ರೈತರ ಹತ್ಯಾಕಾಂಡ ನಡೆದ ಲಖಿಂಪುರ್ ಗೆ ತೆರಳಲು ಮಧ್ಯಾಹ್ನ ಲಕ್ನೋಗೆ ತೆರಳಿದ್ದ ರಾಹುಲ್ ಗಾಂಧಿ ಅವರನ್ನು ವಿಮಾನ ನಿಲ್ದಾಣಲ್ಲಿ ತಡೆಯಲಾಗಿದೆ. ಭದ್ರತಾ ಸಿಬ್ಬಂದಿಗಳು ಅವರನ್ನು ಪೊಲೀಸ್ ಕಾರಿನಲ್ಲಿ ತೆರಳಲು ಕೇಳಿಕೊಂಡಿದ್ದು, ಇದಕ್ಕೆ ರಾಹುಲ್ ಗಾಂಧಿ ನಿರಾಕರಿಸಿದ್ದಾರೆ. ನಂತರ ರಾಹುಲ್ ಗಾಂಧಿ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ್ದು, ಕೊನೆಗೆ ಅವರದೆ ಸ್ವಂತ ಕಾರಿನಲ್ಲಿ ತೆರಳಲು ಅನುಮತಿ ನೀಡಲಾಗಿದೆ.
ಉತ್ತರ ಪ್ರದೇಶದ ಭದ್ರತಾ ಸಿಬ್ಬಂದಿಗಳೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, “ನನ್ನ ಪ್ರಯಾಣ ವ್ಯವಸ್ಥೆ ಮಾಡಲು ನೀವು ಯಾರು? ನಾನು ನನ್ನ ಕಾರಿನಲ್ಲಿ ತೆರಳಲು ಬಯಸುತ್ತೇನೆ” ಹೇಳಿದ್ದಾರೆ.
“ಅವರು 100% ಏನೋ ಕಿಡಿಗೇಡಿ ಕ್ರಮಕ್ಕೆ ಹೊಂಚು ಹಾಕಿದ್ದಾರೆ” ಎಂದು ರಾಹುಲ್ ಗಾಂಧಿ ಸುದ್ದಿಗಾರರಿಗೆ ಹೇಳಿದ್ದಾರೆ.
ಇದನ್ನೂ ಓದಿ: ಲಖಿಂಪುರ್ ಖೇರಿ ಭೇಟಿಗೆ ರಾಹುಲ್ ಗಾಂಧಿ ನೇತೃತ್ವದ ನಿಯೋಗಕ್ಕೆ ಅನುಮತಿ ನೀಡದ ಯುಪಿ ಸರ್ಕಾರ
ಲಖಿಂಪುರಕ್ಕೆ ರಾಜಕೀಯ ನಾಯಕರ ಭೇಟಿಗೆ ಬಿಜೆಪಿ ಸರ್ಕಾರ ನಿರ್ಬಂಧಿಸಿತ್ತು ಮತ್ತು ಸೋಮವಾರದಂದು ಅಲ್ಲಿಗೆ ತೆರಳಿದ್ದ ಪ್ರಿಯಾಂಕ ಗಾಂಧಿ ಅವರನ್ನು ಗೃಹ ಬಂಧನದಲ್ಲಿ ಇಟ್ಟಿತ್ತು. ಇಂದು ಉತ್ತರ ಪ್ರದೇಶದ ಬಿಜೆಪಿ ಸರ್ಕಾರವು ರಾಹುಲ್ ಗಾಂಧಿ ಅವರ ನಿಯೋಗಕ್ಕೆ ಲಖಿಂಪುರಕ್ಕೆ ತೆರಳಲು ಅನುಮತಿ ನೀಡಿದೆ.
ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಚನ್ನಿ, ಛತ್ತೀಸ್‌ಗಡ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಮತ್ತು ವೇಣುಗೋಪಾಲ್ ಅವರೊಂದಿಗೆ ವಿಮಾನ ನಿಲ್ದಾಣದಲ್ಲಿ ಕೂತಿರುವ ಚಿತ್ರವನ್ನು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಚಿತ್ರದಲ್ಲಿ ಕಾಂಗ್ರೆಸ್ ನಾಯಕರು ಸ್ಥಳವನ್ನು ಬಿಟ್ಟು ಮುಂದೆ ಬರದಂತೆ ಭದ್ರತಾ ಸಿಬ್ಬಂದಿ ಹಗ್ಗ ಹಿಡಿದು ಅಡ್ಡ ನಿಂತಿದ್ದಾರೆ. ಈ ಟ್ವೀಟ್‌ನಲ್ಲಿ, “ಇದು ಬಿಜೆಪಿ ಸರ್ಕಾರದ ‘ಅನುಮತಿ’. ಸರ್ಕಾರಕ್ಕೆ ಇಷ್ಟೊಂದು ಭಯ ಯಾಕೆ?” ಎಂದು ರಾಹುಲ್ ಗಾಂಧಿ ಬರೆದಿದ್ದಾರೆ.
भाजपा सरकार की ‘अनुमति’!
इतना डर किस बात का? #IndiaDemandsJustice pic.twitter.com/n5Y0dCfvHN
— Rahul Gandhi (@RahulGandhi) October 6, 2021
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ರಾಹುಲ್ ಗಾಂಧಿ ಮಹಿಳೆಯರನ್ನು ಅವಮಾನಿಸಿಲ್ಲ, ಅರ್ಧ ಭಾಷಣ ಹಂಚಿಕೊಳ್ಳಲಾಗುತ್ತಿದೆ
“ನನ್ನನ್ನು ಹೊರಡಲು ಬಿಡಿ, ಅವರು ನನ್ನನ್ನು ವಿಮಾನ ನಿಲ್ದಾಣದಿಂದ ಹೊರಡಲು ಬಿಡುತ್ತಿಲ್ಲ. ಇದನ್ನು ನೋಡಿ – ಇದು ಯಾವ ರೀತಿಯ ಅನುಮತಿ? ಯುಪಿ ಸರ್ಕಾರದ ‘ಅನುಮತಿ’ ಯ ಸ್ಥಿತಿಯನ್ನು ನೋಡಿ. ನಾನು ವಿಮಾನ ನಿಲ್ದಾಣವನ್ನು ತೊರೆಯಲು ಬಯಸುತ್ತಿದ್ದೇನೆ, ಆದರೆ ಅವರು ಅನುಮತಿಸುತ್ತಿಲ್ಲ. ಈ ದೃಶ್ಯವನ್ನು ಸರಿಯಾಗಿ ತೋರಿಸಿ” ಎಂದು ರಾಹುಲ್ ಗಾಂಧಿ ಮಾಧ್ಯಮದತ್ತ ತಿರುಗಿ ಹೇಳಿದ್ದಾರೆ.
“ನಾನು ಇಲ್ಲಿ 10 ದಿನಗಳೋ, 20 ದಿನಗಳೋ, ಎಷ್ಟಾದರೂ ಆಗಲಿ, ಇಲ್ಲೇ ಇರುತ್ತೇನೆ” ಎಂದು ಅವರು ಘೋಷಿಸಿದ್ದಾರೆ.
ಅಧಿಕಾರಿಗಳ ಜೊತೆಗೆ ರಾಹುಲ್ ಗಾಂಧಿ ವಾಗ್ವಾದ ನಡೆಸಿದ ನಂತರ, ಕೊನೆಗೆ ಅವರದೆ ಸ್ವಂತ ಕಾರಿನಲ್ಲಿ ತೆರಳಲು ಅನುಮತಿ ನೀಡಿದ್ದಾರೆ. ನಂತರ ವಿಮಾನ ನಿಲ್ದಾಣದಿಂದ ರಾಹುಲ್ ಗಾಂಧಿ ಲಿಖಿಂಪುರಕ್ಕೆ ತೆರಳಿದ್ದು, ಮೊದಲಿಗೆ ಸೋಮವಾರದಿಂದ ಬಂಧನದಲ್ಲಿದ್ದ ತನ್ನ ಸಹೊದರಿ ಪ್ರಿಯಾಂಕ ಗಾಂಧಿ ಅವರನ್ನು ಭೇಟಿಯಾಗಲಿದ್ದಾರೆ.
ಇದನ್ನೂ ಓದಿ: RSS ಮಾನನಷ್ಟ ಮೊಕದ್ದಮೆ: ರಾಹುಲ್ ಗಾಂಧಿ ವಿರುದ್ಧದ ಅರ್ಜಿ ವಜಾಗೊಳಿಸಿದ ಬಾಂಬೆ ಹೈಕೋರ್ಟ್


