ಚುನಾವಣಾ ಪ್ರಚಾರ ಅಂತ್ಯವಾದ ನಂತರವೂ, ಮತದಾರರ ಮೇಲೆ ಪ್ರಭಾವ ಬೀರಲು ‘ಭಕ್ತಿ’ಯನ್ನೂ ಒಂದು ಸರಕಾಗಿಸಿದ ಮೋದಿ, ಮೀಡಿಯಾ ಮತ್ತು ಪಿಆರ್‍ಒಗಳ ರಿಪಬ್ಲಿಕ್ ಕಳೆದ ಐದು ವರ್ಷ ಇಂತಹ ಜನದ್ರೋಹ ಕೆಲಸದಲ್ಲೇ ನಿರತವಾಗಿತ್ತಲ್ಲವೇ?
ಆಯ್ತು, ಪ್ರಧಾನಿ ನರೇಂದ್ರ ಮೋದಿಯವರಿಗೆ ಭಕ್ತಿ ಉಕ್ಕಿ ಬಂದಿತ್ತು, ಅವರು ಕೇದಾರನಾಥಕ್ಕೆ ಹೋದರು. ಆದರೆ ಇದಿಷ್ಟನ್ನು ಜನರಿಗೆ ತಿಳಿಸಿಬಿಟ್ಟಿದ್ದರೆ ಮೀಡಿಯಾ ಕೆಲಸ ಮುಗಿದಿರೋದು. ಆದರೆ, ಬಹುಪಾಲು ದೃಶ್ಯ ಮಾಧ್ಯಮಗಳು ಇದನ್ನೊಂದು ತಪ್ಪಸ್ಸಿನಂತೆ ಬಿಂಬಿಸಿ, ಜನರನ್ನು ದಾರಿ ತಪ್ಪಿಸಲು ಯತ್ನಿಸಿದ್ದು ಅಸಹ್ಯವಾಗಿತ್ತು. ಪ್ರಧಾನಿ ಸಾಹೇಬರ ಪಿಆರ್‍ಒ ಟೀಮ್ ಅಂತೂ ಪ್ರಧಾನಿಯನ್ನು ಫ್ಯಾನ್ಸಿ ಡ್ರೆಸ್ ಮಾಡೆಲ್ ಮಟ್ಟಕ್ಕೆ ಇಳಿಸಿದೆ. ಮೋದಿ-ಮೀಡಿಯಾ-ಪಿಆರ್‍ಒ ‘ರಿಪಬ್ಲಿಕ್’ ಓಟು ಮತ್ತು ಟಿಆರ್‍ಪಿಗಾಗಿ ಯಾವ ಮಟ್ಟಕ್ಕೂ ಇಳಿಯಬಲ್ಲದು. ಆದರೆ, ಪಾಪ, ಈ ಸಲ ಏರಿದ್ದಾರೆ, ಕೇದಾರ ಬೆಟ್ಟ ಏರಿದ್ದಾರೆ! ಸೋ, ಯಾವ ಮಟ್ಟಕ್ಕಾದರೂ ಏರಬಲ್ಲರು ಅಂತ ಬೇಕಾದರೆ ಓದಿಕೊಳ್ಳಿ!
‘ಮುಂಜಾನೆಯೇ ಮೋದಿ ‘ಪರಿಕ್ರಮ’ ಮುಗಿಸಿ, 16 ಪೂಜಾವಿಧಾನಗಳನ್ನೂ ಮುಗಿಸಿ 2 ಕಿ.ಮೀ ಟ್ರೆಕ್ಕಿಂಗ್ ಮಾಡಿ ಗುಹೆ ತಲುಪಿ ಧ್ಯಾನಾಸಕ್ತರಾದರು. ಈ ವಯಸ್ಸಲ್ಲಿ ಇದೆಂತಹ ಶೃದ್ಧೆ, ಭಕ್ತಿ …ಅವರ ದೇಹಕ್ಕೆ ಸುಸ್ತೇ ಇಲ್ಲವೇನೋ?’ –ರಿಪಬ್ಲಿಕ್ ಟಿವಿಯ ನ್ಯೂಸ್ ಎಡಿಟರ್ ವಿವೇಕ್ ಶಾಂಡಿಲ್ಯನ ಸ್ಪಾಟ್ ವರದಿಯಿದು. ಪ್ರೈಮ್ ನ್ಯೂಸ್ ವರದಿ. ರಾತ್ರಿನೂ ಇತ್ತು. ಅದು ಅಲ್ಲದೇ ಇವತ್ತು ಸ್ಪೇಷಲ್ ಸ್ಟೋರಿ ಬೇರೆ ಐತಂತೆ!
‘ಮೋದಿ ಅಧಿಕಾರಿಗಳೊಂದಿಗೆ ಕೇದಾರನಾಥ ಪುನರ್‍ನಿರ್ಮಾಣದ ಕಾಮಗಾರಿ ಕುರಿತು ಚರ್ಚಿಸಿದರು.. ದುರ್ಗಮ ಹಾದಿಯಲ್ಲಿ ಕೋಲು ಹಿಡಿದು ಬೆಟ್ಟ ಏರಿದರು. ಆಗ ಅವರ ಮುಖದಲ್ಲಿ ಬೆವರಿತ್ತು’…-ಸೂಪರ್ ಇದಪ್ಪ ರಿಪೋರ್ಟಿಂಗ್ ಅಂದ್ರೆ!
ನ್ಯೂಸ್ 18 ಕನ್ನಡ ಹಿನ್ನೆಲೆಯಲ್ಲಿ ಒಂದು ಭಕ್ತಿಯ ಹಾಡಿನ ಸಂಗೀತ ತೇಲಿಬಿಟ್ಟು ಪಾವನವಾಯಿತು. ಸಕಲ ಸೌಲಭ್ಯಗಳ ಆ ಕೃತಕ ಗುಹೆಯಲ್ಲಿ ಮೋದಿಯ ಕೃತಕ ಧ್ಯಾನದ ಬಗ್ಗೆ ಇವರಾರೂ ಚಕಾರ ಎತ್ತಲಿಲ್ಲ. ಇದನ್ನು ಗೋದಿ ಮೀಡಿಯಾ ಎನ್ನದೆ ಬೇರೆ ಎನನ್ನಬೇಕು.
ಇದಕ್ಕೆ ವ್ಯತಿರಿಕ್ತವಾಗಿ ನೀವು ಸೋಷಿಯಲ್ ಮೀಡಿಯಾದಲ್ಲಿ ಕಣ್ಣಾಯಿಸಿದರೆ ಬರೀ ಮೋದಿ ಮೇಲಿನ ಟ್ರೋಲ್ ಗಳೇ ಕಾಣುತ್ತಿವೆ. ಕಳೆದೊಂದು ವಾರದಿಂದ ರಾಡಾರ್ ಮೋಡ, ಕವನ, ಸ್ಕ್ರಿಪ್ಟೆಡ್ ಸಂದರ್ಶನ, ಪ್ರಶ್ನೆಗಳಿಲ್ಲದ ಪತ್ರಿಕಾಗೋಷ್ಟಿ, ಈಗ ಐಟೆಕ್ ಧ್ಯಾನ ಸೇರಿದಂತೆ ಎಲ್ಲವೂ ವ್ಯಾಪಕ ಟೀಕೆಗೆ ಟ್ರೋಲ್ ಗೆ ಒಳಗಾಗಿವೆ. ಕಾರ್ಟೂನ್‍ಗಳಂತೂ ಒಂದನ್ನೊಂದು ಮೀರಿಸುವಷ್ಟು ಸೃಜನಶೀಲತೆಯಿಂದ ಕೂಡಿವೆ. ಆಡಳಿತ ಪಕ್ಷದ ನೀತಿಗಳು ಕುರಿತು ಹೀಗೆ ನಡೆದುಕೊಳ್ಳುವುದೇ ಪ್ರಜಾತಂತ್ರ. ಇದರಲ್ಲಿ ಮಾಧ್ಯಮಗಳು ನಡೆ ಪ್ರಜಾತಂತ್ರ ವಿರೋಧಿಯಾಗಿದೆ. ಆದರೆ ನೆಟ್ಟಿಗರು ಮಾತ್ರ ಟ್ರೋಲ್ ಮಾಡುವುದನ್ನು ಬಿಟ್ಟಿಲ್ಲ.


