ಕಾಂಗ್ರೆಸ್ ಪಕ್ಷವು ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರನ್ನು ಪಂಜಾಬ್ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ, ಸಿಖ್ ದಲಿತ ವ್ಯಕ್ತಿಯಾದ ಚರಣ್‌ಜಿತ್ ಸಿಂಗ್ ಚನ್ನಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿರುವುದು ಕರ್ನಾಟಕದಲ್ಲಿಯೂ ದಲಿತ ಮುಖ್ಯಮಂತ್ರಿ ಚರ್ಚೆಗೆ ಕಾರಣವಾಗಿದೆ.
ದಲಿತ ಮುಖ್ಯಮಂತ್ರಿ ವಿಚಾರದಲ್ಲಿ ಎಲ್ಲ ಪಕ್ಷಗಳೂ ಅನ್ಯಾಯ ಮಾಡಿವೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಪ್ರಬಲ ಲಿಂಗಾಯತ, ಒಕ್ಕಲಿಗ ಸಮುದಾಯದ ವ್ಯಕ್ತಿಗಳೇ ಅತಿ ಹೆಚ್ಚು ಬಾರಿ ಕರ್ನಾಟಕದಲ್ಲಿ ಮುಖ್ಯಮಂತ್ರಿಗಳಾಗಿದ್ದಾರೆ. ಯಾವ ಪಕ್ಷವು ಇಲ್ಲಿ ದಲಿತ ವ್ಯಕ್ತಿಯನ್ನು ಮುಖ್ಯಮಂತ್ರಿ ಮಾಡಿಲ್ಲ. ರಾಜಕೀಯ ಕೆಸರೆರಚಾಟಕ್ಕೆ ‘ದಲಿತ ಮುಖ್ಯಮಂತ್ರಿ’ ಎಂಬ ಚರ್ಚೆ ಕಾರಣವಾಗುತ್ತದೆ.
ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಪಕ್ಷವು ಪಂಜಾಬ್ ವಿದ್ಯಮಾನವನ್ನು ಹಿಡಿದು, ‘ದಲಿತ ಮುಖ್ಯಮಂತ್ರಿ’ ವಿಚಾರವನ್ನು ಪ್ರಸ್ತಾಪಿಸಿ, “ಪಂಜಾಬ್ ರಾಜ್ಯದಲ್ಲಿ ದಲಿತರನ್ನು ಮುಖ್ಯಮಂತ್ರಿ ಮಾಡಿದ ಹಿನ್ನೆಲೆಯಲ್ಲಿ ಸಿಎಂ ಸ್ಥಾನಕ್ಕಾಗಿ ಹಗಲುಕನಸು ಕಾಣುತ್ತಿರುವ ಸಿದ್ಧರಾಮಯ್ಯ, ಡಿ.ಕೆ.ಶಿವಕುಮಾರ್ ಅವರೇ, ದಲಿತ ಸಿಎಂ ವಿಚಾರದಲ್ಲಿ ನಿಮ್ಮ ನಿಲುವೇನು? ಮಲ್ಲಿಕಾರ್ಜುನ ಖರ್ಗೆ ಮತ್ತು ಪರಮೇಶ್ವರ್ ಅವರ ರಾಜಕೀಯ ಜೀವನವನ್ನು ಮುಗಿಸಿದ ರೀತಿ ಕರ್ನಾಟಕ ಕಾಂಗ್ರೆಸ್‌ನ ಅಂತರಾಳದಲ್ಲಿ ಹುಟ್ಟಿದ ದಲಿತ ಸಿಎಂ ವಾದದ ಭ್ರೂಣ ಹತ್ಯೆ ಮಾಡುತ್ತೀರಾ?” ಎಂದು ಟ್ವೀಟ್ ಮಾಡಿದೆ.
ಮುಂದುವರಿದು, “ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವರಿಷ್ಠರ ದ್ವಿಮುಖ ನೀತಿಯ ಬಗ್ಗೆ ಏನೆನ್ನಬೇಕು? ಪಂಜಾಬ್‌ನಲ್ಲಿ ಚರಣಜಿತ್ ಅವರಿಗೆ ಪಟ್ಟಕಟ್ಟಿ ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡಿದ್ದೇವೆ ಎಂದು ಬೀಗುತ್ತಿದ್ದಾರೆ. ಆದರೆ, ರಾಜ್ಯದಲ್ಲಿ ದಲಿತ ಸಿಎಂ ವಾದ ಹಾಗೂ ದಲಿತ ನಾಯಕರನ್ನು ಮೂಲೆಗುಂಪು ಮಾಡಿ ಮೌನಕ್ಕೆ ಶರಣಾಗಿದ್ದಾರೆ” ಎಂದು ಬಿಜೆಪಿ ಹೇಳಿದೆ.
ಇದಕ್ಕೆ ತಮ್ಮ ಫೇಸ್‌ಬುಕ್ ಖಾತೆಯ ಮೂಲಕ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, “ಸದಾ ಮೌಢ್ಯತೆ ಮತ್ತು ಮತೀಯವಾದವನ್ನೇ ಉಸಿರಾಡುತ್ತಿರುವ ಬಿಜೆಪಿಗರು ದಲಿತರನ್ನು ಸಿಎಂ ಮಾಡುವುದಿರಲಿ, ಅವರಿಗೆ ಸರಿಯಾಗಿ ಗೌರವವನ್ನೂ ನೀಡಲು ಹಿಂದೆ ಮುಂದೆ ನೋಡುತ್ತಾರೆ. ದಲಿತರ ಬದುಕಿನ ಘನತೆ ಮತ್ತು ಅವರ ಹಕ್ಕುಗಳಿಗೆ ವಿರುದ್ಧವಾಗಿರುವಂತಹ ಅಮಾನವೀಯ ವಾತಾವರಣವನ್ನು ನಿರ್ಮಿಸಿದ್ದಾರೆ. ಇದೇ ಮತೀಯವಾದಿಗಳು ಇದೀಗ ದಲಿತ ಸಿ.ಎಂ. ಹೆಸರಿನಲ್ಲಿ ದಲಿತರ ಒಗ್ಗಟ್ಟನ್ನು ಒಡೆಯುವ ಕೆಲಸವನ್ನು ಮಾಡುತ್ತಿರುವುದು ಹಾಸ್ಯಾಸ್ಪದ ಮತ್ತು ಅಪಾಯಕಾರಿ ಬೆಳವಣಿಗೆ” ಎಂದಿದ್ದಾರೆ.
“ಈಗಾಗಲೇ ಹಲವು ರಾಜ್ಯಗಳಲ್ಲಿ ಇವರಿಗೆ ದಲಿತರನ್ನು ಮುಖ್ಯಮಂತ್ರಿ ಮಾಡುವ ಅವಕಾಶ ಸಿಕ್ಕರೂ ಮುಖ್ಯಮಂತ್ರಿ ಮಾಡದೇ ಕಾಂಗ್ರೆಸ್ ಪಕ್ಷದ ಒಗ್ಗಟ್ಟನ್ನು ಒಡೆಯುವ ಕೆಲಸ ಮಾಡುತ್ತಿರುವ ಬಿಜೆಪಿಗರು ಎಂದಿಗೂ ದಲಿತರ ಬದುಕಿನ ಹಿತದ ಬಗ್ಗೆ ಯೋಚಿಸುವುದು ಕನಸಿನ ಮಾತು. ಭಾರತದ ವಿವಿಧ ರಾಜ್ಯಗಳಲ್ಲಿ ಅವಕಾಶ ಸಿಕ್ಕಾಗಲೆಲ್ಲ ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡುವ ಬದ್ಧತೆ ತೋರಿರುವುದು ಕಾಂಗ್ರೆಸ್ ಪಕ್ಷ ಎಂಬುದನ್ನು ಎಲ್ಲರೂ ನೆನಪಿಡಬೇಕು” ಎಂದು ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ಪಂಜಾಬ್‌ನಲ್ಲಿ ದಲಿತ ಮುಖ್ಯಮಂತ್ರಿ: ಕಾಂಗ್ರೆಸ್ ಉರುಳಿಸಿದ ರಾಜಕೀಯ ದಾಳ!


