ಮೂಢನಂಬಿಕೆ ವಿರೋಧಿ ಹೋರಾಟಗಾರ ಡಾ. ನರೇಂದ್ರ ದಾಬೋಲ್ಕರ್ ಹತ್ಯೆ ಪ್ರಕರಣದ ಐವರು ಆರೋಪಿಗಳ ವಿರುದ್ಧ ಪುಣೆಯ ವಿಶೇಷ ನ್ಯಾಯಾಲಯವು ಬುಧವಾರ ದೊಷಾರೋಪಗಳನ್ನು ದಾಖಲಿಸಿದೆ. ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನ್ ಸಮಿತಿಯ ಮುಖ್ಯಸ್ಥರಾಗಿದ್ದ ದಾಭೋಲ್ಕರ್ ಅವರನ್ನು 2013 ರ ಆಗಸ್ಟ್ 20 ರಂದು ಪುಣೆಯಲ್ಲಿ ಬಲಪಂಥೀಯ ಸಂಘಟನೆಯ ಉಗ್ರಗಾಮಿಗಳು ಹತ್ಯೆಗೈದಿದ್ದರು.
ಪ್ರಕರಣದ ಕುರಿತು ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ತನಿಖೆ ನಡೆಸುತ್ತಿದೆ. ನ್ಯಾಯಾಲಯವು ದೋಷಾರೋಪಗಳನ್ನು ದಾಖಲಿಸಿದ ನಂತರ ಕ್ರಿಮಿನಲ್ ವಿಚಾರಣೆ ಆರಂಭವಾಗುತ್ತದೆ. ಐವರು ಆರೋಪಿಗಳನ್ನು ಡಾ.ವೀರೇಂದ್ರ ಸಿನ್ಹಾ ತಾವಡೆ, ಸಚಿನ್ ಆಂದುರೆ, ಶರದ್ ಕಲಾಸ್ಕರ್, ವಕೀಲ ಸಂಜೀವ್ ಪುಣೇಕರ್, ಆತನ ಸಹಾಯಕ ವಿಕ್ರಮ್ ಭಾವೆ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ‘ಎರಡು ಗುಂಡು ಹಾರಿಸಿ ಕೊಂದೆ’: ದಾಬೋಲ್ಕರ್ ಹಂತಕನ ತಪ್ಪೊಪ್ಪಿಗೆಯಲ್ಲಿ ಮತ್ತಷ್ಟು ಶಾಕ್‌ಗಳು!
ವೀರೇಂದ್ರ ಸಿನ್ಹಾ ತಾವಡೆ, ಸಚಿನ್ ಆಂದುರೆ ಮತ್ತು ಶರದ್ ಕಲಾಸ್ಕರ್ ತಮ್ಮ ಜೈಲಿನಿಂದಲೇ ವಿಚಾರಣೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದಾರೆ. ಅವರು ತಮ್ಮ ವಕೀಲರೊಂದಿಗೆ ಈ ವಿಷಯವನ್ನು ಚರ್ಚಿಸಲು ಬಯಸುತ್ತೇವೆ ಎಂದು ಹೇಳಿ ನ್ಯಾಯಾಲಯದಿಂದ ಹೆಚ್ಚಿನ ಸಮಯವನ್ನು ಕೋರಿದರಾದರೂ, ನ್ಯಾಯಾಲಯ ಈ ಮನವಿಯನ್ನು ತಿರಸ್ಕರಿಸಿತು.
ಇತರ ಇಬ್ಬರು ಆರೋಪಿಗಳಾದ ವಕೀಲ ಸಂಜೀವ್ ಪುಣೇಕರ್ ಮತ್ತು ಆತನ ಸಹಾಯಕ ವಿಕ್ರಮ್ ಭಾವೆ ದೈಹಿಕವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ವೀರೇಂದ್ರ ಸಿನ್ಹಾ ತಾವಡೆ, ಸಚಿನ್ ಆಂದುರೆ, ಶರದ್ ಕಲಾಸ್ಕರ್ ಮತ್ತು ವಿಕ್ರಮ್ ಭಾವೆ ವಿರುದ್ದ, ಭಾರತೀಯ ದಂಡ ಸಂಹಿತೆ(ಐಪಿಸಿ) ಸೆಕ್ಷನ್‌ಗಳ, 302(ಕೊಲೆ), 120 (ಬಿ) (ಕ್ರಿಮಿನಲ್ ಪಿತೂರಿ), 34 (ಸಾಮಾನ್ಯ ಉದ್ದೇಶ), ಶಸ್ತ್ರಾಸ್ತ್ರ ಕಾಯ್ದೆಯ ಸಂಬಂಧಿತ ಕಾಯ್ದೆಗಳು ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯಿದೆ(ಯುಎಪಿಎ)ಯ ಸೆಕ್ಷನ್ 16 (ಭಯೋತ್ಪಾದಕ ಕೃತ್ಯಕ್ಕೆ ಶಿಕ್ಷೆ) ರ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿದೆ.
ಇದನ್ನೂ ಓದಿ: ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಪ್ರಪಾತಕ್ಕೆ ಬಿದ್ದ ಭಾರತ: ಮೋದಿ ಸರ್ಕಾರವೇ ಕಾರಣವೆಂದ ಸಮೀಕ್ಷಾ ಸಂಸ್ಥೆ!
ಜೊತೆಗೆ, ವಕೀಲ ಸಂಜೀವ್ ಪುಣೇಕರ್ ವಿರುದ್ಧ ಐಪಿಸಿ ಸೆಕ್ಷನ್ 201 ರ ಅಡಿಯಲ್ಲಿ ಆರೋಪಗಳನ್ನು ದಾಖಲಿಸಲಾಗಿದೆ.
2014ರಲ್ಲಿ ದಾಬೋಲ್ಕರ್ ಹತ್ಯೆ ಪ್ರಕರಣ ಪುಣೆ ಪೊಲೀಸರಿಂದ ಸಿಬಿಐಗೆ ತನಿಖೆ ವರ್ಗಾವಣೆಯಾಗಿತ್ತು. ದಾಬೋಲ್ಕರ್ ಹತ್ಯೆಗೆ ಸಂಬಂಧಿಸಿದಂತೆ ಸನಾತನ ಸಂಸ್ಥೆಗೆ ಸಂಬಂಧಿಸಿದ ಐವರನ್ನು ಸಿಬಿಐ ಬಂಧಿಸಿತ್ತು. ವಕೀಲ ಸಂಜೀವ್ ಪುಣೇಕರ್ ಮತ್ತು ವಿಕ್ರಮ್ ಭಾವೆ ಜಾಮೀನು ಮೇಲೆ ಹೊರಗಡೆ ಬಂದಿದ್ದಾರೆ. ಉಳಿದ ಮೂವರು ಜೈಲಿನಲ್ಲಿದ್ದಾರೆ.
2013 ರ ಆಗಸ್ಟ್ 20 ರಲ್ಲಿ ಪುಣೆ ನಗರದಲ್ಲಿ ಬೆಳಗಿನ ವಾಕಿಂಗ್ ವೇಳೆ ದಾಬೋಲ್ಕರ್ ಅವರ ಹತ್ಯೆ ಮಾಡಲಾಗಿತ್ತು. ಅದಾದ ನಂತರ ಗೋವಿಂದ ಪನ್ಸಾರೆ, ಎಂ.ಎಂ.ಕಲ್ಬುರ್ಗಿ ಮತ್ತು ಗೌರಿ ಲಂಕೇಶರ ಹತ್ಯೆಗಳಾಗಿದ್ದವು.
ಇದನ್ನೂ ಓದಿ: ಪನ್ಸಾರೆ, ದಾಬೋಲ್ಕರ್ ಹತ್ಯೆ ಪ್ರಕರಣದ ತನಿಖೆಗೆ ಇನ್ನೆಷ್ಟು ದಿನ ಬೇಕು?- ಬಾಂಬೆ ಹೈಕೋರ್ಟ್ ಪ್ರಶ್ನೆ


