ಭಾರತ ಮತ್ತು ಚೀನಾ ನಡುವೆ ಪೂರ್ವ ಲಡಾಖ್‌ನಲ್ಲಿ ನಡೆದ ಸೇನಾ ಸಂಘರ್ಷದಿಂದಾಗಿ ದ್ವಿಪಕ್ಷೀಯ ಸಂಬಂಧಗಳಲ್ಲಿ ಬಿರುಕು ಬಿಟ್ಟಿದ್ದರೂ, ಉಭಯ ದೇಶಗಳ ವ್ಯಾಪಾರದ ಪ್ರಮಾಣವು ಈ ವರ್ಷ ದಾಖಲೆ ಮೊತ್ತ 10 ಸಾವಿರ ಕೋಟಿ ಡಾಲರ್ ದಾಟಲಿದೆ ಎಂದು ಅಂದಾಜಿಸಲಾಗಿದೆ. ಈ ವರ್ಷದ ಒಂಬತ್ತು ತಿಂಗಳಲ್ಲಿ ವ್ಯಾಪಾರದ ಒಟ್ಟು ಮೊತ್ತವು ಈಗಾಗಲೇ 9 ಸಾವಿರ ಕೋಟಿ ಡಾಲರ್ ತಲುಪಿದೆ ಎಂದು ವರದಿಗಳು ತಿಳಿಸಿದೆ.
2021 ರ ಮೊದಲ ಮೂರು ತ್ರೈಮಾಸಿಕಗಳಲ್ಲಿ ಚೀನಾದ ಒಟ್ಟು ಆಮದು ಮತ್ತು ರಫ್ತುಗಳು ವರ್ಷದಿಂದ ವರ್ಷಕ್ಕೆ 22.7% ಹೆಚ್ಚಾಗಿದ್ದು 28.33 ಟ್ರಿಲಿಯನ್ ಯುವಾನ್‌ಗೆ (ಸುಮಾರು 4.38 ಲಕ್ಷ ಕೋಟಿ ಡಾಲರ್) ತಲುಪಿದೆ ಎಂದು ಅಧಿಕೃತ ಅಂಕಿಅಂಶಗಳು ಬುಧವಾರ ಹೇಳಿವೆ.
ಇದನ್ನೂ ಓದಿ: ಪೂರ್ವ ಲಡಾಖ್‌ನಲ್ಲಿ ಸೇನಾ ನಿಯೋಜನೆ ಹೆಚ್ಚಿಸಿದ ಚೀನಾ: ಭಾರತೀಯ ಸೇನಾ ಮುಖ್ಯಸ್ಥರ ಹೇಳಿಕೆ
ಈ ಅಂಕಿ-ಅಂಶವು 2019 ರ ಸಾಂಕ್ರಾಮಿಕದ ಮುಂಚಿನ ಮಟ್ಟಕ್ಕಿಂತ 23.4% ದಷ್ಟು ಹೆಚ್ಚಳವಾಗಿದೆ ಎಂದು ಜನರಲ್ ಅಡ್ಮಿನಿಸ್ಟ್ರೇಷನ್ ಆಫ್ ಕಸ್ಟಮ್ಸ್ ಹೇಳಿದೆ.
ಸೆಪ್ಟೆಂಬರ್ ಅಂತ್ಯದ ವೇಳೆಗೆ ಭಾರತ ಮತ್ತು ಚೀನಾ ನಡುವಿನ ದ್ವಿಪಕ್ಷೀಯ ವ್ಯಾಪಾರವು 9 ಸಾವಿರ ಕೋಟಿ ಡಾಲರ್ ತಲುಪಿದ್ದು, ಇದು ಕಳದೆ ವರ್ಷಕ್ಕಿಂತ 49.3% ಹೆಚ್ಚಾಗಿದೆ ಎಂದು ಚೀನಾ ಕಸ್ಟಮ್ಸ್ ಬಿಡುಗಡೆ ಮಾಡಿದ ಒಂಬತ್ತು ತಿಂಗಳ ಅಂಕಿಅಂಶಗಳು ಹೇಳಿದೆ.
ಭಾರತಕ್ಕೆ ಚೀನಾದ ರಫ್ತುಗಳು 6,846 ಕೋಟಿ ಡಾಲರ್‌ಗೆ ಏರಿಕೆಯಾಗಿದ್ದು, ಈ ಏರಿಕೆ 51.7% ರಷ್ಟಾಗುತ್ತದೆ. ಭಾರತೀಯ ರಫ್ತುಗಳು ಒಟ್ಟು 2,191 ಕೋಟಿ ಡಾಲರ್‌ಗೆ ತಲುಪಿದ್ದು, 42.5% ಏರಿಕೆಯೊಂದಿಗೆ ಗಮನಾರ್ಹ ಹೆಚ್ಚಳವನ್ನು ದಾಖಲಿಸಿದೆ.
ಬಿಜೆಪಿ ಆಡಳಿತ ಮತ್ತು ಅವರ ಬೆಂಬಲಿಗರು ಹಲವಾರು ವರ್ಷದಿಂದಲೂ ಚೀನಾ ವಸ್ತುಗಳನ್ನು ಬ್ಯಾನ್ ಮಾಡುವಂತೆ ಕರೆನೀಡುತ್ತಿದ್ದರೂ, ಬಿಜೆಪಿ ಆಡಳಿತದಲ್ಲೇ ಚೀನಾದೊಂದಿಗೆ ವ್ಯಾಪಾರ ಹೆಚ್ಚುತ್ತಿರುವುದು ಗಮನಾರ್ಹವಾಗಿದೆ.
ಇದನ್ನೂ ಓದಿ: ಚೀನಾ+ಪಾಕಿಸ್ತಾನ+ಮಿ.56″= ಭಾರತದ ಪ್ರದೇಶಗಳ ಮೇಲೆ ಚೀನಾ ಅತಿಕ್ರಮಣ: ರಾಹುಲ್ ಗಾಂಧಿ


