“ಒಬ್ಬ ಮೆಂಟರ್ ಹೆಚ್ಚೆಂದರೆ ಸಹಾಯ ಮಾಡಬಹುದು, ಆದರೆ ಉತ್ತಮ ಪ್ರದರ್ಶನ ನೀಡಿ ಆಟಗಾರರೇ ನಿಜವಾದ ಟಾಸ್ಕ್ ಎದುರಿಸಬೇಕಾಗುತ್ತದೆ” ಎಂದು ಖ್ಯಾತ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಹೇಳಿದ್ದಾರೆ.
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಟಿ-20 ವಿಶ್ವಕಪ್ ತಂಡದ ಮೆಂಟರ್ ಆಗಿ ನೇಮಕ ಮಾಡಿರುವ ಕುರಿತು ಆಜ್‌ತಕ್ ಮಾಧ್ಯಮದೊಂದಿಗೆ ಗವಾಸ್ಕರ್ ಹಂಚಿಕೊಂಡಿರುವ ಸಂಗತಿಗಳನ್ನು ಎನ್‌ಡಿಟಿವಿ ವರದಿ ಮಾಡಿದೆ.
ಭಾನುವಾರ ಟಿ-20 ವಿಶ್ವಕಪ್ ಸೂಪರ್ 12ರ ಹಂತದ ಪಂದ್ಯಾಟದಲ್ಲಿ ಪಾಕಿಸ್ತಾನದ ವಿರುದ್ಧ ಕೊಹ್ಲಿ ಪಡೆ ಸೆಣೆಸಾಡಲಿದೆ. “ಈ ರೂಪದ ಪಂದ್ಯಾವಳಿಯಲ್ಲಿ ಕೊಹ್ಲಿ ಪಡೆ ಸಂಪೂರ್ಣ ಮೆಚ್ಚಿನದ್ದು ಎಂದು ಹೇಳಲು ಸಾಧ್ಯವಿಲ್ಲ. ಮೆಂಟರ್ ಹೆಚ್ಚಿನದ್ದೇನೂ ಮಾಡಲೂ ಆಗದು” ಎಂದು ಗವಾಸ್ಕರ್ ಎಚ್ಚರಿಸಿದ್ದಾರೆ.
“ಹೌದು, ಡ್ರೆಸ್ಸಿಂಗ್ ರೂಮಿನಲ್ಲಿ ಈ ವೇಗದ ಆಟಕ್ಕೆ ತಯಾರಾಗಲು ಮೆಂಟರ್ ನಿಮಗೆ ಸಹಾಯ ಮಾಡಬಹುದು, ಅಗತ್ಯವಿದ್ದರೆ ತಂತ್ರಗಾರಿಕೆಯನ್ನು ಎಣೆಯಲು ಸಹಾಯ ಮಾಡಬಹುದು” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
“ಟೈಮ್‌ಔಟ್ ಸಮಯದಲ್ಲಿ ಬ್ಯಾಟ್‌ಮನ್‌ಗಳು ಮತ್ತು ಬೌಲರ್‌ಗಳೊಂದಿಗೆ ಅವರು (ಮೆಂಟರ್) ಮಾತನಾಡಬಹುದು, ಹೀಗಾಗಿ ಧೋನಿಯವರ ನೇಮಕ ಒಳ್ಳೆಯದ್ದಾಗಿದೆ. ಆದರೆ ಧೋನಿ ಡ್ರೆಸ್ಸಿಂಗ್ ರೂಮಿನಲ್ಲಿ ಇರುತ್ತಾರೆ. ಆಟಗಾರರು ಮೈದಾನದಲ್ಲಿ ನಿಜವಾದ ಕೆಲಸವನ್ನು ನಿರ್ವಹಿಸಬೇಕು. ಆಟಗಾರರು ಒತ್ತಡವನ್ನು ಹೇಗೆ ನಿಭಾಯಿಸುತ್ತಾರೆ ಎಂಬುದರ ಮೇಲೆ ಫಲಿತಾಂಶ ನಿರ್ಧಾರವಾಗಲಿದೆ” ಎಂದು ಗವಾಸ್ಕರ್ ತಿಳಿಸಿದ್ದಾರೆ.
ಟಿ-20 ಮಾದರಿಯ ಕ್ರಿಕೆಟ್ ನಾಯಕತ್ವವನ್ನು ಬಿಡುವುದಾಗಿ ವಿರಾಟ್ ಕೊಹ್ಲಿ ಘೋಷಿಸಿರುವುದರಿಂದ ಅವರ ಮೇಲಿನ ಒತ್ತಡ ಕಡಿಮೆಯಾಗಲಿದೆ ಎಂದಿರುವ ಸುನಿಲ್ ಗವಾಸ್ಕರ್, “ನೀವು ನಾಯಕನಾಗಿದ್ದಾಗ ನಿಮ್ಮ ಬಗ್ಗೆ ಮಾತ್ರ ಯೋಚಿಸಲು ಸಾಧ್ಯವಿಲ್ಲ, ದಿಕ್ಕು ತಪ್ಪುತ್ತಿರುವ ಬ್ಯಾಟ್‌ಮನ್‌ಗಳೊಂದಿಗೆ ಅಥವಾ ಬೌಲರ್‌ರೊಂದಿಗೆ ತಂತ್ರಗಾರಿಕೆ ಎಣೆಯಬೇಕಾಗುತ್ತದೆ” ಎಂದಿದ್ದಾರೆ.
“ಇದೆಲ್ಲದರ ನಡುವೆ ತನ್ನ (ನಾಯಕ) ಫಾರ್ಮ್ ಬಗ್ಗೆ ನಿರ್ಲಕ್ಷ್ಯ ತಾಳಬೇಕಾಗುತ್ತದೆ. ನಿಮಗೆ ಈ ಒತ್ತಡ ಇಲ್ಲವಾದರೆ ನಿಮ್ಮ ಆಟದ ಬಗ್ಗೆ ನೀನು ಗಮನ ಹರಿಸಬಹುದು. ಟಿ-20 ವಿಶ್ವಕಪ್ ನಾಯಕತ್ವ ತೊರೆಯುತ್ತಿರುವ ವಿರಾಟ್‌ಗೆ ಇದು ವರದಾನವಾಗಲಿದೆ. ಕೊಹ್ಲಿ ಜವಾಬ್ದಾರಿಗಳ ಕುರಿತು ಹೆಚ್ಚು ಯೋಚಿಸುವ ಅಗತ್ಯವಿರುವುದಿಲ್ಲ. ಆದ್ದರಿಂದ ಕೊಹ್ಲಿಯವರು ತಮ್ಮದೇ ಆದ ಆಟದ ಮೇಲೆ ಗಮನಹರಿಸಬಹುದು ಮತ್ತು ಸಾಧ್ಯವಾದಷ್ಟು ರನ್ ಗಳಿಸಬಹುದು” ಎಂದು ಹೇಳಿದ್ದಾರೆ.
ವಿಶ್ವ ಕ್ರಿಕೆಟ್‌ನ ಅತ್ಯಂತ ಗೌರವಾನ್ವಿತರಲ್ಲಿ ಒಬ್ಬರಾದ ಗವಾಸ್ಕರ್, “ಪ್ರಾಥಮಿಕವಾಗಿ ತಂಡದ ಆಯ್ಕೆಯಲ್ಲಿ ಎಡವಿದ್ದೇ ಜಾಗತಿಕ ಟೂರ್ನಿಗಳಲ್ಲಿ ಭಾರತವು ನಾಕೌಟ್ ಪಂದ್ಯಗಳನ್ನು ಗೆಲ್ಲಲು ವಿಫಲವಾಗಲು ಕಾರಣ” ಎಂದು ಅಭಿಪ್ರಾಯಪಟ್ಟಿದ್ದಾರೆ.
“ಮಹತ್ವದ ಪಂದ್ಯಗಳಲ್ಲಿ ತಂಡದ ಸಂಯೋಜನೆಯೇ ಭಾರತದ ಸಮಸ್ಯೆಯಾಗಿದೆ. ನಾಕ್ ಔಟ್ ಪಂದ್ಯಗಳಲ್ಲಿ ಸರಿಯಾಗಿ ತಂಡವನ್ನು ಆಯ್ಕೆ ಮಾಡಿದ್ದರೆ, ಭಾರತವು ಕಡಿಮೆ ಸಮಸ್ಯೆಗಳನ್ನು ಎದುರಿಸುತ್ತಿತ್ತು. ಕೆಲವೊಮ್ಮೆ, ನಿಮ್ಮ ಚಿಂತನೆಯ ಪ್ರಕ್ರಿಯೆಯು ವಿಭಿನ್ನವಾಗಿರುತ್ತದೆ” ಎಂದು ಹೇಳಿದ್ದಾರೆ.
“ನಾಕ್‌ಔಟ್ ಮತ್ತು ಫೈನಲ್ ಪಂದ್ಯಗಳಲ್ಲಿ ಯಾವಾಗಲೂ ಮೊದಲು ಬ್ಯಾಟ್ ಮಾಡಬೇಕು. ರನ್ ಹೆಚ್ಚಿಸಬೇಕು. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಒಂದು ಓವರ್‌ಗೆ 7 ರನ್ ಗಳಿಸುವುದೂ ಕಷ್ಟವಾಗಿರುತ್ತದೆ. ನಾವು ಮೊದಲು ಬ್ಯಾಟ್ ಮಾಡದೆ ಚೇಸಿಂಗ್ ಮಾಡಿದಾಗ ಒಂದೆರಡು ವಿಕೆಟ್ ಕಳೆದುಕೊಂಡಾಗ ಗುರಿಮುಟ್ಟುವುದು ಕಷ್ಟವಾಗುತ್ತದೆ” ಎಂದು ಅವರು ಮಾರ್ಗದರ್ಶನ ನೀಡಿದ್ದಾರೆ.
ಇದನ್ನೂ ಓದಿರಿ: ಟಿ-20 ವಿಶ್ವಕಪ್ ನಂತರ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಲಿರುವ ರಾಹುಲ್ ದ್ರಾವಿಡ್


