ತುಮಕೂರು ಜಿಲ್ಲೆಯ ಗುಬ್ಬಿ ಬಸ್ ನಿಲ್ದಾಣದಿಂದ ಕೆಎಸ್‌ಆರ್‌ಟಿಸಿ ಬಸ್ಸೊಂದನ್ನು ಕಳ್ಳತನ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಳ್ಳರು ಬಸ್ಸನ್ನು ನಿಲ್ದಾಣದಿಂದ ಕದ್ದು ಸುಮಾರು ಮೂವತ್ತು ಕಿಲೋ ಮೀಟರ್ ಓಡಿಸಿ ನಂತರ ಅದರಲ್ಲಿ ಇರುವ ಡೀಸೆಲ್ ಅನ್ನು ಕಳ್ಳತನ ಮಾಡಿ, ವಾಹನವನ್ನು ಅಲ್ಲೆ ಬಿಟ್ಟು ಪರಾರಿಯಾಗಿದ್ದಾರೆ.
ಸೋಮವಾರ ಮುಂಜಾನೆ ಗುಬ್ಬಿ ಬಸ್ ನಿಲ್ದಾಣದಿಂದ ಕೆಎಸ್‌ಆರ್‌ಟಿಸಿ ಬಸ್ ಕಳವಾಗಿದೆ. ಬಸ್ ಚಾಲಕ ಹನುಮಂತರಾಯ ಭಾನುವಾರ ರಾತ್ರಿ 9.40 ರ ಸುಮಾರಿಗೆ ವಾಹನ ನಿಲ್ಲಿಸಿ (ಕೆಎ -06 ಎಫ್ -0888) ಕೆಎಸ್‌ಆರ್‌ಟಿಸಿ ವಸತಿ ನಿಲಯದಲ್ಲಿ ಮಲಗಲು ಹೋಗಿದ್ದರು. ಸೋಮವಾರ ಬೆಳಿಗ್ಗೆ 6 ಗಂಟೆಗೆ ಮತ್ತೆ ಗುಬ್ಬಿ ಬಸ್ ನಿಲ್ದಾಣಕ್ಕೆ ಹಿಂತಿರುಗಿದಾಗ, ಡಿಪೋದಿಂದ ಬಸ್ ಕಾಣೆಯಾಗಿದೆ. ಇದರ ನಂತರ ಅವರು ಪೊಲೀಸ್ ಠಾಣೆಗೆ ತೆರಳಿ ಘಟನೆ ಬಗ್ಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ಡ್ರಗ್ಸ್ ಪ್ರಕರಣ: ಆರ್ಯನ್ ಖಾನ್‌ಗೆ ಜಾಮೀನು ನಿರಾಕರಣೆ
ಬಸ್ಸಿನಲ್ಲಿ GPRS ವ್ಯವಸ್ಥೆ ಇರುವುದರಿಂದ ಗುಬ್ಬಿ ಬಸ್ ನಿಲ್ದಾಣದಿಂದ ಸುಮಾರು 30 ಕಿಮೀ ದೂರದಲ್ಲಿರುವ ಜನೇನಹಳ್ಳಿ ಬಳಿ ವಾಹನವನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಕಳ್ಳರು ಡೀಸೆಲ್ ಕದ್ದು ಸ್ಥಳದಿಂದ ಪರಾರಿಯಾಗಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ಕಳ್ಳತನ ಹೆಚ್ಚಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. “ರಾತ್ರಿ ಸಮಯದಲ್ಲಿ ತಮ್ಮ ಪಾರ್ಕಿಂಗ್ ಪ್ರದೇಶಗಳಲ್ಲಿ ಗಸ್ತು ತಿರುಗಲು ವಸತಿ ಸಂಕೀರ್ಣಗಳಲ್ಲಿರುವ ಜನರು ನಮ್ಮನ್ನು ವಿನಂತಿಸುತ್ತಿದ್ದಾರೆ. ಈ ಹಿಂದೆ, ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿಯಂತಹ ನಗರಗಳಲ್ಲಿ ಇಂಧನ ಕಳ್ಳತನ ಹೆಚ್ಚಾಗಿ ನಡೆಯುತ್ತಿತ್ತು. ಆದರೆ ಈಗ ಇಂತಹ ಪ್ರಕರಣಗಳು ಸಣ್ಣ ಪಟ್ಟಣಗಳಿಂದಲೂ ವರದಿಯಾಗುತ್ತಿವೆ” ಎಂದು ಅವರು ಹೇಳಿದ್ದಾರೆ.
ಈ ವರ್ಷದ ಆಗಸ್ಟ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) ನಿಂದ ಡೀಸೆಲ್ ಕದಿಯುವ ಗ್ಯಾಂಗ್ ಅನ್ನು ಬಂಧಿಸಿದ್ದರು. ಈ ಗ್ಯಾಂಗ್ ಎಂಆರ್‌ಪಿಎಲ್‌ನ ಮುಖ್ಯ ಪೈಪ್‌ಲೈನ್‌ಗೆ ರಂಧ್ರವನ್ನು ಕೊರೆದು ಅಲ್ಲಿಂದ ಡೀಸೆಲ್ ಕದಿಯುತ್ತಿದ್ದರು. ಈ ಪ್ರಕರಣದಲ್ಲಿ ತಂಡದ ಆರು ಸದಸ್ಯರನ್ನು ಬಂಧಿಸಲಾಗಿದೆ.
ಬುಧವಾರದ ವೇಳೆಗೆ, ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 109.89 ರೂಪಾಯಿ ಆಗಿದ್ದರೆ, ಡೀಸೆಲ್ ಬೆಲೆ 100.75 ರೂಪಾಯಿಯಾಗಿದೆ.
ಇದನ್ನೂ ಓದಿ: ಚೀನಾ ಮತ್ತು ತಾಲಿಬಾನ್‌ಗೆ ಹೆದರಿದ್ದಾಯಿತು, ಮುಂದೆ ಮಾಲ್ಡೀವ್?: BJP ಸಂಸದ ಸುಬ್ರಮಣಿಯನ್ ಸ್ವಾಮಿ



[email protected]