ಇದು ಸಿನಿಮಾವೋ ಅಥವಾ ಹೀಗೇ ಕಣ್ಣ ಮುಂದೆ ದೃಶ್ಯವಾದ ಸ್ನೇಹಿತನೇ ಕೂತು ಹೇಳುತ್ತಿರುವ ತಮಾಷೆಯ ಕಥೆಯೋ ಎಂದು ಗೊತ್ತಾಗುವ ಹೊತ್ತಿಗೆ ನೀವು ಸಿನಿಮಾದಲ್ಲಿ ಪೂರ್ತಿ ಇಳಿದುಹೋಗಿ ಇಂಟರ್ ವೆಲ್ ಬಂದಿರುತ್ತದೆ. ಆಗ ಸಿನಿಮಾ ಹಾಲ್ ನಲ್ಲಿ ಬರುವ ಮಂದ ಬೆಳಕೂ ಕಣ್ಣಿಗೆ ಕೋರೈಸಿದಂತೆ ಅನ್ನಿಸಿ ಸುತ್ತ ಮುತ್ತ ಇರುವ ಪರಿಚಿತರ ಮುಖ ನೋಡಲು ಪ್ರಯತ್ನ ಮಾಡಿದರೆ ಕೆಲವರ ಕಣ್ಣಿನಲ್ಲಾದರೂ ನೀರು ಕಂಡು ನಿಮ್ಮ ಕಣ್ಣಲ್ಲೂ ನೀರು ಉಕ್ಕುವ ಸಾಧ್ಯತೆ ಬಹಳಷ್ಟಿದೆ. ನೋಡಲು ಸುಲಲಿತವೆನ್ನಿಸಿದರೂ ಆಳವಾದ, ಸಂಕೀರ್ಣ ಅಭಿನಯ ಸಂಚಾರಿ ವಿಜಯ್ ಅವರದ್ದು.
ಡೂಪ್ಲಿಕೇಟ್ ಬೀಗ ಮಾಡುವ ಹುಡುಗನೊಬ್ಬನಿಗೆ ಪೋಲಿಸರ ಸಹವಾಸವಾಗಿ ಅವರ ಮೆಗಾ ಪ್ಲಾನಿನ ಭಾಗವಾಗಿ ಕಳ್ಳತನಕ್ಕೆ ಇಳಿದು ನಂತರ ತನ್ನದೇ ಬದುಕಿನ ಅನಿವಾರ್ಯತೆಗಳಿಗೆ ತೆರೆದುಕೊಂಡು ಕೆಲವು ತಪ್ಪು ಅನ್ನಿಸುವಂಥ ನಿರ್ಧಾರವನ್ನು ತೆಗೆದುಕೊಳ್ಳುವ ಕಥೆ ಇದು. ಎಲ್ಲೂ ನೈತಿಕತೆಯ ಅನವಶ್ಯಕ ಪಾಠವಿಲ್ಲ. ಎಲ್ಲರೂ ಮನುಷ್ಯರೇ, ತಪ್ಪು-ಒಪ್ಪುಗಳನ್ನು ಒಳಗೊಂಡವರೇ ಎನ್ನುವುದು ಧ್ಯೇಯ ವಾಕ್ಯ ಅಂತ ನನಗೆ ಅನ್ನಿಸಿತು.
ಮೊದಮೊದಲಿಗೆ ತುಟಿ ಬಿರಿಸುವಷ್ಟೇ ತಮಾಷೆ ಅನ್ನಿಸಿದರೂ ನಂತರ ಕ್ಯಾರೆಕ್ಟರುಗಳು ಮನಸ್ಸಿನಲ್ಲಿ ಇಳಿದು ನಗುವೇ ಅಭಿವ್ಯಕ್ತಿಯ ಭಾಗವಾಗುತ್ತದೆ. ಕಥೆಯೇ ಸ್ವತಂತ್ರವಾಗಿ ನಿಲ್ಲುವುದು ಪಾತ್ರಗಳ ಮೂಲಕ ಮಾತ್ರ. ಹಾಗಾಗಿ ಸಿನಿಮಾದಲ್ಲಿ ಡ್ರೋನ್ ಶಾಟ್ ಗಳು ಹೆಚ್ಚು ಬಳಕೆಯಾಗಿದ್ದು ಬಿಟ್ಟರೆ ಹೆಚ್ಚು ಟೈಟ್ ಫ್ರೇಮುಗಳ ಬಳಕೆ ಇದೆ. ರಂಗಭೂಮಿಯ ಹಿನ್ನೆಲೆ ಇರುವ ಬಹಳ ಜನ ಇದರಲ್ಲಿ ಪಾತ್ರ ಮಾಡಿರುವುದರಿಂದ ಚಿತ್ರ ಎಲ್ಲೂ ಅರೆಬರೆ ಅನ್ನಿಸುವುದಿಲ್ಲ. ಇದಕ್ಕೆ ಉತ್ತಮ ನಟರ ಅಭಿನಯ ಇರುವುದೂ ಕೂಡ ಒಂದು ಮುಖ್ಯ ಕಾರಣ ಇರಬಹುದು. ಎಲ್ಲಿಯೂ ಸಿನಿಮಾ ಕನಸು ಅನ್ನಿಸದೆ ನಮ್ಮ ಪಕ್ಕವೇ ನಡೆದುಹೋಗುತ್ತದೆ.

ರಂಗಾಯಣ ರಘು ಅವರ ಪಾತ್ರ ಒಂದು ಸರ್ಪ್ರೈಸ್ ಅಂಶ. ಅವರು ತೆರೆಯ ಮೇಲೆ ಕಂಡಾಗಿನಿಂದ ಇನ್ನೇನು ನಗಿಸುತ್ತಾರೆ ಈಗಲೇ ಒಂದು ಜೋಕು ಬೀಳಬಹುದು ಅಂತ ನಿರೀಕ್ಷೆ ಇಟ್ಟುಕೊಂಡರೆ ಅಚ್ಚರಿ ಆಗೋದು ಖಂಡಿತ. ಇನ್ಸ್ಪೆಕ್ಟರ್ ಪಾತ್ರ ಮಾಡಿರುವ ಅಚ್ಯುತ್ ಕುಮಾರ್ ಅವರಿಂದ ಹಿಡಿದು ದೊಡ್ಡಪ್ಪ, ಪೀಸಿ ಮೋಹನ, ವಿನಯ್ ಮಲ್ಯ (ಸ್ವತಃ ನಿರ್ದೇಶಕರೇ ಈ ರೋಲ್ ಮಾಡಿದ್ದಾರೆ) ಮಹಿಳಾ ಇನ್ಸ್ಪೆಕ್ಟರು, ಕಾನ್ಸ್ಟೇಬಲ್ಲು, ಸಣ್ಣ ಪಾತ್ರಗಳಾದ ರೈಟರು, ಅರ್ಚಕರು, ಅವರ ಮಗ, ಶಹಜಹಾನನ (ಸಂಚಾರಿ ವಿಜಯ್) ತಮ್ಮ, ಜಡ್ಜ್, ಹೀಗೆ ಹತ್ತು ಹಲವಾರು ಜನ ಹೀಗೆ ಬಂದು ಹಾಗೆ ಹೋದರೂ ಮನಸ್ಸಿನಲ್ಲಿ ನಿಲ್ಲುತ್ತಾರೆ. ಹಾಡುಗಳು ಯಾವುದೇ ಸ್ವತಂತ್ರ ನೆಲೆಯ ಮೇಲೆ ನಿಲ್ಲದೆ ಒಂದು ತೆಳುಭಾವವೊಂದಿಗೆ ಕಥೆಯೊಂದಿಗೆ ಬೆರೆತು ಹೋಗುತ್ತವೆ. ಶಹಜಹಾನ್ ಮತ್ತು ಲಾಯರ್ ನಾಯಕಿಯ ಪ್ರೇಮ ಅವಸರದಲ್ಲಿ ಕೊನೆಗಾಣುತ್ತದೆ ಎನ್ನಿಸಿದರೂ ಆ ಕಥೆ ಈ ಕಥೆಯ ಒಳಗೆ ಹೊಂದದೆ ಸಿನಿಮಾ ದಿಕ್ಕಾಪಾಲಾಗಿ ಹೋಗಬಹುದು ಎನ್ನುವ ಕಾರಣಕ್ಕೆ ಅಂತ್ಯ ’ಓಪನ್’ ಉಳಿದಿದೆ ಎನ್ನಿಸುತ್ತದೆ. ಎಲ್ಲಿಯೂ ಐಟಂ ಸಾಂಗುಗಳು, ದೇಹ ಪ್ರದರ್ಶನ ಅಥವಾ ’ಆಡಿಯೆನ್ಸ್ ಕೇಳ್ತರೆ’ ಎಂದು ಸಮರ್ಥಿಸಿಕೊಳ್ಳಬೇಕಾದ ಕೊಳಕು ಮಾರುಕಟ್ಟೆ ಸರಕುಗಳಿಲ್ಲದಿದ್ದಾಗಲೂ (ಅಥವಾ ಇಲ್ಲ ಅಂತಲೇ) ಸಿನಿಮಾ ಬೆಳಗುತ್ತದೆ.
ನಾಯಕತ್ವದ ಭರಾಟೆಯಲ್ಲಿ ಏಕಮುಖವಾಗಿ ಕಳೆದುಹೋಗಿರುವ ಕನ್ನಡ ಚಿತ್ರರಂಗಕ್ಕೆ ಪುಕ್ಸಟ್ಟೆ ಲೈಫು ಹೊಸ ಬಗೆಯ ವ್ಯಾಖ್ಯಾನ ತರುವ ಸಿನಿಮಾ. ನಿರ್ದೇಶಕ ಅರವಿಂದ ಕುಪ್ಲೀಕರ್, ಸಿನಿಮಾ ಛಾಯಾಗ್ರಾಹಕ ಅದ್ವೈತ ಗುರುಮೂರ್ತಿ, ಚಟುವಟಿಕೆಯ ಸಂಕಲನ ಮಾಡಿರುವ ಸುರೇಶ್ ಆರ್ಮುಗಂ, ವಾಸು ದೀಕ್ಷಿತ್ ಅವರ ಸಂಗೀತ ಇವೆಲ್ಲವೂ ಸಿನಿಮಾವನ್ನು ಒಂದು ಚಂದದ ಅನುಭವವನ್ನಾಗಿಸಿವೆ.
ಇದರಲ್ಲಿ ಹೀಗೆ ಬೇಸಗೆಯ ದಿನದಲ್ಲಿ ಸಿಗುವ ಹದ ಸಿಹಿ ಹದ ತಂಪು ಎಳನೀರಿನ ಹಾಗೆ ಸೊಗಡಿನಿಂದ ನಟಿಸಿರುವ ಸಂಚಾರಿ ವಿಜಯ್ ನಮ್ಮ ನಡುವೆ ಇಲ್ಲ ಅನ್ನುವುದು ಸಿನಿಮಾದ ಉದ್ದಕ್ಕೂ ಒಂದು ಬಗೆಯಲ್ಲಿ ಅಂಗಾಲಿಗೆ ಒತ್ತಿದ ಮುಳ್ಳಿನ ಹಾಗೆ ಹೆಜ್ಜೆ ಇಟ್ಟಾಗಲೆಲ್ಲಾ ನೆನಪಾಗುವ ಒಂದು ತೀವ್ರ ನೋವು. ಎಂಥಾ ನಟ, ಎಂಥಾ ಭವಿಷ್ಯದ ಕನಸು ಕಾಣುತ್ತಿದ್ದ ಪ್ರತಿಭಾವಂತ… ಹೀಗೆ ಹೋಗಿಬಿಟ್ಟರಲ್ಲಾ ಎನ್ನುವುದು ಚಿತ್ರರಂಗಕ್ಕೆ ನಿಜಕ್ಕೂ ತುಂಬಲಾಗದ ನಷ್ಟವೇ.
ನನ್ನ ಮಟ್ಟಿಗೆ ಈ ಸಿನಿಮಾ ಒಂದು ಭಾವುಕ ಅನುಭವ. ಈ ಸಿನಿಮಾದ ನಿರ್ದೇಶಕ ಅರವಿಂದ ನನ್ನ ಎಳೆಯ ಸ್ನೇಹಿತ. ಬೆಂಗಳೂರಿನ ರಂಗಭೂಮಿಯ ದಿನಗಳಲ್ಲಿ ಬಿ ಜಯಶ್ರೀ ಅವರ ಸ್ಪಂದನ ತಂಡಕ್ಕೆ ನಾನು ಸೇರಲು ಹೋದಾಗ ಅರವಿಂದ ಚಿಕ್ಕವನಾದರೂ ಅತ್ಯಂತ ಜವಾಬ್ದಾರಿ ಹೊಂದಿದವನೂ, ಜೊತೆಗೆ ಮಹಾ ಕೀಟಲೆ ಸ್ವಭಾವದ ಹುಡುಗನಾಗಿದ್ದ. ರಂಗಭೂಮಿಯಲ್ಲಿ ತೀವ್ರ ತೊಡಗುವಿಕೆ, ಅಂದಿನ ಎಳೆಯರಲ್ಲಿ ಆಗಲೇ ಮರೆಯಾಗುತ್ತಿದ್ದ ರಂಗಭೂಮಿಯ ಆಕರ್ಷಣೆ ಟೀವಿ ಸಿನಿಮಾದ ಕಡೆ ಸೆಳೆಯುತ್ತಿದ್ದಾಗಲೂ ರಂಗವನ್ನು ಬಿಟ್ಟು ಕದಲದೆ ಧ್ಯಾನಸ್ಥ ರೀತಿಯಲ್ಲಿ ತೊಡಗಿಕೊಂಡು ನಂತರ ತನ್ನ ದಾರಿಯನ್ನು ಟೀವಿಯಲ್ಲಿ, ನಂತರ ಸಿನಿಮಾ ಅಭ್ಯಾಸದಲ್ಲಿ ನಂತರ ಸಿನಿಮಾದಲ್ಲಿ ಶೋಧಿಸಿದವ. ಇಂಥಾ ಅರವಿಂದ ಎಲ್ಲಿ ಹೆಜ್ಜೆ ಇಟ್ಟರೂ ನನ್ನಂಥ ಹಲವರಿಗೆ ಅದು ಸಂಭ್ರಮ. ಈ ವಿಷಯದಲ್ಲಿ ನಾನು ಪಕ್ಷಪಾತಿ.
ಈ ಚಿತ್ರ ನನಗಂತೂ ಹೊಸ ಭರವಸೆಯ ನಿರ್ದೇಶಕರನ್ನು, ತಂಡವನ್ನು ಕೊಟ್ಟಿದೆ ಎನ್ನಿಸುತ್ತದೆ. ಎಲ್ಲರಿಗೂ ಶುಭವಾಗಲಿ. ನಿಮ್ಮ ನೋವಿನ ನಡುವೆಯೂ ನಮ್ಮನ್ನು ನಗಿಸಿದ್ದೀರಿ. ನಿಮ್ಮ ಮುಂದಿನ ಹೆಜ್ಜೆ ಸುಗಮವಾಗಿ ಸಾಗಲಿ. ಕನ್ನಡ ಪ್ರೇಕ್ಷಕರಿಗೆ ಉತ್ತಮ ಚಿತ್ರಗಳನ್ನು ನೀವು ಕೊಡುವಂತಾಗಲಿ. ಜನ ಮತ್ತೆ ಬೆಳ್ಳಿ ತೆರೆಯತ್ತ ಬರುವಂತಾಗಲಿ.
***
PS: ಮನಸ್ಸಿಗೆ ಕಚುಗುಳಿ ಕೊಟ್ಟ ಇನ್ನೊಂದು ಅಂಶ. ಶಹಜಹಾನನ ಲೂನಾ. ಬೆನ್ನು ಬಗ್ಗಿಸಿ ಭರ್ರ್ರ್ರ್ರ್ ಎಂದು ಲಾರಿ ಹೋದ ಹಾಗೆ ಹೋಗುವ ಇಂದಿನ ಬೈಕುಗಳಿಗೂ ಇರದ ಚಾರ್ಮ್ ಅಂದಿನ ದಿನದ ಲೂನಾಕ್ಕೆ ಇತ್ತು. ಓದುವ ಹುಡುಗರಿಗೆ ಲೂನಾ ಸಿಕ್ಕರೆ ಟ್ಯೂಷನ್‌ಗೆ ಹೋಗುತ್ತಾರೆಂತಲೂ, ಓದದ ಹುಡುಗರಿಗೆ ಈ ಗಾಡಿ ಸಿಕ್ಕರೆ ಹುಡುಗಿಯರ ಹಿಂದೆ ತಿರುಗುತ್ತಾರೆಂತಲೂ ಅರ್ಥ ಆಗುತ್ತಿತ್ತು. ಇನ್ನು ಹುಡುಗಿಯರು ಲೂನಾ ಹಿಡಿದರೆ ಏನೆಂದು ಅರ್ಥ ಎನ್ನುವುದನ್ನ ಅಂದಿನ ಹುಡುಗರು ಹೇಳ್ಬೇಕು.
ಸಿನಿಮಾಕ್ಕೆ ಬಹಳ ಉತ್ತಮ ಸಬ್ ಟೈಟಲಿಂಗ್ ಆಗಿದೆ. ಇದು ಒಂದು ಸಿನಿಮಾ ಕರ್ನಾಟಕದ ಗಡಿ ದಾಟಿ ಹೋಗಲು ಎಷ್ಟು ಮುಖ್ಯ ಎನ್ನುವುದನ್ನು ನಿರ್ದೇಶಕರು ನಿರ್ಮಾಪಕರು ಅರಿತುಕೊಂಡರೆ ಉತ್ತಮ ಕನ್ನಡ ಸಿನಿಮಾಗಳು ರಾಜ್ಯದಿಂದ ಹೊರಗೆ ಹೋಗಿ ವಿಜೃಂಭಿಸಬಲ್ಲವು.
- ಪ್ರೀತಿ ನಾಗರಾಜ್

(ಬರಹಗಾರರಾದ ಪ್ರೀತಿ ನಾಗರಾಜ್‌ರವರು ಇಂಡಿಯನ್ ಎಕ್ಸ್‌ಪ್ರೆಸ್, ಡೆಕ್ಕನ್ ಹೆರಾಲ್ಡ್ ಹಾಗೂ ಸಿಎನ್‌ಬಿಸಿ ಸೇರಿದಂತೆ ಹಲವು ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ಹಲವು ಪತ್ರಿಕೆಗಳಿಗೆ ಅಂಕಣ ಬರಹಗಳನ್ನು ಬರೆದಿದ್ದಾರೆ. ಬಿ. ಜಯಶ್ರೀ ಅವರ ಆತ್ಮಕತೆ ’ಕಣ್ಣಾಮುಚ್ಚೇ ಕಾಡೇಗೂಡೇ’ ಕೃತಿಯನ್ನು ನಿರೂಪಣೆ ಮಾಡಿರುವ ಇವರಿಗೆ ಕನ್ನಡ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ದೊರೆತಿದೆ.)
ಇದನ್ನೂ ಓದಿ: ಕನ್ನಡದ ಮೊದಲ ಲೆಸ್ಬಿಯನ್ ಚಿತ್ರ ’ನಾನು ಲೇಡಿಸ್’ ತಸ್ವೀರ್ ದಕ್ಷಿಣ ಏಷ್ಯಾ ಚಿತ್ರೋತ್ಸವಕ್ಕೆ ಆಯ್ಕೆ


