`ನಾನು ಗೌರಿ’ ವೆಬ್ಸೈಟ್ ನಿನ್ನೆ ಒಂದು ಆನ್ಲೈನ್ ಪೋಲಿಂಗ್ ನಡೆಸಿತ್ತು. ಅದು ಮೊನ್ನೆಯಷ್ಟೇ, ಅಂದರೆ ಏಳನೇ ಹಂತದ ಲೋಕಸಭಾ ಮತದಾನ ಮುಗಿದ ಭಾನುವಾರ ಸಂಜೆಯ ಹೊತ್ತಿಗೆ ಟಿವಿ ಚಾನೆಲ್ಗಳಲ್ಲಿ ಬಿತ್ತರಗೊಂಡು ದೊಡ್ಡ ಚರ್ಚೆಗೆ ಕಾರಣವಾದ ಮತಗಟ್ಟೆ ಸಮೀಕ್ಷೆ ಅಲಿಯಾಸ್ ಎಕ್ಸಿಟ್ ಪೋಲ್ಗಳ ಕುರಿತು ನಡೆಸಿದ್ದ ಓದುಗರ ಅಭಿಮತ ಸಂಗ್ರಹದ ಪೋಲಿಂಗ್. ನಿನ್ನೆ ಮಧ್ಯಾಹ್ನದಿಂದ ಇವತ್ತು ಮಧ್ಯಾಹ್ನದವರೆಗೆ ಒಟ್ಟು 24 ಗಂಟೆಗಳ ಅವಧಿಗೆ ಓಪನ್ ಇದ್ದ ಈ ಪೋಲಿಂಗ್ನಲ್ಲಿ ಕೆಳಗಿನ ಒಂದು ಸರಳ ಪ್ರಶ್ನೆ ಕೇಳಲಾಗಿತ್ತು.
“2019ರ ಚುನಾವಣೆಯಲ್ಲಿ ನೀವು ಮತದಾನ ಮಾಡಿದ ನಂತರ ಮತಗಟ್ಟೆ ಸಮೀಕ್ಷೆ (ಎಕ್ಸಿಟ್ ಪೋಲ್) ಮಾಡುವವರು ನಿಮ್ಮನ್ನು ಮಾತಾಡಿಸಿದ್ದರಾ?” ಎಂಬುದು ಆ ಪ್ರಶ್ನೆ.
ಚುನಾವಣೆಗಳು ನಡೆದ ಪ್ರತಿಬಾರಿ ಹೊರಬೀಳುವ ಈ ಮತಗಟ್ಟೆ ಸಮೀಕ್ಷೆಗಳು 1999ರ ನಂತರದಲ್ಲಿ ನಿಜವಾದ ನಿದರ್ಶನ ತುಂಬಾ ಕಡಿಮೆ. 2014ರಲ್ಲಿ ಮೋದಿ ಅಲೆಯಲ್ಲಿ ನಡೆದ ಚುನಾವಣೆ ಸಂದರ್ಭದಲ್ಲಿ ಸ್ವಲ್ಪ ವಾಸ್ತವಕ್ಕೆ ಹತ್ತಿರವಿದ್ದ ಮತಗಟ್ಟೆ ಸಮೀಕ್ಷೆಗಳು, ಅದಕ್ಕೂ ಮೊದಲು 2004 ಮತ್ತು 2009ರ ಚುನಾವಣೆಗಳಲ್ಲಿ ಹೊರಬಿದ್ದ ವಾಸ್ತವ ಫಲಿತಾಂಶಕ್ಕೆ ತದ್ವಿರುದ್ಧವಾದ ಅಂಕಿಸಂಕಿಗಳನ್ನು ನೀಡಿದ್ದವು. ಇಲ್ಲಿರುವ ಪ್ರಶ್ನೆ ಇವು ಎಷ್ಟು ಸರಿ, ಎಷ್ಟು ತಪ್ಪು ಎಂಬುದಲ್ಲ. ಬದಲಿಗೆ ಮತದಾರರನ್ನು ಮಾತಾಡಿಸಿ ಅಂಕಿಅಂಶ ನೀಡುತ್ತಿದ್ದೇವೆ ಎನ್ನುವ ಈ ಸಮೀಕ್ಷೆಗಳು ನಿಜಕ್ಕೂ ಜನರನ್ನು ಎಷ್ಟರಮಟ್ಟಿಗೆ ಮಾತಾಡಿಸುತ್ತವೆ ಎಂಬುದು. ಯಾಕೆಂದರೆ ನಮ್ಮ ಸಂಪರ್ಕ ವಲಯದಲ್ಲಿ ಯಾರೊಬ್ಬರು ಇಂಥಾ ಸಮೀಕ್ಷೆಗಳನ್ನು ನಡೆಸುವವರು ಬಂದು ತಮ್ಮನ್ನು ಮಾತಾಡಿಸಿದ್ದಾಗಿ ಹೇಳಿಕೊಂಡ ನಿದರ್ಶನಗಳು ಹುಡುಕಿದರೂ ಸಿಗುವುದಿಲ್ಲ. ಹಾಗಾಗಿ ಇವರು ನಿಜಕ್ಕೂ ಎಷ್ಟರಮಟ್ಟಿಗೆ ಜನರನ್ನು ಮಾತಾಡಿಸಿರುತ್ತಾರೆ? ಎಂಬ ಪ್ರಶ್ನೆಯನ್ನಿಟ್ಟುಕೊಂಡು ಈ ಪೋಲಿಂಗ್ ನಡೆಸಲಾಗಿತ್ತು.
ಈ ಪೋಲಿಂಗ್ನಲ್ಲಿ ಒಟ್ಟು 6800 ಜನ ಭಾಗವಹಿಸಿದ್ದರು. ಅದರಲ್ಲಿ 5500 (ಶೇ.81) ಜನ ತಮ್ಮನ್ನು ಇದುವರೆಗೆ ಯಾವ ಸಮೀಕ್ಷೆಯವರೂ ಮಾತಾಡಿಸಿಲ್ಲ ಎಂದಿದ್ದರೆ, 1300 (ಶೇ.19) ಜನ ಹೌದು ಎಂದು ಪ್ರತಿಕ್ರಿಯಿಸಿದ್ದಾರೆ.
ಇವತ್ತಿನ ಸೋಶಿಯಲ್ ಮೀಡಿಯಾ ರಾಜಕಾರಣವನ್ನೂ ಪ್ರಭಾವಿಸುವಷ್ಟು ಸಂಕೀರ್ಣಗೊಂಡಿದ್ದು, ಒಂದು ನಿರ್ದಿಷ್ಟ ಐಡಿಯಾಲಜಿಕಲ್ ಓರಿಯೆಂಟೇಷನ್ಗೆ ತುತ್ತಾದವರು ಫೇಕ್ ಅಕೌಂಟ್ಗಳ ಮೂಲಕ ಸಾರ್ವಜನಿಕ ಅಭಿಪ್ರಾಯಗಳನ್ನು ಭ್ರಷ್ಟಗೊಳಿಸುವ ಯತ್ನ ಮಾಡುತ್ತಿರೋದು ಹೊಸ ಸಂಗತಿಯಲ್ಲ. ಇದು ನಮ್ಮ ತಂಡಕ್ಕೂ ಗೊತ್ತಿದೆ. ಅಂತವರು ಈ ಪೋಲಿಂಗ್ನ ಉದ್ದೇಶವನ್ನು ಹಾಳುಮಾಡಬಾರದೆಂಬ ಕಾರಣಕ್ಕೆ `ಹೌದು ಮತಗಟ್ಟೆ ಸಮೀಕ್ಷೆ ಮಾಡುವವರು ತಮ್ಮನ್ನು ಮಾತಾಡಿಸಿದ್ದಾರೆ’ ಎನ್ನುವವರು ಕಮೆಂಟ್ನಲ್ಲಿ ತಮ್ಮ ಮೊಬೈಲ್ ನಂಬರ್ ನೀಡುವಂತೆ ಸೂಚಿಸಿದ್ದೆವು.
ಫೇಕ್ ಅಕೌಂಟ್ಗಳ ಹಾವಳಿಯನ್ನು ತಡೆಯುವುದರ ಜೊತೆಗೆ, ಅಂತವರನ್ನು ಮಾತಾಡಿಸುವ ಮೂಲಕ ಈ ಸಮೀಕ್ಷೆಗಳು ನಿಜಕ್ಕೂ ಹೇಗೆ ನಡೆಯುತ್ತವೆ, ಯಾವ ಬಗೆಯ ಪ್ರಶ್ನೆಗಳನ್ನು ಕೇಳಲಾಗುತ್ತದೆ, ಯಾವ ಆಧಾರದಲ್ಲಿ ಸ್ಯಾಂಪಲ್ ಮತಕೇಂದ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬುದನ್ನು ಅಧ್ಯಯನ ಮಾಡುವುದು ನಮ್ಮ ಇರಾದೆಯಾಗಿತ್ತು. ಆದರೆ, ಕೇವಲ 14 ಜನರು ಮಾತ್ರ ತಮ್ಮ ಫೋನ್ ನಂಬರ್ ಕೊಟ್ಟಿದ್ದರು! ಇದಲ್ಲದೇ ಹೌದು, ನನ್ನನ್ನು ಮಾತಾಡಿಸಿದ್ದರು ಎಂದು ಹೇಳಿದ ಮೊದಲ 20 ಜನರಲ್ಲಿ 9 ಫೇಕ್ ಅಕೌಂಟ್ಗಳಾಗಿದ್ದವು!!
`ಹೌದು ಮಾತನಾಡಿಸಿದ್ದಾರೆ’ ಎಂದು ಪ್ರತಿಕ್ರಿಯಿಸಿ, ಫೋನ್ ನಂಬರ್ ಕೊಟ್ಟಿದ್ದ ಒಬ್ಬ ವ್ಯಕ್ತಿಯನ್ನು ಮಾತಾಡಿಸಿದಾಗ ಅವರು ತಾವು ದಾಖಲಿಸಿದ್ದ ಅಭಿಪ್ರಾಯಕ್ಕಿಂತ ವಿಭಿನ್ನವಾಗಿ ಪ್ರತಿಕ್ರಿಯಿಸಿ “ಇಲ್ಲ ಸಾರ್, ನನ್ನನ್ನು ಯಾರೂ ಮಾತಾಡಿಸಿಲ್ಲ. ಈ ಎಕ್ಸಿಟ್ ಪೋಲ್ಗಳನ್ನು ನಂಬಬಾರದು. ಗೊತ್ತಾಗದೆ ನಾನು ಹೌದು ಅಂತ ಒತ್ತಿಬಿಟ್ಟಿದ್ದೇನೆ. ನೀವೀಗ ಕೇಳಿದಾಗಲೇ ನನಗೆ ನನ್ನ ತಪ್ಪು ಅರ್ಥವಾದದ್ದು” ಎಂದರು. ಇಂತಹದೇ ಅಭಿಪ್ರಾಯವನ್ನು ಇನ್ನೂ ಇಬ್ಬರು ವ್ಯಕ್ತಪಡಿಸಿದರು. ಆ ಶೇ.19ರಲ್ಲಿ ಇಂಥಾ ಗೊಂದಲಕ್ಕೀಡಾದವರು ಇರಬಹುದಾದ ಸಾಧ್ಯತೆ ಇದೆ. ಮೇಲಿನ ಕಾರಣಗಳಿಂದ ‘ಹೌದು ನನ್ನನ್ನು ಮಾತಾಡಿಸಿದ್ದರು’ ಎಂಬ ಅಭಿಪ್ರಾಯಕ್ಕೆ ಹೆಚ್ಚಿನ ಮಹತ್ವ ಇಲ್ಲ.
ಇನ್ನು ಯಥಾ ಪ್ರಕಾರ `ಮೋದಿ ಭಕ್ತ ಮಂಡಳಿ’ಯಿಂದ ಅವಾಚ್ಯ, ಅರ್ಥಹೀನ ಕಮೆಂಟುಗಳು ಹರಿದುಬಂದವು (ಈ ಅಭಿಪ್ರಾಯವನ್ನು ಜವಾಬ್ದಾರಿಯಿಂದಲೇ ಮುಂದಿಡುತ್ತಿದ್ದೇವೆ. ಆಸಕ್ತಿ ಇರುವವರಿಗೆ ಎಲ್ಲಾ ಸ್ಕ್ರೀನ್ಷಾಟ್ಗಳನ್ನು ಒದಗಿಸುತ್ತೇವೆ). ಅಂಥವರಲ್ಲಿ ವಿನಯ್ ಸೋನು ಸಾಗರ್ ಎಂಬ `ಚೌಕಿದಾರ’ರು ಒಂದು ಪ್ರಶ್ನೆ ಎತ್ತಿದ್ದರು. ಶೈಲಿ ಅಸಹ್ಯಕರವಾಗಿದ್ದರು ಅವರ ಪ್ರಶ್ನೆ ಚರ್ಚಿಸಬೇಕಾದ್ದಾಗಿತ್ತು. `ಸರ್ವೇ ಅಂದ್ರೆ ಎಲ್ಲರನ್ನೂ ಹೋಗಿ ಮಾತಾಡಿಸ್ಲಿಕ್ಕೆ ಆಗಲ್ಲ, ರ್ಯಾಂಡಮ್ ಆಗಿ ಕೆಲವರನ್ನ ಮಾತಾಡಿಸಿರ್ತಾರೆ. ನೀವು ಕೇಳ್ತಾ ಇರೋದು ನೋಡಿದ್ರೆ ಎಲ್ಲರನ್ನೂ ಮಾತಾಡಿಸಿರಲೇಬೇಕು ಎನ್ನುವಂತಿದೆ’ ಎಂಬುದು ಅವರ ಪ್ರಶ್ನೆಯ ಸಾ ರಾಂಶ. ನಮ್ಮ ಕುತೂಹಲ ಕೂಡಾ ಇದೇ ಆಗಿದೆ. ಸಮೀಕ್ಷೆ ಎನ್ನುವುದೇ ಪ್ರತಿಯೊಬ್ಬರನ್ನು ಮಾತಾಡಿಸಲು ಸಾಧ್ಯವಾಗದ ಸ್ಯಾಂಪಲಿಂಗ್ ಸೈಂಟಿಫಿಕ್ ಮೆಥೆಡಾಲಜಿ. ಹೀಗೆ ಸ್ಯಾಂಪಲಿಂಗ್ ಮಾಡುವಾಗ ಇಷ್ಟು ವರ್ಷಗಳಲ್ಲಿ ಎಷ್ಟೆಲ್ಲ ಚುನಾವಣೆಗಳು ನಡೆದಿವೆ, ಅಪರೂಪಕ್ಕಾದರು ನಮ್ಮ ಗಮನಕ್ಕೆ ಬರುವಂತೆ ಒಂದಷ್ಟು ಬೂತ್ಗಳು, ವ್ಯಕ್ತಿಗಳು ಸಮೀಕ್ಷೆಗೆ ಒಳಗಾಗಿರುವುದು ಗಮನಕ್ಕೆ ಬರಬೇಕಲ್ಲವೇ? ಕಡೇಪಕ್ಷ ಈ ಚುನಾವಣೆಯಲ್ಲಾದರು ಹಾಗೆ ಮಾತನಾಡಿಸಿದವರು ಸಿಗುತ್ತಾರಾ? ಎಂಬ ಕುತೂಹಲದಿಂದಲೇ ಈ ಪೋಲಿಂಗ್ ನಡೆಸಿದ್ದು.
ಸೋನು ಸಾಗರ್ರ ಕಮೆಂಟ್ಗೆ ವ್ಯತಿರಿಕ್ತವಾಗಿ ಪಿ.ಕೆ.ದಾಸ್ ಎಂಬುವವರು ತಮ್ಮ ಕಮೆಂಟ್ ದಾಖಲಿಸಿದ್ದು, “25 ವರ್ಷದಿಂದ ಮತದಾನ ಮಾಡಿದ್ದೇನೆ… ಅಷ್ಟೇ ಏಕೆ, ಈವರೆಗೂ ಬೂತ್ ಮೇಂಟೇನರ್ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೆ. ಇದುವರೆಗೂ ಯಾವೊಬ್ಬನನ್ನೂ ಕೇಳಿದ್ದು ನೋಡಿಲ್ಲ” ಎನ್ನುತ್ತಾರೆ. ವಿರೂಪಾಕ್ಷಗೌಡ ತುಂಬದ್ ಎನ್ನುವ ಮತ್ತೊಬ್ಬರು “ಎಕ್ಸಿಟ್ ಪೋಲ್ ಸರ್ವೇಗಳು ನಡೆಯೋದು ನಗರಗಳಲ್ಲಿ ಮಾತ್ರ. ಅಲ್ಲಿ ಬಿಜೆಪಿ ಪ್ರಬಲವಾಗಿರುವುದರಿಂದ ಇಂಥಾ ಎಕ್ಸಿಟ್ ಪೋಲ್ಗಳು ಬಿಜೆಪಿಗೆ ಬಹುಮತ ತೋರಿಸೋದು ಸಹಜ” ಎಂದು ಕಮೆಂಟ್ ಮಾಡಿದ್ದಾರೆ.
ಸಂತೋಷ್ ಎಚ್.ಆರ್. ಎಂಬ ಫೇಸ್ಬುಕ್ಕಿಗರ ಅಭಿಪ್ರಾಯವಾದ “ನೀವು ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ಅತ್ಯುತ್ತಮ ಸಮೀಕ್ಷೆ (ಪೋಲಿಂಗ್) ಮಾಡ್ತಾ ಇದ್ದೀರಿ. ಇದರ ಅವಶ್ಯಕತೆ ತುಂಬಾ ಇತ್ತು” ಎಂಬ ಅಭಿಮತವೇ ನಮ್ಮ ತಂಡವನ್ನೂ ಒಳಗೊಂಡು ಸುಮಾರು ಜನರದ್ದಾಗಿತ್ತು. ಜನರನ್ನು ಮಾತಾಡಿಸಿದ ನಿದರ್ಶನಗಳೇ ಕಾಣದೆ ಹೊರಬರುತ್ತಿರುವ ಎಕ್ಸಿಟ್ ಪೋಲ್ಗಳ ಕುರಿತ ಚರ್ಚೆಯನ್ನು ವಿಸ್ತರಿಸುವ ಸಲುವಾಗಿ ಈ ಪೋಲಿಂಗ್ ನಡೆಸಿದ್ದೇವಷ್ಟೆ.
ಸಾಮಾಜಿಕ ಜಾಲತಾಣಗಳಲ್ಲೂ ಒಂದು ಕಡೆಗೆ ಅಭಿಪ್ರಾಯ ಮೂಡಿಸಲು ಪಡೆಗಳು ಸಜ್ಜಾಗಿರುವಾಗ, ಇಂತಹ ಪೋಲ್ಗಳು ವಾಸ್ತವವನ್ನೇ ಬಿಂಬಿಸಬೇಕೆಂದೇನಿಲ್ಲ. ಆದರೆ, ಒಟ್ಟಾರೆ ಮೂಡ್ನ ದಿಕ್ಕು ಗೊತ್ತಾಗಬಹುದು ಅಷ್ಟೇ.


