ಭಾರತದ ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರೊಂದಿಗೆ ಕೆಲಸ ಮಾಡಬೇಕೆನ್ನುವುದು ನನ್ನ ಆಸೆ ಎಂದು ‘ಮನಿಕೆ ಮಗೆ ಹಿತೆ’ ಖ್ಯಾತಿಯ ಗಾಯಕಿ ಯೊಹಾನಿ ಹೇಳಿದ್ದಾರೆ.
ಎನ್‌ಡಿಟಿವಿಯೊಂದಿಗೆ ಮಾತನಾಡಿರುವ ಯೊಹಾನಿ ಅವರಿಗೆ ಕಾರ್ಯಕ್ರಮ ನಿರೂಪಕ, “ನೀವು ಭಾರತದ ಚಿತ್ರರಂಗದೊಂದಿಗೆ ಕೆಲಸ ಮಾಡಲು ಇಚ್ಛಿಸುತ್ತೀರಾ?” ಎಂದು ಕೇಳಿದಾಗ, “ಎ.ಆರ್.ರೆಹಮಾನ್, ಯೋಯೋ ಹನಿಸಿಂಗ್, ಡಿವೈನ್, ನೇಹಾಕಕ್ಕರ್” ಅವರ ಹೆಸರನ್ನು ಉಲ್ಲೇಖಿಸುವ ಯೊಹಾನಿ, “ಭಾರತದ ಸಂಗೀತದಿಂದ ಶ್ರೀಲಂಕಾ ಪ್ರಭಾವಿಸಿದೆ” ಎನ್ನುತ್ತಾರೆ.
“ಬೇರೆ ಬೇರೆ ಭಾಷೆಗಳಲ್ಲಿ ನಿಮ್ಮ ಹಾಡು (ಮನಿಕೆ ಮಗೆ) ಬಂದಿದೆ. ಮಲಯಾಳಂ ಹಾಗೂ ತಮಿಳು ವರ್ಷನ್‌ನಲ್ಲಿ ನೀವೇ ಹಾಡಿದ್ದೀರಿ” ಎಂದು ಪ್ರಸ್ತಾಪಿಸಿದಾಗ, “ಸಿಂಹಳಿ ನನ್ನ ಮಾತೃ ಭಾಷೆ. ತಮಿಳು ಹಾಗೂ ಮಲಯಾಳಂ ನನಗೆ ಹತ್ತಿರದ ಭಾಷೆಗಳಲ್ಲ. ನನ್ನ ಹಲವು ಸ್ನೇಹಿತರು ತಮಿಳು ಹಾಗೂ ಮಲಯಾಳಂ ಆವೃತ್ತಿ ಹೊರಬರಲು ಸಹಕರಿಸಿದ್ದಾರೆ. ಈ ಭಾಷೆಗಳನ್ನು ಅರ್ಥ ಮಾಡಿಕೊಂಡು ಹಾಡುವುದು ಬಹಳ ಖುಷಿ ತಂದಿದೆ’ ಎಂದು ಯೊಹಾನಿ ತಿಳಿಸಿದ್ದಾರೆ. ಭಾರತದ ಹಲವು ಭಾಷೆಗಳಲ್ಲಿ ಯೊಹಾನಿ ಅವರ ಮನಿಕೆ ಹಿತೆ ಆವೃತ್ತಿಗಳು ಬಂದಿರುವುದನ್ನು ಕಂಡು ಯೊಹಾನಿ ಖುಷಿಯಾಗಿದ್ದಾರೆ.


