‘ಮತಾಂತರ ಮಾಡಲು ಬಂದವರ ತಲೆ ತೆಗೆಯಿರಿ. ನಾನು ಸಂತನಾಗಿದ್ದರೂ ದ್ವೇಷವನ್ನು ಹರಡುತ್ತಿದ್ದೇನೆ ಎಂದು ನೀವು ಹೇಳಬಹುದು. ಆದರೆ ಕೆಲವೊಮ್ಮೆ ಬೆಂಕಿಯನ್ನು ಹೊತ್ತಿಸುವುದು ಮುಖ್ಯ. ನಾನು ನಿಮಗೆ ಹೇಳುತ್ತಿದ್ದೇನೆ, ನಿಮ್ಮ ಮನೆ, ರಸ್ತೆ, ನೆರೆಹೊರೆ, ಹಳ್ಳಿಗೆ ಯಾರೇ ಬಂದರು ಅವರನ್ನು ಕ್ಷಮಿಸಬೇಡಿ’ ಎಂದು ಛತ್ತೀಸ್ ಗಡದ ಸ್ವಾಮಿ ಪರಮಾತ್ಮಾನಂದ ಅಲ್ಪಸಂಖ್ಯಾತರ ಹತ್ಯೆಗೆ ಬಹಿರಂಗವಾಗಿ ಕರೆ ನೀಡಿರುವ ವಿಡಿಯೋ ಇತ್ತೀಚಿಗೆ ವೈರಲ್ ಆಗಿದೆ.
ಸಮಾನ ಮನಸ್ಕ ಹಿಂದುತ್ವವಾದಿಗಳ ಒಕ್ಕೂಟ, ಸರ್ವ ಸನಾತನ ಹಿಂದು ರಕ್ಷಾ ಮಂಚ್ ಅಕ್ಟೋಬರ್ 1ರಂದು ಆಯೋಜಿಸಿದ್ದ ‘ಧಾರ್ಮಿಕ ಮತಾಂತರ ನಿಲ್ಲಿಸಿ’ (ಬಂದ್ ಕರೋ ಧರ್ಮಾಂತರನ್) ಪ್ರತಿಭಟನೆಯಲ್ಲಿ ಸ್ವಾಮಿ ಪರಮಾತ್ಮಾನಂದ ಈ ದ್ವೇಷ ಭಾಷಣ ಮಾಡುವಾಗ ಛತ್ತೀಸ್ ಗಡದ ಬಿಜೆಪಿಯ ಪ್ರಭಾವಿ ನಾಯಕರಾದ ರಾಮ್ವಿಚಾರ್ ನೇತಮ್, ನಂದಕುಮಾರ್ ಸಾಯಿ ಮತ್ತು ಬಿಜೆಪಿಯ ವಕ್ತಾರ ಅನುರಾಗ್ ಸಿಂಗ್ ದೇವ್ ಸೇರಿದಂತೆ ಬಿಜೆಪಿಯ ಹಿರಿಯ ಮುಖಂಡರು ವೇದಿಕೆಯಲ್ಲಿ ಹಾಜರಿದ್ದರು ಎಂದು ದಿ ವೈರ್ ವರದಿ ಮಾಡಿದೆ.
‘ನಾನೊಬ್ಬ ಸಂತ. ನಾನು ಹೆದರುವುದಿಲ್ಲ. ನಾನು ನಿಮಗೆ ಸ್ಪಷ್ಟವಾಗಿ ಹೇಳುತ್ತೇನೆ. ಮನೆಯಲ್ಲಿ ಲಾಠಿ ಇಟ್ಟುಕೊಳ್ಳಿ, ನಮ್ಮ ಹಳ್ಳಿಗಳಲ್ಲಿ ಜನರು ಕೈ ಕೊಡಲಿ ಇಟ್ಟಕೊಳ್ಳುತ್ತಾರೆ. ಅವರು ಕೊಡಲಿಗಳನ್ನು ಏಕೆ ಇಟ್ಟುಕೊಳ್ಳುತ್ತಾರೆ? ನೀವು ನಿಮ್ಮ ಹತ್ತಿರ ಪರಶು ಇಟ್ಟುಕೊಳ್ಳಿ’ ಎಂದು ಕೋಮು ದ್ವೇಷ ಕಾರಿದ್ದಾರೆ.
ಮುಂದುವರೆದು, ‘ನೀವೇಕೆ ಬಾವಿಗಾಗಿ ಸಾಗರವನ್ನು ತೊರೆಯುತ್ತೀರಿ? ಎಂದು ಮತಾಂತರಗೊಂಡ ಕ್ರೈಸ್ತರೊಂದಿಗೆ ಮೊದಲು ಸೌಜನ್ಯದೊಂದಿಗೆ ಕೇಳಲು ಬಯಸುತ್ತೇನೆ. ಬೇಡ ಎನ್ನುತ್ತೇನೆ, ಕೊನೆಗೆ ಕೊಲ್ಲುತ್ತೇನೆ ಎಂದು ನಿಲ್ಲು, ಪ್ರತಿಭಟಿಸು, ಕೊಲ್ಲು (ರೊಕೊ, ಫಿರ್ ಟೊಕೊ, ಫಿರ್ ಥೋಕೊ) ನಿಯಮವನ್ನು ಪಾಲಿಸಿ’ ಎಂದಿದ್ದಾರೆ.
ವೀಡಿಯೋದಲ್ಲಿ, ಮಾಜಿ ಸಂಸದೆ ಮತ್ತು ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗದ ಮಾಜಿ ಅಧ್ಯಕ್ಷ ನಂದ ಕುಮಾರ್ ಸಾಯಿ ಪರಮಾತ್ಮಾನಂದರ ಭಾಷಣಕ್ಕೆ ನಗುತ್ತಾ, ಚಪ್ಪಾಳೆ ತಟ್ಟುವುದು, ಅವರ ಮಾತುಗಳಿಗೆ ಒಪ್ಪಿಗೆ ಸೂಚಿಸಿರುವಂತೆ ಕಾಣುವುದನ್ನು ನೋಡಬಹುದು. ವೇದಿಕೆಯಲ್ಲಿ ನಾಯಕರೆಲ್ಲರೂ ಬಿಲ್ಲು, ಬಾಣ ಮತ್ತು ಈಟಿಯೊಂದಿಗೆ ನಿಂತು ಫೋಟೊ ತೆಗೆಸಿಕೊಂಡಿದ್ದಾರೆ.
ಸಂಸ್ಕೃತ ಮಂಡಳಿಯ ಮಾಜಿ ಮುಖ್ಯಸ್ಥ ಪರಮಾತ್ಮಾನಂದರ ಛತ್ತೀಸ್ ಗಡದ ಪ್ರಮುಖ ಹಿಂದುತ್ವವಾದಿ ನಾಯಕರಾಗಿದ್ದು, ಅಲ್ಪಸಂಖ್ಯಾತರ ವಿರುದ್ಧ ಹಿಂಸಾತ್ಮಕ ಹೇಳಿಕೆಗಳಿಗೆ ಕುಖ್ಯಾತರಾಗಿದ್ದಾರೆ. ಈ ಹಿಂದೆ ಹಸು ಕಳ್ಳ ಸಾಗಣೆದಾರರನ್ನು ಕೊಲ್ಲುವವರನ್ನು ಅಭಿನಂದಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದರು. 2017ರಲ್ಲಿ ‘ಗೋವುಗಳನ್ನು ಕೊಲ್ಲುವವರನ್ನು ಗಾಜಿನ ಗುಂಡುಗಳಿಂದ ಹೊಡೆದು ಸಾಯಿಸಬೇಕು’ ಎಂದು ಹೇಳಿಕೆ ನೀಡಿದ್ದರು.
ಸಮಾನ ಮನಸ್ಕ ಹಿಂದುತ್ವವಾದಿಗಳ ಒಕ್ಕೂಟ ಸರ್ವ ಸನಾತನ ಹಿಂದು ರಕ್ಷಾ ಮಂಚ್, ಸುಕ್ಮಾದ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಸಲ್ಲಿಸಿದ್ದು, ಕಾನೂನು ಬಾಹಿರ’ ಧಾರ್ಮಿಕ ಮತಾಂತರವನ್ನು ತಡೆಗಟ್ಟಲು, ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಕ್ರಿಶ್ಚಿಯನ್ ಮಿಶನರಿಗಳು ಹಾಗೂ ಇತ್ತೀಚೆಗೆ ಮತಾಂತರಗೊಂಡ ಬುಡಕಟ್ಟು ಜನರ ಮೇಲೆ ಮೇಲೆ ಕಣ್ಣಿಡುವಂತೆ ಮನವಿ ಮಾಡಿತ್ತು.
ಇದನ್ನೂ ಓದಿ: ಬೆಳಗಾವಿಯಲ್ಲಿ ತಲವಾರು ಮೆರವಣಿಗೆ: ಬಜರಂಗದಳ ಸದಸ್ಯರ ವಿರುದ್ಧ ದೂರು


