Homeಕರ್ನಾಟಕಸರಸ್ವತೀ ಗಜಾನನ ರಿಸಬೂಡ; ಮಹತ್ವದ ಅನುವಾದಕರಾಗಿಯೂ ಅಜ್ಞಾತರಾಗಿಯೇ ಉಳಿದವರು!

ಸರಸ್ವತೀ ಗಜಾನನ ರಿಸಬೂಡ; ಮಹತ್ವದ ಅನುವಾದಕರಾಗಿಯೂ ಅಜ್ಞಾತರಾಗಿಯೇ ಉಳಿದವರು!

- Advertisement -
- Advertisement -

Saraswati Gajanana Risabudaಕನ್ನಡದ ಭಾಷಾಂತರ ಕ್ಷೇತ್ರಕ್ಕೆ ಅಪೂರ್ವ ಕೊಡುಗೆಯನ್ನು ನೀಡಿದ ಸರಸ್ವತೀ ಗಜಾನನ ರಿಸಬೂಡ ಅವರು ಆಗಸ್ಟ್ 25, 2021 ರಂದು ತಮ್ಮ ತೊಂಬತ್ತನೆಯ ವಯಸ್ಸಿನಲ್ಲಿ ನಿಧನರಾದರು. ಸದ್ದುಗದ್ದಲವಿಲ್ಲದೇ ತಮ್ಮ ಪಾಡಿಗೆ ತಾವು ಅನುವಾದ ಕಾರ್ಯದಲ್ಲಿ ತೊಡಗಿಕೊಂಡಿದ್ದ ಸರಸ್ವತೀ ರಿಸಬೂಡ ಅವರ ನಿಧನವು ಕನ್ನಡದ ಪತ್ರಿಕೆಗಳಲ್ಲಿ ದೊಡ್ಡ ಸುದ್ದಿಯಾಗಲಿಲ್ಲ. ಮರಾಠಿಯಿಂದ ಕನ್ನಡಕ್ಕೆ ಮುಖ್ಯ ಅನುವಾದಕರಾಗಿದ್ದರೂ ಅವರು ಸಾಹಿತ್ಯದ ಸಭೆ, ಸಮಾರಂಭ, ವೇದಿಕೆಗಳಲ್ಲಿ ಕಾಣಿಸಿಕೊಂಡವರಲ್ಲ; ಬಹುತೇಕವಾಗಿ ಅಜ್ಞಾತರಾಗಿಯೇ ಉಳಿದರು. ಆದರೆ ಅವರು ತಮ್ಮದೇ ಆಯ್ಕೆಯ ಮಹಿಳಾ ಪ್ರಧಾನ ವೈಚಾರಿಕ ಕೃತಿಗಳನ್ನು ಅನುವಾದಿಸುವುದರ ಮೂಲಕ ಕನ್ನಡ ಹಾಗೂ ಮರಾಠಿ ಭಾಷೆಗಳ ನಡುವಿನ ಸಾಂಸ್ಕೃತಿಕ ನಂಟನ್ನು ವಿಸ್ತರಿಸಿದರು ಎಂಬುದು ಮಹತ್ವದ ಸಂಗತಿಯಾಗಿದೆ.

ಸರಸ್ವತೀ ರಿಸಬೂಡ ಅವರ ಮೂಲ ಹೆಸರು ಯಮುನಾ ದತ್ತಾತ್ರೇಯ ದಿವೇಕರ. ಹುಟ್ಟಿದ್ದು ಮಾರ್ಚ್ 31, 1931ರಲ್ಲಿ ಅವರ ತಾಯಿಯ ತವರೂರಾದ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ. ಆದರೆ ಶಿಕ್ಷಣ ಪಡೆದಿದ್ದೆಲ್ಲ ಧಾರವಾಡದಲ್ಲಿಯೇ. ಅವರ ತಂದೆಯವರು ಧಾರವಾಡದಲ್ಲಿ ಅಂಚೆ ಇಲಾಖೆಯ ನೌಕರರಾಗಿದ್ದರು. ಆ ಕಾಲದಲ್ಲಿ ಧಾರವಾಡವು ಮುಂಬೈ ಪ್ರಾಂತ್ಯಕ್ಕೆ ಸೇರಿದ್ದರಿಂದ ಅವರು ಅನಿವಾರ್ಯವಾಗಿ ಮರಾಠಿ ಮಾಧ್ಯಮದಲ್ಲಿಯೇ ಎಸ್.ಎಸ್.ಎಲ್.ಸಿ. ಶಿಕ್ಷಣ ಪೂರೈಸಿದರು. ಧಾರವಾಡದ ಗಜಾನನ ವೆಂಕಟೇಶ ರಿಸಬೂಡ ಅವರೊಂದಿಗೆ ಡಿಸೆಂಬರ್ 5, 1949ರಲ್ಲಿ ಮದುವೆಯಾಯಿತು. ಆಗವರ ಹೆಸರು ಸರಸ್ವತೀ ಗಜಾನನ ರಿಸಬೂಡ ಎಂದಾಯಿತು. ಕೃಷಿ ವಿಭಾಗದಲ್ಲಿ ಇಂಜಿನಿಯರ್ ಆಗಿದ್ದ ಗಜಾನನ ಅವರಿಗೆ 1959ರಲ್ಲಿ ಬೆಂಗಳೂರಿಗೆ ವರ್ಗಾವಣೆಯಾಯಿತು.

ಹಲವು ಕಾಲದಿಂದ ಬೆಂಗಳೂರಿನ ಜೆ.ಪಿ. ನಗರದಲ್ಲಿ ನೆಲೆಸಿದ್ದ ಸರಸ್ವತೀ ರಿಸಬೂಡರು ಸ್ವಪ್ರಯತ್ನದಿಂದ ಕನ್ನಡ ಓದುವುದನ್ನು ರೂಢಿಸಿಕೊಂಡರು. ತಮ್ಮ ನಾಲ್ಕು ಜನ ಮಕ್ಕಳಿಗೂ ಕನ್ನಡ ಮಾಧ್ಯಮದಲ್ಲಿ ಶಿಕ್ಷಣವನ್ನು ಕೊಡಿಸಿದರು. ತಮ್ಮ ಮಕ್ಕಳು ಕನ್ನಡ ಕಲಿಯುವುದನ್ನು ಕಂಡು ತಾವು ಕೂಡ ಕನ್ನಡ ವರ್ಣಮಾಲೆಯನ್ನು ಕಲಿತರು; ಅವರು ಮರಾಠಿಯಿಂದ ಕನ್ನಡದಲ್ಲಿ ಅನುವಾದ ಮಾಡುವಷ್ಟು ಪ್ರಾವೀಣ್ಯ ಹಾಗೂ ಭಾಷಿಕಸೂಕ್ಷ್ಮತೆಗಳನ್ನು ಪಡೆದುಕೊಂಡಿದ್ದು ಅಸಾಧಾರಣವಾದ ಸಂಗತಿಯಾಗಿದೆ; ಸರಸ್ವತೀ ರಿಸಬೂಡರು ಮರಾಠಿ ಭಾಷಿಕರಿಗೆ ’ಕನ್ನಡ ಶಿಖಾ’ (ಕನ್ನಡ ಕಲಿಯಿರಿ) ಎಂಬ ಪುಸ್ತಕವನ್ನು ಬರೆದದ್ದನ್ನು ಗಮನಿಸಿದರೆ ಅವರ ಕನ್ನಡ ಭಾಷಾಭಿಮಾನ ಎಷ್ಟು ದೊಡ್ಡದು ಎಂಬುದು ತಿಳಿಯುತ್ತದೆ.

ಸರಸ್ವತೀ ರಿಸಬೂಡರು ಮರಾಠಿಯಿಂದ ಕನ್ನಡಕ್ಕೆ ಅನುವಾದಿಸಿದ ವೈಚಾರಿಕ ಕೃತಿಗಳನ್ನು ಗಮನಿಸಿದರೆ ಅವರ ಬಗ್ಗೆ ಬೆರಗು ಹಾಗೂ ಗೌರವದ ಭಾವ ಮೂಡುತ್ತದೆ. ಅನುವಾದ ಕ್ಷೇತ್ರದಲ್ಲಿ ಮಹಿಳೆಯರು ವಿರಳರಾಗಿದ್ದ ಅಂದಿನ ಕಾಲಘಟ್ಟದಲ್ಲಿ ಅವರು ಭಾಷಾಂತರದ ಮಹತ್ವವನ್ನು ಅರಿತವರಾಗಿದ್ದರು. ಅವರು ಬೆರಳೆಣಿಕೆಯ ಕೃತಿಗಳನ್ನು ಕನ್ನಡಕ್ಕೆ ಭಾಷಾಂತರ ಮಾಡಿದ್ದರೂ ಅವು ಸಾರ್ವಕಾಲಿಕ ಮೌಲಿಕತೆಯನ್ನು ಹೊಂದಿವೆ. ಮರಾಠಿಯ ಪ್ರಾತಿನಿಧಿಕ ಕೃತಿಗಳನ್ನು ಭಾಷಾಂತರಿಸುವ ಮೂಲಕ ಮರಾಠಿಯ ವೈಚಾರಿಕ ಹಾಗೂ ಸ್ತ್ರೀವಾದೀ ಚಿಂತನೆಯ ನೆಲೆಗಳನ್ನು ಕನ್ನಡಿಗರಿಗೆ ಪರಿಚಯಿಸಿದ್ದಾರೆ. ಆದರೆ ಕನ್ನಡ ಸಾಹಿತ್ಯಲೋಕವು ಪ್ರಜ್ಞಾಪೂರ್ವಕವಾಗಿಯೋ ಅಥವಾ ಅಪ್ರಜ್ಞಾಪೂರ್ವಕವಾಗಿಯೋ ಅವರನ್ನು ನಿರ್ಲಕ್ಷಿಸಿದ್ದು ಸುಳ್ಳಲ್ಲ.

ಪುಣೆಯ ’ಗೋಖಲೆ ಇನ್‌ಸ್ಟಿಟ್ಯೂಟ್ ಆಫ್ ಪಾಲಿಟಿಕ್ಸ್ ಅಂಡ್ ಇಕನಾಮಿಕ್ಸ್’ ಸಂಸ್ಥೆಯ ಸದಸ್ಯರಾಗಿದ್ದ ಸರಸ್ವತೀ ರಿಸಬೂಡರ ಹಿರಿಯ ಸಹೋದರನಾದ ವಿ.ಡಿ. ದಿವೇಕರ್ ಅವರು ಮರಾಠಿಯ ’ಯುಗಾಂತ’ ಎಂಬ ಕೃತಿಯನ್ನು ಕನ್ನಡಕ್ಕೆ ಭಾಷಾಂತರಿಸಲು ಸೂಚಿಸುತ್ತಾರೆ. ತಮ್ಮ ಪತಿ ಗಜಾನನ ರಿಸಬೂಡರ ಪ್ರೋತ್ಸಾಹದಿಂದ ಅನುವಾದ ಕಾರ್ಯದಲ್ಲಿ ತೊಡಗಿದ ಸರಸ್ವತೀಯವರು ಅದಕ್ಕಾಗಿ ಒಂಬತ್ತು ವರ್ಷಗಳನ್ನು ತೆಗೆದುಕೊಂಡರು. ನಂತರದಲ್ಲಿ ಹಲವು ಕೃತಿಗಳು ಅವರಿಂದ ಅನುವಾದಗೊಂಡವು. ಅದಕ್ಕವರ ಪತಿ ಗಜಾನನರು, ’ಮೊದಲ ಹೆರಿಗೆ ಕಷ್ಟದ್ದಾಗಿರುತ್ತದೆ ಹಾಗೂ ನಂತರದಲ್ಲಿ ಸುಲಭವೆಂದು’ ತಮಾಷೆ ಮಾಡುತ್ತಿದ್ದರಂತೆ. ಹಾಗೆಯೇ ’ಒಲೆಯ ಮೇಲಿಟ್ಟ ಕಾವಲಿಯಲ್ಲಿ ಮೊದಲ ದೋಸೆ ಮಾಡಲು ಸಮಯ ಹಿಡಿಯುತ್ತದೆ; ನಂತರದಲ್ಲಿ ಕಾವಲಿ ಬಿಸಿಯಾಗುವುದರಿಂದ ಬೇಗ ಬೇಗ ದೋಸೆಗಳಾಗುತ್ತವೆ’ ಎನ್ನುತ್ತಿದ್ದರು ಎಂಬುದನ್ನು ಸರಸ್ವತೀ ರಿಸಬೂಡರ ಮಗ ಡಾ. ಜಯಂತ್ ರಿಸಬೂಡರು ನೆನಪಿಸಿಕೊಳ್ಳುತ್ತಾರೆ.

ಮರಾಠಿಯ ಪ್ರಸಿದ್ಧ ಮಾನವಶಾಸ್ತ್ರಜ್ಞೆ ಹಾಗೂ ಸಮಾಜಶಾಸ್ತ್ರಜ್ಞೆಯಾದ ಇರಾವತಿ ಕರ್ವೆಯವರು ಮಹಾಭಾರತದ ಪಾತ್ರಗಳನ್ನು ಐತಿಹಾಸಿಕ ಮತ್ತು ಸಾಮಾಜಿಕ ನೆಲೆಯಲ್ಲಿ ವಿಶ್ಲೇಷಿಸಿದ ’ಯುಗಾಂತ’ ಎಂಬ ಅಭಿಜಾತ ಕೃತಿಯನ್ನು ರಿಸಬೂಡರು ಕನ್ನಡದ್ದೇ ಎನ್ನುವ ಹಾಗೆ 1973ರಲ್ಲಿ ಅನುವಾದಿಸಿಕೊಟ್ಟರು. ಆ ಕಾಲದ ಪ್ರಮುಖ ಸಮಾಜಶಾಸ್ತ್ರಜ್ಞರಾದ ಜಿ.ಎಸ್. ಘುರ್‍ಯೆ ಅವರ ನೇರ ಶಿಷ್ಯೆಯಾಗಿದ್ದ ಇರಾವತಿಯವರು ಮಹಾಭಾರತವನ್ನು, ಅದರ ಕಾಲಘಟ್ಟದ ಸಾಮಾಜಿಕ ಸಂಕೀರ್ಣತೆಗಳನ್ನು ಗ್ರಹಿಸಿ ಆಳವಾದ ಹಾಗೂ ವಿಭಿನ್ನವಾದ ನೆಲೆಯಲ್ಲಿ ಅಧ್ಯಯನ ಮಾಡಿದರು. ಮಹಾಭಾರತದ ಪಾತ್ರಗಳಿಗಿದ್ದ ಪೌರಾಣಿಕ ಆವರಣ ಮತ್ತು ಅತಿಮಾನುಷತೆಯ ಅಂಶಗಳನ್ನು ಕಳಚಿಟ್ಟು ಸಾಮಾಜಿಕ ವಾಸ್ತವವಾದಿ ನೆಲೆಗಟ್ಟಿನಲ್ಲಿ ವಿಶ್ಲೇಷಿಸಿದ್ದು ಇರಾವತಿಯವರ ಗಹನವಾದ ವಿದ್ವತ್ತಿಗೆ ಅತ್ಯುತ್ತಮ ನಿದರ್ಶನವಾಗಿದೆ. ಇರಾವತಿಯವರ ಕೃತಿಯು ಮಹಾಭಾರತವನ್ನು ಬಹುಸ್ತರೀಯ ವಿಧಾನದಲ್ಲಿ ಅಧ್ಯಯನ ನಡೆಸುವ ಮುಖ್ಯ ಪಠ್ಯವಾಯಿತು.

ಮರಾಠಿಯಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿದ ’ಯುಗಾಂತ’ ಕೃತಿಗೆ 1967ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಕೂಡ ದೊರೆಯಿತು. ಇಂತಹ ಮಹತ್ವಪೂರ್ಣ ಕೃತಿಯನ್ನು ಸರಸ್ವತೀ ರಿಸಬೂಡರು ಅನುವಾದಿಸಿದ ಕಾರಣವನ್ನು ಹೀಗೆ ಹೇಳಿಕೊಂಡಿದ್ದಾರೆ: “ಈ ತರಹದ ದೃಷ್ಟಿಕೋನ ಕರ್ನಾಟಕದಲ್ಲಿ ಇನ್ನೂ ರೂಢವಾಗಿಲ್ಲ. ಮಹಾಭಾರತವು ಇನ್ನೂ ಮೋಕ್ಷ, ಮನೋರಂಜನೆಯ ವಿಷಯವಾಗಿಯೇ ಉಳಿದುಕೊಂಡಿದೆ. ಕೆಲಮಟ್ಟಿಗೆ ಅಪ್ರಿಯವೆನಿಸುವ ಕರ್ವೆಯವರ ಕೆಲವೊಂದು ಸಿದ್ಧಾಂತಗಳ ಕಲ್ಪನೆಯಾದರೂ ಸುಶಿಕ್ಷಿತರಿಗೆ ಇರುವುದು ಅಗತ್ಯವೆನಿಸಿದ್ದರಿಂದ ’ಯುಗಾಂತ’ವನ್ನು ಕನ್ನಡಿಸಿದ್ದೇನೆ.” ಈ ಮಾತುಗಳು ಸರಸ್ವತೀ ರಿಸಬೂಡರು ಅನುವಾದವನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದ್ದರು ಎಂಬುದನ್ನು ತಿಳಿಸುತ್ತವೆ. ಎಸ್.ಎಲ್. ಭೈರಪ್ಪನವರ ’ಪರ್ವ’ ಕಾದಂಬರಿ ಪ್ರಕಟವಾದಾಗ ಅದು ’ಯುಗಾಂತ’ ಕೃತಿಯಿಂದ ಪ್ರಭಾವಿತವಾಗಿದೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಆದರೆ ಭೈರಪ್ಪನವರು ಆ ಕೃತಿಯನ್ನು ತಾನು ಓದಿಯೇ ಇಲ್ಲವೆಂದು ತಳ್ಳಿ ಹಾಕಿದರು.

ಭಾರತದ ಮಹಿಳಾ ಹೋರಾಟಗಳ ಚರಿತ್ರೆಯಲ್ಲಿ ಮಹಾರಾಷ್ಟ್ರದ ಗೋದಾವರಿ ಪರುಳೇಕರ್ ಅವರದ್ದು ಮುಖ್ಯ ಹೆಸರಾಗಿದೆ. ಕಮ್ಯೂನಿಸ್ಟ್ ಹಾಗೂ ಮಾರ್ಕ್ಸ್‌ವಾದಿ ಚಿಂತನೆಯ ಹಿನ್ನೆಲೆಯಿಂದ ಬಂದ ಗೋದಾವರಿ ಪರುಳೇಕರ್ ಅವರು ಇಂಗ್ಲಿಷಿನಲ್ಲಿ ಬರೆದ ’ಅವೇಕನಿಂಗ್ ಆಫ್ ಮ್ಯಾನ್’ ಎಂಬ ಕೃತಿಯನ್ನು ಸ್ವತಃ ಅವರೇ ಮರಾಠಿಗೆ ’ಜೇಂವಾ ಮಾನುಸ್ ಜಾಗ್ ಹೋತೋ’ ಎಂದು ಅನುವಾದಿಸಿದರು. ಈ ಬಹುಚರ್ಚಿತ ಕೃತಿಯನ್ನು ಸರಸ್ವತೀ ರಿಸಬೂಡರು ಕನ್ನಡದಲ್ಲಿ ’ಮಾನವ ಎಚ್ಚೆತ್ತಾಗ’ (2000) ಎಂಬ ಹೆಸರಿನಲ್ಲಿ ಭಾಷಾಂತರಿಸಿದ್ದಾರೆ. ಪರುಳೇಕರರ ಈ ಮಾರಾಠಿ ಕೃತಿಗೆ 1972ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೂಡ ಸಿಕ್ಕಿತು. ಇದು ಹಲವು ಭಾರತೀಯ ಭಾಷೆಗಳಿಗೆ ಹಾಗೂ ಜಪಾನಿ ಸೇರಿದಂತೆ ಜಗತ್ತಿನ ಬೇರೆ ಬೇರೆ ಭಾಷೆಗಳಿಗೂ ಅನುವಾದಗೊಂಡಿದೆ. ಮೇಲ್ನೋಟಕ್ಕೆ ಇದು ಪರುಳೇಕರ್‌ರ ಆತ್ಮಕಥನದಂತೆ ಕಾಣುತ್ತದೆ; ಆದರೆ ಅವರ ವೈಯಕ್ತಿಕ ಸಾಧನೆಗಳನ್ನು ನಿರೂಪಿಸುವ ಕೃತಿಯಲ್ಲ. ಇದು ಆದಿವಾಸಿ ಮಹಿಳೆಯರ ಬವಣೆಗಳನ್ನು, ಜಮೀನ್ದಾರರ ದಬ್ಬಾಳಿಕೆಯನ್ನು, ಉಳ್ಳವರೊಂದಿಗೆ ಶಾಮಿಲಾದ ಪೊಲೀಸ್ ವ್ಯವಸ್ಥೆಯನ್ನು ಹಾಗೂ ಇವುಗಳಿಂದ ಹೆಣ್ಣಿನ ವಿಮೋಚನೆಗಾಗಿ ಪರುಳೇಕರ್‌ರು ನಡೆಸಿದ ವೀರೋಚಿತ ಸೆಣಸಾಟದ ಬಹುಮುಖಿ ಆಯಾಮಗಳನ್ನು ಒಳಗೊಂಡಿದೆ. ಆದ್ದರಿಂದ ಈ ಕೃತಿಯು ವ್ಯಕ್ತಿಗತ ನೆಲೆಯಿಂದ ಶುರುವಾಗಿ, ಸಾಮಾಜಿಕ ಆಯಾಮವನ್ನು ಪಡೆದುಕೊಂಡು, ಮಾನವ ಜನಾಂಗದ ಒಳಿತಿಗಾಗಿ ಸಾರ್ವತ್ರಿಕ ಮೌಲ್ಯಗಳನ್ನು ಶೋಧಿಸುತ್ತದೆ.

ಭಾರತದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿಯೇ ಮಾನವ ಗುಲಾಮಗಿರಿಯ ವಿರುದ್ಧ ಸಿಡಿದೆದ್ದು ಹೋರಾಡಿದವರಲ್ಲಿ ಗೋದಾವರಿ ಪರುಳೇಕರ್ ಧೀಮಂತ ಮಹಿಳೆಯಾಗಿದ್ದಾರೆ. ಮಹಾರಾಷ್ಟ್ರದ ಪ್ರಥಮ ಮಹಿಳಾ ಕಾನೂನು ಪದವೀಧರೆಯಾಗಿದ್ದ ಅವರು ಗೋಪಾಲಕೃಷ್ಣ ಗೋಖಲೆಯವರ ’ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ’ಯ ಸದಸ್ಯರಾದ ಮೊದಲ ಮಹಿಳೆಯೂ ಹೌದು. ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರೋಧಿಯಾಗಿದ್ದ ಗೋದಾವರಿ ಪರುಳೇಕರ್‌ರು ಸಾಕಷ್ಟು ಬಾರಿ ಜೈಲುವಾಸ ಅನುಭವಿಸಿದವರು; ನಂತರದಲ್ಲಿ ದುಡಿಯುವ ವರ್ಗದವರ ಸಂಕೋಲೆಗಳನ್ನು ಕಳಚುವುದಕ್ಕೆ ಸಂಘರ್ಷಾತ್ಮಕ ಬದುಕನ್ನು ಆಯ್ಕೆ ಮಾಡಿಕೊಳ್ಳುತ್ತಾರೆ; ಪರುಳೇಕರ್‌ರವರು ಮಹಾರಾಷ್ಟ್ರದ ಠಾಣಾ ಜಿಲ್ಲೆಯ ದಹಾಣು, ಉಂಬರಗಾಂವ್, ಖತ್ತಲವಾಡ, ಝರಿ ಗ್ರಾಮಗಳಲ್ಲಿ ದಾರುಣತೆಯಿಂದ ಕೂಡಿದ ವಾರಲೀ ಆದಿವಾಸಿಗಳ ಬಾಳಿನಲ್ಲಿ ಅರಿವನ್ನು ಆಸ್ಪೋಟಿಸಿದ ಬಗೆಯು ಮೈನವಿರೇಳಿಸುವ ಕಥನವಾಗಿದೆ. ಪರುಳೇಕರರು ವಾರಲೀ ಆದಿವಾಸಿ ಮಹಿಳೆಯರ ಮೇಲೆ ನಡೆಯುತ್ತಿದ್ದ ಎಲ್ಲ ಬಗೆಯ ಹಿಂಸೆ, ದೌರ್ಜನ್ಯ ಹಾಗೂ ಶೋಷಣೆಗಳನ್ನು ತಡೆಗಟ್ಟಲು ಹಗಲಿರುಳು ಶ್ರಮಿಸುತ್ತಾರೆ.

ಸಂಸ್ಕೃತ ಭಾಷಾ ಸಾಹಿತ್ಯದಲ್ಲಿ ಹಾಗೂ ಬೌದ್ಧ ಸಾಹಿತ್ಯದಲ್ಲಿ ಆಳವಾದ ವಿದ್ವತ್ತನ್ನು ಪಡೆದಿದ್ದ ದುರ್ಗಾ ಭಾಗವತ್ ಅವರು ಭಾರತದ ಯುಗ ಪ್ರವರ್ತಕ ಲೇಖಕಿಯಾಗಿದ್ದಾರೆ. ಗಾಂಧೀಜಿಯವರ ಅನುಯಾಯಿಯಾಗಿದ್ದ ಭಾಗವತ್ ಅವರು ಹಲವು ವರ್ಷಗಳ ಕಾಲ ಮಧ್ಯಪ್ರದೇಶದ ಕಾಡಿನಲ್ಲಿ ಬೆಂಗಾಲಿ ಲೇಖಕಿ ಮಹಾಶ್ವೇತಾದೇವಿ ಅವರಂತೆಯೇ ಬುಡಕಟ್ಟು ಸಮುದಾಯದವರ ಜೀವನವನ್ನು ನಿಕಟವಾಗಿ ಅಧ್ಯಯನ ಮಾಡಿದರು. ಮರಾಠಿ ಭಾಷೆಯ ಅನನ್ಯ ಒಳನೋಟಗಳ ಪ್ರಖ್ಯಾತ ಚಿಂತಕಿಯಾದ ದುರ್ಗಾ ಭಾಗವತ್ ಅವರ ’ಪೈಸ’ ಎಂಬ ಕೃತಿಯನ್ನು ಸರಸ್ವತೀ ರಿಸಬೂಡರು ’ದಿಗಂತದಾಚೆ’ ಎಂಬ ಶೀರ್ಷಿಕೆಯಲ್ಲಿ ಅನುವಾದಿಸಿದ್ದಾರೆ. ಇವರ ನಂತರದಲ್ಲಿ ದುರ್ಗಾ ಭಾಗವತ್ ಅವರ ಕೆಲವು ಕೃತಿಗಳನ್ನು ಗೌರೀಶ ಕಾಯ್ಕಿಣಿ, ವಿವೇಕ್ ರೈ ಹಾಗೂ ಚಂದ್ರಕಾಂತ ಪೋಕಳೆಯವರು ಕನ್ನಡಕ್ಕೆ ಭಾಷಾಂತರ ಮಾಡಿದ್ದಾರೆ.

ಮರಾಠಿಯ ಸಾಮಾಜಿಕ ಕಾರ್ಯಕರ್ತೆ ಹಾಗೂ ಸ್ತ್ರೀವಾದಿ ಚಿಂತಕಿಯಾದ ಛಾಯಾ ದಾತಾರ್ ಅವರ ಒಂದು ಕೃತಿಯನ್ನು ಸರಸ್ವತೀ ರಿಸಬೂಡರು ’ಸ್ತ್ರೀ ಪುರುಷ’ (1992) ಎಂದು ಕನ್ನಡಕ್ಕೆ ತಂದಿದ್ದಾರೆ. ಮರಾಠಿಯಲ್ಲಿ ಸಣ್ಣ ಕತೆಗಳನ್ನು ಬರೆದ ದಾತಾರ್ ಅವರು ಮುಂಬಯಿಯಲ್ಲಿ ಮಹಿಳೆಯರ ಕೃತಿಗಳನ್ನು ಪ್ರಕಟಿಸುವುದಕ್ಕೆ ’ಸ್ತ್ರೀ ಉವಾಚ’ ಎಂಬ ಪ್ರಕಾಶನ ಸಂಸ್ಥೆಯನ್ನು ಕೂಡ ಸ್ಥಾಪಿಸಿದರು. ಮಹಿಳೆಯರ ಸಮಸ್ಯೆಗಳನ್ನು ಕುರಿತು ವ್ಯಾಪಕವಾಗಿ ಕ್ಷೇತ್ರಕಾರ್ಯವನ್ನು ಮಾಡಿದ್ದ ದಾತಾರ್ ಅವರು ಸ್ತ್ರೀ ವಿಮೋಚನಾ ಚಳವಳಿಗೆ ಮುಖ್ಯ ಕೊಡುಗೆಯನ್ನು ನೀಡಿದ್ದಾರೆ. ಛಾಯಾ ದಾತಾರ್ ಅವರು ಪಾಶ್ಚಾತ್ಯ ಚಿಂತಕರಾದ ಮಾರ್ಕ್ಸ್, ಎಂಜೆಲ್ಸ್ ಹಾಗೂ ಮಾರ್ಗರೇಟ್ ಮೀಡ್ ಅವರ ಮಹಿಳಾ ವಿಮೋಚನಾ ಕುರಿತ ವಿಚಾರಧಾರೆಗಳನ್ನು ’ಸ್ತ್ರೀ ಪುರುಷ’ ಕೃತಿಯಲ್ಲಿ ಚರ್ಚಿಸುತ್ತಾರೆ. ಭಾರತೀಯರಾದ ಗಾಂಧೀಜಿ ಮತ್ತು ರಾಜವಾಡೆ ಅವರ ವಿಚಾರಗಳನ್ನು ನಿಷ್ಠುರವಾಗಿ ಒರೆಗೆ ಹಚ್ಚುತ್ತಾರೆ.

ಹೀಗೆ ಸರಸ್ವತೀ ರಿಸಬೂಡರು ಮರಾಠಿಯ ಇರಾವತಿ ಕರ್ವೆ, ಗೋದಾವರಿ ಪರುಳೇಕರ್, ದುರ್ಗಾ ಭಾಗವತ್ ಹಾಗೂ ಛಾಯಾ ದಾತಾರ್ ಅವರ ಕೃತಿಗಳನ್ನು ಕನ್ನಡದ ಓದುಗರಿಗೆ ನಿಲುಕುವಂತೆ ಮಾಡಿದ್ದು ನಿಜವಾದ ಅರ್ಥದಲ್ಲಿ ಬಹುಮುಖ್ಯ ಸಾಧನೆಯಾಗಿದೆ. ಕನ್ನಡದಲ್ಲಿ ಇನ್ನೂ ಪಾಶ್ಚಾತ್ಯ ಸ್ತ್ರೀವಾದವು ಅಪರಿಚಿತವಾಗಿದ್ದ ಅಂದಿನ ಕಾಲಘಟ್ಟದಲ್ಲಿ ಮರಾಠಿಯ ಈ ಧೀಮಂತ ಮಹಿಳಾ ಚಿಂತಕಿಯರ ಕೃತಿಗಳನ್ನು ಸರಸ್ವತೀ ರಿಸಬೂಡರು ಅನುವಾದಕ್ಕೆ ಆಯ್ಕೆ ಮಾಡಿಕೊಂಡಿದ್ದು ಅವರಲ್ಲಿರುವ ಸ್ತ್ರೀಪ್ರಧಾನ ಚಿಂತನೆಗೆ ಹಿಡಿದ ಕನ್ನಡಿಗಳಾಗಿವೆ. ಭಾರತೀಯ ಪರಂಪರೆಯನ್ನು ಹಾಗೂ ಪುರುಷ ಪ್ರಧಾನತೆಯನ್ನು ತಾತ್ವಿಕವಾಗಿ ಪ್ರಶ್ನಿಸಿದ ಈ ಮಹಿಳಾ ವಿದ್ವತ್ ಮಣಿಗಳು ಭಾರತೀಯ ಸ್ತ್ರೀವಾದಿ ಚಿಂತನೆಗೆ ಭದ್ರವಾದ ಅಡಿಪಾಯ ಹಾಕಿದವರಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ವಿಮರ್ಶಕರಾದ ಡಾ.ಎಚ್.ಎಸ್. ರಾಘವೇಂದ್ರರಾವ್ ಅವರು ಸರಸ್ವತೀ ರಿಸಬೂಡರ ಅನುವಾದಿತ ಕೃತಿಗಳ ಬಗ್ಗೆ “ಆ ಕಾಲದ ಮರಾಠಿಯ ಮಹಿಳಾ ಚಿಂತಕಿಯರು ತಮ್ಮ ಚಿಂತನಶೀಲ ಬರವಣಿಗೆಯಿಂದ ತೀರ ಭಿನ್ನರಾಗಿದ್ದರು. ಮರಾಠಿ ವಿಚಾರ ಸಾಹಿತ್ಯವು ಕನ್ನಡಕ್ಕಿಂತ ಭಿನ್ನವಾಗಿಯೇ ನಿಲ್ಲುತ್ತದೆ; ಕನ್ನಡದ ವಿಚಾರ ಸಾಹಿತ್ಯವು ಬೇರೆ ಕಡೆಯ ಓದಿನಿಂದ ಪ್ರೇರಿತವಾಗಿತ್ತು; ಆದರೆ ಮರಾಠಿಯ ಇರಾವತಿ ಕರ್ವೆ, ದುರ್ಗಾ ಭಾಗವತ್, ಛಾಯಾ ದಾತಾರ್, ಪರುಳೇಕರ್ ಅವರಂತಹ ಕ್ರಾಂತಿಕಾರಿ ಲೇಖಕಿಯರು, ಹೋರಾಟಗಾರ್ತಿಯರು ಅತ್ಯಂತ ಆಧುನಿಕ ಪ್ರಜ್ಞೆಯುಳ್ಳವರಾಗಿದ್ದರು. ಅವರ ಕೃತಿಗಳನ್ನು ಕನ್ನಡಕ್ಕೆ ಕೊಟ್ಟ ಸರಸ್ವತೀ ರಿಸಬೂಡ ಅವರು ಕನ್ನಡದ ಬಹುಮುಖ್ಯ ಅನುವಾದಕರಾಗಿದ್ದಾರೆ” ಎಂದು ಹೇಳುತ್ತಾರೆ. ಈ ನಿಟ್ಟಿನಲ್ಲಿ ರಿಸಬೂಡರ ಅನುವಾದಿತ ಕೃತಿಗಳ ಮರು ಓದು, ಅಧ್ಯಯನ ಅಗತ್ಯವಾಗಿ ನಡೆಯಬೇಕಿದೆ.

ಮರಾಠಿಯ ಹೆಸರಾಂತ ಲೇಖಕರಾದ ಪು.ಲ. ದೇಶಪಾಂಡೆಯವರ ನಾಟಕವನ್ನು ’ಸುಂದರ ನಾನಾಗುವೆ’ ಎಂದು ಸರಸ್ವತೀ ರಿಸಬೂಡರು ಕನ್ನಡಕ್ಕೆ ಅನುವಾದಿಸಿದ್ದಾರೆ. ಶ್ರೀಪಾದ ರಘುನಾಥ ಭಿಡೆಯವರ ರಾಮಾಯಣ ಕುರಿತ ಕೃತಿಯನ್ನು ’ವಾಲ್ಮೀಕಿ ರಾಮಾಯಣ: ಶಾಪ ಮತ್ತು ವರ’ ಎಂಬ ಹೆಸರಿನಲ್ಲಿ ಭಾಷಾಂತರಿಸಿದ್ದಾರೆ. ಗ.ಪ. ಪ್ರಧಾನ ಅವರ ಕೃತಿಯನ್ನು ’ಸ್ವಾತಂತ್ರ್ಯ ಸಂಗ್ರಾಮದ ಮಹಾಭಾರತ’ ಎಂಬ ಶೀರ್ಷಿಕೆಯಲ್ಲಿ ಕನ್ನಡಕ್ಕೆ ತಂದಿದ್ದಾರೆ. ಹೀಗೆ ಸರಸ್ವತೀ ರಿಸಬೂಡರು ಮರಾಠಿಯ ಇನ್ನಿತರ ಹಲವು ಕೃತಿಗಳನ್ನು ಕೂಡ ಕನ್ನಡಕ್ಕೆ ಅನುವಾದಿಸುವುದರ ಮುಖಾಂತರ ಕನ್ನಡ-ಮರಾಠಿ ಸಾಹಿತ್ಯದ ನಡುವಿನ ವೈಚಾರಿಕ ಸಾಹಿತ್ಯದ ರಾಯಭಾರಿಯಾಗಿದ್ದಾರೆ. ಹಾಗೆ ನೋಡಿದರೆ ಅನುವಾದಕರನ್ನು ’ಸಾಂಸ್ಕೃತಿಕ ರಾಯಭಾರಿಗಳು’ ಎಂದೇ ಕರೆಯಲಾಗುತ್ತದೆ.

ಅನುವಾದಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಗೌರವ, ಕುವೆಂಪು ಭಾಷಾ ಭಾರತಿ ಗೌರವ ಹಾಗೂ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪುರಸ್ಕಾರಗಳನ್ನು ಪಡೆದಿದ್ದ ಸರಸ್ವವತೀ ರಿಸಬೂಡರು ಈಚೆಗಷ್ಟೇ ನಮ್ಮನ್ನು ಅಗಲಿದ್ದಾರೆ. ಅನುವಾದ ಸಾಹಿತ್ಯ ಎಂದಾಕ್ಷಣ ಮುಖ್ಯವಾಗಿ ಮೂಲ ಲೇಖಕ/ಲೇಖಕಿಯರನ್ನು ಚರ್ಚಿಸಲಾಗುತ್ತದೆ. ಈ ಸಂಪ್ರದಾಯ ಇಂದಿಗೂ ಮುಂದುವರೆದಿದೆ. ಅನುವಾದಕರ ವೈಯಕ್ತಿಕ ಅಭಿರುಚಿ ಮತ್ತು ಚಾರಿತ್ರಿಕ ಒತ್ತಡಗಳು ಕೂಡ ಭಾಷಾಂತರದ ಪ್ರೇರಣೆಗೆ ಕಾರಣಗಳಾಗಿರುತ್ತವೆ. ಆದರೆ ಎರಡು ಭಾಷಿಕ ಸಂಸ್ಕೃತಿಗಳನ್ನು ಹಲವು ಬಗೆಯ ಎಳೆಗಳಿಂದ ಬೆಸೆಯುವ ಅನುವಾದಕರು ಕೂಡ ಮುಖ್ಯರಾಗಿರುತ್ತಾರೆ. ಈ ಹಿನ್ನೆಲೆಯಲ್ಲಿ ಸರಸ್ವತೀ ರಿಸಬೂಡರನ್ನು ಕನ್ನಡಿಗರು ಗೌರವಿಸುವುದೆಂದರೆ ಅವರ ಅನುವಾದಿತ ಕೃತಿಗಳನ್ನು ಗಂಭೀರವಾಗಿ ಓದುವುದು ಹಾಗೂ ಚರ್ಚಿಸುವುದಾಗಿದೆ. ಸರಸ್ವತೀ ರಿಸಬೂಡರ ಎಲ್ಲ ಕೃತಿಗಳು ಓದುಗರಿಗೆ ಲಭ್ಯವಾಗುಂತೆ ಮಾಡಬೇಕಾಗಿದೆ.

(ಡಾ.ಎಚ್.ಎಸ್. ರಾಘವೇಂದ್ರ ರಾವ್ ಮತ್ತು ಡಾ. ಜಯಂತ್ ಅವರು ನೀಡಿದ ಮಾಹಿತಿಗೆ ಋಣಿಯಾಗಿದ್ದೇನೆ)

ಡಾ. ಸುಭಾಷ್ ರಾಜಮಾನೆ

ಡಾ. ಸುಭಾಷ್ ರಾಜಮಾನೆ
ಬೆಂಗಳೂರಿನ ಯಲಹಂಕ ಪದವಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರು. ಕನ್ನಡ, ಇಂಗ್ಲಿಷ್, ಮರಾಠಿ ಭಾಷೆಗಳನ್ನು ಬಲ್ಲ ಇವರು, ಸಿನಿಮಾ ಮತ್ತು ಸಾಹಿತ್ಯ ವಿಮರ್ಶೆಯಲ್ಲಿ ತೊಡಗಿಸಿಕೊಂಡಿದ್ದಾರೆ


ಇದನ್ನೂ ಓದಿ: ಚಹರೆಗಳೆಂದರೆ ಗಾಯಗಳೂ ಹೌದು; ರಚನಾತ್ಮಕ ತಳಮಳಗಳ ದಮನಿತ ಸಮುದಾಯಗಳ ಕಥನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...