ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಖಾಸಗೀಕರಣವನ್ನು ಪ್ರಶ್ನಿಸಿ, ವಿಮಾನ ನಿಲ್ದಾಣ ಪ್ರಾಧಿಕಾರದ ನೌಕರರ ಒಕ್ಕೂಟ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ.
ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ವಿಭಾಗೀಯ ಪೀಠವು ಅರ್ಜಿಯನ್ನು ವಜಾಗೊಳಿಸಲು ‘ಕೇರಳ ಹೈಕೋರ್ಟ್ ನೀಡಿದ್ದ ತೀರ್ಪನ್ನು’ ಅವಲಂಬಿಸಿತು. ಈ ತೀರ್ಪಿನಲ್ಲಿ ಕೇರಳ ಹೈಕೋರ್ಟ್ ‘‘ವಿಮಾನ ನಿಲ್ದಾಣಗಳನ್ನು ಗುತ್ತಿಗೆ ನೀಡುವುದು ಭಾರತ ಸರ್ಕಾರ ತೆಗೆದುಕೊಂಡ ನೀತಿ ನಿರ್ಧಾರವಾಗಿದ್ದು, ನ್ಯಾಯಾಲಯದ ಹಸ್ತಕ್ಷೇಪ ಅಗತ್ಯವಿಲ್ಲ” ಎಂದು ಹೇಳಿತ್ತು.
ಇದನ್ನೂ ಓದಿ: ಅದಾನಿಗೆ ಮಂಗಳೂರು ಏರ್‌ಪೋರ್ಟ್ ಗುತ್ತಿಗೆ: ಕೇಂದ್ರಕ್ಕೆ ಕರ್ನಾಟಕ ಹೈಕೋರ್ಟ್ ನೋಟಿಸ್
ವಿಮಾನ ನಿಲ್ದಾಣ ಪ್ರಾಧಿಕಾರದ ನೌಕರರ ಒಕ್ಕೂಟ ಸಲ್ಲಿಸಿದ್ದ ಅರ್ಜಿಯಲ್ಲಿ, ಮಂಗಳೂರಿನ ವಿಮಾನ ನಿಲ್ದಾಣ ಸೇರಿದಂತೆ ಮೂರು ವಿಮಾನ ನಿಲ್ದಾಣಗಳನ್ನು, ಅದಾನಿ ಎಂಟರ್‌ಪ್ರೈಸಸ್‌ಗೆ ಗುತ್ತಿಗೆ ನೀಡುವ ಬಿಡ್‌ಗೆ ಅನುಮೋದನೆ ನೀಡುವ 2019 ರ ಕ್ಯಾಬಿನೆಟ್ ನಿರ್ಧಾರವನ್ನು ರದ್ದುಗೊಳಿಸುವಂತೆ ನ್ಯಾಯಾಲಯದಲ್ಲಿ ಕೋರಲಾಗಿತ್ತು.
ಅಷ್ಟೆ ಅಲ್ಲದೆ, ಆರು ವಿಮಾನ ನಿಲ್ದಾಣಗಳನ್ನು ಖಾಸಗೀಕರಣಗೊಳಿಸುವ ಒಕ್ಕೂಟ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿತ್ತು. ಈ ನಿರ್ಧಾವು ಕಾನೂನುಬಾಹಿರವಾಗಿದ್ದು, ‘ವಿಮಾನ ನಿಲ್ದಾಣ ಪ್ರಾಧಿಕಾರ ಕಾಯ್ದೆ-1994’ ಯನ್ನು ಉಲ್ಲಂಘಿಸಲಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.
ಅರ್ಜಿದಾರರ ಪರ ಹಾಜರಾದ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಕಾಯಿದೆಯ ಸೆಕ್ಷನ್ 12 ಅನ್ನು ಉಲ್ಲೇಖಿಸಿದ್ದರು. ವಿಮಾನ ನಿಲ್ದಾಣದ ಆವರಣವನ್ನು ಗುತ್ತಿಗೆ ಪಡೆಯಬಹುದು ಆದರೆ, ಈಗ ಇಡೀ ವಿಮಾನ ನಿಲ್ದಾಣವನ್ನು ಕಾರ್ಯಾಚರಣೆಗಾಗಿ ಖಾಸಗಿ ವ್ಯಕ್ತಿಗೆ ನೀಡಲಾಗಿದೆ. ಗುತ್ತಿಗೆ ನೀಡಿದ ಒಪ್ಪಂದವನ್ನು ಉಲ್ಲೇಖಿಸಿ, ಸರ್ಕಾರದೊಂದಿಗೆ ಯಾವುದೇ ಆದಾಯ ಹಂಚಿಕೆ ಇಲ್ಲ ಮತ್ತು ಪ್ರತಿ ಪ್ರಯಾಣಿಕರ ಶುಲ್ಕದ ಮೇಲೆ ಗುತ್ತಿಗೆಯನ್ನು ನಿಗದಿಪಡಿಸಲಾಗಿದೆ ಎಂದು ಅವರು ಸೂಚಿಸಿದ್ದಾರೆ.
ಇದನ್ನೂ ಓದಿ: ಮಂಗಳೂರು ವಿಮಾನ ನಿಲ್ದಾಣ ಇನ್ನು ಮುಂದೆ ಅದಾನಿ ಏರ್‌ಪೋರ್ಟ್ಸ್!: ನೆಟ್ಟಿಗರ ಕಿಡಿ
“ರನ್‌ವೇಗಳು, ಟ್ಯಾಕ್ಸಿವೇಗಳು ಮತ್ತು ವಿಮಾನಗಳನ್ನು ರಕ್ಷಿಸುವ ಫೈರ್ ಕಟ್ಟಡಗಳನ್ನು ಸಹ ಗುತ್ತಿಗೆಗೆ ನೀಡಲಾಗಿದೆ. ಇವು ಏರ್ ಟ್ರಾಫಿಕ್ ಸೇವೆಯ ಭಾಗವಾಗಿದೆ, ಅವುಗಳನ್ನು ಯಾರೂ ಗುತ್ತಿಗೆಗೆ ನೀಡುವುದಿಲ್ಲ … ವಾಸ್ತವವಾಗಿ, ವಾಯುಯಾನ ಸೇವೆಗಳ ಮೇಲಿನ ಸಂಪೂರ್ಣ ನಿಯಂತ್ರಣವನ್ನು ಅವರಿಗೆ ನೀಡಲಾಗಿದೆ, ಇದು ಎಎಐ ಕಾಯ್ದೆಗೆ ವಿರುದ್ಧವಾಗಿದೆ” ಎಂದು ಅವರು ವಾದಿಸಿದ್ದಾರೆ.
“ವಿಮಾನ ನಿಲ್ದಾಣವನ್ನು ಮೂರನೇ ವ್ಯಕ್ತಿಗೆ ನೀಡಲಾಗಿದೆ, ಇದು ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯ ನೀತಿಗೆ ಅನುಗುಣವಾಗಿಲ್ಲ. ಇದು ಪಾಲುದಾರಿಕೆಯಲ್ಲ ಬದಲಾಗಿ ಎಲ್ಲವನ್ನೂ ಅವರಿಗೆ ನೀಡುವುದಾಗಿದೆ” ಎಂದು ಅವರು ಹೇಳಿದ್ದಾರೆ.
ಈ ಅರ್ಜಿಯನ್ನು ವಿರೋಧಿಸಿ, ಒಕ್ಕೂಟ ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಂಬಿ ನರಗುಂದ ಹಾಜರಾಗಿದ್ದರು. ಅರ್ಜಿದಾರರ ಒಕ್ಕೂಟದ ಒಂದು ಶಾಖೆಯು ಕೇರಳ ಹೈಕೋರ್ಟ್‌ಗೆ ಕೂಡಾ ಅರ್ಜಿ ಸಲ್ಲಿಸಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ ನಂತರ ಅರ್ಜಿಯನ್ನು ವಜಾಗೊಳಿಸಲಾಗಿದೆ.
ಇದನ್ನೂ ಓದಿ: ಮುಂಬೈ ವಿಮಾನ ನಿಲ್ದಾಣದಲ್ಲಿನ ‘ಅದಾನಿ ಏರ್‌ಪೋರ್ಟ್’ ಬೋರ್ಡ್‌ಗಳನ್ನು ಕಿತ್ತೆಸೆದ ಶಿವಸೇನೆ ಕಾರ್ಯಕರ್ತರು


