Homeಮುಖಪುಟ’ರತ್ನನ್ ಪ್ರಪಂಚ’ ಭಾವುಕತೆಯ ಬಂಡವಾಳವಷ್ಟೇ ಸಾಕೆ?

’ರತ್ನನ್ ಪ್ರಪಂಚ’ ಭಾವುಕತೆಯ ಬಂಡವಾಳವಷ್ಟೇ ಸಾಕೆ?

- Advertisement -
- Advertisement -

ಇತ್ತೀಚಿಗೆ ಒಟಿಟಿ ವೇದಿಕೆಯೊಂದರಲ್ಲಿ ಬಿಡುಗಡೆಯಾದ ’ರತ್ನನ್ ಪ್ರಪಂಚ’ ಕನ್ನಡ ಸಿನಿಮಾ ಸಾಮಾಜಿಕ ಮಾಧ್ಯಮಗಳಲ್ಲಿ ಪರ-ವಿರೋಧ ವಿಮರ್ಶೆಗಳಿಗೆ ಸಾಕ್ಷಿಯಾಯಿತು. ಕನ್ನಡ ಸಿನಿಮಾಗಳಿಗೆ ವಿಮರ್ಶೆಯ ವಿಚಾರದಲ್ಲಿ ವಿನಾಯಿತಿ ನೀಡಬೇಕು ಎಂಬ ಒಂದು ವಲಯದ ಕೂಗು ಆಗಾಗ ಅನುರಣನಿಸುತ್ತಿರುತ್ತದೆ. ಆದರೆ ಅದಕ್ಕೆ ನೀಡುವ ಕಾರಣಗಳು ಮತ್ತು ಸಮರ್ಥನೆಗಳು ಕನ್ನಡ ಸಿನಿಮಾರಂಗದ ಗುಣಮಟ್ಟದ ಬಗೆಗನ ಕಾಳಜಿಗಿಂತ ನಿರ್ಮಾಪಕರ, ನಿರ್ದೇಶಕರ ಅಥವಾ ತಮ್ಮ ನೆಚ್ಚಿನ ನಟರ ಬಗೆಗಿನ ತೀವ್ರ ಅಭಿಮಾನ ಅಲ್ಲಿ ಕೆಲಸ ಮಾಡಿರುತ್ತದೆ. ಅಭಿಮಾನ ತನ್ನಷ್ಟಕ್ಕೇ ಸಮಸ್ಯಾತ್ಮಕವಲ್ಲವಾದರೂ, ಜಾಗತಿಕವಾಗಿ ಅತ್ಯುತ್ತಮವಾದ ಅಂದರೆ ಜನಸಾಮಾನ್ಯರ ನೋವು ನಲಿವುಗಳನ್ನು, ಸಮಸ್ಯೆಗಳನ್ನು, ಬವಣೆಗಳನ್ನು ಪರಿಣಾಮಕಾರಿಯಾಗಿ ದೃಶ್ಯರೂಪದಲ್ಲಿ ಮೂಡಿಸುತ್ತಿರುವ ಕಂಟೆಂಟ್ ಸುಲಭವಾಗಿ ಎಲ್ಲರಿಗೂ ಸಿಗುತ್ತಿರುವ ಇಂದಿನ ಸಂದರ್ಭದಲ್ಲಿ ಅಭಿಮಾನದ ಪ್ರತಿಷ್ಠೆಯಷ್ಟೇ ಕನ್ನಡ ಚಿತ್ರರಂಗಕ್ಕೆ ಸಾಲದಲ್ಲವೇ? ಕನ್ನಡನಾಡಿನ ಸಮುದಾಯಗಳ ಬದುಕು ಬವಣೆಗಳನ್ನು, ಕರ್ನಾಟಕದ ಜನರ ಕಥೆಗಳನ್ನು, ಸಾಮಾಜಿಕ ಪರಿಸದ ಹಿನ್ನೆಲೆಯಲ್ಲಿ ಪರಿಣಾಮಕಾರಿಯಾಗಿ ಕಟ್ಟಿಕೊಡುವತ್ತ ಸಿನಿಮಾರಂಗ ಬೆಳೆಯುವತ್ತ ಎಲ್ಲರೂ ಚಿಂತಿಸುವುದು ಒಳಿತಲ್ಲವೇ?

MAID

ಇತ್ತೀಚೆಗೆ ಒಟಿಟಿ ವೇದಿಕೆಯೊಂದರಲ್ಲಿ ’ಮೇಯ್ಡ್’ (MAID) ಎಂಬ ಒಂದು ಇಂಗ್ಲಿಷ್ ವೆಬ್ ಸೀರೀಸ್ ಜನಪ್ರಿಯವಾಗಿದೆ. ಅಲೆಕ್ಸ್ ಎಂಬಾಕೆ ತನ್ನ ಅಬ್ಯೂಸಿವ್ ಗಂಡನನ್ನು ತೊರೆದು ದೂರಬಂದು, ಅಸಮಾನತೆಯ ವ್ಯವಸ್ಥೆಯ ಸಮಾಜದಲ್ಲಿ ಮನೆಕೆಲಸದಾಕೆಯಾಗಿ ಬದುಕು ಕಟ್ಟಿಕೊಳ್ಳುವ ಪ್ರಕ್ರಿಯೆಯಲ್ಲಿ, ತನ್ನ ತಾಯಿಯ, ತನ್ನ ತಂದೆಯ ಮತ್ತು ತನ್ನ ಪತಿಯ ಜೊತೆಗಿನ ಸಂಬಂಧಗಳನ್ನು ಶೋಧಿಸಿಕೊಳ್ಳುವ ಕಥಾಹಂದರ ಹೊಂದಿರುವ ಈ ಸೀರಿಸ್ ಪುರುಷಾಧಿಪತ್ಯದ ವಿರುದ್ಧ ಸೆಟೆದು ನಿಲ್ಲುತ್ತದೆ. ಈ ಪಯಣದಲ್ಲಿ ಅಲೆಕ್ಸ್ ಪಾತ್ರವನ್ನು ಅನನ್ಯವಾಗಿ ಕಟ್ಟಿಕೊಡಲಾಗಿದೆ. ಪುಟ್ಟ ಮಗಳನ್ನು ಎತ್ತುಕೊಂಡು ತನ್ನ ಗಂಡನಿಂದ ದೂರ ಬಂದು ಮನೆಗೆಲಸದಾಕೆಯ ಕೆಲಸ ಹುಡುಕಿಕೊಂಡಿರುವ ಅಲೆಕ್ಸ್‌ಗೆ ವಸತಿಯ ಸಮಸ್ಯೆ ಆಗಾಗ ಕಾಡುತ್ತದೆ. ತಾಯಿಗೆ ಕೂಡ ಸರಿಯಾದ ನೆಲೆ ಇಲ್ಲ. ಚಿಕ್ಕ ವಯಸ್ಸಿನಲ್ಲಿಯೇ ದೂರವಾಗಿದ್ದ ಅಪ್ಪನ ಬಳಿ ಸಣ್ಣ ಅವಧಿಗೆ ಆಶ್ರಯ ಪಡೆದಿರುತ್ತಾಳೆ. ಒಮ್ಮೆ ಮನೆಯೊಂದನ್ನು ಸ್ವಚ್ಛ ಮಾಡಲೆಂದು ಹೋಗಿರುವಾಗ ಅಟ್ಟದಂತಹ ಒಂದು ಗೂಡಿನ ಒಳಹೊಕ್ಕಾಗ, ಅದರ ಚಿಕ್ಕ ಬಾಗಿಲು ಆಕಸ್ಮಿಕವಾಗಿ ಮುಚ್ಚಿಕೊಂಡು ಕತ್ತಲಾಗುತ್ತದೆ. ಹೊರಗೆ ಬರಲಾರದೆ ಭಯಭೀತಿಯಿಂದ ಬೆವರುತ್ತಾಳೆ. ಹೇಗೋ ಹೊರಬಂದ ಮೇಲೆ, ಮರೆತಿದ್ದ ತನ್ನ ಬಾಲ್ಯದ ನೆನಪು ಮರುಕಳಿಸುತ್ತದೆ. ತನ್ನ ಬಾಲ್ಯದಲ್ಲಿ ತಂದೆ ತನ್ನ ತಾಯಿಯನ್ನು ಹೊಡೆಯುವ ಸಮಯದಲ್ಲಿ, ಅಲ್ಮೇರದಲ್ಲಿ ಹುದುಗಿ ಬಚ್ಚಿಟ್ಟುಕೊಳ್ಳುವ ಕರಾಳ ನೆನಪದು. ತಕ್ಷಣ ತನ್ನ ತಂದೆಯ ಮನೆಗೆ ತೆರಳಿ, ಮಗಳನ್ನು ಕರೆದುಕೊಂಡು ಆ ಮನೆಯನ್ನೂ ತೊರೆಯುತ್ತಾಳೆ. ಅಲೆಕ್ಸ್‌ಳ ಹೋರಾಟ ಮುಂದುವರೆಯುತ್ತದೆ..

’ರತ್ನನ್ ಪ್ರಪಂಚ’ ಚಿತ್ರದ ಚರ್ಚೆಯೊಂದಿಗೆ ಮೇಯ್ಡ್ ವೆಬ್ ಸೀರಿಸ್ ಎಳೆದುಕೊಂಡು ಬಂದದ್ದಕ್ಕೆ ಕಾರಣವಿದೆ. ಕಥೆಯ ತಿರುವುಗಳನ್ನು ನಿರೂಪಿಸುವಾಗ ಅದು ವೀಕ್ಷಕನನ್ನು ಚಿಂತನೆಗೆ ಹಚ್ಚುವಂತೆ ಮಾಡಿ, ಅವನನ್ನು ’ಇದು ಹೇಗೆ ಸಾಧ್ಯ’ ಎಂಬ ಸಂದೇಹಕ್ಕೆ ಒಳಪಡಿಸುವುದಕ್ಕಿಂತಲೂ, ಕಥೆಯ ಮುಂದುವರಿಕೆಯನ್ನು ಸಕಾರಣವಾಗಿ ಕನ್ವಿನ್ಸ್ ಮಾಡುವಂತಿರಬೇಕು. ’ಮೇಯ್ಡ್’ನಲ್ಲಿ ಅದು ಸಿದ್ಧಿಸಿರುವುದು ಸುಲಭವಾಗಿ ನಮಗೆ ಕಾಣಸಿಗುತ್ತದೆ. ಅದನ್ನು ಜಾಗತಿಕವಾಗಿ ಎಲ್ಲ ಒಳ್ಳೆಯ ಕಥೆಗಾರರೂ-ನಿರ್ದೇಶಕರೂ ಮಾಡಲು ಪ್ರಯತ್ನಿಸುತ್ತಾರೆ.

’ರತ್ನನ್ ಪ್ರಪಂಚ’ ಸಿನಿಮಾ ಕಟ್ಟುವಿಕೆಯಲ್ಲಿ ಪ್ರೇಕ್ಷಕನಿಗೆ ಆ ಕಟ್ಟುವಿಕೆ ಹೆಚ್ಚು ಕನ್ವಿನ್ಸ್ ಆಗುವುದಕ್ಕಿಂತಲೂ ಕಥೆಯಿಂದ ಕಳಿಚಿಕೊಂಡಂತಹ ಕೊಂಡಿಗಳೇ ಕೊನೆಯವರೆಗೂ ಕಾಡುತ್ತವೆ. ತನ್ನ ತಾಯಿ ಸರೋಜಾಳ (ಉಮಾಶ್ರೀ) ಜೊತೆಗೆ ಯಾವಾಗಲೂ ಕಚ್ಚಾಡುವ ಮಗ ರತ್ನಾಕರ (ಧನಂಜಯ್). ಇದು ಏಕೆ ಹೀಗೆ ಕಟ್ಟಲಾಗಿದೆ ಎಂಬುದು ಕೂಡ ಸರಿಯಾಗಿ ಮನವರಿಕೆಯಾಗುವುದೇ ಇಲ್ಲ! ಇನ್ನು ಆಕೆ ತನ್ನ ಹೆತ್ತ ತಾಯಿಯಲ್ಲ ಎಂದು ರತ್ನಾಕರ ತಿಳಿಯುವ ಸನ್ನಿವೇಶವನ್ನೇ ಗಮನಿಸಿ. ಕಳೆದುಹೋದ ನಾಯಿಯ ಬಗ್ಗೆ ಜಾಹೀರಾತು ನೀಡಲು ಹೋದ ಪತ್ರಿಕೆಯೊಂದರ ಕಚೇರಿಯಲ್ಲಿ, ಪರಿಚಯಳಾದ ಒಬ್ಬ ಪತ್ರಕರ್ತೆ, ತನ್ನ ಸಂಪಾದಕ ಹೇಳಿದ ಮಾತಿನ ಬೆನ್ನುಬಿದ್ದು ರತ್ನಾಕರನ ನಿಜ ತಾಯಿಯ ಬಗ್ಗೆ ಪತ್ತೆ ಹಚ್ಚಿ ಆತನಿಗೆ ಹೇಳುತ್ತಾಳೆ! ಸರಿ, ’ಅಪನಂಬಿಕೆಯನ್ನು ತೊಡೆದುಹಾಕುವ’ ದೃಶ್ಯಮಾಧ್ಯಮದ ಥಿಯರಿಯ ಪ್ರಕಾರವೇ ಮುಂದುವರೆದರೆ, ತನ್ನ ಹೆತ್ತತಾಯಿಯನ್ನು ಹುಡುಕುವ ಪ್ರಯತ್ನದಲ್ಲಿ ಪ್ರಯಾಣ ಬೆಳೆಸುವ ರತ್ನಾಕರನ ಮುಂದಿನ ಕಥೆ ಘನವಾದದ್ದೇನನ್ನಾದರೂ ಪ್ರೇಕ್ಷಕನಿಗೆ ದಾಟಿಸುತ್ತದೆಯೇ ಎಂದರೆ ಅಲ್ಲಿಯೂ ನಿರಾಸೆಯೇ ಕಟ್ಟಿಟ್ಟಬುತ್ತಿ. ಅತಿಭಾವುಕ ಸನ್ನಿವೇಶಗಳನ್ನು ಪ್ರೇಕ್ಷಕನ ಮೇಲೆ ಹೇರಿ ಭಾರವಾಗಿಸುವ ಹೆಚ್ಚುಗಾರಿಕೆಯಷ್ಟೇ ಸಿನಿಮಾದಲ್ಲಿ ಸಿದ್ಧಿಸಿರುವುದು. ಜೊತೆಗೆ ಕಥೆಗೆ ಪೂರಕವಲ್ಲದ ಸಂಭಾಷಣೆಗಳನ್ನು ಅಬ್ಬರದಲ್ಲಿ ತುಂಬಿರುವುದು..

ಚಿಕ್ಕಂದಿನಲ್ಲಿ ಬಡತನದ ಕಾರಣಕ್ಕಾಗಿ ತನ್ನ ಮೂರೂ ಮಕ್ಕಳನ್ನು ಮೂರು ವಿಭಿನ್ನ ಕುಟುಂಬಗಳಿಗೆ ದತ್ತುಕೊಟ್ಟಿರುವ ತಾಯಿ. ಇಲ್ಲೂ ಸಾಮಾಜಿಕ ಪರಿಸರವನ್ನು ಕಟ್ಟಿಕೊಡುವ ಅಗತ್ಯ ನಿರ್ದೇಶಕರಿಗೆ ಕಂಡುಬಂದಂತಿಲ್ಲ. ಬಡತನದ ಕಾರಣ ಹೇಳಿಬಿಟ್ಟರೆ ಸಾಕು! ಆಕೆ ಮೂರೂ ವಿಭಿನ್ನ ಸಮುದಾಯದವರಿಗೆ
ಮಕ್ಕಳನ್ನು ದತ್ತುಕೊಟ್ಟಿದ್ದಾಳೆ, ಹಾಗಾಗಿ ಸೋದರ-ಸೋದರಿಯರು ವಿಭಿನ್ನ ಧರ್ಮೀಯರಾಗಿ, ಸಮುದಾಯದವರಾಗಿ ತಮ್ಮ ಸಾಕಿದವರ ಬಳಿ, ತಾವು ಜೊತೆಯಾದವರ ಬಳಿ ಅಕ್ಕರೆಯಿಂದ ಇದ್ದಾರೆ ಎಂಬ ಉದಾತ್ತ ಆಶಯವನ್ನು ತ್ರಾಸದಾಯಕವಾಗಿ ನಿರೂಪಿಸಲು ನಿರ್ದೇಶಕ ಶ್ರಮಿಸಿದ್ದಾರೆ.

ಈ ನಿರೂಪಣೆಯಲ್ಲಿ ರತ್ನಾಕರನ ಪಾತ್ರವನ್ನು ಗಮನಿಸಿ. ತನ್ನ ನಿಜ ತಾಯಿಯ ಬಗ್ಗೆ ತಿಳಿಯುವ ಮೊದಲೇ, ಆತನ ಸಿಟ್ಟಿನ-ಹುಚ್ಚಾಟದ ವರ್ತನೆಗೆ ಗಟ್ಟಿ ಕಾರಣಗಳನ್ನು ನಿರ್ದೇಶಕ ಕಟ್ಟಿಕೊಡುವುದಿಲ್ಲ. ತನ್ನ ಹೆತ್ತ ತಾಯಿಯ ಶೋಧಕ್ಕೆ ಜತೆಯಾಗುವ ಪತ್ರಕರ್ತೆಯ ಜೊತೆಗೆ ವರ್ತಿಸುವಾಗ ವಿಜೃಂಭಿಸುವ ’ಮಿಸೋಜಿನಿ’ಗೆ ಸರಿಯಾದ ಪ್ರತಿರೋಧವನ್ನೇ ಸಿನಿಮಾದಲ್ಲಿ ಕಟ್ಟಿಕೊಡುವುದಿಲ್ಲ. ರತ್ನಾಕರನ ತಾಯಿಯ ಪಾತ್ರದ್ದೂ ಇಂತಹ ಮಿಸೋಜಿನಿಯ ಅತಿರೇಕದ ಸಂಭಾಷಣೆಯನ್ನು ಹೊತ್ತು ಮೆರೆದಿದೆ. ಮಗನಿಗೆ ಹೆಣ್ಣು ಹುಡುಕಲು ಹೋಗುವ ಸನ್ನಿವೇಶವನ್ನು ಕಟ್ಟಿಕೊಟ್ಟಿರುವ ರೀತಿ, ತನ್ನ ಸೊಸೆಯನ್ನು ಹಂಗಿಸುವ ರೀತಿ ಇವೆಲ್ಲಾ ಹಾಸ್ಯದ ಹೆಸರಿನಲ್ಲಿ ಅಭಿರುಚಿಹೀನತೆಯನ್ನು ಮೆರೆಸಿವೆ.

ಇನ್ನು ರತ್ನಾಕರ ತನ್ನ ಸಹೋದರಿಯನ್ನು ಹುಡುಕಿ ಜಮ್ಮುಕಾಶ್ಮೀರಕ್ಕೆ ತೆರಳುವುದು, ಅಲ್ಲಿ ಇನ್ನೊಬ್ಬ ಸಹೋದರನ ಬಗ್ಗೆ ತಿಳಿದು ಉತ್ತರ ಕರ್ನಾಟಕಕ್ಕೆ ತೆರಳುವುದು ಹೀಗೆ ಕಥೆಯ ಜಾಡು ಬೆಳೆಯುತ್ತದೆಯೇ ಹೊರತು ಎಲ್ಲೂ ಹೃದಯಕ್ಕೆ ಇಳಿಯುವುದಿಲ್ಲ. ರತ್ನಾಕರನ ಈ ವೈಯಕ್ತಿಕ ಬಿಕ್ಕಟ್ಟಿನಲ್ಲಿ ಸಮಾಜದ ಆಗುಹೋಗುಗಳು, ವ್ಯವಸ್ಥೆಯ ರೂಪಗಳು ಯಾವುವೂ ಪ್ರತಿಧ್ವನಿಸುವುದಿಲ್ಲ. ತನ್ನ ಹೆತ್ತ ತಾಯಿಗಿಂತ ಸಾಕಿ ಸಲಹಿದ ತಾಯಿ ಸರೋಜಾಳ ಮೇಲೆ ಪ್ರೀತಿ ಮುಖ್ಯ ಎಂದು ಬದಲಾಗುವ ರತ್ನಾಕರನ ಪಯಣದಲ್ಲಿ ಪ್ರೇಕ್ಷಕನನ್ನು ಸಹಪಯಣಿಗನನ್ನಾಗಿಸುವ ಶಕ್ತಿಯನ್ನು ಸಿನಿಮಾ ಹೊಂದಿದೆಯೇ ಎಂಬ ಪ್ರಶ್ನೆಗೆ ನಿರಾಸೆಯೇ ಉತ್ತರ! ಬಿಂಬಿಸಿರುವ ಅಬ್ಬರಕ್ಕೆ ಬದಲಾಗಿ, ಕಟ್ಟಿಕೊಡಬೇಕೆಂದುಕೊಂಡಿರುವ ಆಶಯಕ್ಕೆ ಬದಲಾಗಿ ಸಂಬಂಧಗಳ ಸೂಕ್ಷ್ಮಗಳನ್ನು ಅವಲೋಕಿಸಲು ಪ್ರಯತ್ನಿಸಿದ್ದರೆ ಸಿನಿಮಾ ತುಸುವಾದರೂ ಗಟ್ಟಿಯಾಗಿ ಮೂಡಿರುತ್ತಿತ್ತು.

ರತ್ನಾಕರನ ಪಯಣದಲ್ಲಿ ಜತೆಯಾಗುವ ಮಯೂರಿಯದ್ದೂ (ರೆಬಾ ಮೊನಿಕಾ ಜಾನ್) ಹೆಚ್ಚುಕಮ್ಮಿ ಇದೇ ರೀತಿಯ ಕಥೆ. ಬಾಲ್ಯದಲ್ಲಿಯೇ ತಂದೆತಾಯಿ ಆಕೆಯನ್ನು ತೊರೆದಿರುವುದರಿಂದ ಟ್ರಾನ್ಸ್‌ಜೆಂಡರ್ ಒಬ್ಬರು ಸಾಕಿ ಬೆಳೆಸಿದ್ದಾರೆ. ಈ ವಿಷಯ ಆಕೆಯನ್ನು ವರಿಸುವಬೇಕಾಗಿರುವವನಿಗೆ ಅಪಥ್ಯ. ಈ ಪಯಣದಲ್ಲಿ ತನ್ನ ಫಿಯಾನ್ಸಿಯನ್ನು ತೊರೆಯುವ ಧೈರ್ಯವನ್ನು ಮಯೂರಿ ಮಾಡುತ್ತಾಳೆ. ಇಲ್ಲೂ ಉದಾತ್ತವಾದ ಆಶಯಗಳನ್ನು ನಿರ್ದೇಶಕ ಇಟ್ಟುಕೊಂಡಿದ್ದರೂ, ಅದನ್ನು ಸಿನಿಮ್ಯಾಟಿಕ್ ರೂಪದಲ್ಲಿ ಕಟ್ಟಿಕೊಡಲು ಪ್ರಯತ್ನಿಸದೆ ಅದನ್ನು ತುರುಕಿದಂತೆ ಪ್ರೇಕ್ಷಕನಿಗೆ ಭಾಸವಾಗುತ್ತದೆ.

ಆದರೆ, ರತ್ನಾಕರನ ಸಹೋದರ ಉಡಾಳನ ಪಾತ್ರವನ್ನು ವಿಜೃಂಭಿಸುವಾಗ ನಿರ್ದೇಶಕ ಉದಾರವಾಗಿ ಅದಕ್ಕೆ ಸ್ಪೇಸ್ ಕೊಡುತ್ತಾರೆ. ಉಡಾಳ ಕುಡುಕನೊಬ್ಬನನ್ನು ಬೆದರಿಸುವ ಅತಿ ಕೆಟ್ಟ ರೀತಿಯ ಸಂಭಾಷಣೆಯಿಂದ ಹಿಡಿದು, ಅದರಿಂದ ಆ ಕುಡುಕ ಸರಿಹೋಗಿ ಧನ್ಯವಾದಗಳನ್ನು ಅರ್ಪಿಸುವವರೆಗೂ ಅದಕ್ಕೆ ವಿಪುಲ ಅವಕಾಶವಿದೆ. ಹೀಗೆ ಹೆಚ್ಚು ಪುರುಷಕೇಂದ್ರಿತ ಪಾತ್ರಗಳ ವಿಜೃಂಭಣೆಯ ಎಂದಿನ ಭಾರತೀಯ ಸಿನಿಮಾಗಳ ಸಾಮಾನ್ಯ ಧಾಟಿಯನ್ನು ಈ ಚಿತ್ರವೂ ಮುಂದುವರೆಸಿದೆ. ಹಾಗೆಯೇ ಮುಸ್ಲಿಂ ಪಾತ್ರಗಳು ಕನ್ನಡ ಮಾತನಾಡುವ ಬಗೆಗೆ ಕನ್ನಡ ಸಿನಿಮಾಗಳಲ್ಲಿ ಇರುವ ಪೂರ್ವಗ್ರಹವೂ ಇಲ್ಲಿ ಮುಂದುವರೆದಿದೆ.

ಯಾವುದೇ ಕಥೆಯನ್ನು ಹೇಳುವಾಗ ಸುತ್ತಲಿನ ಪರಿಸರ ಅದಕ್ಕೆ ಹೇಗೆ ಕಾರಣ ಮತ್ತು ವ್ಯವಸ್ಥೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಒಳಗೊಳ್ಳುವುದು ಸಶಕ್ತ ಕಥಾನಿರೂಪಣೆಯ ಬಗೆ. ತಂತ್ರಜ್ಞಾನ, ಸಿನಿಮಾ ಬಗೆಗಿನ ಚಿಂತನೆ ಹೆಚ್ಚೆಚ್ಚು ಬೆಳೆದಂತೆ ಇದನ್ನು ದೃಶ್ಯ ಮಾಧ್ಯಮದಲ್ಲಿಯೂ ಸುಲಭವಾಗಿ ಒಳಗೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ಕಥೆಯನ್ನು ಕಟ್ಟಿಕೊಡುವಾಗ ಸೃಷ್ಟಿಸುವ ಪರಿಸರ, ಘರ್ಷಣೆಯನ್ನು ನಿರೂಪಿಸಲು ಬೇಕಾದ ಗಟ್ಟಿ ಕಾರಣಗಳು, ಅದನ್ನು ಬಗೆಹರಿಸಲು ಉಪಯೋಗಿಸುವ ತಂತ್ರ ಇವುಗಳ ಬಗ್ಗೆ ಕನ್ನಡದ ನಿರ್ದೇಶಕರು ಇನ್ನೂ ಗಂಭೀರವಾಗಿ ಚಿಂತಿಸುವುದು ಒಟ್ಟಾರೆ ಕನ್ನಡ ಸಿನಿಮಾರಂಗದ ದೃಷ್ಟಿಯಿಂದ ಒಳಿತು. ತಾಯಿ-ಮಕ್ಕಳ ಸಂಬಂಧದ ರಮಣೀಯ ಭಾವುಕತೆ ಎಂದೆಂದಿಗೂ ಸರಕಾಗುತ್ತದೆ ಎಂಬ ದೃಷ್ಟಿಕೋನದಿಂದ ಹೊರಬಂದು ಇನ್ನೂ ಆಳದ ಗ್ರಹಿಕೆಗೆ, ವಿಶಾಲವಾದ ಅವಲೋಕನಕ್ಕೆ ಮುಂದಾಗುವ ದಿನ ಕನ್ನಡ ಚಿತ್ರರಂಗಕ್ಕೆ ಶೀಘ್ರಬರಲಿ!


ಇದನ್ನೂ ಓದಿ: ಸರ್ದಾರ್ ಉಧಮ್ ಸಿನಿಮಾ; ಪ್ರಭುತ್ವದ ಹಿಂಸೆಗೆ ಪ್ರತಿಯಾಗಿ ಕ್ರಾಂತಿಕಾರಿ ಮಾರ್ಗ ತುಳಿದ ಯುವಕನ ಕಥೆ

ಇದನ್ನೂ ಒದಿ: ತಸ್ವೀರ್ ದಕ್ಷಿಣ ಏಷ್ಯಾ ಚಿತ್ರೋತ್ಸವ: ಅತ್ಯುತ್ತಮ LGBTQI+ ಚಿತ್ರ ಪ್ರಶಸ್ತಿ ಪಡೆದ ಕನ್ನಡದ ‘ನಾನು ಲೇಡಿಸ್’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...