ಅಕ್ಟೋಬರ್ 3ರಂದು ಉತ್ತರ ಪ್ರದೇಶದ ಲಿಖಿಂಪುರ ಖೇರಿ ಪ್ರಾಂತ್ಯದಲ್ಲಿ ನಡೆದ ರೈತರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅಜಯ್‌ಕುಮಾರ್ ಮಿಶ್ರಾ ಅವರು, “ನನ್ನ ಪುತ್ರ ಘಟನಾ ಪ್ರದೇಶದಲ್ಲಿ ಇರಲಿಲ್ಲ” ಎಂದು ಹೇಳಿದ್ದಾರೆ.
ಪ್ರತಿಭಟನೆ ಮುಗಿಸಿ ಹಿಂತಿರುಗುತ್ತಿದ್ದ ರೈತರ ಮೇಲೆ ಮೂರು ವಾಹನಗಳು ಏಕಾಏಕಿ ನುಗ್ಗಿದ್ದವು. ಅದರಲ್ಲಿ ಒಂದು ವಾಹನವನ್ನು ಅಜಯ್ ಮಿಶ್ರಾ ಅವರ ಮಗ ಅಶೀಶ್ ಮಿಶ್ರಾ ಚಾಲನೆ ಮಾಡುತ್ತಿದ್ದರು ಎಂದು ರೈತರು ದೂರಿದ್ದಾರೆ. ಅಂದು ನಡೆದ ಘಟನೆಯಲ್ಲಿ ಎಂಟು ಜನರು ಸಾವನ್ನಪ್ಪಿದ್ದರು.
ರೈತರು ಸುಮ್ಮನೆ ನಡೆದುಕೊಂಡು ಹೋಗುವಾಗ ಮೂರು ವಾಹನಗಳು ರೈತರತ್ತ ನುಗ್ಗಿದೆ. ಒಬ್ಬ ರೈತನಿಗೆ ಕಾರಿನ ಬ್ಯಾನೆಟ್ ಹೊಡೆದಿದೆ. ಆದರೂ ಅದು ನಿಲ್ಲಲಿಲ್ಲ ಎಂಬುದನ್ನು ಟ್ವಿಟರ್‌ನಲ್ಲಿ ಶೇರ್ ಮಾಡಲಾಗಿರುವ 29 ಸೆಕೆಂಡ್‌ಗಳ ಒಂದು ವಿಡಿಯೋ ತಿಳಿಸಿದೆ. ಸಿಟ್ಟಿಗೆದ್ದ ರೈತರು ಗಾಡಿ ಚಾಲನೆ ಮಾಡುತ್ತಿದ್ದ ಒಬ್ಬನಿಗೆ ಹೊಡೆದಿದ್ದಾರೆ.
प्रधानमंत्री @narendramodi
तुम्हारी ही शह पर गृह राज्यमंत्री द्वारा कराए गए इस नरसंहार के बाद, आखिर नींद कैसे आ रही है?
खून नही खौल रहा? या आनंद आ रहा है?
— Srinivas BV (@srinivasiyc) October 4, 2021
ನಂತರ ಬಿಜೆಪಿ ಕಾರ್ಯಕರ್ತರು ಮತ್ತು ಚಾಲಕನನ್ನು ವಾಹನದಿಂದ “ಎಳೆದೋಯ್ದರು” ಎಂದು ಅವರು ಹೇಳಿದ್ದರು. “ನಾನು ಎರಡು ದಿನಗಳಿಂದ ಪ್ರತಿಭಟನಾ ಸ್ಥಳದ ಬಳಿ ಇರಲಿಲ್ಲ” ಎಂದು ಆಶೀಶ್ ಹೇಳಿದ್ದರು.
ಅಜಯ್ ಮಿಶ್ರ ಪ್ರತಿಕ್ರಿಯಿಸಿ, ಘಟನೆ ನಡೆದ ದಿನ ನನ್ನ ಮಗ ಬನ್ವಿಪುರ ಕುಸ್ತಿ ಪಂದ್ಯಾವಳಿಯಲ್ಲಿ ಇದ್ದರು. ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದನು. ಇದು ಖಾಲಿಸ್ತಾನಿಗಳಿಂದಾದ ಘಟನೆ ಎಂದು ದೂರಿದ್ದರು. ಆದರೆ ಘಟನೆಯ ಪ್ರತ್ಯಕ್ಷದರ್ಶಿಗಳನ್ನು ಸಂದರ್ಶಿಸಿ ನ್ಯೂಸ್ ಲ್ಯಾಂಡ್ರಿ ವರದಿ ಮಾಡಿದ್ದು, ಬೇರೆ ಸಂಗತಿಗಳನ್ನು ಮುನ್ನಲೆಗೆ ತಂದಿದೆ.
ಪ್ರತ್ಯಕ್ಷದರ್ಶಿಗಳು ಹೇಳುವುದೇನು?
ಸೆಪ್ಟೆಂಬರ್ 25ರಂದು ಅಜಯ್‌ಕುಮಾರ್ ಮಿಶ್ರಾ ರೈತರ ಬಗ್ಗೆ ಲಘುವಾಗಿ ಮಾತನಾಡಿದ್ದರು. “ಅವರು ನನ್ನನ್ನು ಎದುರಿಸಲಿ. ಎರಡು ನಿಮಿಷಗಳಲ್ಲಿ ಅವರನ್ನು ಖಾಲಿ ಮಾಡಿಸುತ್ತೇನೆ” ಎಂದು ಅವರು ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಖಂಡಿಸಿ ರೈತರು ಸೇರಿದ್ದರು.
ಅಕ್ಟೋಬರ್ 3ರಂದು ಬನ್ವೀಪುರದಲ್ಲಿ ಆಯೋಜಿಸಿದ್ದ ಸ್ಥಳೀಯ ಕುಸ್ತಿ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಹಾಗೂ ಅಜಯ್ ಕುಮಾರ್ ಮಿಶ್ರಾ ತಿಕುನಿಯಾದ ಹೆಲಿಪ್ಯಾಡ್‌ನಲ್ಲಿ ಇಳಿಯಲಿದ್ದರು. ಹೀಗಾಗಿ ಮಹಾರಾಜ ಅಕ್ರಸೇನ ಕಾಲೇಜು ಮೈದಾನದಲ್ಲಿ (ಹೆಲಿಪ್ಯಾಡ್ ಇರುವ ಸ್ಥಳ) ರೈತರು ಸೇರಿದ್ದರು.
ಅಂದು ಬೆಳಿಗ್ಗೆ 11.30ರ ವೇಳೆಗೆ ಆಯೋಜಿಸಲಾಗಿದ್ದ ಕುಸ್ತಿ ಪಂದ್ಯಾವಳಿ ಕುರಿತು ಅಂದು ಬೆಳಿಗ್ಗೆ ಹಾಜರಿದ್ದ ದಿಲ್ಬಾಗ್ ಸಿಂಗ್ ಹೇಳಿಕೆ ನೀಡಿದ್ದು, “ಮಿಶ್ರಾ ಮತ್ತು ಮೌರ್ಯ ಆಗಮಿಸುವ ಮೊದಲ ಜಿಲ್ಲಾಧಿಕಾರಿಯವರು, ತಮ್ಮ ಪ್ರತಿಭಟನೆಯನ್ನು ಸದರಿ ಸ್ಥಳದಲ್ಲಿಯೇ ಮುಂದುವರಿಸಬಹುದು, ಶ್ರೀಯುತ ಮಿಶ್ರಾ ಮತ್ತು ಮೌರ್ಯ ಈ ಕಾರ್ಯಕ್ರಮಕ್ಕೆ ಹಾಜರಾಗಲು ಬೇರೆ ಮಾರ್ಗವನ್ನು ಅನುಸರಿಸಲಿದ್ದಾರೆ ಎಂದು ರೈತರಿಗೆ ಹೇಳಿದರು” ಎಂದಿದ್ದಾರೆ.
ಹಾಗಾಗಿ, ಅವರಿಬ್ಬರು ಹೆಲಿಕಾಪ್ಟರ್ ಮೂಲಕ ಬಾರದೆ ರಸ್ತೆ ಮಾರ್ಗದಲ್ಲಿ ಪ್ರಯಾಣಿಸಿದರು. ಸಚಿವರು ಮತ್ತು ಉಪಮುಖ್ಯಮಂತ್ರಿ ಇಬ್ಬರೂ ಕಾರ್ಯಕ್ರಮಕ್ಕೆ ಹಾಜರಾದರು. ಅದು ಮಧ್ಯಾಹ್ನದ ವೇಳೆಗೆ ಕಾರ್ಯಕ್ರಮ ಕೊನೆಗೊಂಡಿತು.
ಇದನ್ನೂ ಓದಿರಿ: ಲಖಿಂಪುರ್ ಖೇರಿ ಹತ್ಯಾಕಾಂಡ: ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಸಿಬಿಐ ತನಿಖೆ ನಡೆಸಲು ವಕೀಲರ ಪತ್ರ
ಮಧ್ಯಾಹ್ನ ನಾಲ್ಕು ಗಂಟೆಯಾದರೂ ಪ್ರತಿಭಟನೆಯನ್ನು ಕಾಲೇಜು ಆವರಣದಲ್ಲಿ ರೈತರು ಮುಂದುವರಿಸಿದರು. ವಿಶ್ರಾ ಮತ್ತು ಮೌರ್ಯ ಬಾರದಿದ್ದಾಗ ರೈತರು ಹಿಂತಿರುಗಿದ್ದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಜೋಗ್ಮಿತ್ತಲ್ ಸಿಂಗ್ ಹೇಳುತ್ತಾರೆ: “ಎಲ್ಲರೂ ಸ್ವಲ್ಪ ನಿರಾಳವಾಗಿದ್ದರು. ಲಂಗರ್ ಹಾಕಲಾಗಿತ್ತು. ಎಲ್ಲರೂ ಆಹಾರ ಸೇವಿಸುವುದರಲ್ಲಿ ನಿರತರಾಗಿದ್ದರು. ಊಟ ಮಾಡಿದವರು ಹೊರಡಲು ಆರಂಭಿಸಿದರು. ನಂತರ, ನಮ್ಮತ್ತ ಒಂದು ಫಾರ್ಚೂನರ್, ಒಂದು ಸ್ಕಾರ್ಪಿಯೋ ಮತ್ತು ಒಂದು ಥಾರ್ ಅತಿವೇಗವಾಗಿ ನಮ್ಮ ಕಡೆಗೆ ಬರುತ್ತಿರುವುದನ್ನು ನೋಡಿದೆವು. ಜನರ ಸಮೀಪ ಬರುತ್ತಿದ್ದರೂ ಆ ಮೂರು ವಾಹನಗಳು ನಿಧಾನವಾಗಲೇ ಇಲ್ಲ.”
“ಕೆಲವು ರೈತರು ತಕ್ಷಣಕ್ಕೆ ಬದಿಗೆ ಸರಿಯಲು ಸಾಧ್ಯವಾಗಲಿಲ್ಲ. ಹೀಗಾಗಿ ವಾಹನಗಳ ಅಡಿಯಲ್ಲಿ ಸಿಕ್ಕಿಹಾಕಿಕೊಂಡರು. ವಾಹನಗಳು ನಿಧಾನವಾಗಲೇ ಇಲ್ಲ. ದೇಹಗಳನ್ನು ರಸ್ತೆಯ ಉದ್ದಕ್ಕೂ ಎಳೆದೋಯ್ದವು. ಅಷ್ಟರಲ್ಲಿ, ಫಾರ್ಚೂನರ್ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಉರುಳಿ ಬಿದ್ದಿತು. ಇನ್ನೊಂದು ವಾಹನದ ಇಬ್ಬರು ವ್ಯಕ್ತಿಗಳು ಗುಂಡು ಹಾರಿಸಲು ಆರಂಭಿಸಿದರು. ತುಂಬಾ ಧೂಳು ಇತ್ತು, ಆರಂಭದಲ್ಲಿ ಏನಾಗುತ್ತಿದೆ ಎಂದು ನೋಡಲು ಕಷ್ಟವಾಗಿತ್ತು” ಎನ್ನುತ್ತಾರೆ ಜೋಗ್ಮಿತ್ತಲ್ ಸಿಂಗ್.
ಮುಂದುವರಿದು ಹೇಳುತ್ತಾರೆ: “ಒಬ್ಬಾತ ಸಾವಿಗೀಡಾದರು, ಒಬ್ಬಾತ ಸಾವಿಗೀಡಾದರು” ಎಂದು ಎಲ್ಲರೂ ಕೂಗಾಡಲು ಶುರುಮಾಡಿದರು. ಒಂದು ವಾಹನ ನಿಯಂತ್ರಣ ಕಳೆದುಕೊಂಡು ಮಗುಚಿಬಿತ್ತು. ಆಗ ಬಂದೂಕಿನ ಸುರುಮಳೆಯಾಯಿತು. ಒಬ್ಬಾತ ದೇವಾಲಯ ಬಳಿ ಗುಂಡಿಗೆ ಬಲಿಯಾದ ಹಾಗೂ ಬಂದೂಕಿನ ಶಬ್ದವನ್ನು ನಾನು ಆಲಿಸಿದೆ” ಎಂದಿದ್ದಾರೆ.
ಮತ್ತೊಬ್ಬ ಪ್ರತ್ಯಕ್ಷದರ್ಶಿ ಗುರುಸೇವಕ್ ಸಿಂಗ್ ಮಾತನಾಡಿ, “ಒಂದು ವಾಹನದಲ್ಲಿದ್ದವರು ಓಡಲು ಆರಂಭಿಸಿದಾಗ ಬಂದೂಕು ಬಳಸಲು ಆರಂಭಿಸಿದರು. ಗಾಯಗೊಂಡವರನ್ನು ರಕ್ಷಿಸಲು ರೈತರು ಯತ್ನಿಸಿದರು. ಆದರೆ ಬಂದೂಕಿನ ಮಳೆಗರೆಯುವುದು ಮುಂದುವರಿದಾಗ ಎಲ್ಲರೂ ಸುಮ್ಮನೇ ನೋಡುತ್ತಾ ಇರಬೇಕಾಯಿತು. ಪ್ರತಿಭಟನೆಯ ಕಾರಣ ಸ್ಥಳದಲ್ಲಿದ್ದ ಪೊಲೀಸರೂ ಓಡಲಾರಂಭಿಸಿದರು” ಎಂದು ಹೇಳಿದ್ದಾರೆ.
ವಾಹನ ಉರುಳಿತು. ಇಬ್ಬರು ಬಿಜೆಪಿ ಕಾರ್ಯಕರ್ತರು, ವಾಹನ ಚಾಲಕ ಸೇರಿ ಮೂವರು ಸಾವನ್ನಪಿದರು. ರೊಚ್ಚಿಗೆದ್ದ ರೈತರು ವಾಹನ ಚಾಲಕನಿಗೆ ಹೊಡೆದರು. ಭಾನುವಾರ ಆಶೀಶ್ ಮಿಶ್ರಾ ಅಲ್ಲಿದ್ದನ್ನು ಅನೇಕರು ಗುರುತಿಸಿದ್ದಾರೆ. ಎಲ್ಲರಿಗೂ ಆತ ಯಾರೆಂಬುದು ಗೊತ್ತಿತ್ತು. ಆತ ಮಂತ್ರಿಯ ಮಗ ಎಂಬುದು ತಿಳಿದಿತ್ತು ಎನ್ನಲಾಗಿದೆ.
ಮತ್ತೊಬ್ಬ ಪ್ರತ್ಯಕ್ಷದರ್ಶಿ ತಲ್ವೀರ್ ಸಿಂಗ್ ಹೇಳಿಕೆ ನೀಡಿದ್ದು, “ರೈತರ ಮೇಲೆ ನುಗ್ಗಿದ ಒಂದು ಕಾರನ್ನು ಆಶೀಶ್ ಚಾಲನೆ ಮಾಡುತ್ತಿದ್ದ. ಆಶೀಶ್ ಓಡುತ್ತಾ ಗಾಳಿಯಲ್ಲಿ ಗುಂಡು ಹಾರಿಸಿದ್ದನ್ನು ಹಲವರು ನೋಡಿದ್ದಾರೆ” ಎಂದಿದ್ದಾರೆ.
ಆಶೀಶ್ ಪಿಸ್ತೂಲ್ ತುಂಬುತ್ತಿರುವ ವಿಡಿಯೋಕ್ಲಿಪ್‌ಅನ್ನು ಪ್ರತ್ಯಕ್ಷದರ್ಶಿಗಳು ನ್ಯೂಸ್‌ಲ್ಯಾಂಡ್ರಿಗೆ ತೋರಿಸಿದ್ದಾರೆ. “ಅಂದು ಮಧ್ಯಾಹ್ನ ಮೂರು ಗಂಟೆಯ ವೇಳೆಯಲ್ಲಿ ಘಟನೆ ನಡೆಯುವ ಮುನ್ನ, ಘಟನಾ ಸ್ಥಳದಿಂದ ಮೂರು ಕಿ.ಮೀ. ದೂರದ ರೈಸ್‌ಮಿಲ್ ಬಳಿಯಿಂದ ಫೇಸ್‌ಬುಕ್ ಲೈವ್ ಆಗಿದೆ” ಎನ್ನುತ್ತಾರೆ ಗುರ್‌ಸೇವಕ್ ಸಿಂಗ್.
“ಆದರೆ ಈ ವಿಡಿಯೋ ಕ್ಲಿಪ್ ಬ್ಲರ್ ಆಗಿದ್ದು, ಆದರೆ ವಿಡಿಯೋದಲ್ಲಿರುವುದು ಆಶೀಶ್ ಎಂದು ಅನೇಕ ಸ್ಥಳೀಯರು ಗುರುತಿಸಿದ್ದಾರೆ. ಈ ವ್ಯಕ್ತಿ ಆಶೀಶ್ ಆದರೂ ಆತ ಪಿಸ್ತೂಲು ಹಿಡಿದಿದ್ದ ಎಂಬುದನ್ನು ಗುರುತಿಸಲಾಗಿಲ್ಲ ಎಂದು ನ್ಯೂಸ್‌ಲ್ಯಾಂಡ್ರಿ ವರದಿ ಮಾಡಿದೆ. ಆದರೆ ಘಟನಾ ಸ್ಥಳದಲ್ಲಿ ಆಶೀಶ್ ಇರಲಿಲ್ಲ ಎಂಬ ವಾದವನ್ನು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು ಅಲ್ಲಗಳೆಯುತ್ತವೆ.
ಇದನ್ನೂ ಓದಿರಿ: #भाजपा_के_आतंकवादी | ‘ಬಿಜೆಪಿ ಭಯೋತ್ಪಾದಕರು’ – ಟ್ವಿಟರ್ ಟ್ರೆಂಡ್


