟಕ


