ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ತನ್ನ ಹಿಂದಿನ ಮೈತ್ರಿ ಪಕ್ಷವಾದ ಬಿಜೆಪಿ ಮೇಲೆ ಹಿಂದುತ್ವದ ಬಗ್ಗೆ ವಾಗ್ದಾಳಿ ನಡೆಸಿದ್ದರು, ಇದೀಗ ಮತ್ತೇ ಉಭಯ ಪಕ್ಷಗಳ ನಡುವೆ ವಾಗ್ದಾಳಿ ಮುಂದುವರೆದಿದ್ದು, ಇದೀಗ ಶಿವಸೇನೆಯ ಸಂಸದ ಸಂಜಯ್ ರಾವತ್, ಬಿಜೆಪಿ ಸಾವರ್ಕರ್‌ಗೆ ಇನ್ನೂ ಯಾಕೆ ಭಾರತ ರತ್ನ ನೀಡಿಲ್ಲ? ಎಂದು ಪ್ರಶ್ನಿಸಿದ್ದಾರೆ.
ಸಾವರ್ಕರ್ ಅವರನ್ನು ಅವಮಾನಿಸಿದ ಕಾಂಗ್ರೆಸ್ ಜೊತೆ ಶಿವಸೇನೆ ಮೈತ್ರಿ ಮಾಡಿಕೊಂಡಿದೆ ಎಂದು ಬಿಜೆಪಿ ನಾಯಕರು ಹಿಂದುತ್ವ ಕುರಿತು ಶಿವಸೇನೆಯನ್ನು ತರಾಟೆಗೆ ಪಡೆದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಶಿವಸೇನೆ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ದೇಶದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನವನ್ನು ಸಾವರ್ಕರ್‌ಗೆ ಏಕೆ ನೀಡುತ್ತಿಲ್ಲ ಕೇಳಿದೆ.
ಇದನ್ನೂ ಓದಿ: ಅರ್ನಾಬ್ ಗೋಸ್ವಾಮಿ ಕೈಮುಗಿದು ಕ್ಷಮೆಯಾಚಿಸಲಿ: ಶಿವಸೇನೆ ಮುಖಂಡನ ಆಗ್ರಹ
“ಶಿವಸೇನೆಯ ದಸರಾ ರ್‍ಯಾಲಿಯಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸಾವರ್ಕರ್ ಹಿಂದುತ್ವದ ಬಗ್ಗೆ ಪಾಠ ಮಾಡಿದರು. ರ್‍ಯಾಲಿಯಲ್ಲಿ ಸಾವರ್ಕರ್ ಬಗ್ಗೆ ಒಂದೇ ಒಂದು ಪ್ರಶಂಸೆ ಯಾಕೆ ಆಡಲಿಲ್ಲ ಎಂಬುದು ಪ್ರಶ್ನೆ. ಬಹುಶಃ, ಸಾವರ್ಕರ್ ವಿರುದ್ಧ ಪದೇ ಪದೇ ಅವಹೇಳನಕಾರಿ ಹೇಳಿಕೆಗಳನ್ನು ಬಳಸುತ್ತಿರುವ ತನ್ನ ಹೊಸ ಸ್ನೇಹಿತರ ಬಗ್ಗೆ ಅವರು ಹೆದರುತ್ತಿದ್ದಾರೆ” ಎಂದು ಬಿಜೆಪಿ ವಕ್ತಾರ ರಾಮ್ ಕದಮ್ ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಶಿವಸೇನೆ ಮುಖ್ಯ ವಕ್ತಾರ ಸಂಜಯ್ ರಾವತ್, ”ಸಾವರ್ಕರ್ ಬಗ್ಗೆ ಪಕ್ಷದ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಅವರನ್ನು ಅವಮಾನಿಸಲು ಅನುಚಿತವಾದ ಕಾಮೆಂಟ್ ಮಾಡಿದಾಗಲೆಲ್ಲಾ ನಾವು ಸಾವರ್ಕರ್ ಪರವಾಗಿ ನಿಂತಿದ್ದೇವೆ. ನಾವು ಯಾವಾಗಲೂ ಅವರೊಂದಿಗೆ ಭಾವನಾತ್ಮಕ ಸಂಪರ್ಕವನ್ನು ಹೊಂದಿದ್ದೇವೆ. ನಮ್ಮನ್ನು ಟೀಕಿಸುವವರು ಈಗ ಆರು ವರ್ಷದಿಂದ ಅಧಿಕಾರದಲ್ಲಿದ್ದಾರೆ, ಅವರಿಗೆ ಭಾರತ್ ರತ್ನವನ್ನು ಯಾಕೆ ನೀಡಲಿಲ್ಲ ಎಂದು ಉತ್ತರಿಸಬೇಕು” ಎಂದು ಹೇಳಿದರು.
ಮುಖ್ಯಮಂತ್ರಿಯಾದ ನಂತರ ನೀಡಿದ ಮೊಲದ ದಸರಾ ರ್‍ಯಾಲಿಯಲ್ಲಿ ಮಾತನಾಡಿದ ಉದ್ದವ್ ಠಾಕ್ರೆ, ತನ್ನ ತಂದೆ ಬಾಲಾಸಾಹೇಬ್ ಠಾಕ್ರೆ ಅವರ ಹಿಂದುತ್ವವೆಂದರೆ ಘಂಟೆಗಳು ಮತ್ತು ಪಾತ್ರೆಗಳನ್ನು ಬಡಿಯುವುದಲ್ಲ ಎಂದು ಅವರು ಬಿಜೆಪಿಯನ್ನು ಟೀಕಿಸಿದ್ದರು.
ಇದನ್ನೂ ಓದಿ: ಉಚಿತ ಕೊರೊನಾ ಲಸಿಕೆ ವಿವಾದ: ಬಿಹಾರೇತರ ರಾಜ್ಯದವರು ಬಾಂಗ್ಲಾದೇಶದವರೇ- ಶಿವಸೇನೆ ಪ್ರಶ್ನೆ
