ಸುಮಾರು 60 ವಿದ್ಯಾರ್ಥಿಗಳು ಒಂದೇ ಶಾಲೆಯಲ್ಲಿ ಕೋವಿಡ್-19 ಸೋಂಕಿಗೆ ಒಳಗಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಎಲ್ಲೆಡೆ ಕೊರೊನಾ ಸೋಂಕು ಇಳಿಮುಖವಾಗುತ್ತಿದ್ದರೆ, ಬೆಂಗಳೂರಿನಲ್ಲಿ ಹೆಚ್ಚಾಗುವ ಸೂಚನೆಗಳು ಕಂಡು ಬರುತ್ತಿವೆ.
ಬೆಂಗಳೂರಿನ ಎಲೆಕ್ಟ್ರಾನಿಕ್‌ಸಿಟಿಯ ರೆಸಿಡೆನ್ಸಿಯಲ್ ಶಾಲೆಯಲ್ಲಿ 60 ಮಕ್ಕಳು ಕೋವಿಡ್ ಪಾಸಿಟಿವ್ ಆಗಿದ್ದಾರೆ. ಅದರಲ್ಲಿ ಒಬ್ಬ ವಿದ್ಯಾರ್ಥಿ ತೀವ್ರ ಜ್ವರದಿಂದ ಬಳಲುತ್ತಿದ್ದು, ಲೇಡಿ ಕರ್ಜನ್ ಹಾಗೂ ಬೋರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತೊಬ್ಬ ವಿದ್ಯಾರ್ಥಿ ಹೋಮ್ ಕ್ವಾರಂಟೈನ್‌ನಲ್ಲಿದ್ದಾರೆ.
ಚೈತನ್ಯ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಎಸಿಮ್ಟಾಮ್ಯಾಟಿಕ್ ಇದ್ದ ಕಾರಣ ಶಾಲಾ ಆವರಣದಲ್ಲೇ ಕ್ವಾರಂಟೈನ್ ಮಾಡಲಾಗಿದೆ. ಖಾಸಗಿ ಆರೋಗ್ಯ ಸೌಲಭ್ಯಗಳ ಮೂಲಕ ಶಾಲೆಯ ಸಿಬ್ಬಂದಿಯೇ ಮಕ್ಕಳ ಆರೋಗ್ಯ ಸುಧಾರಿಸಲು ಕ್ರಮ ಕೈಗೊಂಡಿದ್ದಾರೆ. ಶಾಲೆ ಸದ್ಯಕ್ಕೆ ಮುಚ್ಚಿದ್ದು, ಅಕ್ಟೋಬರ್ 20ರಂದು ತೆರೆಯಬಹುದು ಎನ್ನನಲಾಗಿದೆ.
ಸೆಪ್ಟೆಂಬರ್ 5ರಂದು ಶಾಲೆಯ ಹಿರಿಯ ವಿದ್ಯಾರ್ಥಿಗಳಿಗೆ ದೈಹಿಕ ತರಗತಿಗಳನ್ನು ಪುನರಾರಂಭಿಸಲಾಗಿತ್ತು. 22 ಶಿಕ್ಷಕರು, 57 ಸಿಬ್ಬಂದಿ ಲಸಿಕೆ ಹಾಕಿಸಿಕೊಂಡಿದ್ದರು. 485 ವಿದ್ಯಾರ್ಥಿಗಳು ಹಾಜರಾಗಿದ್ದರು. ಸೆಪ್ಟೆಂಬರ್ 26ರಂದು, ಬಳ್ಳಾರಿಯಿಂದ ಬಂದ ಒಬ್ಬ ವಿದ್ಯಾರ್ಥಿನಿಗೆ ಜ್ವರ, ವಾಂತಿ ಮತ್ತು ಅತಿಸಾರದಂತಹ ಲಕ್ಷಣಗಳು ಕಾಣಿಸಿಕೊಳ್ಳಲಾರಂಭಿಸಿದವು. ವಿದ್ಯಾರ್ಥಿನಿಯು ಸೋಂಕಿಗೆ ಒಳಗಾಗಿದ್ದಳು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪ್ರಕಾರ, ರ್‍ಯಾಪಿಡ್ ಆಂಟಿಜನ್ ಪರೀಕ್ಷೆ ಮಾಡಿದಾಗ ಸುಮಾರು 27ರಿಂದ 105 ವಿದ್ಯಾರ್ಥಿಗಳು ಸೋಂಕಿಗೆ ತುತ್ತಾಗಿರುವುದು ಕಂಡು ಬಂದಿದೆ.
“ಯಾವುದೇ ಆತಂಕಪಡುವ ಅಗತ್ಯವಿಲ್ಲ. ಅಕ್ಟೋಬರ್ 20ರಂದು ಮತ್ತೆ ವಿದ್ಯಾರ್ಥಿಗಳನ್ನು ಮರುಪರೀಕ್ಷೆಗೆ ಒಳಪಡಿಸಲಾಗುವುದು. ಸೋಂಕಿಗೆ ಒಳಗಾಗ ವಿದ್ಯಾರ್ಥಿಗಳಲ್ಲಿ 14 ವಿದ್ಯಾರ್ಥಿಗಳು ತಮಿಳುನಾಡಿನವರಾಗಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ವಿದ್ಯಾರ್ಥಿಗಳೂ ಇದ್ದಾರೆ” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದ್ದಾರೆ.
ಇದನ್ನೂ ಓದಿ: ಕೋವಿಡ್ ನಿರ್ಬಂಧ ತೆರವು: ದೊಡ್ಡ ಆಲದ ಮರಕ್ಕೆ ಪ್ರವಾಸಿಗರ ದಂಡು


