ಕಳೆದ ವರ್ಷ ಆರಂಭಗೊಂಡು ಇನ್ನು ಸಾಗುತ್ತಿರುವ ರೈತ ಪ್ರತಿಭಟನೆ ಪಂಜಾಬಿನ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದಿರುವ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ಒಕ್ಕೂಟ ಸರ್ಕರದ ಮೇಲೆ ಒತ್ತಡ ತರಲು ಪ್ರತಿಭಟನೆಯನ್ನು ದೆಹಲಿಗೆ ವರ್ಗಾಯಿಸಿ ಎಂದಿದ್ದಾರೆ.
ಕಳೆದ ವರ್ಷ ನವೆಂಬರ್ 26 ರಿಂದ ದೆಹಲಿಯ ಗಡಿಗಳಲ್ಲಿ ರೈತ ಪ್ರತಿಭಟನೆ ನಡೆಸುತ್ತಿದ್ದರೂ, ಪಂಜಾಬಿನಲ್ಲಿ ಅಕ್ಟೋಬರ್ ಒಂದರಿಂದಲೇ ಪ್ರತಿಭಟನೆ ಆರಂಭವಾಗಿತ್ತು. ಇದು ಪಂಜಾಬ್ ಆರ್ಥಿಕತೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಕಳವಳ ವ್ಯಕ್ತಪಡಿಸಿದ್ದಾರೆ.
ಒಕ್ಕೂಟ ಸರ್ಕಾರ ಜಾರಿಗೆ ತಂದಿರುವ ಮೂರು ವಿವಾದಿತ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು, ಒಕ್ಕೂಟ ಸರ್ಕಾರದ ಮೇಲೆ ಒತ್ತಡ ತರಲು ನವದೆಹಲಿಯಲ್ಲಿರುವ ಸರ್ಕಾರವನ್ನು ಕೇಂದ್ರಿಕರಿಸಿ, ಪಂಜಾಬ್ ಮತ್ತು ರಾಜ್ಯದ ಆಡಳಿತವನ್ನು ಬಿಟ್ಟು ಬಿಡಿ ಎಂದಿದ್ದಾರೆ.
“ನೀವು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಬಯಸಿದರೆ, ನಿಮ್ಮ ಪ್ರತಿಭಟನೆಯನ್ನು ದೆಹಲಿಗೆ ವರ್ಗಾಯಿಸಿ. ನಿಮ್ಮ ಪ್ರತಿಭಟನೆಗಳಿಂದ ಪಂಜಾಬ್‌ಗೆ ತೊಂದರೆ ನೀಡಬೇಡಿ” ಎಂದು ಅಮರಿಂದರ್ ಸಿಂಗ್ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ರೈತ ಹೋರಾಟ: ಕರ್ನಾಲ್ ಲಾಠಿಚಾರ್ಜ್ ಕುರಿತ ತನಿಖೆಗೆ ಸಿದ್ಧ- ಹರಿಯಾಣ ಗೃಹ ಸಚಿವ
“ಇಂದಿಗೂ ಸಹ, ರಾಜ್ಯದ 113 ಸ್ಥಳಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದ ರಾಜ್ಯದ ಅಭಿವೃದ್ಧಿಯ ಮೇಲೆ ಪರಿಣಾಮ ಬೀರುತ್ತಿದೆ” ಎಂದು ಹೋಶಿಯಾರ್‌ಪುರ ಜಿಲ್ಲೆಯ ಮುಖ್ಲಿಯಾನಾ ಹಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
“ಸಿಂಘು ಮತ್ತು ಟಿಕ್ರಿ ಗಡಿಗಳಲ್ಲಿ ಕುಳಿತಿರುವ ರೈತರಿಗೆ ನೆರವು ನೀಡಲು ಒಕ್ಕೂಟ ಸರ್ಕಾರ ಕೃಷಿ ಕಾನೂನುಗಳನ್ನು ಏಕೆ ರದ್ದುಗೊಳಿಸುವುದಿಲ್ಲ” ಎಂದು ಪ್ರಶ್ನಿಸಿದ್ದಾರೆ. ಪಂಜಾಬ್ ಸರ್ಕಾರವು ಕೃಷಿ ಕಾನೂನುಗಳ ವಿರುದ್ಧದ ರೈತ ಪ್ರತಿಭಟನೆಯಲ್ಲಿ ಹುತಾತ್ಮರಾದ ರಾಜ್ಯದ ಪ್ರತಿಯೊಬ್ಬ ರೈತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಮತ್ತು ಉದ್ಯೋಗ ನೀಡಿದೆ ಎಂದಿದ್ದಾರೆ.
ರೈತರ ಬೇಡಿಕೆಗಳಿಗೆ ತಮ್ಮ ಸರ್ಕಾರದ ಸ್ಪಂದಿಸುತ್ತಿದೆ ಎಂದಿರುವ ಅವರು, ರೈತರು ಅವರನ್ನು ಭೇಟಿ ಮಾಡಿದ ನಂತರ ಅವರ ಸರ್ಕಾರ ಇತ್ತೀಚೆಗೆ ಕಬ್ಬಿನ ಬೆಲೆಯನ್ನು ಹೆಚ್ಚಿಸಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಹಿಂದೆ, ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಸ್ವತಃ ವಿವಾದಿತ ಮೂರು ಕೇಂದ್ರ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನಾ ಮೆರವಣಿಗೆಗಳನ್ನು ನಡೆಸಿದ್ದರು. ಅದು ಸಾವಿರಾರು ರೈತರನ್ನು ಕೆರಳಿಸಿ ಪ್ರತಿಭಟನೆ ತೀವ್ರಗೊಳ್ಳಲು ಕಾರಣವಾಗಿತ್ತು.
ಕಳೆದ ನವೆಂಬರ್ 26 ರಿಂದ ದೆಹಲಿಯ ಸಿಂಘು, ಟಿಕ್ರಿ, ಗಾಝಿಪುರ್ ಮತ್ತು ರಾಜಸ್ಥಾನದ ಶಹಜಾನ್‌ಪುರ ಗಡಿ ಭಾಗಗಳಲ್ಲಿ ಕೃಷಿ ಕಾನೂನುಗಳ ವಿರುದ್ಧ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಪಂಜಾಬಿನ ಎಲ್ಲಾ ಜಿಲ್ಲಾ ಸ್ಥಳಗಳಲ್ಲಿ ಪ್ರತಿಭಟನೆ ಜಾರಿಯಲ್ಲಿದೆ.
ಇದನ್ನೂ ಓದಿ: ಹರಿಯಾಣ :ಕರ್ನಾಲ್ ಶಾಶ್ವತ ಪ್ರತಿಭಟನಾ ಸ್ಥಳವಾಗಿ ಉಳಿಯಬಹುದು- ರೈತರ ಎಚ್ಚರಿಕೆ