ಚಾರಿತ್ರಿಕ ರೈತಾಂದೋಲನವನ್ನು ಮುನ್ನಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾ ಸೆಪ್ಟೆಂಬರ್ 27ರಂದು ಭಾರತ್ ಬಂದ್ ನಡೆಸುವಂತೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಕರ್ನಾಟಕ ಬಂದ್ ಯಶಸ್ವಿಗೊಳಿಸಲು ರಾಜ್ಯ ಮಟ್ಟದ ಸಮಾಲೋಚನಾ ಸಭೆ ನಡೆದಿದೆ.
ಬೆಂಗಳೂರಿನ ಫ್ರೀಡಂ ಪಾರ್ಕ್ ಒಳಾವರಣದಲ್ಲಿ ಕೋಡಿಹಳ್ಳಿ ಚಂದ್ರಶೇಖರ್, ಚಾಮರಸ ಮಾಲೀ ಪಾಟೀಲ್, ಮೈಕೆಲ್ ಫರ್ನಾಂಡೀಸ್, ಎಸ್.ಆರ್.ಹಿರೇಮಠ ಅವರಿದ್ದ ಅಧ್ಯಕ್ಷೀಯ ಮಂಡಳಿ ಈ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿತ್ತು.
ರಾಜ್ಯದ ಎಲ್ಲ ಪ್ರಮುಖ ರೈತ ಸಂಘಟನೆಗಳು, ಎಲ್ಲ ಕರ್ನಾಟಕ ರಕ್ಷಣಾ ವೇದಿಕೆಯ ಬಣಗಳು, ಬಹುತೇಕ ಎಲ್ಲ ಕಾರ್ಮಿಕ ಸಂಘಟನೆಗಳು ಅಲ್ಲದೇ ವಿವಿಧ ಸೈದ್ಧಾಂತಿಕ ಹಿನ್ನೆಲೆಯ ಅನೇಕ ಪ್ರಜಾಸತ್ತಾತ್ಮಕ ಸಂಘಟನೆಗಳು ಸೇರಿದಂತೆ ಸುಮಾರು 80ಕ್ಕೂ ಹೆಚ್ಚು ಸಂಘಟನೆಗಳು ಭಾಗವಹಿಸಿ ಸೆಪ್ಟೆಂಬರ್ 27ರ ಬಂದ್‌ಅನ್ನು ಕರ್ನಾಟಕದಲ್ಲೂ ಯಶಸ್ವಿಗೊಳಿಸಲು ತೀರ್ಮಾನಿಸಲಾಯಿತು.

ಸಭೆಯು ಕರ್ನಾಟಕ ಬಂದ್‌ಗೆ ಪೂರ್ವ ತಯಾರಿಯಾಗಿ ದಿನಾಂಕ ಸೆ.19ರ ಬೆಳಗ್ಗೆ ಎಲ್ಲಾ ಜಿಲ್ಲೆ, ತಾಲ್ಲೂಕುಗಳಲ್ಲಿ ಜಂಟಿ ಸಭೆ ನಡೆಸಲಾಗುವುದು. ದಿನಾಂಕ ಸೆ.21ರಂದು ಮಂಗಳವಾರ ರಾಜ್ಯಾದ್ಯಂತ ಎಲ್ಲ ತಾಲ್ಲೂಕು, ಜಿಲ್ಲಾ ಕೇಂದ್ರಗಳಲ್ಲಿ ಬಂದ್ ಬೆಂಬಲಿಸಿ ಧರಣಿ, ಮೆರವಣಿಗೆ, ಬೈಕ್ ಜಾಥಾ ಮುಂತಾದ ಚಟುವಟಿಕೆಗಳನ್ನು ಸಂಘಟಿಸಲಾಗುವುದು.
ಸಭೆಯಲ್ಲಿ ಸಂಯುಕ್ತ ಹೋರಾಟ ಕರ್ನಾಟಕದ ಮುಖಂಡರಾದ ಬಡಗಲಪುರ ನಾಗೇಂದ್ರ, ಜಿ.ಸಿ.ಬಯ್ಯಾರೆಡ್ಡಿ, ಮಾವಳ್ಳಿ ಶಂಕರ್ ನೂರ್ ಶ್ರೀಧರ್ ಎಸ್ ವರಲಕ್ಷ್ಮಿ, ಎಚ್.ವಿ.ದಿವಾಕರ್ , ದೇವಿ, ವಿವಿಧ ಸಂಘಟನೆಗಳ ಪ್ರಮುಖರಾದ ಪ್ರವೀಣ್ ಕುಮಾರ್ ಶೆಟ್ಟಿ, ಸಾರಾ ಗೋವಿಂದ್ , ಡಾ.ಪ್ರಕಾಶ್ ಕಮ್ನರಡಿ, ಮಾಜಿ ಶಾಸಕರಾದ ಬಿ.ಆರ್.ಪಾಟೀಲ್, ಎಂ.ಪಿ.ನಾಡಗೌಡ , ಜಿ.ಎನ್.ನಾಗರಾಜ್, ಮೀನಾಕ್ಷಿ ಸುಂದರಂ, ಎಚ್.ಆರ್.ಬಸವರಾಜಪ್ಪ, ಮಹದಾಯಿ ರೈತ ಹೋರಾಟದ ಶಂಕರ್ ಆರ್.ಅಂಬಲಿ, ಜಿ.ಜಿ.ಹಳ್ಳಿ ನಾರಾಯಣಸ್ವಾಮಿ, ಡಿ.ಎಚ್.ಪೂಜಾರ್ ಮುಂತಾದವರು ಸಭೆಯಲ್ಲಿ ಮಾತಾನಾಡಿದರು.
ಇದನ್ನೂ ಓದಿ: ರೈತ ಹೋರಾಟ: 4 ರಾಜ್ಯಗಳಿಂದ ವರದಿ ಕೇಳಿದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ


