‘ಮಾತಿನ ಮಂಟಪ’ ಎಂದೇ ಖ್ಯಾತವಾಗಿರುವ ‘ಕ್ಲಬ್ ಹೌಸ್’ ಸರ್ವರ್ ಡೌನ್ ಆಗಿದ್ದು, ಅನೇಕ ಬಳಕೆದಾರರು ವರದಿ ಮಾಡಿದ್ದಾರೆ. ಇತರ ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಜರ್ಮನಿ, ಇಂಡಿಯಾ, ಈಜಿಪ್ಟ್, ಅಮೆರಿಕದ ಹಲವು ನಗರಗಳಲ್ಲಿ ಸರ್ವರ್ ಡೌನ್ ಆಗಿದ್ದು, ಮಾತಿನ ಮಂಟಪದಲ್ಲಿ ಚರ್ಚೆಗಳನ್ನು ನಡೆಸುತ್ತಿದ್ದವರಿಗೆ ಚಡಪಡಿಕೆ ಆರಂಭವಾಗಿದೆ.
ಈ ಕುರಿತು ‘ಕ್ಲಬ್ ಹೌಸ್’ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಸರ್ವರ್ ಡೌನ್ ಆಗಿರುವ ಕುರಿತು ಟ್ವೀಟ್ ಮಾಡಲಾಗಿದೆ. ‘ಸಮಸ್ಯೆಯನ್ನು ಬಗೆಹರಿಸಲಾಗುವುದು’ ಕ್ಲಬ್‌ಹೌಸ್ ಸಂಸ್ಥೆ ಹೇಳಿದೆ.
We are aware and are working to resolve the issue! https://t.co/kTVufQQT67
— Clubhouse (@Clubhouse) October 26, 2021
ಅಮೆಜಾನ್, ಟ್ವಿಟ್ಟರ್, ಫೇಸ್‌ಬುಕ್ ಮೊದಲಾದ ಟೆಕ್ ಸಂಸ್ಥೆಗಳನ್ನು ಕ್ಲಬ್‌ಹೌಸ್ ನಿದ್ದೆಗೆಡಿಸಿತ್ತು. ಮಾತಿನ ಮಾದರಿಯ ಅಪ್ಲಿಕೇಷನ್‌ಗಳು ಅಭಿವೃದ್ಧಿಪಡಿಸಲು ಇತರ ಸಂಸ್ಥೆಗಳು ಹೆಜ್ಜೆ ಇರಿಸಿದ್ದವು ಎನ್ನಲಾಗಿದೆ.
ಇತ್ತೀಚೆಗೆ ಫೇಸ್‌ಬುಕ್ ಸಂಸ್ಥೆಯ ಫೇಸ್‌ಬುಕ್, ಮೆಸೇಂಜರ್, ಇನ್‌ಸ್ಟಾಗ್ರಾಮ್ ಅಪ್ಲಿಕೇಷನ್‌ಗಳು ಸರ್ವರ್ ಡೌನ್ ಆಗಿ, ಬಳಕೆದಾರರು ಚಡಪಡಿಸಿದ್ದರು. ಸುಮಾರು ಆರು ಗಂಟೆಗಳ ಬಳಿಕ ಈ ಅಪ್ಲಿಕೇಷನ್‌ಗಳು ಮರಳಿ ಸೇವೆ ಆರಂಭಿಸಿದ್ದವು. ಈಗ ಕ್ಲಬ್‌ಹೌಸ್ ಡೌನ್ ಆಗಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಹೊಸ ರೂಪದಲ್ಲಿ ಕಾಣಿಸಿಕೊಂಡ ಕ್ಲಬ್‌ಹೌಸ್, ಮಾತುಗಾರರಿಗೆ ಹೊಸ ಅನುಭವವನ್ನು ನೀಡಿದೆ. ಅಷ್ಟೇ ಪ್ರಮಾಣದಲ್ಲಿ ಕೇಳುಗ ವರ್ಗವನ್ನು ಸೃಷ್ಟಿ ಮಾಡಿದೆ. ನಿತ್ಯವು ಒಂದಲ್ಲ ಒಂದು ಕಾರ್ಯಕ್ರಮವನ್ನು ನಡೆಸುತ್ತಾ ಸಕ್ರಿಯವಾಗಿರುವ ಗ್ರೂಪ್‌ಗಳಿವೆ. ರಾಜಕಾರಣಿಗಳು ನೇರವಾಗಿ ಅಭಿಮಾನಿಗಳೊಂದಿಗೆ ಸಂವಾದ ನಡೆಸಲೂ ಕ್ಲಬ್‌ಹೌಸ್ ವೇದಿಕೆಯಾಗಿ ಗಮನ ಸೆಳೆದಿದೆ. ಕ್ಲಬ್‌ಹೌಸ್ ಒಂದು ರೀತಿ ಅಡಿಕ್ಷನ್ ಎಂದವರೂ ಇದ್ದಾರೆ.
ಇದನ್ನೂ ಓದಿರಿ: ಕ್ಲಬ್‌ಹೌಸ್‌ನಲ್ಲಿ ಕುವೆಂಪು ಮತ್ತು ಶ್ರೀರಾಮಾಯಣ ದರ್ಶನಂ ಮಹಾಕಾವ್ಯಕ್ಕೆ ಅವಹೇಳನ
ಏನಿದು ಕ್ಲಬ್‌ಹೌಸ್?
ಇದೊಂದು ಆಡಿಯೋ ಆಧರಿತ ಸೋಷಿಯಲ್ ಮೀಡಿಯಾ ಆಪ್. ಇಲ್ಲಿ ವಿಡಿಯೋಗಳಿಲ್ಲ. ಸಾಲು ಸಾಲು ಬರಹಗಳಿಲ್ಲ. ಇಲ್ಲಿರುವುದು ಬರೀ ಮಾತು. ಇದೊಂದು ರೀತಿಯ ಪಾಡ್‌ಕಾಸ್ಟ್‌ನ ಲೈವ್ ಆವೃತ್ತಿ ಎನ್ನಬಹುದು. ಸಮಾನ ಆಸಕ್ತಿಯ ವಿಷಯಗಳ ಬಗ್ಗೆ ಒಂದೆಡೆ ಸೇರಿ ಹೇಗೆ ಹರಟೆ ಹೊಡೆಯುತ್ತೇವೊ, ಅದೇ ಅನೌಪಚಾರಿಕತೆಯೊಂದಿಗೆ ಹರಟೆ ಹೊಡೆಯುವುದಕ್ಕೆ ಕ್ಲಬ್‌ಹೌಸ್ ವೇದಿಕೆ ಕಲ್ಪಿಸಿದೆ. ಹೀಗಾಗಿ ಕೋಟ್ಯಂತರ ಜನರನ್ನು ಆಕರ್ಷಿಸಿದೆ.
ಭಾರತೀಯ ಹಿನ್ನೆಲೆಯ ಅಮೆರಿಕನ್ ರೋಹನ್ ಸೇತ್ ಮತ್ತು ಪಾಲ್ ಡೇವಿಸನ್ ಅಭಿವೃದ್ಧಿಪಡಿಸಿದ ಕ್ಲಬ್‌ಹೌಸ್ ಕೋವಿಡ್ ಮತ್ತು ಲಾಕ್‌ಡೌನ್ ಹಿನ್ನೆಲೆಯಲ್ಲಿ ದಿಢೀರನೆ ಪ್ರಚಾರ ಪಡೆದುಕೊಂಡು ವಿಶ್ವದಾದ್ಯಂತ 1 ಕೋಟಿ ಬಳಕೆದಾರರನ್ನು ಗಳಿಸಿಕೊಂಡಿತ್ತು.
ಬಳಕೆದಾರರು ತಮ್ಮದೇ ಆದ ಗುಂಪನ್ನು ಕಟ್ಟಿಕೊಂಡು ಆಸಕ್ತಿಯ ವಿಷಯ ಕುರಿತು ಚರ್ಚಿಸಬಹುದು, ಸಂವಾದ ನಡೆಸಬಹುದು. ಅನಿರ್ಬಂಧಿತವಾದ ಖಾಸಗಿ ಹರಟೆಗೂ ಅವಕಾಶವಿದೆ. ಮುಕ್ತವಾಗಿ ಆಸಕ್ತರೆಲ್ಲರನ್ನೂ ಒಳಗೊಳ್ಳುವುದಕ್ಕೂ ಅವಕಾಶವನ್ನು ಕ್ಲಬ್‌ಹೌಸ್ ನೀಡಿದೆ.
ಜನಪ್ರಿಯವಾಗಿದ್ದೇಕೆ?
ಸೋಷಿಯಲ್ ಮೀಡಿಯಾ ಅಂದರೆ ಅಲ್ಲಿ ಸೆಲ್ಫಿಗಳು, ಫೋಟೊಗಳು, ವಿಡಿಯೋಗಳು, ಉದ್ದುದ್ದ ಬರಹಗಳು.. ಅವುಗಳಿಗೆ ಬರುವ ಲೈಕ್, ಕಮೆಂಟ್‌ಗಳು, ಶೇರ್‌ಗಳು…
ಮನಸ್ಸಿನ ಮೇಲೆ ತೀವ್ರ ಪರಿಣಾಮ ಉಂಟುಮಾಡುವ ಈ ಹಲವು ಸೋಷಿಯಲ್ ಮೀಡಿಯಾ ಚಟುವಟಿಕೆಗಳಿಂದ ರೋಸಿದ ಕಾರಣಕ್ಕೊ ಏನೋ, ಕೇವಲ ಧ್ವನಿಯನ್ನಷ್ಟೇ ಆಧರಿಸಿದ ಕ್ಲಬ್‌ಹೌಸ್ ಜನಪ್ರಿಯವಾಗುತ್ತಿದೆ.
ಎಷ್ಟರಮಟ್ಟಿಗೆ ಎಂದರೆ ಇಲ್ಲಿ ತರುಣ-ತರುಣಿಯರಿದ್ದಾರೆ, ಮಹಿಳೆಯರಿದ್ದಾರೆ, ಉದ್ಯಮಿಗಳು, ಪತ್ರಕರ್ತರು, ಹೊಸ ಹಾಗೂ ಹಳೆಯ ತಲೆಮಾರಿನ ರಾಜಕಾರಣಿಗಳೂ ತೊಡಗಿಸಿಕೊಂಡಿದ್ದಾರೆ. ತರಹೇವಾರಿ ವಿಷಯಗಳ ಕುರಿತು ಸೀಮಿತ ಅವಧಿಯ ಚರ್ಚೆಗಳು ನಡೆಯುತ್ತವೆ. ಅಲ್ಲಿಗೆ ಒಂದು ಸಭೆ ಮುಗಿದುಹೋಗುತ್ತದೆ.
ಯಾರು ಬೇಕಾದರೂ ಇಂತಹ ಚರ್ಚೆಗಳನ್ನು ನಡೆಸಬಹುದು, ಯಾರೂ ಬೇಕಾದರೂ ಪಾಲ್ಗೊಳ್ಳಬಹುದು. ವಿವಿಧ ಹಿನ್ನೆಲೆಯ ಅನುಭವವುಳ್ಳವರೊಂದಿಗೆ ನೇರ ಸಂವಾದ ಚರ್ಚೆಗಳು ಸಾಧ್ಯವಾಗುವುದರಿಂದ
ವಸ್ತು-ವಿಷಯಗಳ ವಿವಿಧ ಆಯಾಮಗಳ ದೃಷ್ಟಿಕೋನವನ್ನು ಪಡೆಯುವುದಕ್ಕೂ ಕ್ಲಬ್‌ಹೌಸ್ ಅವಕಾಶ ಕೊಡುತ್ತದೆ ಎಂಬುದು ಬಳಕೆದಾರರ ಅಭಿಪ್ರಾಯ.
ಕೆಲವೇ ತಿಂಗಳ ಹಿಂದೆ ಭಾರತದಲ್ಲಿ ಚಾಲ್ತಿಗೆ ಬಂದ ಕ್ಲಬ್‌ಹೌಸ್ ಸ್ಮಾರ್ಟ್‌ಫೋನ್ ಬಳಕೆಗೂ ಲಭ್ಯವಾಗಿ ಅಪಾರ ಜನಮೆಚ್ಚುಗೆ ಗಳಿಸಿದೆ. ತಾಂತ್ರಿಕ ದೋಷದಿಂದಾಗಿ ಅಡಚಣೆಯಾಗಿರುವುದು ಕ್ಲಬ್‌ಹೌಸ್ ಪ್ರಿಯರಿಗೆ ಬೇಸರ ತಂದಿದೆ.
ಇದನ್ನೂ ಓದಿರಿ: 2019ರ ಲೋಕಸಭೆ ಚುನಾವಣೆಯಲ್ಲಿ ಸುಳ್ಳುಸುದ್ದಿಗಳು ಹೆಚ್ಚಾಗಿದ್ದವು: ಫೇಸ್‌ಬುಕ್


