ನಾಗಾಲ್ಯಾಂಡ್ ರಾಜ್ಯಪಾಲ ಆರ್.ಎನ್.ರವಿ, 2014ರಿಂದ ನಾಗಾ ಶಾಂತಿ ಮಾತುಕತೆಗೆ ಕೇಂದ್ರದ ಸಮಾಲೋಚಕರಾಗಿದ್ದರು. ಅವರನ್ನು ಇದ್ದಕ್ಕಿದ್ದಂತೆ ತಮಿಳುನಾಡಿಗೆ ವರ್ಗಾವಣೆ ಮಾಡಲಾಯಿತು. ಈ ವರ್ಗಾವಣೆಗೆ ನಾಗಾಲ್ಯಾಂಡ್ ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ ಹಾಗೂ ಇತ್ತೀಚಿನ ಬೆಳವಣಿಗೆಗಳು ಪ್ರಕ್ರಿಯೆಯನ್ನು ವೇಗಗೊಳಿಸುತ್ತವೆಯೇ ಅಥವಾ ಸ್ಥಗಿತಗೊಳಿಸುತ್ತವೆಯೇ ಎಂದು ಮತ್ತು ನಾಗಾ ಶಾಂತಿ ಪ್ರಕ್ರಿಯೆ ಯಾವ ದಿಕ್ಕಿಗೆ ಹೋಗುವುದು ಎಂಬುದರ ಬಗ್ಗೆ ಎಂದು ರಾಜ್ಯದ ನಿವಾಸಿಗಳನ್ನು ಗೊಂದಲದಲ್ಲಿ ನೂಕಿದೆ.
ಕೇಂದ್ರವು ಆಡಳಿತಾತ್ಮಕ ಬದಲಾವಣೆಗಳ ಸರಣಿಯಲ್ಲಿ ಸೆಪ್ಟೆಂಬರ್ 9ರಂದು ನಾಗಾಲ್ಯಾಂಡ್ ರಾಜ್ಯಪಾಲ ಆರ್.ಎನ್.ರವಿ ಅವರನ್ನು ತಮಿಳುನಾಡಿನ ಮುಂದಿನ ರಾಜ್ಯಪಾಲರನ್ನಾಗಿ ವರ್ಗಾಯಿಸಲು ಆದೇಶಿಸಿತು. ಅಸ್ಸಾಂ ರಾಜ್ಯಪಾಲ ಜಗದೀಶ್ ಮುಖಿ ನಾಗಾಲ್ಯಾಂಡ್‌ನ ಹೆಚ್ಚುವರಿ ಉಸ್ತುವಾರಿಯನ್ನು ಹೊರುತ್ತಾರೆ.
ರವಿ 2019ರಲ್ಲಿ ನಾಗಾಲ್ಯಾಂಡ್ ರಾಜ್ಯಪಾಲರಾಗಿ ನೇಮಕಗೊಂಡಾಗಲೂ ಇದೇ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾದವು. ದಶಕಗಳಷ್ಟು ಹಳೆಯ ನಾಗಾ ರಾಜಕೀಯ ಸಮಸ್ಯೆಯನ್ನು ಬಗೆಹರಿಸಲು ಇದೊಂದು ಸಕಾರಾತ್ಮಕ ಸಂಕೇತವೆಂದು ಹಲವರು ನೋಡಿದರೆ, ಇನ್ನೂ ಕೆಲವರು ಎರಡು ಸಾಂವಿಧಾನಿಕ ಹುದ್ದೆಗಳನ್ನು ಹೇಗೆ ಸಂಯೋಜಿಸುತ್ತಾರೆ ಎಂಬುದರ ಬಗ್ಗೆ ಸಂಶಯ ಹೊಂದಿದ್ದರು. ಆದರೆ ಇತರರು ಈಗ ನಡೆಯುತ್ತಿರುವ ಶಾಂತಿ ಮಾತುಕತೆಯನ್ನು, ಕೇಂದ್ರದ ಪ್ರಧಾನಿ ಮಟ್ಟದಿಂದ ರಾಜ್ಯಪಾಲರ ಮಟ್ಟಕ್ಕೆ ಕೆಳಗಿಳಿಸುತ್ತಿದ್ದಾರೆ ಎಂದು ಊಹಿಸಿದರು.

ಸಂಧಾನಕಾರರಾಗಿ ರವಿ ಕಳೆದ ವರ್ಷ ಐಸಾಕ್ ಮುಯಿವಾ ನೇತೃತ್ವದ ನಾಗಾಲ್ಯಾಂಡ್‌ನ ರಾಷ್ಟ್ರೀಯ ಸಮಾಜವಾದಿ ಕೌನ್ಸಿಲ್ (NSCN-IM) ನೊಂದಿಗೆ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರು. ಅವರೊಂದಿಗೆ ಇದ್ದ ಒಪ್ಪಂದವನ್ನು ರವಿ ಅವರು ತಪ್ಪಾಗಿ ಅರ್ಥೈಸಿಕೊಂಡು, ಆ ಒಪ್ಪಂದದಲ್ಲಿ ಬದಲಾವಣೆ ಮಾಡಲು ಪ್ರಯತ್ನಿಸಿದ ನಂತರ, 2015ರ ಚೌಕಟ್ಟಿನ ಒಪ್ಪಂದದ ಮೇಲೆ ಸಹಿ ಹಾಕುವ ಪ್ರಯತ್ನ ಮಾಡಿದರು. ಅದರ ತರುವಾಯ, (NSCN-IM), ರವಿ ಅವರನ್ನು ಸಂಧಾನಕಾರರ ಪಟ್ಟಿಯಿಂದ ತೆಗೆದುಹಾಕುವಂತೆ ಒತ್ತಾಯಿಸಿತು.
ರಾಜಕೀಯ ವಲಯದಲ್ಲಿ ರಾಜ್ಯದ ಗವರ್ನರ್ ಅವರನ್ನು ಹಠಾತ್ತಾಗಿ ತೆಗೆದುಹಾಕುವುದು ಶಾಂತಿ ಒಪ್ಪಂದವನ್ನು ಅಂತಿಮಗೊಳಿಸಲು ಒಂದು ಸಕಾರಾತ್ಮಕ ಹೆಜ್ಜೆಯೆಂದು ಪರಿಗಣಿಸಲಾಗಿದೆ. ನಾಗಾಲ್ಯಾಂಡ್ ಶಾಸಕಾಂಗ ಸಭೆಯ ಎಲ್ಲಾ ಸದಸ್ಯರು ಒಪ್ಪಂದ ಮಾಡಿಕೊಳ್ಳಲು ಒಂದೆಡೆಗೆ ಬರಲು ಒಪ್ಪಿಕೊಂಡಿದ್ದ ಸಮಯದಲ್ಲಿ ಈ ಬೆಳವಣಿಗೆಗೆ ವಿಶೇಷ ಮಹತ್ವ ಬಂದಿದೆ.
’ಈ ದಿಢೀರ್ ನಿರ್ಧಾರದಿಂದ ನಾನು ಆಶ್ಚರ್ಯಗೊಂಡಿದ್ದೇನೆ, ಬಹುಶಃ ಇದರ ಹಿಂದೆ ಕೇಂದ್ರದ ಯಾವುದೋ ಯೋಜನೆ ಇರಬಹುದು’ ಹೀಗೆ ಭಾರತೀಯ ಜನತಾ ಪಾರ್ಟಿಯ ಪ್ರಮುಖರಾದ ಇಮ್ನಾ ಅಲಾಂಗ್ ಅವರು ಪ್ರತಿಕ್ರಿಯೆ ನೀಡಿದರು.
ಆಡಳಿತಾರೂಢ ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೊಗ್ರೆಸ್ಸಿವ್ ಪಾರ್ಟಿ (ಎನ್‌ಡಿಪಿಪಿ)ಯು ಈ ನಿರ್ಧಾರವು ನಾಗಾಲ್ಯಾಂಡ್ ಮತ್ತು ನಾಗಾ ಜನರಿಗೆ ಒಳ್ಳೆಯದು ಮಾಡುತ್ತೆ ಎಂದು ಭಾರತ ಸರ್ಕಾರವು ಅಭಿಪ್ರಾಯಪಟ್ಟರೆ ಅದನ್ನು ಸ್ವಾಗತಿಸುತ್ತದೆ ಎಂದು ಹೇಳಿದೆ. ಪಕ್ಷದ ವಕ್ತಾರರಾದ ಮೆರೆಂತೊಶಿ ಆರ್ ಜಮೀರ್ ಅವರು ’ನಾಗಾ ರಾಜನೈತಿಕ ಸಂಧಾನದ ಪ್ರಶ್ನೆ ಬಂದಾಗ ನಮಗೆ ಪ್ರಧಾನ ಮಂತ್ರಿ ಮತ್ತು ಕೇಂದ್ರೀಯ ಗೃಹ ಸಚಿವರು ಮಾತುಕತೆಯನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯುವರು ಹಾಗೂ ಗೌರವಪೂರ್ಣ ಪರಿಹಾರವನ್ನು ಕಂಡುಕೊಳ್ಳುವರು ಎಂದು ನಮಗೆ ವಿಶ್ವಾಸವಿದೆ’ ಎಂದರು. ನಾಗಾ ಪೀಪಲ್ಸ್ ಫ್ರಂಟ್ (ಎನ್‌ಪಿಎಫ್)ನ ಶಾಸಕ ಮತ್ತು ಮಾಜಿ ಮುಖ್ಯಮಂತ್ರಿ ಟಿಆರ್ ಜೆಲಿಯಾಂಗ್ ಅವರು ರವಿ ಅವರ ಬಗ್ಗೆ ಹೇಳುತ್ತ ಅವರು ರಾಜ್ಯದ ಗವರ್ನರ್ ಆಗಿ ನೇಮಕಗೊಳ್ಳುವವರೆಗೂ ನಾಗಾ ಸಮಸ್ಯೆಯನ್ನು ಪರಿಹರಿಸಲು ಉತ್ಸಾಹ ತುಂಬಿದ ವ್ಯಕ್ತಿಯಾಗಿದ್ದರು ಎಂದಿದ್ದಾರೆ
ನಾಗ ಹೋಹೊ ಅಧ್ಯಕ್ಷ ಎಚ್‌ಕೆ ಜಿಮೋಮಿ, ರಾಜ್ಯಪಾಲರಾಗಿ ರವಿ ರಾಜ್ಯದ ಜನರೊಂದಿಗೆ ಹೆಜ್ಜೆ ಹಾಕಲು ಸಾಧ್ಯವಾಗುತ್ತಿದ್ದಿಲ್ಲ ಎಂದು ಹೇಳಿದರು. ನಾಗಾಲ್ಯಾಂಡ್‌ನ ರಾಜ್ಯಪಾಲರಾದ ನಂತರ ರವಿ ಅವರು ನಾಗಾ ಶಾಂತಿ ಮಾತುಕತೆಗಳನ್ನು ತಪ್ಪಾಗಿ ಅರ್ಥೈಸಲು ಆರಂಭಿಸಿದರು ಮತ್ತು ಅವರ ಸಾರ್ವಜನಿಕ ಭಾಷಣಗಳಲ್ಲಿ ಒಂದು ಪಕ್ಷದ ಪರವಹಿಸಲು ಆರಂಭಿಸಿದರು, ಆದರೆ ರಾಜ್ಯದ ಜನರೊಂದಿಗಿನ ಅವರ ಸಂಬಂಧವು ಸಂಪೂರ್ಣವಾಗಿ ರಾಜಕೀಯವಾಗಿಬಿಟ್ಟಿತ್ತು.
ವಿವಿಧ ಕಾರಣಗಳನ್ನು ಮುಂದಿಟ್ಟು ರವಿ ಅವರನ್ನು ನಾಗಾಲ್ಯಾಂಡ್ ರಾಜ್ಯಪಾಲರ ಸ್ಥಾನದಿಂದ ತೆಗೆದುಹಾಕುವಂತೆ ನಾಗ ಹೋಹೊ 2020ರಲ್ಲಿ ಕೇಂದ್ರಕ್ಕೆ ಪತ್ರ ಬರೆದಿದ್ದರು. ಈಮೋಮಿ, ರವಿ ಅವರನ್ನು ರಾಜ್ಯಪಾಲ ಸ್ಥಾನದಿಂದ ಬದಲಾಯಿಸುವುದು ಬಹಳ ಸಮಯದಿಂದ ಪರಿಗಣನೆಯಲ್ಲಿತ್ತು ಎಂದು ಹೇಳಿ ಈ ಬೆಳವಣಿಗೆಯ ನಂತರ ನಾಗಾ ಜನರು ಶಾಂತಿ ಪ್ರಕ್ರಿಯೆಯಲ್ಲಿ ಸಕಾರಾತ್ಮಕ ಫಲಿತಾಂಶವನ್ನು ನಿರೀಕ್ಷಿಸಬಹುದು ಎಂದು ಹೇಳಿದ್ದಾರೆ.
“ತನ್ನ ಹಿಂದಿನವರಿಗಿಂತ ಭಿನ್ನವಾಗಿ, ನಾಗ ನಾಗರಿಕ ಸಮಾಜಕ್ಕೆ ರಾಜ್ಯಪಾಲ ರವಿ ಅವರ ಸಂಬಂಧವು ಸಂಪೂರ್ಣವಾಗಿ ನಾಗ ಶಾಂತಿ ಪ್ರಕ್ರಿಯೆಯನ್ನು ಆಧರಿಸಿತ್ತು. ಈ ಪ್ರಕ್ರಿಯೆಯಲ್ಲಿ ಅವರು ನಾಗಾಲ್ಯಾಂಡ್ ಜನರಿಂದ ಮತ್ತು ಮುಖ್ಯವಾಹಿನಿಯ ನಾಗ ಸಂಘಟನೆಗಳಿಂದ ದೂರವಾಗಿದ್ದರು” ಎಂದು ಹಿರಿಯ ಪತ್ರಕರ್ತ ಮತ್ತು ನಾಗಾಲ್ಯಾಂಡ್ ಪ್ರೆಸ್ ಅಸೋಸಿಯೇಶನ್ ಅಧ್ಯಕ್ಷ ಎಚ್. ಚಿಶಿ ಹೇಳಿದರು. ಅವರು ರಾಜ್ಯಪಾಲರಾಗಿ, ಕೇವಲ ನಾಗ ಸಂಘಟನೆಗಳೊಂದಿಗೆ ಮಾತ್ರವಲ್ಲ, ರಾಜ್ಯ ಸರ್ಕಾರದೊಂದಿಗೆ ಸಂಬಂಧವನ್ನು ಹದಗೆಡಿಸಿದ್ದಾರೆ, ಇದರಲ್ಲಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಸಹ ಭಾಗಿಯಾಗಿದೆ ಎಂದರು.
ರವಿ ಮತ್ತು ನಾಗಾಲ್ಯಾಂಡ್‌ನ ಹಿಂದಿನ ರಾಜ್ಯಪಾಲರ ನಡುವಿನ ಹೋಲಿಕೆ ಇನ್ನಷ್ಟು ಸ್ಪಷ್ಟವಾಗುತ್ತದೆ ಏಕೆಂದರೆ ಅವರ ಹಿಂದಿನ ಗವರ್ನರ್ ಆದ ಪಿಬಿ ಆಚಾರ್ಯ ಅವರನ್ನು ’ಜನರ ಗವರ್ನರ್’ ಎಂದು ವ್ಯಾಪಕವಾಗಿ ಕರೆಯಲಾಗುತ್ತಿತ್ತು, ಅವರ ಐದು ವರ್ಷಗಳ ಅವಧಿಯಲ್ಲಿ ಪವಿತ್ರ ರಾಜಭವನದ ಬಾಗಿಲುಗಳನ್ನು ಜನರಿಗೆ ತೆರೆದಿಟ್ಟಿದ್ದರು.
ನಾಗಾ ಶಾಂತಿ ಮಾತುಕತೆಯ ಮೂಲಕ ವಸಾಹತುಶಾಹಿ ಆಳ್ವಿಕೆಯ ಕಾಲದಿಂದ ನಡೆಯುತ್ತಿರುವ ವಿವಾದಗಳನ್ನು ಬಗೆಹರಿಸಲು ಪ್ರಯತ್ನಿಸಲಾಗುತ್ತಿದೆ. ನಾಗಾಗಳು ಒಂದೇ ಬುಡಕಟ್ಟು ಅಥವಾ ಜನಜಾತಿ ಅಲ್ಲ, ಅದೊಂದು ಜನಾಂಗೀಯ ಸಮುದಾಯವಾಗಿದ್ದು, ಅದು ನಾಗಾಲ್ಯಾಂಡ್ ಮತ್ತು ಅದರ ನೆರೆಹೊರೆಯಲ್ಲಿ ವಾಸಿಸುವ ಹಲವಾರು ಬುಡಕಟ್ಟುಗಳನ್ನು ಒಳಗೊಂಡಿದೆ. ನಾಗಾ ಗುಂಪುಗಳ ಪ್ರಮುಖ ಬೇಡಿಕೆ ಗ್ರೇಟರ್ ನಾಗಾಲಿಂ ಆಗಿದೆ, ಅದು ಕೇವಲ ನಾಗಾಲ್ಯಾಂಡ್ ರಾಜ್ಯ ಮಾತ್ರವಲ್ಲದೇ ನೆರೆಯ ರಾಜ್ಯಗಳ ಭಾಗ ಮತ್ತು ಮ್ಯಾನ್‌ಮ್ಯಾರ್‌ನ ರಾಜ್ಯಗಳನ್ನೂ ಕವರ್ ಮಾಡುವಂತಹ ಗ್ರೇಟರ್ ನಾಗಾಲಿಂ ಆಗಿದೆ.
1826ರಲ್ಲಿ ಬ್ರಿಟಿಷರು ಅಸ್ಸಾಂನ ನಿಯಂತ್ರಣವನ್ನು ಪಡೆದುಕೊಂಡರು, ನಂತರ ಅವರು ನಾಗ ಹಿಲ್ಸ್‌ನ ಜಿಲ್ಲೆಯನ್ನು ರಚಿಸಿದರು ಮತ್ತು ತಮ್ಮ ಗಡಿಗಳನ್ನು ವಿಸ್ತರಿಸಿದರು. ಬ್ರಿಟಿಷರ ಆಳ್ವಿಕೆಯಲ್ಲಿ ಆರಂಭವಾದ ನಾಗಾ ರಾಷ್ಟ್ರೀಯತೆಯ ಒತ್ತಡವು ಸ್ವಾತಂತ್ರ್ಯದ ನಂತರ ಮತ್ತು ನಾಗಾಲ್ಯಾಂಡ್ ರಾಜ್ಯ ರಚನೆಯ ನಂತರವೂ ಮುಂದುವರೆಯಿತು. ಹೀಗೆ ಬಗೆಹರಿಸಲಾಗದ ಸಮಸ್ಯೆಗಳು ದಶಕಗಳ ಕಾಲ ವಿದ್ರೋಹಕ್ಕೆ ಕಾರಣವಾಯಿತು, ಇದು ಸಾವಿರಾರು ಜೀವಗಳನ್ನು ತೆಗೆದುಕೊಂಡಿತು.
ನಾಗಾ ಪ್ರತಿರೋಧದ ಮೊಟ್ಟಮೊದಲ ಸಂಕೇತ 1918ರಲ್ಲಿ ನಾಗ ಕ್ಲಬ್ ರಚನೆಯೊಂದಿಗೆ ಕಾಣಿಸಿಕೊಂಡಿತು. 1929ರಲ್ಲಿ ಈ ಕ್ಲಬ್ ಸೈಮನ್ ಆಯೋಗವನ್ನು “ಪ್ರಾಚೀನ ಕಾಲದಲ್ಲಿದ್ದಂತೆ ಸ್ವಯಂ ಆಡಳಿತವನ್ನು ನಿರ್ಧರಿಸಲು ತನಗೆ ಅವಕಾಶ ನೀಡಬೇಕೆಂದು” ಕೇಳಿಕೊಂಡಿತ್ತು.
1946ರಲ್ಲಿ ಎ.ಜೆಡ್. ಫಿಜೊ ಅವರು ನಾಗಾ ರಾಷ್ಟ್ರೀಯ ಮಂಡಳಿಯನ್ನು (ಎನ್‌ಎನ್‌ಸಿ, ನಾಗಾ ನ್ಯಾಷನಲ್ ಕೌನ್ಸಿಲ್) ರಚಿಸಿದರು; ಇದು ಆಗಸ್ಟ್ 14, 1947ರಂದು ನಾಗಾ ಸ್ವಾತಂತ್ರ್ಯವನ್ನು ಘೋಷಿಸಿತು, ಮತ್ತು ನಂತರ 1951ರಲ್ಲಿ ಒಂದು ಜನಮತ ಸಂಗ್ರಹ ಮಾಡಿದೆ ಎಂದು ಹೇಳಿಕೊಂಡು, ಅದರಲ್ಲಿ ಭಾರಿ ಬಹುಮತದೊಂದಿಗೆ ಸ್ವತಂತ್ರ ರಾಜ್ಯದ ರಚನೆಯ ಸಮರ್ಥನೆ ಆಗಿದೆ ಎಂದು ಹೇಳಿತು.
1950ರ ದಶಕದ ಆರಂಭದಲ್ಲಿ ಎನ್‌ಎನ್‌ಸಿ ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಂಡು ಭೂಗತವಾಯಿತು. 1975ರಲ್ಲಿ ಎನ್‌ಎನ್‌ಸಿ ವಿಭಜನೆಯಾಯಿತು. ಬೇರ್ಪಟ್ಟ ಗುಂಪನ್ನು ಎನ್‌ಎಸ್‌ಸಿಎನ್ ಎಂದು ಕರೆಯಲಾಯಿತು, ಇದು ನಂತರದ ವರ್ಷಗಳಲ್ಲಿ ಮತ್ತೆ ವಿಭಜನೆಯಾಯಿತು. 1988ರಲ್ಲಿ ಮತ್ತೆ ವಿಭಜನೆಯಾಗಿ ಎನ್‌ಎಸ್‌ಸಿಎನ್ (ಐಎಂ) ಮತ್ತು ಎನ್‌ಎಸ್‌ಸಿಎನ್ (ಖಪಲಾಂಗ್) ರಲ್ಲಿ ಅಸ್ತಿತ್ವಕ್ಕೆ ಬಂದವು.
2015ರಿಂದ ನಡೆಯುತ್ತಿರುವ ಮಾತುಕತೆಗೆ ಮುಂಚಿತವಾಗಿ ನಾಗಾ ಗುಂಪುಗಳು ಮತ್ತು ಕೇಂದ್ರದ ನಡುವೆ ಇನ್ನೂ ಎರಡು ಒಪ್ಪಂದಗಳಿವೆ. 1975ರಲ್ಲಿ ಶಿಲ್ಲಾಂಗ್‌ನಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲಾಯಿತು, ಇದರಲ್ಲಿ ಎನ್‌ಎನ್‌ಸಿ ನಾಯಕತ್ವವು ಶಸ್ತ್ರಾಸ್ತ್ರಗಳನ್ನು ಬಿಟ್ಟುಕೊಡಲು ಒಪ್ಪಿಕೊಂಡಿತ್ತು. ಐಸಾಕ್ ಚಿಶಿ ಸ್ವು, ಥುಯಿಂಗ್ಲೆಂಗ್ ಮುಯಿವಾ ಮತ್ತು ಎಸ್ ಎಸ್ ಖಪ್ಲಾಂಗ್ ಸೇರಿದಂತೆ ಹಲವು ಎನ್‌ಎನ್‌ಸಿ ನಾಯಕರು ಒಪ್ಪಂದವನ್ನು ಒಪ್ಪಿಕೊಳ್ಳಲು ನಿರಾಕರಿಸಿದರು ಮತ್ತು ಎನ್‌ಎಸ್‌ಸಿಎನ್ ರೂಪಿಸಲು ಬೇರೆಯಾದರು. 1988ರಲ್ಲಿ ಮತ್ತೊಂದು ವಿಭಜನೆಯಾಗಿ, ಖಪ್ಲಾಂಗ್ ಅವರು ಎನ್‌ಎಸ್‌ಸಿಎನ್(ಕೆ) ಅನ್ನು ರಚಿಸಿದರು, ಆದರೆ ಐಸಾಕ್ ಮತ್ತು ಮುಯಿವಾ ಅವರುಗಳು ಎನ್‌ಎಸ್‌ಸಿಎನ್ (ಐ-ಎಂ)ನ ನೇತೃತ್ವ ವಹಿಸಿದರು.
1997ರಲ್ಲಿ ಎನ್‌ಎಸ್‌ಸಿಎನ್ (ಐ-ಎಂ) ಸರ್ಕಾರದೊಂದಿಗೆ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಿತು. ಅದರಲ್ಲಿಯ ಪ್ರಮುಖ ಒಪ್ಪಂದವೆಂದರೆ ಎನ್‌ಎಸ್‌ಸಿಎನ್ (ಐ-ಎಂ) ವಿರುದ್ಧ ಯಾವುದೇ ಉಗ್ರವಾದವಿರೋಧಿ ದಾಳಿ ಇರುವುದಿಲ್ಲ ಹಾಗೂ ಅದಕ್ಕೆ ಅನುಗುಣವಾಗಿ ಎನ್‌ಎಸ್‌ಸಿಎನ್ (ಐ-ಎಂ) ಭಾರತೀಯ ಸೇನೆಯ ಮೇಲೆ ದಾಳಿ ಮಾಡುವುದಿಲ್ಲ ಎಂಬುದು.
ಆಗಸ್ಟ್ 2015ರಲ್ಲಿ, ಕೇಂದ್ರವು ಎನ್‌ಎಸ್‌ಸಿಎನ್ (ಐ-ಎಂ)ನೊಂದಿಗೆ ಒಂದು ಒಪ್ಪಂದಕ್ಕೆ ಸಹಿ ಹಾಕಿತು. ಇದನ್ನು ಭಾರತದ ಅತ್ಯಂತ ಹಳೆಯ ಬಂಡಾಯವನ್ನು ಬಗೆಹರಿಸಲು ಆದ ’ಐತಿಹಾಸಿಕ ಪರಿಹಾರ’ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಇದು ಈಗ ನಡೆಯುತ್ತಿರುವ ಶಾಂತಿ ಮಾತುಕತೆಗೆ ವೇದಿಕೆಯನ್ನು ಸಿದ್ಧಪಡಿಸಿತು. 2017ರಲ್ಲಿ, ನಾಗಾ ರಾಷ್ಟ್ರೀಯ ರಾಜಕೀಯ ಗುಂಪುಗಳ (ನಾಗಾ ನ್ಯಾಷನಲ್ ಪಾಲಿಟಿಕಲ್ ಗ್ರೂಪ್ಸ್) ಬ್ಯಾನರ್ ಅಡಿಯಲ್ಲಿ ಆರು ಇತರ ನಾಗಾ ಸಶಸ್ತ್ರ ಸಂಘಟನೆಗಳು ಮಾತುಕತೆಯಲ್ಲಿ ಸೇರಿಕೊಂಡವು.
ಒಪ್ಪಂದದ ಚೌಕಟ್ಟಿನ ವಿವರಗಳನ್ನು ಸರ್ಕಾರ ಇನ್ನೂ ಸಾರ್ವಜನಿಕವಾಗಿ ಬಹಿರಂಗಪಡಿಸಿಲ್ಲ. ಒಪ್ಪಂದದ ನಂತರ ಸರ್ಕಾರವು ಪತ್ರಿಕಾ ಹೇಳಿಕೆಯಲ್ಲಿ ಹೀಗೆ ಹೇಳಿದೆ: “ನಾಗಾಗಳ ವಿಶಿಷ್ಟ ಇತಿಹಾಸ, ಸಂಸ್ಕೃತಿ ಮತ್ತು ಸ್ಥಾನಮಾನ ಹಾಗೂ ಅವರ ಭಾವನೆಗಳು ಮತ್ತು ಆಕಾಂಕ್ಷೆಗಳನ್ನು ಭಾರತ ಸರ್ಕಾರವು ಗುರುತಿಸುತ್ತದೆ. ಎನ್‌ಎಸ್‌ಸಿಎನ್ (ಐ-ಎಂ) ಭಾರತೀಯ ರಾಜಕೀಯ ವ್ಯವಸ್ಥೆ ಮತ್ತು ಆಡಳಿತವನ್ನು ಅರ್ಥಮಾಡಿಕೊಂಡಿದೆ ಮತ್ತು ಮೆಚ್ಚುಗೆ ವ್ಯಕ್ತಪಡಿಸಿದೆ”.
(ಹಿಂದಿಯಿಂದ ಕನ್ನಡಕ್ಕೆ): ರಾಜಶೇಖರ ಅಕ್ಕಿ

ದಿನಕರ್ ಕುಮಾರ್ (ಪತ್ರಕರ್ತರು)
ಈಶಾನ್ಯ ರಾಜ್ಯಗಳ ದಿನಪತ್ರಿಕೆಯಾದ ’ದ ಸೆಂಟಿನಲ್ನ ಸಂಪಾದಕರಾಗಿದ್ದವರು.
ಇದನ್ನೂ ಓದಿ: ಧರ್ಮವನ್ನು ಲಾಭಕ್ಕಾಗಿ ಬಳಸುವ ಬಿಜೆಪಿ-RSS ನಕಲಿ ಹಿಂದೂಗಳು- ರಾಹುಲ್ ಗಾಂಧಿ


