“ಕೇಂದ್ರ ಸಚಿವ ಅಜಯ್ ಮಿಶ್ರಾ ಭೇಟಿಯನ್ನು ವಿರೋಧಿಸಿ ಉತ್ತರ ಪ್ರದೇಶದ ಲಿಖಿಮ್‌ಪುರ ಖೇರಿ ಜಿಲ್ಲೆಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ವಾಹನ ಹತ್ತಿಸಿ ನಾಲ್ವರು ರೈತರನ್ನು ಹತ್ಯೆ ಮಾಡಲಾಗಿದೆ. ಮಿಶ್ರಾ ಅವರ ಪುತ್ರ ಹಾಗೂ ಆತನ ಗೂಂಡಾಗಳು ಮೂವರು ರೈತರ ಮೇಲೆ ವಾಹನ ಹತ್ತಿಸಿದ್ದಾರೆ. ಒಬ್ಬರನ್ನು ಗುಂಡಿಕ್ಕಿ ಕೊಲ್ಲಲಾಗಿದೆ” ಎಂದು ಸಂಯುಕ್ತ ಕಿಸಾನ್ ಮೋರ್ಚಾ ಹೇಳಿದೆ.
ಭಾನುವಾರ ನಡೆದ ಘಟನೆಗೆ ಸಂಬಂಧಿಸಿದಂತೆ ವರ್ಚ್ಯೂವಲ್ ವೇದಿಕೆ ಮೂಲಕ ಪತ್ರಿಕಾಗೋಷ್ಠಿ ನಡೆಸಿರುವ ಸಂಯುಕ್ತ ಕಿಸಾನ್ ಮೋರ್ಚಾ, ಘಟನೆಗೆ ಸಂಬಂಧಿಸಿದಂತೆ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ಬಿಡುಗಡೆ ಮಾಡಿದೆ.
ಘಟನಾ ಸ್ಥಳದಲ್ಲಿದ್ದ ಸೀತಾಪುರದ ರಿಚಾ ಸಿಂಗ್ ಹೇಳಿಕೆ ನೀಡಿದ್ದು, “ಮಿಶ್ರಾ ಇಳಿಯಲಿರುವ ಹೆಲಿಪ್ಯಾಡ್ ಬಳಿ ರೈತರು ಸೇರಿದ್ದರು ಮತ್ತು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಸಚಿವರಿಗೆ ಕಪ್ಪು ಬಾವುಟಗಳನ್ನು ಪ್ರದರ್ಶಿಸಿದ್ದರು. ಮಿಶ್ರಾ ಬಂದಿಳಿದು ಕಾರ್ಯಕ್ರಮಕ್ಕೆ ತೆರಳಿದರು. ನಾವು ಅವರನ್ನು ಹಿಂಬಾಲಿಸಲಿಲ್ಲ. ನಮ್ಮ ಪ್ರತಿಭಟನೆಯನ್ನು ಹೆಲಿಪ್ಯಾಡ್‌ನಲ್ಲೇ ಮುಂದುವರಿಸಿದೆವು. ಕೆಲವರು ರೈತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಸಚಿವರು ಹೋದ ಬಳಿಕವೂ ನಮ್ಮ ಘೋಷಣೆಗಳನ್ನು ಕೂಗಿದೆವು. ನಂತರ ನಮ್ಮ ದಾರಿಯಲ್ಲಿ ನಾವು ನಡೆದೆವು” ಎಂದಿದ್ದಾರೆ.
ಇದನ್ನೂ ಓದಿರಿ: ಸಚಿವರ ಬೆಂಗಾವಲು ವಾಹನ ಹತ್ತಿಸಿ ನಾಲ್ವರು ರೈತರ ಹತ್ಯೆ; ನಂತರದ ಪ್ರತಿರೋಧದಲ್ಲಿ ನಾಲ್ವರ ಸಾವು
ಗುಂಡಿನ ದಾಳಿ ಹಾಗೂ ಹತ್ಯೆ ನಡೆದಾಗ ಸ್ಥಳದಲ್ಲಿದ್ದ ರಿಚಾ ಸಿಂಗ್ ಜೊತೆ ಇದ್ದ ಗುರುಮ್ನೀತ್ ಮಂಗತ್ ಅವರೂ ಹೇಳಿಕೆ ನೀಡಿದ್ದು, “ಸಚಿವರು ಹೋದ ಬಳಿಕ ರೈತರು ಚದುರಿದರು. ಆ ವೇಳೆಗೆ ಸಚಿವರ ಮಗ ಆಶೀಶ್ ಮಿಶ್ರಾ, ಆತನ ಸಹೋದರ ಹಾಗೂ ಕೆಲವು ಗೂಂಡಾಗಳು ಮೂರು ಕಾರುಗಳಲ್ಲಿ ಸುಮಾರು 3.15ರ ವೇಳೆಗೆ ಬಂದರು. ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸಿದರು. ರೈತರ ಮೇಲೆ ನುಗ್ಗಿಸಿದರು. ಜೊತೆಗೆ ರೈತರ ಮೇಲೆ ಬಂದೂಕಿನ ಮಳೆಗರೆದರು. ಹತ್ತಿರದಲ್ಲಿದ್ದ ರೈತನಿಗೆ ಗುಂಡು ತಾಕಿ, ಆತ ಮೃತಪಟ್ಟ” ಎಂದು ಹೇಳಿದ್ದಾರೆ.
ಆಕ್ಟೋಬರ್ 4ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ರಾಷ್ಟ್ರದ್ಯಾಂತ ರೈತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸುವಂತೆ ಸಂಯುಕ್ತ ಕಿಸಾನ್ ಮೋರ್ಚಾ ಮನವಿ ಮಾಡಿದೆ. ರೈತರು ಮೂರು ಬೇಡಿಕೆಗಳನ್ನು ಮುಂದಿಡಲು ಕೋರಿದೆ.
ಅಜಯ್ ಮಿಶ್ರಾ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಬೇಕು, ಕೊಲೆ ಮಾಡಿದ ಕಾರಣ ಆಶೀಶ್ ಮಿಶ್ರಾ ಹಾಗೂ ಇತರರ ಮೇಲೆ ಐಪಿಸಿ ಸೆಕ್ಷನ್ 302 ಪ್ರಕರಣ ದಾಖಲಿಸಬೇಕು, ಸುಪ್ರೀಂಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಪ್ರಕರಣ ತನಿಖೆಯಾಗಬೇಕೇ ಹೊರತು, ಉತ್ತರ ಪ್ರದೇಶದ ಪೊಲೀಸರಿಗೆ ವಹಿಸಬಾರದು ಎಂದು ಕಿಸಾನ್ ಮೋರ್ಚಾ ಮೂರುಪ್ರಮುಖ ಬೇಡಿಕೆಗಳನ್ನು ಇಟ್ಟಿದೆ.
“ಅಜಯ್ ಮಿಶ್ರಾ ಹಾಗೂ ಹರಿಯಾಣ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್ ಥರದವರು ಪ್ರತಿಭಟನಾನಿರತ ರೈತರನ್ನು ಪ್ರಚೋದಿಸಲು ಯತ್ನಿಸುತ್ತಿದ್ದಾರೆ. ಆದರೆ ನಾವು ಶಾಂತಿಯುತ ಹೋರಾಟ ಮುಂದುವರಿಸುತ್ತೇವೆ” ಎಂದು ರೈತ ನಾಯಕ ಡಾ.ದರ್ಶನ್ ಪಾಲ್ ಹೇಳಿದ್ದಾರೆ.
ಇದನ್ನೂ ಓದಿರಿ: ನಾಲ್ವರು ರೈತರ ಹತ್ಯೆ: ಕೇಂದ್ರ ಸಚಿವ ಮತ್ತು ಮಗನ ಮೇಲೆ ಕೊಲೆ ಪ್ರಕರಣ ದಾಖಲು


