Homeಕರ್ನಾಟಕಹೀಗೆ ಮಾಡಿದರೆ ಸರ್ಕಾರಿ ಶಾಲೆಗಳು ಉತ್ತಮವಾಗಬಹುದಲ್ಲವೇ? 

ಹೀಗೆ ಮಾಡಿದರೆ ಸರ್ಕಾರಿ ಶಾಲೆಗಳು ಉತ್ತಮವಾಗಬಹುದಲ್ಲವೇ? 

46,000 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕೇವಲ 2,05,000 ಜನ ಶಿಕ್ಷಕರಿದ್ದರೆ, ಕೇವಲ 17,000 ಇರುವ ಖಾಸಗಿ ಪ್ರಾಥಮಿಕ ಶಾಲೆಗಳಲ್ಲಿ 2,40,000 ಶಿಕ್ಷಕರಿದ್ದಾರೆ!

- Advertisement -
- Advertisement -

| ಮುತ್ತುರಾಜು |

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಲು ಒಂದನೇ ತರಗತಿಯಿಂದಲೇ ಆಂಗ್ಲ ಮಾಧ್ಯಮ ತರಗತಿಗಳನ್ನು ತೆರೆಯುತ್ತೇವೆ ಎಂದು ಕರ್ನಾಟಕ ಸರ್ಕಾರ ಘೋಷಿಸಿತು. ಈ ವಿಚಾರದಲ್ಲಿ ಸಕಾರಣವಾಗಿಯೇ ಇಂಗ್ಲಿಷ್ ಮಾಧ್ಯಮ ಬೇಕು ಮತ್ತು ಬೇಡ ಎಂದು ದೊಡ್ಡ ಚರ್ಚೆಗಳು ನಡೆದವು. ಈಗ ಶಾಲೆಗಳನ್ನು ಗುರುತಿಸುವ ಕೆಲಸ ನಡೆಯುತ್ತಿದೆ. ಆದರೆ ಈ ಮಾಧ್ಯಮದ ಕುರಿತ ನಮ್ಮ ಭಾವನಾತ್ಮಕ ಚರ್ಚೆಯ ಭರಾಟೆಯಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸಲು ಸರ್ಕಾರ ನಿಜವಾಗಿಯೂ ಮಾಡಬೇಕಾದ ಕೆಲಸಗಳನ್ನು ಮಾಡದೇ ಕೈ ತೊಳೆದುಕೊಳ್ಳುವುದಕ್ಕೆ ಬಿಡಬಾರದು. ಹಾಗಾಗಿ ಮಾಡಬೇಕಾದುದೇನು ಎಂಬುದುರ ಬಗ್ಗೆ ನಾವು ಮಾತಾಡಬೇಕಿದೆ.

ಮೊದಲನೇದಾಗಿ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಎದ್ದು ಕಾಣುತ್ತಿದೆ. 46,000 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕೇವಲ 2,05,000 ಜನ ಶಿಕ್ಷಕರಿದ್ದರೆ, ಕೇವಲ 17,000 ಇರುವ ಖಾಸಗಿ ಪ್ರಾಥಮಿಕ ಶಾಲೆಗಳಲ್ಲಿ 2,40,000 ಶಿಕ್ಷಕರಿದ್ದಾರೆ. ಅಂದರೆ ಖಾಸಗಿಯಲ್ಲಿ ತರಗತಿಗೊಬ್ಬರು, ವಿಷಯಕ್ಕೊಬ್ಬರು ಶಿಕ್ಷಕರಿದ್ದಾರೆ. ಈ ಬಹುದೊಡ್ಡ ವ್ಯತ್ಯಾಸವನ್ನು ಸರಿತೂಗಿಸಬೇಕಲ್ಲವೆ? ಸರ್ಕಾರಿ ಶಾಳೆಗಳಲ್ಲಿ ಮೊದಲು ಕಡ್ಡಾಯವಾಗಿ ತರಗತಿಗೊಬ್ಬರು, ವಿಷಯಕ್ಕೊಬ್ಬರು ಶಿಕ್ಷಕರು ಬೇಕು, ಎಲ್ಲಕ್ಕಿಂತ ಮಿಗಿಲಾಗಿ ಉತ್ತಮ ತರಬೇತಿ ಪಡೆದ ಇಂಗ್ಲಿಷ್ ಶಿಕ್ಷಕರು ಬೇಕೆ ಬೇಕು. ಯಾವ ಸರ್ಕಾರಿ ಶಾಲೆಗಳಲ್ಲಿ ಹೆಚ್ಚಿನ ಶಿಕ್ಷಕರಿದ್ದಾರೋ ಅಲ್ಲೆಲ್ಲಾ ಮಕ್ಕಳ ಸಂಖ್ಯೆ ಜಾಸ್ತಿ ಇದೆ ಎಂಬುದನ್ನು ನಾವು ಮರೆಯಬಾರದು.

ಎರಡನೇಯದಾಗಿ ಬಹುತೇಕ ಖಾಸಗಿ ಶಾಲೆಗಳು ನರ್ಸರಿಯಿಂದಲೇ ಆರಂಭವಾಗುತ್ತವೆ. ಮಗುವಿಗೆ ಎರಡೂವರೆ ವರ್ಷ ತುಂಬಿದೊಡನೆಯೆ ಪ್ರಿ ನರ್ಸರಿ, ನಂತರ ಎಲ್.ಕೆ.ಜಿ, ಯು.ಕೆಜಿ ಮುಗಿಸಿ ಒಂದನೇ ತರಗತಿಗೆ ಬಹುಪಾಲು ಅದೇ ಖಾಸಗಿ ಶಾಲೆಗೆ ದಾಖಲಾಗುತ್ತದೆ. ಆದರೆ ಸರ್ಕಾರಿ ಶಾಲೆಗೆ ಮಗು ದಾಖಲಾಗಬೇಕಾದರೆ ಕಡ್ಡಾಯವಾಗಿ 5ವರ್ಷ 10 ತಿಂಗಳು ತುಂಬಿರಲೇಬೇಕೆಂಬ ಕಠಿಣ ನಿಯಮವಿದೆ. ಇಷ್ಟು ವರ್ಷ ಯಾವ ಪೋಷಕರು ಕಾಯುತ್ತಾರೆ? ಅದೂ ಕೂಡ ನೇರವಾಗಿ ಒಂದನೇ ತರಗತಿಗೆ ದಾಖಲಾಗಬೇಕು. ಇಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣದ ಸೌಲಭ್ಯವಿಲ್ಲ. ಅದನ್ನು ಅಂಗನವಾಡಿ, ಶಿಶುವಿಹಾರಗಳಿಗೆ ವಹಿಸಿದರೂ ಕೂಡ ಅದರ ಮೇಲೆ ಪೋಷಕರಿಗೆ ನಂಬಿಕೆ ಇಲ್ಲದ್ದರಿಂದ ಬಹುಪಾಲು ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ನರ್ಸರಿ ಹಂತಕ್ಕೆ ಸೇರಿಸುತ್ತಿದ್ದಾರೆ.

ಸರ್ಕಾರ ಏಕೆ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ನರ್ಸರಿ ( ಪೂರ್ವ ಪ್ರಾಥಮಿಕ ) ಶಾಲೆಗಳನ್ನು ಆರಂಭಿಸಬಾರದು? ರಾಜ್ಯದಲ್ಲಿ ಸುಮಾರು 500 ಸರ್ಕಾರಿ ಶಾಲೆಗಳಲ್ಲಿ ಶಾಲಾ ಸಮುದಾಯಗಳೆ (ಪೋಷಕರು, ಹಿರಿಯ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಎಸ್.ಡಿ.ಎಂ.ಸಿ ಸದಸ್ಯರು) ಜವಾಬ್ದಾರಿ ತೆಗೆದುಕೊಂಡು ತಮ್ಮ ಕೈಯಿಂದ ಹಣ ಹಾಕಿ ‘ಮಕ್ಕಳ ಮನೆ’ ಹೆಸರಿನಲ್ಲಿ ನರ್ಸರಿ ಶಾಲೆಗಳನ್ನು ತೆರೆದಿದ್ದಾರೆ. ಈ ಎಲ್ಲಾ ಶಾಲೆಗಳಲ್ಲಿಯೂ ಕೂಡ ಮಕ್ಕಳ ಸಂಖ್ಯೆ ಗಣನೀಯವಾಗಿ ಹೆಚ್ಚಿದ್ದು, ಮುಚ್ಚಿಹೊಗುತ್ತಿದ್ದ ಶಾಲೆಗಳು ಈಗ ಮಕ್ಕಳಿಂದ ತುಂಬಿ ನಳನಳಿಸುತ್ತಿವೆ. ಇದೇ ಮಾದರಿಯಲ್ಲಿ ಕೂಡಲೇ ಸರ್ಕಾರ ಕಾರ್ಯಪ್ರವೃತ್ತರಾಗಬೇಕು.

ಮೂರನೇಯದಾಗಿ ಶಿಕ್ಷಕರ ಕೆಲಸ ಮತ್ತು ಬೋಧಾನ ವಿಧಾನ. ಸರ್ಕಾರಿ ಶಾಲಾ ಶಿಕ್ಷಕರು ಮೆರಿಟ್ ಆಧಾರದಲ್ಲೇ ಆಯ್ಕೆಯಾಗಿರುತ್ತಾದರೂ ಅವರಿಗೆ ಕಾಲಕಾಲಕ್ಕೆ ನೈಜ ವೈಜ್ಞಾನಿಕ ತರಬೇತಿಗಳು ಬೇಕಿವೆ. ಇರುವ ಕಡಿಮೆ ಶಿಕ್ಷಕರ ಮೇಲೆ ಶಿಕ್ಷಣೇತರ ಹೊರೆಗಳು ಸೇರಿ ನೂರೆಂಟು ಕೆಲಸಗಳನ್ನು ಸರ್ಕಾರ, ಶಿಕ್ಷಣ ಇಲಾಖೆ ವಹಿಸಿದೆ. ಇದು ತಪ್ಪಬೇಕು. ತುರ್ತು ಪರಿಸ್ಥಿತಿ, ಚುನಾವಣೆಯಂತಹ ಗಂಭೀರ ಕೆಲಸಗಳನ್ನು ಬಿಟ್ಟು ಜಾತಿಗಣತಿ, ಜಾನುವಾರು ಗಣತಿಯಂತಹ ಕೆಲಸಗಳಿಗೆ ಅವರನ್ನು ನಿಯೋಜಿಸಬಾರದು. ಅವರು ಸಂಪೂರ್ಣ ಪಾಠ ಮಾಡಲು ಮತ್ತು ಮಕ್ಕಳೊಂದಿಗೆ ಬೆರೆತು ಅವರ ಮನಸ್ಸನ್ನು ಅರ್ಥಮಾಡಿಕೊಳ್ಳಲು ಬಿಡಬೇಕು.

ಅದೇ ಸಂದರ್ಭದಲ್ಲಿ ಶಿಕ್ಷಕರು ಸರಿಯಾಗಿ ಶಾಲೆಗಳಿಗೆ ಹೋಗುತ್ತರಿದ್ದಾರೆಯೇ? ಪಾಠ ಮಾಡುತ್ತಿದ್ದಾರೆಯೇ? ಎಂಬುದರ ನಿಖರ ಮೇಲ್ವಿಚಾರಣೆ ಮಾಡಬೇಕಿದೆ. ಖಾಸಗಿ ಶಾಲೆಗಳಲ್ಲಿ ಅಲ್ಲಿನ ಆಡಳಿತ ಮಂಡಳಿಗಳು ಶಿಕ್ಷಕರ ಮೇಲೆ ಸದಾ ಹದ್ದಿನ ಕಣ್ಣು ಇಟ್ಟಿರುತ್ತಾರೆ. ಪ್ರತಿನಿತ್ಯ 7-8 ಅವಧಿ ಪಾಠ ಮಾಡಿಸುವ ಮೂಲಕ ಒಂದು ರೀತಿ ಜೀತದ ರೀತಿಯಲ್ಲಿಯೇ ಅವರಿಂದ ದುಡಿಸಿಕೊಳ್ಳುತ್ತಾರೆ. ಅಲ್ಲಿನ ಶಿಕ್ಷಕರು ಸಹ ತಾವು ಉರು ಹೊಡೆದು ಬಂದಿದ್ದನ್ನು ಆ ಮಕ್ಕಳ ಮೇಲೆ ಹೇರಿ ಉರು ಹೊಡೆಸುತ್ತಾರೆ. ಇಲ್ಲಿ ಸೃಜನಾತ್ಮಕ ಶಿಕ್ಷಣಕ್ಕೆ ಅವಕಾಶವೂ ಇಲ್ಲ ವ್ಯವಧಾನವೂ ಇಲ್ಲ. ಅದು ನಮ್ಮ ಪೋಷಕರಿಗೂ ಬೇಕಾಗಿಲ್ಲ.

ಇದಕ್ಕೆ ವ್ಯತಿರಿಕ್ತವಾಗಿ ಸರ್ಕಾರಿ ಶಾಲೆಗಳಲ್ಲಿ ಆರಾಮಾದಾಯಕ ಕಲಿಕೆ ಇದ್ದರೂ ಕೂಡ ಕೆಲ ಶಿಕ್ಷಕರು ಪಾಠ ಮಾಡದೇ ತಪ್ಪಿಸಿಕೊಳ್ಳುತ್ತಿದ್ದಾರೆ. ಮೇಲ್ವಿಚಾರಣೆಗಾಗಿಯೇ ಇರುವ ಬಿ.ಇ.ಓ ಮತ್ತು ಡಿ.ಡಿ.ಪಿ.ಐ ರವರು ಹೆಚ್ಚಿನ ಪಾಲು ಖಾಸಗಿ ಶಾಲೆಗಳಿಂದ ಬರುವ ಕಮಾಯಿ ಹಣ ಹೇಗೆ ಉಪಯೋಗಿಸಬೇಕೆಂಬುದರಲ್ಲೇ ಸಮಯ ಕಳೆದುಬಿಡುತ್ತಾರೆ. ಇವರು ಖಾಸಗಿ ಶಾಲೆಗಳು ನಿಯಮ ಮೀರಿ ವರ್ತಿಸುವುದಕ್ಕೆ ಕಡಿವಾಣ ಹಾಕುವುದಿಲ್ಲ ಮಾತ್ರವಲ್ಲ ಸರ್ಕಾರಿ ಶಿಕ್ಷಕರು ಪಾಠ ಮಾಡುತ್ತಿರುವುದುನ್ನು ನೋಡುವುದಿಲ್ಲ.

ಅಪರೂಪಕ್ಕೆಂಬಂತೆ ಕೆಲ ಪ್ರಾಮಾಣಿಕ ಅಧಿಕಾರಿಗಳು ಶಿಕ್ಷಕರ ಮೇಲೆ ಕ್ರಮ ಕೈಗೊಳ್ಳಲು ಹೊರಟರೆ ಶಿಕ್ಷಕರ ಸಂಘ ಅವರ ಮೇಲೆ ಗಧಾಪ್ರಹಾರ ಮಾಡುತ್ತದೆ. ಕೆಲವು ಕಡೆ ಸರ್ಕಾರಿ ಶಿಕ್ಷಕರು ಪಾಠ ಮಾಡುವುದು ಬಿಟ್ಟು ಸ್ಥಳೀಯ ಶಾಸಕರ ಚೇಲಾ ಆಗಿಬಿಟ್ಟಿರುತ್ತಾರೆ, ಇವರಿಗೆ ಯಾರ ಭಯವೂ ಇರುವುದಿಲ್ಲ. ಇದು ಸರ್ಕಾರಕ್ಕೆ ಗೊತ್ತಿಲ್ಲವೇ? ಇದನ್ನು ಸರಿ ಪಡಿಸಲು ಸರ್ಕಾರ ಪ್ರಾಮಾಣಿಕವಾಗಿ ಪ್ರಯತ್ನಿಸಿದೆಯೇ? ಮಾಡಲು ಸಾಧ್ಯವಿದೆ, ಸರ್ಕಾರಿ ಶಾಲೆಗಳ ನಮ್ಮ ಮಕ್ಕಳ ದೃಷ್ಟಿಯಿಂದ ಮಾಡಬೇಕು ಅಷ್ಟೇ.

ನಾಲ್ಕನೇಯದಾಗಿ ಸರ್ಕಾರಿ ಶಾಲೆಗಳಲ್ಲಿ ಎಷ್ಟು ಸುಸಜ್ಜಿತ ಕಟ್ಟಡಗಳಿವೆ? ಎಷ್ಟು ಶೌಚಾಲಯಗಳಿವೆ ಮತ್ತು ಅದರಲ್ಲಿ ಎಷ್ಟರಲ್ಲಿ ನೀರು ಬರುತ್ತವೆ? ಎಷ್ಟು ಜನ ದೈಹಿಕ ಶಿಕ್ಷಕರು, ರಂಗಶಿಕ್ಷಕರು, ಸಂಗೀತಾ ಶಿಕ್ಷಕರು ಇತ್ಯಾದಿ ಸಹಪಠ್ಯ ಶಿಕ್ಷಕರಿದ್ದಾರೆ? ಮಕ್ಕಳನ್ನು ಮತ್ತು ಶಾಲಾ ಪರಿಸರವನ್ನು ಶುಚಿಯಾಗಿಡಲು ಎಷ್ಟು ಜನ ಆಯಾಗಳಿದ್ದಾರೆ? ಸರ್ಕಾರಿ ವ್ಯವಸ್ಥೆ ಸರಿಯಿಲ್ಲ ಎಂದು ಹೇಳಲು ನಾನಿದನ್ನು ಹೇಳುತ್ತಿಲ್ಲ ಬದಲಿಗೆ ಇದನ್ನು ಬದಲಾಯಿಸಲು ಮೊದಲು ಸರ್ಕಾರ ಗಮನಿಸಬೇಕು.

ಇದನ್ನು ಓದಿ: ದೆಹಲಿಯ ಸರ್ಕಾರೀ ಶಾಲೆ ಮಕ್ಕಳು ಖಾಸಗಿ ಶಾಲೆಗಳನ್ನು ಹಿಂದಿಕ್ಕಿದ್ದು ಹೇಗೆ?

ಐದನೇಯದಾಗಿ ಎಷ್ಟು ಖಾಸಗಿ ಶಾಲೆಗಳು ಅನಮತಿ ಮತ್ತು ಮಾನ್ಯತೆ ಪಡೆದಿವೆ? ಎಷ್ಟು ಶಾಲೆಗಳಿಗೆ ಆಟದ ಮೈದಾನ, ಕಟ್ಟಡ, ಶೌಚಾಲಯ ಸೇರಿದಂತೆ ಇನ್ನಿತರ ಸೌಲಭ್ಯಗಳಿವೆ? ಸಾವಿರಾರು ಖಾಸಗಿ ಶಾಲೆಗಳು ಕೆಟ್ಟ ಪರಿಸ್ಥಿತಿಯಲ್ಲಿವೆ, ಕನ್ನಡ ಮಾಧ್ಯಮದ ಅನುಮತಿ ಪಡೆದು ಸರಿಯಾದ ಶಿಕ್ಷಕರಿಲ್ಲದೆ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಸುತ್ತಿದ್ದಾರೆ. ಸರ್ಕಾರಿ ಶಾಲೆಗಳ ಒಂದೂ ಕಿ.ಮೀ ವ್ಯಾಪ್ತಿಯಲ್ಲಿ ಮತ್ತೊಂದು ಖಾಸಗಿ ಶಾಲೆ ಇರಬಾರದೆಂಬ 1982ರ ಕರ್ನಾಟಕ ಶಿಕ್ಷಣ ಕಾಯ್ದೆಯ ನಿಯಮಗಳು ಪಾಲನೆಯಾಗುತ್ತಿವೆಯೇ? ಇದನ್ನೆಲ್ಲ ನಿಯಂತ್ರಿಸಬೇಕಾದುದು ಸರ್ಕಾರವಲ್ಲದೇ ಮತ್ತೆ ಇನ್ಯಾರು? ಇದರಿಂದ ಆ ಖಾಸಗಿ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳ ಹಕ್ಕುಗಳು ಸಹ ಉಲ್ಲಂಘನೆಯಾಗುತ್ತಿವೆ.

ಆರನೇಯದಾಗಿ ಆರ್.ಟಿ.ಇ ಜಾರಿಗೆ ತಂದು ಶೇ.25% ದುರ್ಬಲ ವರ್ಗದ ಮಕ್ಕಳು ಖಾಸಗಿ ಶಾಲೆಗಳಲ್ಲಿ ಓದುತ್ತಿರುವುದು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಸರಿಯಾದುದು. ಆದರೆ ಆ ಖಾಸಗಿ ಶಾಲೆಗಳಿಗೆ ಒಂದು ಮಗುವಿಗೆ 14,000 ರೂಗಳಂತೆ ಸರ್ಕಾರ ನೀಡುತ್ತಿರುವುದು ಮಾತ್ರ ಅನ್ಯಾಯ. ಈ ಕೂಡಲೇ ಹಣ ನೀಡುವುದನ್ನು ನಿಲ್ಲಿಸಬೇಕು. ಆ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡುವುದು ಆ ಖಾಸಗಿ ಶಾಲೆಗಳ ಸಾಮಾಜಿಕ ಜವಾಬ್ದಾರಿ. ಸರ್ಕಾರದಿಂದ ಹಲವು ಸೌಲಭ್ಯಗಳನ್ನು ಪಡೆಯುವ ಆ ಶಾಲೆಗಳು ಅಷ್ಟನ್ನೂ ಮಾಡದಿದ್ದರೆ ಹೇಗೆ? ಅದೇ ಹಣವನ್ನು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ವ್ಯಯಿಸಬೇಕು.

ಏಳನೇಯದಾಗಿ ಆರ್.ಟಿ.ಇ ಜಾರಿಗೆ ಬಂದ ಆರಂಭದಲ್ಲಿ ದೆಹಲಿಯಲ್ಲಿ ನಡೆದ ಸಮೀಕ್ಷೆಯಂತೆ ಶೇ.25%ರ ಅಡಿಯಲ್ಲಿ ಖಾಸಗಿ ಶಾಲೆಗಳಿಗೆ ದಾಖಲಾಗಿದ್ದ ಅರ್ಧದಷ್ಟು ಮಕ್ಕಳು ಅಲ್ಲಿನ ವಾತವರಣ ಮತ್ತು ಮಾಧ್ಯಮದ ಗೊಂದಲದಿಂದ ಅರ್ಧದಲ್ಲೇ ಶಾಲೆ ಬಿಟ್ಟು ಡ್ರಾಪ್‍ಔಟ್ ಆಗಿದ್ದರು ಎಂದು ತಿಳಿದಿದೆ. ನಮ್ಮ ದಲಿತ, ಹಿಂದುಳಿದ ಮಕ್ಕಳಿಗೆ ನಿಜವಾಗಿಯೂ ಇಂಗ್ಲಿಷ್ ಬೇಕು. ಆದರೆ ಮನೆಯಲ್ಲಿ ಇಂಗ್ಲಿಷ್ ವಾತವರಣವಿಲ್ಲದೆ ಕೇವಲ ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮವಿದ್ದಾಗ ಆ ಮಗುವಿಗೆ ಕಲಿಕೆ ನಿಜಕ್ಕೂ ತ್ರಾಸದಾಯಕವಾಗುತ್ತದೆ. ಈಗ ಖಾಸಗಿ ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಸುತ್ತಿರುವ ಬಹಳಷ್ಟು ಪೋಷಕರು ಶಾಲಾ ಅವಧಿ ನಂತರದಲ್ಲಿ ತಮ್ಮ ಮಕ್ಕಳನ್ನು ಟ್ಯೂಷನ್‍ಗೂ ಕೂಡ ಕಳಿಸುತ್ತಿರುವುದನ್ನು ನೀವು ಗಮನಿಸಿರಬಹುದು. ಇದೇ ರೀತಿ ಎಷ್ಟು ಕುಟುಂಬಗಳು ಮಾಡಲು ಸಾಧ್ಯ? ಇದಕ್ಕಾಗಿ ಸರ್ಕಾರ ಗ್ರಾಮೀಣ ಭಾಗದ ಜನರ ಆದಾಯ ಏರಿಕೆಗೆ ಕ್ರಮಗಳನ್ನು ಕೈಗೊಳ್ಳಬೇಕು.

ಪಕ್ಕದ ಆಂದ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಇದೇ ರೀತಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸಲು ಆಂಗ್ಲ ಮಾಧ್ಯಮ ಶಾಲೆಗಳನ್ನು ಐದಾರು ವರ್ಷಗಳ ಹಿಂದೆಯೇ ಆರಭಿಸಲಾಗಿದೆ. ಪರಿಸ್ಥಿತಿ ಏನಾಗಿದೆ ಎಂಬುದುನ್ನು ಪಕ್ಕದಲ್ಲೇ ಇರುವುದರಿಂದ ನೀವು ಹೋಗಿ ನೋಡುವುದೆ ಲೇಸು. ಇಂಗ್ಲಿಷ್ ಮಾಧ್ಯಮದಲ್ಲಿ ಬೋಧಿಸಲು ಶಿಕ್ಷಕರಿಗೆ ಸಮಗ್ರ ತರಬೇತಿ ಬೇಕು. ಈ ವಿಚಾರದಲ್ಲಿ ನಾವು ತೀರಾ ಹಿಂದುಳಿದಿದ್ದೇವೆ. ಇದರಿಂದಾಗಿ ಅಲ್ಲಿ ಅತ್ತ ತೆಲುಗು ಭಾಷೆಯಲ್ಲಿಯೂ ಸರಿಯಾಗಿ ಕಲಿಯದೆ, ಇಂಗ್ಲಿಷ್ ಅನ್ನು ಕಲಿಯದೇ ಮಕ್ಕಳು ಒದ್ದಾಡುತ್ತಿದ್ದಾರೆ ಮತ್ತು ಡ್ರಾಪ್‍ಔಟ್ ಪ್ರಮಾಣ ಹೆಚ್ಚಾಗುತ್ತಿದೆ. ಆಂಗ್ಲ ಮಾಧ್ಯಮ ಶಾಲೆಗಳ ಆರಂಭದ ನಂತರ ಸರ್ಕಾರಿ ಶಾಲೆಗಳ ಮುಚ್ಚುವಿಕೆ ವೇಗ ಪಡೆದುಕೊಂಡಿದೆ. ಇದರ ವಿರುದ್ಧ ಹಲವಾರು ಶಿಕ್ಷಕ ಸಂಘಟನೆಗಳು ಬೀದಿಗಿಳಿದು ಹೋರಾಡುತ್ತಿದ್ದಾರೆ. ಗುಣಮಟ್ಟದಲ್ಲಿ ಅಲ್ಲಿನ ಶಾಲೆಗಳಿಗಿಂತ ಕರ್ನಾಟಕ ಹಲವು ಪಟ್ಟು ಮುಂದಿದ್ದು ಇನ್ನೂ ಸಾಧಿಸಬೇಕಿದೆ.

ಹಾಗಾಗಿ ಸರ್ಕಾರ ಮೊದಲು ಇಂಗ್ಲಿಷ್ ಮಾಧ್ಯಮದಲ್ಲಿ ಪರಿಣಾಮಕಾರಿಯಾಗಿ ಬೋಧಿಸಬಲ್ಲ ಶಿಕ್ಷಕರನ್ನು ತಯಾರು ಮಾಡಬೇಕಿದೆ. ಅದಕ್ಕಾಗಿ ಸಂಪನ್ಮೂಲ ಮತ್ತು ವ್ಯವಸ್ಥೆ ಮಾಡಲು ಶುರುಮಾಡಬೇಕು. ಅದಕ್ಕಿಂತ ಮೊದಲು ಶಿಕ್ಷಣವೆಂಬುದು ರಾಷ್ಟ್ರ ನಿರ್ಮಾಣದ ಮಹಾನ್ ಕೆಲಸ ಎಂಬುದನ್ನು ಅರಿತುಕೊಳ್ಳಬೇಕು. ಇದರಲ್ಲಿ ಹಣಕಾಸಿನ ಲಾಭ ನಷ್ಟ ಯೋಚಿಸದೇ ಬಜೆಟ್‍ನಲ್ಲಿ ಬಿಡಿಗಾಸು ಕೊಡುವುದನ್ನು ಬಿಟ್ಟು ಹೆಚ್ಚಿನ ಹಣ ಮತ್ತು ತನ್ಮಯತೆ ತೊಡಗಿಸಬೇಕು. ಕೇಂದ್ರ ಸರ್ಕಾರದ ಅಡಿಯಲ್ಲಿಯೇ ನಡೆಯುತ್ತಿರುವ ಕೇಂದ್ರೀಯ ವಿದ್ಯಾಲಯಗಳು ಮತ್ತು ನವೋದಯ ಶಾಲೆಗಲೇ ಏಕೆ ಪ್ರತಿವರ್ಷವೂ ಖಾಸಗಿ ಶಾಲೆಗಳಿಗಿಂತ ಅತ್ಯುತ್ತಮ ಸಾಧನೆ ತೋರಿಸುತ್ತಿವೆ? ಆ ಶಾಲೆಗಳಲ್ಲಿ ಏನೇನು ಸೌಲಭ್ಯಗಳಿಗೆ ಎಂದು ಯೋಚಿಸಿದರೆ ಸಾಕು ಈ ಹೊತ್ತಿಗೆ ನಮ್ಮ ಸರ್ಕಾರಿ ಶಾಲೆಗಳಿಗೆ ಏನು ಬೇಕು ಎಂಬುದು ತಟ್ಟನೇ ಅರ್ಥವಾಗುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...