ಹಾನಗಲ್‌, ಸಿಂಧಗಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ರಂಗೇರಿದ್ದು ಆಡಳಿತಾರೂಢ ಬಿಜೆಪಿ ಹಾಗೂ ವಿರೋಧ ಪಕ್ಷವಾದ ಕಾಂಗ್ರೆಸ್ ನಾಯಕರ ನಡುವೆ ಮಾತಿನ ಜಟಾಪಟಿ ನಡೆಯುತ್ತಿದೆ.

ಹಾನಗಲ್ ತಾಲ್ಲೂಕಿನ ಬಮ್ಮನಹಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, “ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ ಭಾಗ್ಯಗಳು ಜನರ ಮನೆ ಬಾಗಿಲಿಗೆ ತಲುಪದೇ ಮಧ್ಯವರ್ತಿಗಳ ಪಾಲಾದವು. ಅದಕ್ಕಾಗಿಯೇ ಕಾಂಗ್ರೆಸ್ ಪಕ್ಷವನ್ನು ರಾಜ್ಯದ ಜನ ತಿರಸ್ಕರಿಸಿ ಪ್ರತಿ ಪಕ್ಷದಲ್ಲಿ ಕೂರಿಸಿದ್ದಾರೆ” ಎಂದಿದ್ದಾರೆ.

ಅನ್ನಭಾಗ್ಯ ಯೋಜನೆ ಜಾರಿ ಮಾಡಿದ ನಂತರವೇ ಜನ ಅಕ್ಕಿ ನೋಡಿದ್ದಾರೆ ಎನ್ನುವ ರೀತಿಯಲ್ಲಿ ಸಿದ್ದರಾಮಯ್ಯ ಮಾತನಾಡುತ್ತಾರೆ. ಈ ಅಕ್ಕಿಯಲ್ಲಿ‌ ಕೇಂದ್ರದ ಪಾಲು ಹೆಚ್ಚು. ರಾಜ್ಯ ಸರ್ಕಾರದ ಪಾಲು ಪ್ರತಿ ಕೆಜಿಗೆ ಕೇವಲ 2 ರೂಪಾಯಿ. ಆದರೆ ಅನ್ನಭಾಗ್ಯ ಯೋಜನೆ ತಮ್ಮದೆಂದು ಹೇಳಿಕೊಳ್ಳುವ ಮೂಲಕ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ರೈತರ ಪರವಾಗಿರಲಿಲ್ಲ, ರೈತರನ್ನು ಉದ್ಧಾರ ಮಾಡುವ ಮನಸ್ಥಿತಿ ಅವರಿಗಿಲ್ಲ. ಅಧಿಕಾರವನ್ನು ಸ್ವಾರ್ಥಕ್ಕಾಗಿ ಬಳಕೆ ಮಾಡಿಕೊಳ್ಳುವುದೇ ಕಾಂಗ್ರೆಸ್ ಕೆಲಸ ಎಂದಿರುವ ಅವರು, ಉಪಚುನಾವಣೆಯಲ್ಲಿ ಕಾಂಗ್ರೆಸ್ ನವರು ಈ ಹಿಂದೆ ಗೆದ್ದಾಗಲೆಲ್ಲ ಸಂಘಟನೆಯಿಂದ ಗೆದ್ದಿದ್ದೇವೆ ಎಂದು ಬೀಗುತ್ತಿದ್ದರು. ಅದೇ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳು ಉಪಚುನಾವಣೆಯಲ್ಲಿ ಜಯಗಳಿಸಿದರೆ ಅದು ಹಣದಿಂದ ಎಂದು ಡಿಕೆ ಶಿವಕುಮಾರ್ ಆರೋಪಿಸುತ್ತಾರೆ. ಡಿ ಕೆ ಶಿವಕುಮಾರ್ ಹತಾಶರಾಗಿದ್ದಾರೆ.
ಸೋಲಿನ ಭಯದಿಂದ ಈ ತರಹದ ಮಾತುಗಳನ್ನು ಆಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಅಭಿವೃದ್ಧಿ ನಮ್ಮ ಅಜೆಂಡಾ: ವಿರೋಧ ಪಕ್ಷದ ಎಲ್ಲ ಟೀಕೆ-ಟಿಪ್ಪಣಿಗಳಿಗೆ ನಾನು ಉತ್ತರಕೊಡಲು ಬಯಸುವುದಿಲ್ಲ, ನಮ್ಮ ಮೂಲಮಂತ್ರ ಅಭಿವೃದ್ಧಿಯಾಗಿದ್ದು ಕಾಂಗ್ರೆಸ್ ಪಕ್ಷದವರು ತಮಗೆ ಬೇಕಾದ ಅಜೆಂಡಾ ಇಟ್ಟುಕೊಳ್ಳಲಿ ಆದರೆ ಭಾರತೀಯ ಜನತಾ ಪಕ್ಷದ ಏಕೈಕ ಅಜೆಂಡಾ ಅಭಿವೃದ್ಧಿ. ಕಾಂಗ್ರೆಸ್ ಪಕ್ಷ ಮಾಡುವಂತಹ ಎಲ್ಲ ಟೀಕೆಗಳಿಗೆ ಹಾನಗಲ್ ಕ್ಷೇತ್ರದ ಉತ್ತರ ಕೊಡಲಿದ್ದಾರೆ ಎಂದು ತಿಳಿಸಿದ್ದಾರೆ.

ಬಿಜೆಪಿ ಸರ್ಕಾರಕ್ಕೆ ಜನಪರ ಕಾಳಜಿ ಹೆಚ್ಚು: ಭಾರತೀಯ ಜನತಾ ಪಕ್ಷದ ಸರ್ಕಾರವಿದ್ದಾಗ ಜನಪರ ಕಾಳಜಿ ಹೆಚ್ಚಿತ್ತು ಜನರಿಗೆ ಅಗತ್ಯದ ಯೋಜನೆಗಳು ಸರಕಾರ ರೂಪಿಸಿತು ಅಲ್ಲದೆ ಮನೆಗೆ ತಲುಪುವಂತೆ ನೋಡಿಕೊಂಡಿತು. ಹೆಣ್ಣು ಮಕ್ಕಳು ಹುಟ್ಟಿದರೆ ಶಾಪ ಅನ್ನುವಂತಹ ಕಾಲದಲ್ಲಿ ಯಡಿಯೂರಪ್ಪನವರು ಭಾಗ್ಯಲಕ್ಷ್ಮಿ ಯೋಜನೆಯನ್ನು ಪರಿಚಯಿಸಿದರು ಇಡೀ ಭಾರತದಲ್ಲಿಯೇ ಮೊಟ್ಟಮೊದಲ ಬಾರಿಗೆ ಯೋಜನೆಯನ್ನು ಪರಿಚಯಿಸಿದ ಹೆಮ್ಮೆ ಭಾರತೀಯ ಜನತಾ ಪಕ್ಷದ ಸರ್ಕಾರದ್ದು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿರಿ: ಮಹಾತ್ಮರನ್ನು ಬಿಡದ ಟೀಕಾಕಾರರು ನನ್ನಂತಹ ಹುಲುಮಾನವರನ್ನು ಬಿಡುತ್ತಾರೆಯೇ?- ಸಿದ್ದರಾಮಯ್ಯ

ಡಿ.ಕೆ.ಶಿವಕುಮಾರ್‌ ವಾಗ್ದಾಳಿ

ಹಾನಗಲ್ ಕ್ಷೇತ್ರದ ನರೇಗಲ್‌‌ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

“ನಿನ್ನೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ಸಿದ್ದರಾಮಯ್ಯ ಸರ್ಕಾರ ಏನು ಮಾಡಿದೆ ಕೇಳಿ ಎಂದು ಹೇಳಿದ್ದಾರೆ. ನಮ್ಮ ಮನೋಹರ್ ತಹಶೀಲ್ದಾರ್ ಅವರು ಶಾಸಕರಾಗಿದ್ದಾಗ ಈ ಪಂಚಾಯಿತಿ ವ್ಯಾಪ್ತಿಯ ಅಭಿವೃದ್ಧಿ ಯೋಜನೆಗಳಿಗೆ 2.30 ಕೋಟಿ ರೂ. ಖರ್ಚು ಮಾಡಿರುವ ಪಟ್ಟಿ ಇದೆ” ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

“ಸಿದ್ದರಾಮಯ್ಯ ಅವರು ಏನು ಮಾಡಿದರು ಎಂದು ಕೇಳುವುದಕ್ಕಿಂತ, ಎಲ್ಲ ಅಧಿಕಾರ ಹಾಗೂ ದಾಖಲೆಗಳನ್ನು ಹೊಂದಿರುವ ಮುಖ್ಯಮಂತ್ರಿ ಬೊಮ್ಮಾಯಿ ಅವರೇ, ಐದು ವರ್ಷಗಳ ಕಾಂಗ್ರೆಸ್ ಸರ್ಕಾರ ಈ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಏನು? ಕಳೆದ ಎರಡು ವರ್ಷಗಳಲ್ಲಿ ಬಿಜೆಪಿ ಸರ್ಕಾರ ನೀಡಿರುವ ಕೊಡುಗೆ ಏನು ಎಂಬುದನ್ನು ಜನರ ಮುಂದಿಡಿ. ಆಗ ಚರ್ಚೆ ಮಾಡೋಣ. ಈ ಸವಾಲು ಸ್ವೀಕರಿಸಲು ನಾವು ಸಿದ್ಧ” ಎಂದು ತಿರುಗೇಟು ನೀಡಿದ್ದಾರೆ.

ಡಬ್ಬಲ್‌ ಇಂಜಿನ್‌ ಸರ್ಕಾರದಿಂದ ಉಪಯೋಗವಿಲ್ಲ: ಈ ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಡಬಲ್ ಇಂಜಿನ್ ಸರ್ಕಾರ ಮಾಡಿ ಎಂದು ಕೇಳಿಕೊಂಡಿದ್ದರು. ಜನರೂ ಅವರಿಗೆ ಮತ ಕೊಟ್ಟಿದ್ದಾರೆ. ಇಲ್ಲಿರುವ ನೀವೇಲ್ಲರೂ ರೈತರಿದ್ದೀರಿ. ಪ್ರಧಾನಿ ಮೋದಿ ಹಾಗೂ ಯಡಿಯೂರಪ್ಪನವರು ತಾವು ಅಧಿಕಾರಕ್ಕೆ ಬಂದರೆ ರೈತರ ಆದಾಯ ಡಬಲ್ ಮಾಡುತ್ತೇವೆ ಎಂದಿದ್ದರು. ನಿಮ್ಮ ಆದಾಯ ಡಬಲ್ ಆಗಿದೆಯಾ? ನಿಮ್ಮ ಜಿಲ್ಲೆಯವರೇ ಕೃಷಿ ಸಚಿವರು. ನಿಮ್ಮ ಬೆಳೆಗೆ ನೀಡುವ ಬೆಲೆ ಡಬಲ್ ಆಗಿದೆಯಾ? ಗೊಬ್ಬರ ಬೆಲೆ ಕಡಿಮೆ ಆಗಿದೆಯಾ? ನರೇಗಾ ಕೂಲಿ ಹೆಚ್ಚಾಗಿದೆಯಾ? ಯಾವುದೂ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಬೊಮ್ಮಾಯಿ ಅವರು ಕಾಲ್ ಸೆಂಟರ್ ತೆರೆಸಿದ್ದು, ಬಿಜೆಪಿ ನಿಮಗೆ ಅಡುಗೆ ಸಿಲಿಂಡರ್ ಕೊಟ್ಟಿದೆ, ಹೀಗಾಗಿ ನೀವು ಬಿಜೆಪಿಗೆ ವೋಟ್ ಹಾಕಿ ಎಂದು ಫೋನ್ ಮಾಡಿಸಿ ಹೇಳಿಸುತ್ತಿದ್ದಾರೆ. ಅದಕ್ಕೆ ಇಲ್ಲಿನ ಜನ, ಸಿದ್ದರಾಮಯ್ಯನವರು ಉಚಿತವಾಗಿ ಅಕ್ಕಿ ಕೊಟ್ಟಿದ್ದಾರೆ, ಅವರಿಗೆ ನಾವು ಏನು ಮಾಡಬೇಕು ಎಂದು ಮರುಪ್ರಶ್ನಿಸುತ್ತಿದ್ದಾರೆ. ನಾವು ಕಾಂಗ್ರೆಸ್ ಕೊಟ್ಟ ಅಕ್ಕಿಯನ್ನು ನಿತ್ಯ ಊಟ ಮಾಡುತ್ತಿದ್ದು, ನಾವು ಕಾಂಗ್ರೆಸ್‌ಗೆ ಮತ ಹಾಕುತ್ತೇವೆ ಎಂದು ಹೇಳುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಪಕೋಡ ಮಾರುವುದಾದರೂ ಹೇಗೆ: ಜನರಿಗೆ ಅಚ್ಛೇ ದಿನ ಕೊಡುತ್ತೇವೆ ಎಂದು ಬಿಜೆಪಿ ಹೇಳಿತ್ತು. ನಾವು ಅಧಿಕಾರಕ್ಕೆ ಬಂದರೆ ಪೆಟ್ರೋಲ್ ಡೀಸೆಲ್ ಬೆಲೆಯನ್ನು 50 ರೂ. ಒಳಗೆ ಇಡುತ್ತೇವೆ ಎಂದಿದ್ದರು. 2013ರಲ್ಲಿ 50 ರು. ಇದ್ದ ಪೆಟ್ರೋಲ್ ಈಗ 110 ರೂ. ಆಗಿದೆ. ಇದು ಅಚ್ಛೇ ದಿನನಾ? 2014ರಲ್ಲಿ ಅಡುಗೆ ಅನಿಲದ ಸಿಲಿಂಡರ್ 410 ರು. ಇತ್ತು. ಈಗ ಅದು 980 ರು. ಆಗಿದೆ. ಇದು ಅಚ್ಛೇ ದಿನಾನ? ಅಡುಗೆ ಎಣ್ಣೆ 99 ರು. ಇತ್ತು. ಈಗ 200 ರು. ಆಗಿದೆ. ಮೋದಿ ಅವರು ಹೇಳಿದಂತೆ ಪಕೋಡಾ ಮಾರುವುದಾದರೂ ಹೇಗೆ? ಎಂದು ಪ್ರಶ್ನಿಸಿದರು.

ಜನರ ಖಾತೆಗೆ ನೇರವಾಗಿ ಹಣ ಹಾಕುತ್ತೇನೆ ಎಂದಿದ್ದರು ಯಾರ ಖಾತೆಗಾದರೂ 15 ಲಕ್ಷ ರು. ಹಣ ಹಾಕಿದರಾ? ಕೋವಿಡ್ ಸಂದರ್ಭದಲ್ಲಿ 15 ಸಾವಿರ ಆದರೂ ಹಾಕಿದರಾ? ನಾನು ಇಲ್ಲಿಗೆ ಬರುವಾಗ ಕೆಲವರನ್ನು ಮಾತನಾಡಿಸಿದೆ. ಕೋವಿಡ್ ನಂತರ ಅನೇಕರು ತಮ್ಮ ಊರಿಗೆ ಮರಳಿದ್ದಾರೆ. ನೀವು ಹೇಗೆ ವಾಪಸ್ ಬಂದಿರಿ ಎಂದು ಕೇಳಿದೆ. ಅದಕ್ಕೆ ಆ ವ್ಯಕ್ತಿ, ನೀವು ಮತ್ತು ಸಿದ್ರಾಮಣ್ಣ ಸರ್ಕಾರಕ್ಕೆ 1 ಕೋಟಿ ರು. ಚೆಕ್ ಕೊಡಲು ಹೋದಾಗ ಸರ್ಕಾರ ಉಚಿತವಾಗಿ ಬಸ್ ವ್ಯವಸ್ಥೆ ಮಾಡಿದರಲ್ಲಾ ಆಗ ಬಂದೆ ಎಂದು ಹೇಳಿದ. ಇಂತಹ ಒಂದು ಕೆಲಸವನ್ನು ಬಿಜೆಪಿ ಸರ್ಕಾರ ಮಾಡಿದೆಯಾ? ಎಂದು ಕೇಳಿದರು.

ಜನರೇ ನಮ್ಮ ಅಭ್ಯರ್ಥಿಯನ್ನು ಆಪದ್ಭಾಂದವ ಎಂದು ಕರೆಯುತ್ತಿದ್ದಾರೆ. ಯಾಕೆಂದರೆ, ಕೋವಿಡ್ ಸಮಯದಲ್ಲಿ ವೃತ್ತಿ ಕಳೆದುಕೊಂಡವರಿಗೆ ಶ್ರೀನಿವಾಸ ಮಾನೆ ಅವರು ತಲಾ 2 ಸಾವಿರ ರು. ಚೆಕ್ ಕೊಟ್ಟಿದ್ದಾರೆ. ಸರ್ಕಾರ ಮಾಡಲು ಸಾಧ್ಯವಾಗದ ಕೆಲಸವನ್ನು ನಮ್ಮ ಅಭ್ಯರ್ಥಿ ಮಾಡಿದ್ದಾರೆ. ಜನರ ಕಷ್ಟಕ್ಕೆ ಇವರು ಆಗುತ್ತಾರೆ. ಇವರು ಇಲ್ಲೇ ಇದ್ದು, ಜನರ ಸೇವೆ ಮಾಡುತ್ತಾರೆ ಎಂಬ ನಂಬಿಕೆಯಿಂದ ಜನ ಪಕ್ಷಬೇಧ ಮರೆತು ಬೆಂಬಲ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿರಿ: ಎಷ್ಟು ದಿನ ಕಾಯಲಿ? ಗುಡಿಸಲು ನಿರ್ಮಿಸಿ ಗ್ರಂಥಾಲಯ ಆರಂಭಿಸುವೆ: ಸೈಯದ್ ಇಸಾಕ್

ಅಜ್ಞಾನೇಂದ್ರ ಗೃಹಸಚಿವ: ಬೊಮ್ಮಾಯಿ ಅವರ ಸರ್ಕಾರದಲ್ಲಿ ಎಂತಹ ಕಾನೂನು ಇದೆ ಎಂದರೆ, ಅವರು ಇಂತಹ ಮಟ್ಟಕ್ಕೆ ಇಳಿಯುತ್ತಾರೆ ಎಂದು ಯಾರೂ ಭಾವಿಸಿರಲಿಲ್ಲ. ಬಿಜೆಪಿಯವರಿಗೆ ಪೊಲೀಸ್ ಇಲಾಖೆಯೇ ಬೇಡವಾಗಿದೆ. ಅವರದೇ ಆದ ಮತೀಯ ಗೂಂಡಾಗಿರಿಯನ್ನು ಮುಖ್ಯಮಂತ್ರಿಯವರು ಸಮರ್ಥಿಸಿಕೊಳ್ಳುತ್ತಿದ್ದಾರೆ. ಹೊಸದಾಗಿ ಗೃಹ ಸಚಿವರಾಗಿರುವ ಆರಗ ಜಾನೇಂದ್ರ ಅಲ್ಲ, ಅಜ್ಞಾನೇಂದ್ರ ಎಂದು ಡಿ.ಕೆ.ಶಿವಕುಮಾರ್‌ ಆರೋಪಿಸಿದ್ದಾರೆ.

ನಮ್ಮ ಪಕ್ಷದ ಬಟ್ಟೆ ಹಾಕಿಕೊಂಡರೆ ಏನು ತಪ್ಪು ಎಂದು ಕೇಳುತ್ತಿದ್ದಾರೆ. ಈ ಚುನಾವಣೆ ಮುಗಿಯಲಿ 2 ಜಿಲ್ಲೆಗಳಿಗೆ ಹೋಗಿ, ಸಂವಿಧಾನದ ಪ್ರತಿ, ರಾಷ್ಟ್ರಧ್ವಜ, ಪೊಲೀಸ್ ಖಾಕಿ ಸಮವಸ್ತ್ರ, ಪೊಲೀಸ್ ಮ್ಯಾನುಯೆಲ್ ಪ್ರತಿಯನ್ನು ಉಡುಗೊರೆಯಾಗಿ ನೀಡುತ್ತೇನೆ. ಅದಕ್ಕೂ ಮುನ್ನ ನೀವು ಹಸ್ತದ ಗುರುತಿಗೆ ಮತಹಾಕಿ ಮಾನೆ ಅವರನ್ನು ವಿಧಾನಸೌಧದಲ್ಲಿ ಕೂರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ ಎರಡು ವರ್ಷದ ಬಿಜೆಪಿ ಆಡಳಿತ ಎಲ್ಲ ರೀತಿಯಲ್ಲೂ ವಿಫಲವಾಗಿದೆ. 25 ಸಂಸದರನ್ನು ಇಟ್ಟುಕೊಂಡು ಅವರ ಮೂಲಕ ಕೇಂದ್ರಕ್ಕೆ ಮನವಿ ಮಾಡಿ ರಾಜ್ಯಕ್ಕೆ ಹೆಚ್ಚಿನ ಅನುದಾನ ತರಲಿಲ್ಲ. ಬರುವ ಹಣಕಾಸು ಬಂದಿಲ್ಲ. ಕೇಂದ್ರ ಸರ್ಕಾರದಲ್ಲಿ ರಾಜ್ಯದಿಂದ ಆಯ್ಕೆಯಾದವರೇ, ರಸಗೊಬ್ಬರ, ಕಲ್ಲಿದ್ದಲು ಹಾಗೂ ಹಣಕಾಸು ಸಚಿವರಾಗಿದ್ದಾರೆ. ಆದರೂ ರಾಜ್ಯದಲ್ಲಿ ಗೊಬ್ಬರ ಬೆಲೆ ಹೆಚ್ಚಾಗಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಕಲ್ಲಿದ್ದಲು ಕೊರತೆಯಿಂದ ಕರ್ನಾಟಕ ಕತ್ತಲಲ್ಲಿ ಮುಳುಗುವ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯಕ್ಕೆ ಬರಬೇಕಾದ ಹಣ ಬಂದಿಲ್ಲ. ಹೀಗಿರುವಾಗ ನೀವು ಅವರಿಗೆ ಮತ ನೀಡಬೇಕಾ ಬೇಡವಾ? ಎಂದು ನಿರ್ಧರಿಸಿ ಎಂದು ತಿಳಿಸಿದ್ದಾರೆ.

ಮತೀಯ ಗೂಂಡಾಗಿರಿಗೆ ಆಕ್ಷೇಪ

ನರೇಗಲ್‌‌ನಲ್ಲಿ ಡಿ.ಕೆ.ಶಿವಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, “ಬೊಮ್ಮಾಯಿ ಅವರು ಈ ಹಿಂದೆ ಗೃಹ ಸಚಿವರಾಗಿದ್ದರು. ಈಗ ಮುಖ್ಯಮಂತ್ರಿಯಾಗಿದ್ದಾರೆ. ನೈತಿಕ ಪೊಲೀಸ್ ಗಿರಿ ಸಮರ್ಥಿಸಿ ಕೊಳ್ಳುತ್ತಿರುವುದು ಸರಿನಾ? ಪೊಲೀಸರ ಘನತೆ, ಗೌರವ ಏನಾಗಬೇಕು? ಎಂದು ಪ್ರಶ್ನಿಸಿದ್ದಾರೆ.

ರಾಷ್ಟ್ರಧ್ವಜ ಹಿಡಿಯಲಿ: ಹಾಗಾದರೆ ಸಂವಿಧಾನ, ಪೊಲೀಸ್ ಇಲಾಖೆ ಏಕಿರಬೇಕು? ಗೃಹ ಸಚಿವರಾಗಿ ಕೆಲಸ ಮಾಡಿದವರೇ ತಮ್ಮ ಪಕ್ಷದ ಪಟಾಲಂನ ಕಿಡಿಗೇಡಿತನ ಸಮರ್ಥಿಸಿಕೊಳ್ಳುವುದು ರಾಜ್ಯ ಮತ್ತು ಇಡೀ ದೇಶಕ್ಕೆ ಕೆಟ್ಟ ಉದಾಹರಣೆಯಾಗಿ ನಿಲ್ಲುವಂತೆ ಮಾಡಿದೆ. ಪೊಲೀಸರು ಪೂಜೆ ಮಾಡಲಿ, ಒಗ್ಗಟ್ಟು ಪ್ರದರ್ಶಿಸಲಿ, ನಾವು ಬೇಡ ಎನ್ನುವುದಿಲ್ಲ. ಆದರೆ ಅವರು ರಾಷ್ಟ್ರಧ್ವಜ ಹಿಡಿಯಲಿ ಎಂದು ತಿರುಗೇಟು ನೀಡಿದ್ದಾರೆ.

ನಾವು ಸಂವಿಧಾನ, ಪೊಲೀಸ್ ಮ್ಯಾನುಯಲ್, ರಾಷ್ಟ್ರಧ್ವಜ, ಪೊಲೀಸ್ ಖಾಕಿ ಸಮವಸ್ತ್ರವನ್ನು ಅಲ್ಲಿನ ಎಸ್.ಪಿಗೆ ಕೊಟ್ಟು ಬರುತ್ತೇನೆ. ಇನ್ನು ಚರ್ಚ್‌ನಲ್ಲಿ ನುಗ್ಗಿ ಬಲವಂತವಾಗಿ ಭಜನೆ ಮಾಡಿದವರ ವಿರುದ್ಧ ಅಲ್ಲಿನ  ಪೊಲೀಸರು ಎಫ್ ಐಆರ್ ದಾಖಲಿಸಿರುವುದು ಸ್ವಾಗತಾರ್ಹ. ನಾವು ಹಿಂದೂಗಳೇ. ಆದರೆ ಬೇರೆ ಧರ್ಮದವರ ಪ್ರಾರ್ಥನಾ ಮಂದಿರಕ್ಕೆ ನುಗ್ಗಿ ಮಾಡಿರುವ ದಾಳಿ ಖಂಡನೀಯ. ಈ ವಿಚಾರವಾಗಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿರುವ ಅರವಿಂದ ಬೆಲ್ಲದ್ ಅವರನ್ನು ಸೇರಿಸಿ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿರಿ: 68 ಕೋಟಿ ಜನರಿಗೆ ಒಂದು ಡೋಸ್ ಲಸಿಕೆ ಕೂಡಾ ನೀಡಿಲ್ಲ, ಯಾವ ಸಾಧನೆಗೆ ಸಂಭ್ರಮಾಚರಣೆ?- ಸಿದ್ದರಾಮಯ್ಯ

LEAVE A REPLY

Please enter your comment!
Please enter your name here