ಹಿಂದುತ್ವದ ಪ್ರತಿಪಾದನೆಯ ಆದ್ಯ ಪ್ರವರ್ತಕರಲ್ಲಿ ಒಬ್ಬರಾದ ವಿ.ಡಿ.ಸಾವರ್ಕರ್ ಅವರು ಅಂಡಮಾನ್ ಜೈಲಿನಿಂದ ಹೊರಬರಲು ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆಯುವಂತೆ ಮಹಾತ್ಮ ಗಾಂಧೀಜಿಯವರು ಸಲಹೆ ನೀಡಿದ್ದರು. ಆದರೆ ಸಾವರ್ಕರ್ ಅವರನ್ನು ವಿರೋಧಿಸುವ ಸಿದ್ಧಾಂತಿಗಳು ಸಾವರ್ಕರ್ ಅವರು ಸ್ವಾತಂತ್ರ್ಯ ಹೋರಾಟಕ್ಕಾಗಿ ನೀಡಿದ ಕೊಡುಗೆಯನ್ನು ನಿಂದಿಸಿದ್ದು, ಅದನ್ನು ಇನ್ನು ಮುಂದೆ ಸಹಿಸುವುದಿಲ್ಲ” ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಉದಯ್ ಮಹೂರ್‌ಕರ್ ಮತ್ತು ಚಿರಾಯು ಪಂಡಿತ್ ಅವರು ಬರೆದಿರುವ “ದಿ ಮ್ಯಾನ್ ವೂ ಕುಡ್ ಹ್ಯಾವ್ ಪ್ರಿವೆಂಟೆಂಡ್ ಪಾರ್ಟಿಷನ್” ಕೃತಿಯನ್ನು ರೂಪಾ ಪಬ್ಲಿಕೇಷನ್ ಪ್ರಕಟಿಸಿದ್ದು, ಮಂಗಳವಾರ ಬಿಡುಗಡೆಯಾಗಿದೆ. ನವದೆಹಲಿಯ ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಪಾಲ್ಗೊಂಡಿದ್ದ ಸಾವರ್ಕರ್ ಕುರಿತ ಈ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ರಮದಲ್ಲಿ ರಕ್ಷಣಾ ಸಚಿವರು ಮಾತನಾಡಿದ್ದಾರೆ.
ಸಾವರ್ಕರ್ ವಿರುದ್ಧ ಸಾಕಷ್ಟು ಸುಳ್ಳುಗಳನ್ನು ಹರಡಲಾಗಿದೆ. ಅವರು ಬ್ರಿಟಿಷ್ ಸರ್ಕಾರದ ಮುಂದೆ ಹಲವು ಕ್ಷಮಾದಾನ ಅರ್ಜಿಗಳನ್ನು ಸಲ್ಲಿಸಿದರು ಎಂದು ಪದೇ ಪದೇ ಹೇಳಲಾಗುತ್ತಿದೆ. ಸತ್ಯವೆಂದರೆ ಸಾವರ್ಕರ್ ಅವರು ತನ್ನ ಬಿಡುಗಡೆಗಾಗಿ ಈ ಅರ್ಜಿಗಳನ್ನು ಸಲ್ಲಿಸಿಲ್ಲ. ಸಾಮಾನ್ಯವಾಗಿ ಕೈದಿಗೆ ಕ್ಷಮಾದಾನ ಅರ್ಜಿ ಸಲ್ಲಿಸುವ ಹಕ್ಕಿದೆ. ಸಾವರ್ಕರ್ ಕ್ಷಮಾದಾನ ಅರ್ಜಿ ಸಲ್ಲಿಸುವಂತೆ ಮಹಾತ್ಮ ಗಾಂಧಿ ಹೇಳಿದ್ದರು. ಗಾಂಧಿಯವರ ಸಲಹೆಯ ಮೇರೆಗೆ ಅವರು ಕ್ಷಮಾದಾನ ಅರ್ಜಿ ಸಲ್ಲಿಸಿದರು. ಸಾವರ್ಕರ್ ಅವರನ್ನು ಬಿಡುಗಡೆ ಮಾಡಬೇಕು ಎಂದು ಮಹಾತ್ಮಾ ಗಾಂಧಿಯವರು ಮನವಿ ಮಾಡಿದರು. ನಾವು ಸ್ವಾತಂತ್ರ್ಯಕ್ಕಾಗಿ ಚಳವಳಿಯನ್ನು ಶಾಂತಿಯುತವಾಗಿ ನಡೆಸುತ್ತಿದ್ದೇವೆ ಎಂದು ಗಾಂಧೀಜಿ ಹೇಳಿದ್ದರು, ಸಾವರ್ಕರ್ ನಂಬಿಕೆಯೂ ಇದೇ ಆಗಿತ್ತು”ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿರಿ: BJP ಇನ್ನೂ ಯಾಕೆ ಸಾವರ್ಕರ್‌ಗೆ ಭಾರತ ರತ್ನ ನೀಡಿಲ್ಲ: ಶಿವಸೇನೆ ಪ್ರಶ್ನೆ
ಸಾವರ್ಕರ್ ಅವರು ಗುಲಾಮಗಿರಿಯ ಸಂಕೋಲೆಗಳನ್ನು ಮುರಿಯಲು ಜನರನ್ನು ಪ್ರೇರೇಪಿಸಿದರು. ಮಹಿಳಾ ಹಕ್ಕುಗಳು ಸೇರಿದಂತೆ ಇತರ ಸಾಮಾಜಿಕ ಸಮಸ್ಯೆಗಳನ್ನು ಪ್ರಶ್ನಿಸಿದರು. ಅಸ್ಪೃಶ್ಯತೆಯ ವಿರುದ್ಧ ಆಂದೋಲನ ಮಾಡಿದರು ಎಂದ ಅವರು, “ದೇಶದ ಸಾಂಸ್ಕೃತಿಕ ಏಕತೆಯಲ್ಲಿ ಅವರ ಕೊಡುಗೆಯನ್ನು ಕಡೆಗಣಿಸಲಾಗಿದೆ” ಎಂದರು.
ಸಾವರ್ಕರ್ ಮೇಲೆ ರಾಜಕೀಯ ದ್ವೇಷ ಸಾಧಿಸಲಾಗಿದೆ. 2003ರಲ್ಲಿ ಸಾವರ್ಕರ್ ಅವರ ಚಿತ್ರವನ್ನು ಸಂಸತ್ತಿನಲ್ಲಿ ಇರಿಸಲಾಗಿದ್ದಾಗ ಹೆಚ್ಚಿನ ರಾಜಕೀಯ ಪಕ್ಷಗಳು ಬಹಿಷ್ಕರಿಸಿದವು. ಆದರೆ ಅಂಡಮಾನ್ ಮತ್ತು ನಿಕೋಬಾರ್ ಜೈಲಿನಲ್ಲಿ ಅವರ ಹೆಸರಿನಲ್ಲಿದ್ದ ಫಲಕವನ್ನು ಸರ್ಕಾರ ಬದಲಾದ ಬಳಿಕ ತೆಗೆದುಹಾಕಲಾಗಿದೆ ಎಂದು ಉಲ್ಲೇಖಿಸಿದರು.
“ನೀವು ಸಾವರ್ಕರ್ ಅವರೊಂದಿಗೆ ಭಿನ್ನಾಭಿಪ್ರಾಯಗಳನ್ನು ಹೊಂದಬಹುದು. ಆದರೆ ಅವರನ್ನು ಅಸಹ್ಯವಾಗಿ ನೋಡುವುದು ಸರಿಯಲ್ಲ. ಅವರ ರಾಷ್ಟ್ರೀಯ ಕೊಡುಗೆಗಳನ್ನು ಅವಹೇಳನ ಮಾಡುವ ಕ್ರಮವನ್ನು ಸಹಿಸಲಾಗುವುದಿಲ್ಲ” ಎಂದು ಸಿಂಗ್ ಎಚ್ಚರಿಸಿದ್ದಾರೆ.
“ಸಾವರ್ಕರ್ ಅವರನ್ನು ನಾಜಿ ಹಾಗೂ ಫಾಸಿಸ್ಟ್ ರೀತಿ ಬಿಂಬಿಸಿ ಟೀಕಿಸಲಾಗುತ್ತದೆ. ಅದು ಕೂಡ ಸರಿಯಲ್ಲ. ಅವರು ಹಿಂದುತ್ವದೊಂದಿಗೆ ನಂಬಿಕೆ ಇಟ್ಟಿದ್ದರು. ವಾಸ್ತವವಾದಿಯಾಗಿದ್ದರು. ಏಕತೆಗೆ ಸಂಸ್ಕೃತಿಯ ಏಕರೂಪತೆ ಮುಖ್ಯ ಎಂದು ಅವರು ನಂಬಿದ್ದರು. ಅವರೊಬ್ಬ ವ್ಯಕ್ತಿಯಲ್ಲ, ಒಂದು ಸಿದ್ಧಾಂತ. ಅವರ ಅನುಯಾಯಿಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಾರೆ” ಎಂದು ಹೇಳಿದರು.
ಸಾವರ್ಕರ್- ವಿವೇಕಾನಂದರ ನಡುವೆ ವ್ಯತ್ಯಾಸವಿಲ್ಲ: ಭಾಗವತ್
ಮೋಹನ್ ಭಾಗವತ್ ಮಾತನಾಡಿ, “ಸಾವರ್ಕರ್ ಕುರಿತ ಅಪಪ್ರಚಾರ ಸ್ವಾತಂತ್ರ್ಯ ನಂತರದಲ್ಲಿ ಆರಂಭವಾಯಿತು. ಸ್ವಾಮಿ ವಿವೇಕಾನಂದ, ಸ್ವಾಮಿ ದಯಾನಂದ ಸರಸ್ವತಿ ಮತ್ತು ಯೋಗಿ ಅರವಿಂದ್ ಅವರ ಖ್ಯಾತಿಯನ್ನು ಕೆಡಿಸುವುದು ಈ ವಿರೋಧಿಗಳ ಗುರಿಯಾಗಿತ್ತು. ಏಕೆಂದರೆ ಅವರು ಭಾರತೀಯ ರಾಷ್ಟ್ರೀಯತೆಯನ್ನು ಮುನ್ನೆಲೆಗೆ ತಂದವರಾಗಿದ್ದರು. ಸಾವರ್ಕರ್ ಮತ್ತು ವಿವೇಕಾನಂದರ ರಾಷ್ಟ್ರೀಯತೆಯ ನಡುವೆ ಯಾವುದೇ ವ್ಯತ್ಯಾಸವಿಲ್ಲ” ಎಂದು ಪ್ರತಿಪಾದಿಸಿದರು.
ಪುಸ್ತಕವನ್ನು ಪರಿಚಯಿಸುವಾಗ, ಔರಂಗಜೇಬನಂತಹ ವ್ಯಕ್ತಿಗಳ ಹೆಸರನ್ನು ರಸ್ತೆಗಳಿಗೆ ಇಡಬಾರದೆಂದು ವಾದಿಸಿದ ಮಹೂರ್ಕರ್ ಅವರ ಮಾತನ್ನು ಒಪ್ಪಿಕೊಂಡ ಭಾಗವತ್, “ಮಹೂರ್ಕರ್ ಹೇಳಿದ್ದನ್ನು, ನಾನು ಅವರನ್ನು 100 ಪ್ರತಿಶತ ಬೆಂಬಲಿಸುತ್ತೇನೆ” ಎಂದಿದ್ದಾರೆ.
ಸ್ವಾತಂತ್ರ್ಯ ಪೂರ್ವದ ಹಿಂದೂ-ಮುಸ್ಲಿಂ ಏಕತೆಗೆ ಮೂಲಭೂತವಾದ ಮತ್ತು ವಹಾಬಿಸಂನಿಂದ ಅಪಾಯವಿದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥರು ಹೇಳಿದರು. “ಬ್ರಿಟಿಷರು ತಮ್ಮ ವೈವಿಧ್ಯತೆಯ ಹೊರತಾಗಿಯೂ ಭಾರತೀಯರು ಒಗ್ಗೂಡಿ ನಮ್ಮನ್ನು ಹೊರಹಾಕಬಹುದು ಎಂದು ಅರಿತುಕೊಂಡರು. ಆದ್ದರಿಂದ ಅವರು ಮೂಲಭೂತವಾದದಿಂದಾಗಿ ರೂಪುಗೊಳ್ಳಲು ಆರಂಭಿಸಿದ ಬಿರುಕನ್ನು ವಿಸ್ತರಿಸಿದರು. ಸಾವರ್ಕರ್ ಅವರು ಅಂಡಮಾನ್ ಜೈಲಿನಲ್ಲಿರುವಾಗ ಇದನ್ನು ಅನುಭವಿಸಿದರು. ಅವರು ಅಂಡಮಾನ್‌ನಿಂದ ಹಿಂದಿರುಗಿದ ನಂತರ ಅವರ ಹಿಂದುತ್ವ ಮಹಾಕಾವ್ಯವನ್ನು ಬರೆಯಲಾಗಿದೆ” ಎಂದು ಭಾಗವತ್ ಹೇಳಿದರು.
ಆರ್‌ಎಸ್‌ಎಸ್ ಮುಖ್ಯಸ್ಥರು ಭಾರತದಲ್ಲಿ ಯಾವಾಗ ಧರ್ಮದ ಆಧಾರದ ಮೇಲೆ ಎರಡು ರಾಷ್ಟ್ರಗಳಿವೆ ಎಂಬ ಧ್ವನಿಗಳು ಏಳಲಾರಂಭಿಸಿದವು, ಆಗ ಸಾವರ್ಕರ್, ರಾಷ್ಟ್ರೀಯತೆಯು ಧಾರ್ಮಿಕ ಭಿನ್ನತೆಗಳನ್ನು ಮೀರಿದ್ದು ಮತ್ತು ನಾವು ಭಿನ್ನವಾಗಿಲ್ಲ ಎಂದು ಕೂಗಬೇಕಾಯಿತು ಎಂದರು.
ರಾಜನಾಥ್ ಸಿಂಗ್ ಹೇಳಿಕೆಗೆ ಟೀಕೆ
ರಾಜನಾಥ್ ಸಿಂಗ್ ಅವರು ಇತಿಹಾಸವನ್ನು ತಿರುಚುವ ಕೆಲಸ ಮಾಡುತ್ತಿದ್ದಾರೆ ಎಂಬ ಟೀಕೆಗಳು ವ್ಯಕ್ತವಾಗಿವೆ.
ಹಿರಿಯ ನ್ಯಾಯವಾಧಿ ಪ್ರಶಾಂತ್ ಭೂಷನ್ ಟ್ಟೀಟ್ ಮಾಡಿದ್ದು, “ತನ್ನನ್ನು ಶೂಟ್ ಮಾಡುವಂತೆ ಗೋಡ್ಸೆಯನ್ನು ಗಾಂಧೀಜಿ ಕೇಳಿದರು, ರಾಜ್‌ನಾಥ್ ಸಿಂಗ್ ಜೀ” ಎಂದಿದ್ದಾರೆ.
Yes Rajnath ji. Just as Gandhiji asked Godse to shoot him! https://t.co/TDi9qNkB0a
— Prashant Bhushan (@pbhushan1) October 13, 2021
ಸಮೀನ್ ಅಖ್ತರ್ ಪ್ರತಿಕ್ರಿಯಿಸಿ, ” ಗಾಂಧಿ ಆಕಸ್ಮಿಕವಾಗಿ ಗುಂಡೇಟಿಗೆ ಬಲಿಯಾದರು ಮತ್ತು ಗಾಡ್ಸೆ ಗಾಂಧಿಯ ಸಶಸ್ತ್ರ ಅಂಗರಕ್ಷಕರಾಗಿದ್ದರು ಎಂಬುದು ನನಗೆ ತಿಳಿದಿರಲಿಲ್ಲ” ಎಂದು ಹೇಳಿದ್ದಾರೆ.
“ಗಾಂಧೀಜಿ ಸತ್ತಿದ್ದು, ಆಟೋರಿಕ್ಷಾ ಅಪಘಾತದಲ್ಲಿ ಎಂಬುದು ಸತ್ಯವಾಗಿದೆ” ಎಂದು ವಿಶಾಲ್ ಎಂಬುವವರು ಕುಟುಕಿದ್ದಾರೆ.
but the truth is, Gandhi ji was died on an autoriksha accident
— Vasil (@wasilpg) October 13, 2021


