ಲಖಿಂಪುರ್ ಹತ್ಯಾಕಾಂಡದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಮೌನವನ್ನು ಕಾಂಗ್ರೆಸ್‌ನ ಹಿರಿಯ ನಾಯಕ ಕಪಿಲ್ ಸಿಬಲ್ ಶುಕ್ರವಾರ ಪ್ರಶ್ನಿಸಿದ್ದು, ಅವರಿಂದ ಕನಿಷ್ಠ ಅನುಕಂಪದ ಮಾತಾದರೂ ಬರಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಉತ್ತರ ಪ್ರದೇಶದ ಲಖಿಂಪುರ್ ಖೇರಿಗೆ, ಕಳೆದ ಭಾನುವಾರ ಕಾರ್ಯಕ್ರಮವೊಂದಕ್ಕೆ ಒಕ್ಕೂಟ ಸರ್ಕಾರದ ಸಚಿವ ಅಜಯ್ ಮಿಶ್ರಾ ಆಗಮಿಸಿದ್ದರು. ಈ ವೇಳೆ ರೈತರು ಅವರ ವಿರುದ್ದ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ಮುಗಿಸಿ ವಾಪಾಸು ಹೋಗುತ್ತಿದ್ದಾಗ ರೈತರ ಮೇಲೆ ಕಾರು ಹರಿಸಿ ಹತ್ಯೆ ಮಾಡಲಾಗಿತ್ತು. ಘಟನೆಯ ವಿಡಿಯೊ ಕೂಡಾ ವೈರಲ್ ಆಗಿದ್ದು, ಘಟನೆಯಲ್ಲಿ ನಾಲ್ಕು ರೈತರು ಸೇರಿದಂತೆ ಒಟ್ಟು ಎಂಟು ಜನರು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಲಖಿಂಪುರ್ ಖೇರಿ ಹತ್ಯಾಕಾಂಡ: ಆಶಿಶ್ ಮಿಶ್ರಾ ತಪ್ಪಿಸಿಕೊಳ್ಳಲು ಯುಪಿ ಪೊಲೀಸರೇ ಅನುಕೂಲ ಮಾಡಿಕೊಟ್ಟರು- ಎಸ್‌ಕೆಎಂ
ಇಂದು ಬೆಳಿಗ್ಗೆ ಟ್ವೀಟ್ ಮಾಡಿದ ಕಪಿಲ್ ಸಿಬಲ್, “ಭಯಾನಕ ಲಖಿಂಪುರ್ ಖೇರಿ. ಮೋದಿ ಅವರೇ, ನೀವು ಯಾಕೆ ಮೌನವಾಗಿದ್ದೀರಿ? ನಿಮ್ಮಿಂದ ನಮಗೆ ಕನಿಷ್ಠ ಒಂದು ಅನುಕಂಪದ ಮಾತಾದರೂ ಬೇಕು. ಇದೇನು ಕಷ್ಟದ ವಿಷಯವಲ್ಲ. ಒಂದು ವೇಳೆ ವಿರೋಧ ಪಕ್ಷದಲ್ಲಿದ್ದರೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ? ದಯವಿಟ್ಟು ನಮಗೆ ತಿಳಿಸಿ” ಎಂದು ಹೇಳಿದ್ದಾರೆ.
Lakhimpur Kheri Horror
Modi ji
Why are you silent ?We need just one word of sympathy from you
That should not be difficult !Had you been in opposition how would you have reacted ?
Please tell us
— Kapil Sibal (@KapilSibal) October 8, 2021
ಇದನ್ನೂ ಓದಿ: ಲಖಿಂಪುರ್ ಖೇರಿಗೆ ಪಾದಯಾತ್ರೆ: ಆರೋಪಿಗಳನ್ನು ಬಂಧಿಸದಿದ್ದರೇ ಉಪವಾಸ ಸತ್ಯಾಗ್ರಹ-ನವಜೋತ್ ಸಿಂಗ್ ಸಿಧು
ಘಟನೆ ನಡೆದು ಎರಡು ದಿನಕಳೆದ ನಂತರ ಪ್ರಧಾನಿ ಮೋದಿ ಅವರು ಉತ್ತರ ಪ್ರದೇಶದಕ್ಕೆ ಆಗಮಿಸಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಕೂಡಾ ಅವರು ಘಟನೆಯ ಬಗ್ಗೆ ಯಾವುದೆ ರೀತಿಯಲ್ಲಿ ಪ್ರತಿಕ್ರಿಯೆ ನೀಡಿರಲಿಲ್ಲ.
ಹತ್ಯಾಕಾಂಡದ ಬಗ್ಗೆ ಸ್ವಯಂಪ್ರೇರಿತ ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್‌ಗೆ ಕಪಿಲ್ ಸಿಬಲ್ ಈ ಹಿಂದೆ ಒತ್ತಾಯಿಸಿದ್ದರು.
ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ಪ್ರಕರಣವನ್ನು ಕೈಗೆತ್ತಿಕೊಂಡ ನಂತರ ಕಪಿಲ್ ಸಿಬಲ್ ಮುಖ್ಯ ನ್ಯಾಯಮೂರ್ತಿಗೆ ಧನ್ಯವಾದ ಅರ್ಪಿಸಿದ್ದರು. ಅಲ್ಲದೆ, ಭಾರತದಲ್ಲಿ ನ್ಯಾಯಾಲಯಗಳು ಧ್ವನಿ ಇಲ್ಲದವರ ನಂಬಿಕೆಯನ್ನು ಪುನಃಸ್ಥಾಪಿಸುವ ನ್ಯಾಯದ ದೇವಾಲಯಗಳು ಎಂದು ಹೇಳಿದ್ದರು.
ಹತ್ಯಾಕಾಂಡ ಪ್ರಕರಣದಲ್ಲಿ ಯುಪಿ ಪೊಲೀಸರು ಗುರುವಾರ ಇಬ್ಬರನ್ನು ಬಂಧಿಸಿದ್ದಾರೆ. ಆದರೆ, ಪ್ರಕರಣದ ಪ್ರಮುಖ ಆರೋಪಿ ಒಕ್ಕೂಟ ಸರ್ಕಾರದ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅವರ ಬಂಧನ ಇನ್ನೂ ಆಗಿಲ್ಲ.
ಇದನ್ನೂ ಓದಿ: ಲಖಿಂಪುರ್ ಖೇರಿ ಹತ್ಯಾಕಾಂಡ: 100 ಗಂಟೆಯಾದರೂ ಆರೋಪಿಗಳ ಬಂಧನವಿಲ್ಲ – ರೈತರ ಆಕ್ರೋಶ


