ರೈತ ಹೋರಾಟ: 4 ರಾಜ್ಯಗಳಿಗೆ ವರದಿ ಕೇಳಿದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ
PC: Business Standard

ಒಕ್ಕೂಟ ಸರ್ಕಾರ ಜಾರಿಗೆ ತಂದಿರುವ ವಿವಾದಿತ ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿ ಗಡಿಗಳಲ್ಲಿ ನಡೆಯುತ್ತಿರುವ ರೈತ ಹೋರಾಟಕ್ಕೆ ಸಂಬಂಧಿಸಿ ದೆಹಲಿ, ಹರಿಯಾಣ, ಉತ್ತರಪ್ರದೇಶ ಮತ್ತು ರಾಜಸ್ಥಾನ ಸರ್ಕಾರಗಳಿಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ನೋಟಿಸ್‌ ಜಾರಿ ಮಾಡಿದೆ.

“ದೆಹಲಿಯ ವಿವಿಧ ಗಡಿಗಳಲ್ಲಿ ಕಳೆದ 9 ತಿಂಗಳುಗಳಿಂದ ರೈತರು ಹೋರಾಟ ನಡೆಸುತ್ತಿರುವುದರಿಂದ ಸುಮಾರು 9,000 ಕೈಗಾರಿಕಾ ಘಟಕಗಳು ಹಾಗೂ ಸಾರಿಗೆ ಸಂಸ್ಥೆಗಳು ಸಮಸ್ಯೆ ಎದುರಿಸುತ್ತಿವೆ. ಈ ಕುರಿತು ನಮಗೆ ಹಲವು ದೂರುಗಳು ಬಂದಿವೆ. ಈ ಹಿನ್ನೆಲೆ ದೆಹಲಿಗೆ ಹೊಂದಿಕೊಂಡಿರುವ ಹರಿಯಾಣ, ಉತ್ತರಪ್ರದೇಶ ಹಾಗೂ ರಾಜಸ್ಥಾನದ ಗಡಿಗಳಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಸಂಬಂಧಿಸಿ ಸ್ಥಳೀಯವಾಗಿ ಯಾವ ರೀತಿ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿ ನೀಡುವಂತೆ ಆಯಾ ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳು ಹಾಗೂ ಪೊಲೀಸ್‌ ಇಲಾಖೆಯ ಮುಖ್ಯಸ್ಥರಿಗೆ ನೋಟಿಸ್‌ ನೀಡಿಲಾಗಿದೆ” ಎಂದು ಮಾನವ ಹಕ್ಕುಗಳ ಆಯೋಗ ಖಚಿತ ಪಡಿಸಿದೆ.

“ದೆಹಲಿಯ ಹೆದ್ದಾರಿಗಳಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಸಾರಿಗೆ ಸಂಚಾರದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಪ್ರತಿಭಟನೆಯಿಂದ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚುತ್ತಿದೆ. ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್‌ಗಳನ್ನು ಇರಿಸಿರುವುದರಿಂದ ವಾಹನ ಸವಾರರು ನಿರ್ಧಿಷ್ಟ ಸ್ಥಳಗಳನ್ನು ತಲುಪಲು ಬಹಳ ದೂರ ಪ್ರಯಾಣಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ತನಗೆ ಬಂದಿರುವ ದೂರುಗಳಲ್ಲಿ ಉಲ್ಲೇಖಿಸಲಾಗಿದೆ” ಎಂದು ಆಯೋಗ ಮಾಹಿತಿ ನೀಡಿದೆ.

ಇದನ್ನೂ ಓದಿ: NEP ವಿರೋಧಿಸಿ ಪ್ರತಿಭಟಿಸುತ್ತಿದ್ದ ಕ್ಯಾಂಪಸ್ ಫ್ರಂಟ್ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್: ತೀವ್ರ ಖಂಡನೆ

ರೈತರು ಪ್ರತಿಭಟನಾ ಸ್ಥಳಗಳಲ್ಲಿ ಕೊರೊನಾ ನಿಯಮಗಳನ್ನು ಅನುಸರಿಸುತ್ತಿಲ್ಲ ಎಂಬ ಆರೋಪಗಳು ಕೂಡ ಕೇಳಿ ಬಂದಿವೆ. ಇದರ ಜೊತೆಗೆ ಪ್ರತಿಭಟನಾ ಸ್ಥಳದ ಸಮೀಪದಲ್ಲಿರುವ ನಿವಾಸಿಗಳ ಸಂಚಾರಕ್ಕೆ ಹೋರಾಟ ನಿರತರು ಅಡ್ಡಿ ಪಡಿಸತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಇವೆಲ್ಲವೂ ಮಾನವ ಹಕ್ಕುಗಳ ಉಲ್ಲಂಘನೆಯಂತಾಗುತ್ತದೆ. ಈ ವಿಚಾರಗಳ ಕುರಿತು ಆಯಾ ರಾಜ್ಯ ಸರ್ಕಾರಗಳು ಯಾವೆಲ್ಲ ಕ್ರಮಗಳನ್ನು ಕೈಗೊಂಡಿವೆ ಎಂಬುದರ ಬಗ್ಗೆ ವರದಿ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ಪೊಲೀಸ್‌ ಇಲಾಖೆಯ ವರಿಷ್ಠರಿಗೆ ಸೂಚನೆ ನೀಡಿರುವುದಾಗಿ ಆಯೋಗ ತಿಳಿಸಿದೆ.

ರೈತರ ಪ್ರತಿಭಟನೆ ಕೈಗಾರಿಕೆಗಳು, ಆರ್ಥಿಕ ವಹಿವಾಟು, ಸಾರಿಗೆ ವ್ಯವಸ್ಥೆ ಹಾಗೂ ಗ್ರಾಹಕರ ಮೇಲೆ ಯಾವ ರೀತಿ ಪರಿಣಾಮ ಬೀರಿದೆ ಎಂಬ ಬಗ್ಗೆ ಅಧ್ಯಯನ ನಡೆಸಿ ಅಕ್ಟೋಬರ್‌ 10ರ ಒಳಗೆ ವರದಿ ನೀಡುವಂತೆ ಇನ್‌ಸ್ಟಿಟ್ಯೂಟ್‌ ಆಫ್‌ ಎಕನಾಮಿಕ್‌ ಗ್ರೌಥ್‌ಗೆ ಆಯೋಗ ಸೂಚನೆ ನೀಡಿದೆ. ಇದರ ಜೊತೆಗೆ ಪ್ರತಿಭಟನಾ ಸ್ಥಳಗಳಲ್ಲಿ ಕೋವಿಡ್‌ ಮಾರ್ಗಸೂಚಿಯ ಪಾಲನೆ ಮತ್ತು ಉಲ್ಲಂಘನೆಯ ಕುರಿತು ವರದಿ ನೀಡುವಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಕೇಂದ್ರ ಗೃಹ ಸಚಿವಾಲಯ ಹಾಗೂ ಕೇಂದ್ರ ಆರೋಗ್ಯ ಸಚಿವಾಲಯಕ್ಕೂ ಸೂಚನೆ ನೀಡಲಾಗಿದೆ.

ವಿವಾದಿತ ಕೃಷಿ ಕಾಯ್ದೆಗಳು ಜಾರಿಯಾಗಿ ಸೆ. 27ಕ್ಕೆ ಒಂದು ವರ್ಷ ಕಳೆಯಲಿದೆ. ಈ ವಿವಾದಿತಕ ಕಾಯ್ದೆಗಳನ್ನು ವಿರೋಧಿಸಿ ರೈತರು ದೆಹಲಿ ಗಡಿಗಳಲ್ಲಿ ನಡೆಸುತ್ತಿರುವ ಹೋರಾಟ 10ನೇ ತಿಂಗಳಿಗೆ ಕಾಲಿಟ್ಟಿದೆ. ಕಾಯ್ದೆಗಳನ್ನು ವಿರೋಧಿಸುತ್ತಾ ಈವರೆಗೆ 594 ರೈತರು ಹುತಾತ್ಮರಾಗಿದ್ದಾರೆ.

“ಕಳೆದ 10 ತಿಂಗಳ ಅವಧಿಯಲ್ಲಿ ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸುತ್ತ ರೈತರು ಕೊನೆಯುಸಿರೆಳೆದಾಗ ಮಾನವ ಹಕ್ಕುಗಳ ಆಯೋಗ ಅದನ್ನೇಕೆ ಪ್ರಶ್ನಿಸಲಿಲ್ಲ..? ಕೇಂದ್ರ ಸರ್ಕಾರ ಬಲವಂತವಾಗಿ ರೈತರ ಹಕ್ಕುಗಳನ್ನು ಕಿತ್ತುಕೊಳ್ಳಲು ಯತ್ನಿಸಿದರೂ ಆಯೋಗ ಆ ಕುರಿತು ಏಕೆ ಮಾತನಾಡಲಿಲ್ಲ..? ಇಡೀ ದೇಶದಲ್ಲಿ ಕೊರೊನಾ ಹೆಚ್ಚಾಗಿದ್ದರೂ ಪ್ರತಿಭಟನಾ ಸ್ಥಳಗಳಲ್ಲಿ ಹೆಚ್ಚಿನ ಪ್ರಕರಣಗಳು ಕಂಡು ಬಂದಿಲ್ಲ. ಇದೆಲ್ಲವೂ ಇಡೀ ದೇಶಕ್ಕೆ ತಿಳಿದಿರುವ ಸಂಗತಿ. ರೈತರ ಸಾವಿನ ಬಗ್ಗೆ ತಲೆ ಕೆಡಿಸಿಕೊಳ್ಳದ ಇದೇ ಮಾನವ ಹಕ್ಕುಗಳ ಆಯೋಗ ಈಗ ರೈತರ ವಿಚಾರದಲ್ಲಿ ವಿಶೇಷ ಕಾಳಜಿ ತೂರಿಸುತ್ತಿರುವುದೇಕೆ? ಈ ಹಿಂದೆ ಬಿಜೆಪಿ ಸರ್ಕಾರ ನಡೆದುಕೊಂಡಂತೆ ಇದು ಕೂಡ ರೈತ ಹೋರಾಟವನ್ನು ಹತ್ತಿಕ್ಕಲು ನಡೆಸುತ್ತಿರುವ ಪಿತೂರಿಯೇ?” ಎಂದು ಹೋರಾಟ ನಿರತ ರೈತ ಸಂಘಟನೆಗಳು ಅನುಮಾನ ವ್ಯಕ್ತಪಡಿಸಿವೆ.


ಇದನ್ನೂ ಓದಿ: ಕೇಂದ್ರದ ಮೇಲೆ ಒತ್ತಡ ತರಲು ಪ್ರತಿಭಟನೆಯನ್ನು ದೆಹಲಿಗೆ ವರ್ಗಾಯಿಸಿ: ರೈತರಲ್ಲಿ ಅಮರಿಂದರ್ ಸಿಂಗ್ ಮನವಿ

LEAVE A REPLY

Please enter your comment!
Please enter your name here