ಬಿಹಾರದ ಪ್ರಭಾವಶಾಲಿ ನಾಯಕರಾಗಿದ್ದ ರಾಮ್ ವಿಲಾಸ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷ(LJP)ವು ಎರಡು ಬಣಗಳಾಗಿ ಒಡೆದು ಹೋಗಿದೆ. ಒಂದು ಬಣದ ನಾಯಕನಾಗಿ ರಾಮ್ ವಿಲಾಸ್ ಪಾಸ್ವಾನ್ ಅವರ ಸಹೋಧರ ಪಶುಪತಿ ಕುಮಾರ್ ಪರಾಸ್ ಅವರಿದ್ದರೆ, ಇನ್ನೊಂದು ನಾಯಕನಾಗಿ ಪಾಸ್ವಾನ್ ಅವರ ಮಗ ಚಿರಾಗ್ ಪಾಸ್ವಾನ್ ಅವರಿದ್ದಾರೆ.
ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಚಿರಾಗ್ ಅವರು ಯಾವುದೆ ಪಕ್ಷಗಳ ಮೈತ್ರಿಯಿಲ್ಲದೆ ಏಕಾಂಗಿಯಾಗಿ ಹೋರಾಟ ನಡೆಸಿದ್ದರು. ಅದರ ನಂತರ ಪಕ್ಷದ ಒಳಗೆ ಆಂತರಿಕ ಬಿನ್ನಾಭಿಪ್ರಾಯ ಭುಗಿಲೆದ್ದು ಪಕ್ಷವು ಒಡೆದು ಹೋಗಿತ್ತು. ಹೀಗಾಗಿ ಚಿರಾಗ್ ಅವರೇ ತಮ್ಮ ಬಣವನ್ನು ಮುನ್ನಡೆಸುತ್ತಿದ್ದರು. ಇದೀಗ ಚಿರಾಗ್‌ಗೆ ಮತ್ತೊಂದು ಅಫಾತ ಉಂಟಾಗಿದೆ. ಸೋಮವಾರದಂದು ಚಿರಾಗ್ ಬಣದ ಹಿರಿಯ ಮುಖಂಡ ವಿನೋದ್ ಕುಮಾರ್ ಸಿಂಗ್ ಅವರು ಆಡಳಿತಾರೂಢ ಜೆಡಿಯು ಪಕ್ಷವನ್ನು ಸೇರಿದ್ದಾರೆ.
ಇದನ್ನೂ ಓದಿ: ತೇಜಸ್ವಿ, ಚಿರಾಗ್ ಪಾಸ್ವಾನ್ ಮೈತ್ರಿಗೆ ಸಮ್ಮತ ಸೂಚಿಸಿದ ಲಾಲು ಪ್ರಸಾದ್ ಯಾದವ್
ಪಕ್ಷವು ಒಡೆಯುವುದಕ್ಕಿಂತ ಮುಂಚೆ, ಚಿರಾಗ್ ಪಾಸ್ವಾನ್ ವಿರುದ್ಧ ನಡೆದ ನಾಯಕತ್ವ ದಂಗೆಯ ನಂತರವೂ ಪಕ್ಷದ ರಾಜಕೀಯ ಕಾರ್ಯತಂತ್ರಗಳನ್ನು ರೂಪಿಸುವಲ್ಲಿ ವಿನೋದ್ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದರು. ಹಾಗಾಗಿ ಅವರನ್ನು ಚಿರಾಗ್ ಅವರ ಆಪ್ತ ನಾಯಕ ಎಂದು ಪರಿಗಣಿಸಲಾಗಿತ್ತು.
ಈ ಹಿಂದೆ ಜೆಡಿಯುನಲ್ಲೆ ಇದ್ದ ವಿನೋದ್ ಸಿಂಗ್ ಅವರು, 2015 ರಲ್ಲಿ ರಾಜಕೀಯ ಅವಕಾಶಕ್ಕಾಗಿ ಎಲ್‌ಜೆಪಿಗೆ ಸೇರಿದ್ದರು.
“ಚಿರಾಗ್ ಪಾಸ್ವಾನ್ ನೇತೃತ್ವದ ಎಲ್‌ಜೆಪಿ ಈಗ ಹಿರಿಯ ನಾಯಕರಿಗೆ ಯಾವುದೇ ಕಾಳಜಿ ಮತ್ತು ಗೌರವವಿಲ್ಲದೆ ನಿರಂಕುಶವಾಗಿ ಕೆಲಸ ಮಾಡಲು ಆರಂಭಿಸಿದೆ. ಇಂತಹ ಪರಿಸ್ಥಿತಿಯಲ್ಲಿ ನನಗೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನಾನು ಈ ಪಕ್ಷವನ್ನು ತೊರೆದಿದ್ದೇನೆ” ಎಂದು ಜೆಡಿಯು ಸೇರಿದ ನಂತರ ವಿನೋದ್ ಸಿಂಗ್ ಹೇಳಿದ್ದಾರೆ.
ಜೆಡಿಯು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಲಾಲನ್ ಸಿಂಗ್ ಅವರು ವಿನೋದ್ ಸಿಂಗ್ ಅವರನ್ನು ಪಕ್ಷದ ಇತರ ನಾಯಕರ ಸಮ್ಮುಖದಲ್ಲಿ ಮತ್ತೆ ಜೆಡಿಯುಗೆ ಸೇರಿಸಿಕೊಂಡಿದ್ದಾರೆ.
ವಿನೋದ್ ಸಿಂಗ್ ಅವರಿಗೆ 2015 ಮತ್ತು 2020 ರ ವಿಧಾನಸಭಾ ಚುನಾವಣೆಯಲ್ಲಿ ಎಲ್‌ಜೆಪಿಯಿಂದ ಟಿಕೆಟ್ ನೀಡಲಾಗಿತ್ತು. ಅವರು ಎಲ್‌ಜೆಪಿ ಸಂಸದೀಯ ಮಂಡಳಿಯ ಸದಸ್ಯರಲ್ಲಿ ಒಬ್ಬರಾಗಿದ್ದು, ಎಲ್‌ಜೆಪಿಯ ಉಪಾಧ್ಯಕ್ಷರಾಗಿ ದೀರ್ಘಕಾಲ ಸೇವೆ ಸಲ್ಲಿಸಿದ್ದರು.
ಇದನ್ನೂ ಓದಿ: ನಿತೀಶ್ ಕುಮಾರ್‌ರವರ JDU ಯಾವಾಗ ಬೇಕಾದರೂ ಇಬ್ಭಾಗವಾಗಬಹುದು: ಚಿರಾಗ್ ಪಾಸ್ವಾನ್


