Homeಮುಖಪುಟಪಟಾಕಿ ಬ್ಯಾನ್: 4 ರಾಜ್ಯದ ಮುಖ್ಯಮಂತ್ರಿಗಳಿಗೆ ಪತ್ರ ಬರೆದ ತಮಿಳುನಾಡು ಸಿಎಂ ಸ್ಟಾಲಿನ್

ಪಟಾಕಿ ಬ್ಯಾನ್: 4 ರಾಜ್ಯದ ಮುಖ್ಯಮಂತ್ರಿಗಳಿಗೆ ಪತ್ರ ಬರೆದ ತಮಿಳುನಾಡು ಸಿಎಂ ಸ್ಟಾಲಿನ್

- Advertisement -
- Advertisement -

ದೆಹಲಿ, ಒಡಿಶಾ, ರಾಜಸ್ಥಾನ ಮತ್ತು ಹರಿಯಾಣದ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್, ಈ ರಾಜ್ಯಗಳು ಜಾರಿಗೆ ತಂದಿರುವ ಪಟಾಕಿ ನಿಷೇಧದ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮನವಿ ಮಾಡಿದ್ದಾರೆ. ಸುಪ್ರೀಂ ಕೋರ್ಟ್ ಮತ್ತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಸೂಚಿಸಿರುವ ನಿರ್ದೇಶನಗಳಿಗೆ ಅನುಸಾರವಾಗಿ ಪಟಾಕಿ ಮಾರಾಟಕ್ಕೆ ಅನುಮತಿ ನೀಡುವಂತೆ ಸ್ಟಾಲಿನ್ ಕೇಳಿಕೊಂಡಿದ್ದಾರೆ.

ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್‌ಎಂಇ) ವಲಯದ ಮೇಲೆ ಕೋವಿಡ್ -19 ಸಾಂಕ್ರಾಮಿಕ ಬೀರಿರುವ ಕೆಟ್ಟ ಪರಿಣಾಮದ ಬಗ್ಗೆ ತನ್ನ ಕಳವಳವನ್ನು ವ್ಯಕ್ತಪಡಿಸಿದ ಸ್ಟಾಲಿನ್, ಪಟಾಕಿ ಉದ್ಯಮವನ್ನು ಅವಲಂಬಿಸಿರುವ ಸುಮಾರು ಎಂಟು ಲಕ್ಷ ಕಾರ್ಮಿಕರ ಜೀವನವು ಪಟಾಕಿ ನಿಷೇಧದಿಂದಾಗಿ ಸಂಕಷ್ಟದಲ್ಲಿದೆ ಎಂದಿದ್ದಾರೆ.

ಪಟಾಕಿ ಬ್ಯಾನ್ ಮಾಡಿರುವ ದೆಹಲಿ, ಒಡಿಶಾ, ರಾಜಸ್ಥಾನ ಮತ್ತು ಹರಿಯಾಣ ರಾಜ್ಯಗಳ ವಾಯುಮಾಲಿನ್ಯದ ಕಾಳಜಿ ನನಗೆ ಅರ್ಥವಾಗುತ್ತದೆ. ಮಾನ್ಯ ಸುಪ್ರೀಂ ಕೋರ್ಟ್ ಈಗಾಗಲೇ ಕೆಲವು ವರ್ಗಗಳ ಮಾಲಿನ್ಯಕಾರಕ ಪಟಾಕಿಗಳನ್ನು ನಿಷೇಧಿಸಿದೆ. ಹಾಗಾಗಿ ಈಗ, ಕಡಿಮೆ ಪ್ರಮಾಣದ ಹೊರಸೂಸುವಿಕೆಯ ಹಸಿರು ಪಟಾಕಿಗಳನ್ನು ತಯಾರಿಸಲಾಗುತ್ತಿದೆ ಎಂಬುದನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ. ಆದ್ದರಿಂದ ಪಟಾಕಿಗಳ ಮೇಲಿನ ಸಂಪೂರ್ಣ ನಿಷೇಧವು ಸಮಂಜಸವಲ್ಲ ಎಂದು ಸ್ಟಾಲಿನ್ ಬರೆದಿದ್ದಾರೆ.

ಇದೇ ರೀತಿಯಾಗಿ ಉಳಿದ ರಾಜ್ಯಗಳು ಸಹ ಬ್ಯಾನ್ ಮಾಡಿದರೆ ಇಡೀ ಉದ್ಯಮವನ್ನೆ ಮುಚ್ಚಬೇಕಾದ ಪರಿಸ್ಥಿತಿ ಬರುತ್ತದೆ. ಇದರಿಂದ ಸುಮಾರು 8 ಲಕ್ಷ ಜನರ ಜೀವನೋಪಾಯ ಅಪಾಯಕ್ಕೆ ಸಿಲುಕಲಿದೆ. ಪಟಾಕಿಗಳನ್ನು ಸಿಡಿಸುವುದು ಭಾರತೀಯ ಹಬ್ಬಗಳ, ವಿಶೇಷವಾಗಿ ದೀಪಾವಳಿಯ ಅವಿಭಾಜ್ಯ ಅಂಗವಾಗಿದೆ ಎಂದು ನೀವು ಕೂಡ ಒಪ್ಪುತ್ತೀರಿ. ಪರಿಸರ, ಜೀವನೋಪಾಯ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಸಮರ್ಪಕ ಗೌರವ ನೀಡುವ ಸಮತೋಲಿತ ವಿಧಾನವು ಸಾಧ್ಯವಿದೆ ಮತ್ತು ಅಗತ್ಯವಾಗಿದೆ ಎಂದು ಸ್ಟಾಲಿನ್ ಪ್ರತಿಪಾದಿಸಿದ್ದಾರೆ.

ನಗರಗಳಲ್ಲಿ ಕೋವಿಡ್ -19 ಕಾರಣಕ್ಕೆ ಎಲ್ಲಾ ಪಟಾಕಿಗಳ ಸಂಪೂರ್ಣ ನಿಷೇಧಿಸಿರುವ ಎನ್‌ಜಿಟಿಯ ನಿಲುವು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಜುಲೈನಲ್ಲಿ ವಜಾಗೊಳಿಸಿತ್ತು. ಜೊತೆಗೆ ಆಯಾ ನಗರಗಳಲ್ಲಿ ಗಾಳಿಯ ಗುಣಮಟ್ಟದ ಸೂಚ್ಯಂಕದ (AQI) ವರ್ಗವನ್ನು ಆಧರಿಸಿ ಪಟಾಕಿಗಳ ಮಾರಾಟ ಮತ್ತು ಬಳಕೆಗೆ ಅಧಿಕಾರಿಗಳು ಅವಕಾಶ ನೀಡಬಹುದು ಎಂದು ಹೇಳಿತ್ತು. ಆದರೂ ಪಟಾಕಿ ಉತ್ಪಾದನೆಗೆ ಅನುಮತಿ ನೀಡಲಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಪಟಾಕಿ ಸಿಡಿಸುವ ಮೂಲಕ ಆಚರಿಸಲು ಬಯಸುವ ಜನರು AQI ಆಧರಿಸಿ ಅಧಿಕಾರಿಗಳ ಅನುಮತಿಯೊಂದಿಗೆ ಸಿಡಿಸಬಹುದು ಎಂದು ನ್ಯಾಯಾಲಯ ಹೇಳಿದೆ.

ತಮಿಳುನಾಡಿನ ಶಿವಕಾಶಿ ನಗರವು ಅತಿ ಹೆಚ್ಚು ಪಟಾಕಿ ತಯಾರಿಸುವ ಕಾರ್ಖಾನೆಗಳನ್ನು ಹೊಂದಿದೆ. ಇಲ್ಲಿ ತಯಾರಾಗುವ ಪಟಾಕಿಗಳು ದೇಶದ ಹಲವು ರಾಜ್ಯಗಳಿಗೆ ರಫ್ತಾಗುತ್ತವೆ.


ಇದನ್ನೂ ಓದಿ: ಹಸಿರು ಪಟಾಕಿಗಳು ಎಂದರೇನು..? ಅವು ಮಾಲಿನ್ಯಕಾರಕವಲ್ಲವೇ..?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...