Homeಮುಖಪುಟಸರ್ದಾರ್ ಉಧಮ್ ಸಿನಿಮಾ; ಪ್ರಭುತ್ವದ ಹಿಂಸೆಗೆ ಪ್ರತಿಯಾಗಿ ಕ್ರಾಂತಿಕಾರಿ ಮಾರ್ಗ ತುಳಿದ ಯುವಕನ ಕಥೆ

ಸರ್ದಾರ್ ಉಧಮ್ ಸಿನಿಮಾ; ಪ್ರಭುತ್ವದ ಹಿಂಸೆಗೆ ಪ್ರತಿಯಾಗಿ ಕ್ರಾಂತಿಕಾರಿ ಮಾರ್ಗ ತುಳಿದ ಯುವಕನ ಕಥೆ

- Advertisement -
- Advertisement -

ಭಾರತ ಬ್ರಿಟಿಷ್ ವಸಾಹತುವಾಗಿದ್ದಾಗ ಅಂದಿನ ಬ್ರಿಟಿಷ್ ಸರ್ಕಾರ ತನ್ನ ವಿರುದ್ಧದ ಪ್ರತಿರೋಧವನ್ನು ಹೇಗಾದರೂ ದಮನಿಸಲು ಪ್ರಯತ್ನಿಸುತ್ತಿತ್ತು. ಆದರೆ ಆ ದಮನ ಎಲ್ಲ ರೀತಿಯ ಮಿತಿ ಮೀರಿದ್ದು ಏಪ್ರಿಲ್ 13 1919ರಂದು. ಪಂಜಾಬಿನ ಅಮೃತಸರದ ಜಲಿಯನ್ ವಾಲಾಬಾಗ್‌ನಲ್ಲಿ ಕರಾಳ ರೌಲತ್ ಕಾಯ್ದೆಯ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ನಿಶಸ್ತ್ರ ಜನರ ಮೇಲೆ ಬ್ರಿಗೇಡಿಯರ್ ಜನರಲ್ ರೆಜಿನಾಲ್ಡ್ ಡೈಯರ್ ಯಾವುದೇ ಪೂರ್ವಸೂಚನೆ ಇಲ್ಲದೆ, ಜನರನ್ನು ಚದುರಿಸಲು ಸಣ್ಣ ಪ್ರಯತ್ನವನ್ನೂ ಮಾಡದೆ, ಸಾವಿರಾರು ಸುತ್ತು ಗುಂಡುಗಳನ್ನು ಹಾರಿಸಲು ಆದೇಶ ನೀಡಿದ್ದು, ಈ ಹತ್ಯಾಕಾಂಡಕ್ಕೆ ಕಾರಣವಾಗಿತ್ತು. ಈ ಮಾರಣಹೋಮದ ಬಗ್ಗೆ ತದನಂತರ ರಚಿಸಲಾದ ಹಂಟರ್ ಕಮಿಟಿ ಕೂಡ ನಿಷ್ಪಕ್ಷಪಾತ ತನಿಖೆಯನ್ನು ಮಾಡಲು ಸೋತಿತ್ತು. ಗಾಯಕ್ಕೆ ಉಪ್ಪು ಸವರುವಂತೆ ಅಂದು ನಡೆದ ಈ ಹತ್ಯಾಕಾಂಡಕ್ಕೆ ಶೂಟಿಂಗ್ ಆರ್ಡರ್ ನೀಡಿದ್ದ ಡೈಯರ್ ಆಗಲೀ ಅಂದು ಪಂಜಾಬಿನ ಲೆಫ್ಟಿನೆಂಟ್ ಗವರ್ನರ್ ಆಗಿದ್ದ ಮೈಕೇಲ್ ಓ ಡ್ವಾಯರ್ ಆಗಲಿ, ಸಣ್ಣ ಮಟ್ಟದ ಪಶ್ಚಾತ್ತಾಪವನ್ನೂ ವ್ಯಕ್ತಪಡಿಸಿರಲಿಲ್ಲ.

ರೆಜಿನಾಲ್ಡ್ ಡೈಯರ್

ಇದಕ್ಕೆ ವ್ಯತಿರಿಕ್ತವಾಗಿ, ಡೈಯರ್ ಹಂಟರ್ ಕಮಿಶನ್ ಎದುರು “ಸಾಧ್ಯವಿತ್ತು, ಗುಂಡು ಹಾರಿಸದೆ ಗುಂಪನ್ನು ಚದುರಿಸಬಹುದಿತ್ತು. ಆದರೆ ಅವರು ಹಿಂದಿರುಗಿ ಬಂದು, ನನ್ನನ್ನು ನೋಡಿ ನಕ್ಕಿ, ನಾನು ಮೂರ್ಖನಂತೆ ಕಾಣುವಂತೆ ಮಾಡುತ್ತಿದ್ದರು” ಎಂದಿದ್ದನಲ್ಲದೆ ಅವಕಾಶ ಸಿಕ್ಕಿದ್ದರೆ ಇನ್ನೂ ಹೆಚ್ಚಿನ ಕ್ರೌರ್ಯಕ್ಕೆ ಸಿದ್ಧನಾಗಿದ್ದೆ ಎಂದಿದ್ದ. ಇಂತಹ ಒಂದು ಕರಾಳ ಘಟನೆ ಭಾರತೀಯರ ಅಂತಸಾಕ್ಷಿಯನ್ನು ಕದಡಿತ್ತು ಎಷ್ಟೋ ವರ್ಷಗಳ ಕಾಲ ಸಂಘಟಿತ ನೆನಪಿನಲ್ಲಿ ನೋವಾಗಿ ಮಡುಗಟ್ಟಿತ್ತು. ವರ್ತಮಾನದಲ್ಲಿಯೂ ಪ್ರಭುತ್ವಗಳು ನಡೆಸುವ ಹತ್ಯಾಕಾಂಡಗಳ ಸಂದರ್ಭಗಳಲ್ಲಿ ಅಮೃತಸರದ ಜಲಿಯನ್ ವಾಲಾಬಾಗ್ ಪ್ರತಿಧ್ವನಿಸುತ್ತಿರುತ್ತದೆ. ಈ ಹಿನ್ನೆಲೆಯಲ್ಲಿ, ಇತ್ತೀಚೆಗಷ್ಟೇ ಒಟಿಟಿ ವೇದಿಕೆಯೊಂದರಲ್ಲಿ ಬಿಡುಗಡೆಯಾಗಿರುವ ಕ್ರಾಂತಿಕಾರಿ ಉಧಮ್ ಸಿಂಗ್ ಅವರ ಜೀವನದ ಒಂದು ಘಟ್ಟವನ್ನು ಕಟ್ಟಿಕೊಡುವ ’ಸರ್ದಾರ್ ಉಧಮ್’ ದೊಡ್ಡಮಟ್ಟದ ಕುತೂಹಲ ಮೂಡಿಸಿದ್ದು ನಿಜ.

ಉಧಮ್ ಸಿಂಗ್ ನಕಲಿ ಪಾಸ್‌ಪೋರ್ಟ್ ಬಳಸಿ ಲಂಡನ್‌ಗೆ ಪ್ರಯಾಣ ಬೆಳೆಸುವ, ಅಲ್ಲಿ ಭಾರತೀಯ ಕ್ರಾಂತಿಕಾರಿಗಳ ಜೊತೆಗೆ ಸಂವಹನ ಸಾಧಿಸುವ, ಹಲವು ವರ್ಷಗಳ ಕಾಲ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡು ತನ್ನ ಕಾರ್ಯಸಾಧನೆಗಾಗಿ ಹವಣಿಸುವ, ಮೈಕೇಲ್ ಡ್ವಾಯರ್‌ಗೆ ಗುಂಡುಹೊಡೆದು ಕೊಲ್ಲುವ ಮೂಲಕ ತನ್ನ ಕಾರ್ಯವನ್ನು ಸಾಧಿಸುವ, ತನಿಖೆಯಲ್ಲಿ ಬ್ರಿಟಿಷ್ ಪೊಲೀಸರ ದೌರ್ಜನ್ಯಕ್ಕೆ ಒಳಗಾಗುವ, ಕೋರ್ಟ್ ವಿಚಾರಣೆಯ ಸಮಯದಲ್ಲಿ ನನಗೆ ಟ್ರಯಲ್ ಬೇಡ ನಮಗೆ ಸ್ವತಂತ್ರ ನೀಡಿ ಎಂದು ಗಲ್ಲು ಶಿಕ್ಷೆಗೆ ಗುರಿಯಾಗುವ ಹಾಗೂ ಫ್ಲಾಷ್‌ಬ್ಯಾಕ್‌ನಲ್ಲಿ ಕಟ್ಟಿಕೊಟ್ಟಿರುವಂತೆ, ಜಲಿಯನ್ ವಾಲಾಬಾಗ್ ಹತ್ಯಾಕಾಂಡ, ಎಲ್ಲ ಜನರ ಚಲನವಲನವನ್ನು ನಿರ್ಬಂಧಿಸಿದ ಮಾರ್ಶಲ್ ಲಾ ಉಲ್ಲಂಘಿಸಿ ಅಪಾರ ಸಾವುನೋವಿನ ನಡುವೆ ಗಾಯಗೊಂಡವರನ್ನು ರಕ್ಷಿಸುವ ಉಧಮ್ ಜೀವನವನ್ನು ಸಿನಿಮಾ ಹಿಡಿದಿಡಲು ಪ್ರಯತ್ನಿಸಿದೆ. ಈ ನಿಟ್ಟಿನಲ್ಲಿ ಮನುಕುಲದಲ್ಲಿಯೇ ಒಂದು ನೀಚ ಘಟನೆಯಾಗಿ ದಾಖಲೆಯಾಗಿರುವ, ಬ್ರಿಟಿಷ್ ಪ್ರಭುತ್ವ ನಡೆಸಿದ ಹತ್ಯಾಕಾಂಡದ ಬಗೆಗಿನ ಸೃಜನಶೀಲ ಅಭಿವ್ಯಕ್ತಿಯಾಗಿ ಹೊಸ ಶತಮಾನದ ಪೀಳಿಗೆಗೆ ಆ ದುರಂತವನ್ನು ದಾಟಿಸಲು ಸಿನಿಮಾ ಪ್ರಯತ್ನಿಸಿದೆ.

ಮೈಕೇಲ್ ಓ ಡ್ವಾಯರ್

ಈ ಕಥನವನ್ನು ಕಟ್ಟುವ ಹಿನ್ನೆಲೆಯಲ್ಲಿ ಸಾಮಾನ್ಯವಾಗಿ ತಲೆದೋರುವ ಕೆಲವು ತಾತ್ವಿಕ ಪ್ರಶ್ನೆಗಳನ್ನು ನಿರ್ದೇಶಕ ಬಗೆಹರಿಸಿಕೊಳ್ಳಲು ಪ್ರಯತ್ನಿಸಿರುವುದು ಕೂಡ ಸಿನಿಮಾ ತನ್ನ ಶೈಲಿಯಲ್ಲಿ ಒಳಗೊಂಡಿದೆ. ಅದರಲ್ಲಿ ಪ್ರಮುಖವಾಗಿ, ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಮತ್ತು ಭಗತ್ ಸಿಂಗ್‌ರನ್ನು ಗಲ್ಲಿಗೇರಿಸಿರುವ ಘಟನೆಗಳಿಂದ ಕನಲಿ ಕ್ರಾಂತಿಕಾರಿ ದಾರಿ ಹಿಡಿದಿರುವ ಉಧಮ್‌ನದ್ದು ಕೇವಲ ಪ್ರತೀಕಾರವಷ್ಟೆಯೇ? ಎಂಬುದು. ಅಲ್ಲವೆಂಬಂತೆ, ಫ್ಲಾಷ್‌ಬ್ಯಾಕ್‌ನಲ್ಲಿ ಉಧಮ್, ಭಗತ್ ಸಿಂಗ್ ಜೊತೆಗೆ ನಡೆಸುವ ಸಂಭಾಷಣೆ ಉತ್ತರಿಸುತ್ತದೆ. ’ಕ್ರಾಂತಿಕಾರಿಗಳಿಗೂ ಮತ್ತು ಭಯೋತ್ಪಾದಕರಿಗೂ ವ್ಯತ್ಯಾಸವಿದೆ’ ಎನ್ನುವ ಭಗತ್ ಸಿಂಗ್, ’ಕ್ರಾಂತಿಕಾರಿ ಸ್ವಾತಂತ್ರ್ಯ ಗಳಿಸಿಕೊಳ್ಳಲು ಕೇವಲ ಸಾಂಕೇತಿಕ ಕೃತ್ಯಗಳಿಗೆ ಮುಂದಾಗುತ್ತಾನೆ, ಆದುದರಿಂದ ಕ್ರಾಂತಿಕಾರಿ ಕೋಮುವಾದಿ, ಜಾತಿವಾದಿ ಆಗಿರಲು ಸಾಧ್ಯವಿಲ್ಲ ಮತ್ತು ಅವನಿಗೆ ವರ್ಗವಿಲ್ಲ, ಅವನು ಹೆಚ್ಚು ಮಾನವೀಯವಾಗಿರಬೇಕು’ ಎಂಬಂತಹ ಸಂಭಾಷಣೆ ಮೂಡುತ್ತದೆ. ಹಾಗೆಯೇ ಡ್ವಾಯರ್‌ನನ್ನು ಕೊಂದ ನಂತರ, ಕೋರ್ಟ್ ವಿಚಾರಣೆಯಲ್ಲಿ ಭಾರತದ ಸ್ವಾತಂತ್ರ್ಯಕ್ಕಾಗಿ ಮೊರೆಯಿಡುವ ಉಧಮ್ ಅದಕ್ಕಾಗಿ ಯಾವುದೇ ತ್ಯಾಗಕ್ಕೆ ಸಿದ್ಧ ಎನ್ನುತ್ತಾನೆ. ಈ ರೀತಿಯಲ್ಲಿ ದೃಶ್ಯ ಕಟ್ಟಿರುವುದು ಈ ಸಿನಿಮಾವನ್ನು ಕೇವಲ ಪ್ರತೀಕಾರದ ಅಥವಾ ರಾಷ್ಟ್ರೀಯತೆಯನ್ನು ಉದ್ದೀಪಿಸುವ ಸಿನಿಮಾವನ್ನಾಗಿಸದೆ, ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಾಂತಿಕಾರಿಗಳ ಪಾತ್ರವನ್ನು ನಿರೂಪಿಸುವ ಸಿನಿಮಾವಾಗಿಯೂ ಬೆಳೆಯಲು ಪ್ರಯತ್ನಿಸಿದೆ. ಒಂದು ಕ್ರೌರ್ಯದ ಪ್ರಭುತ್ವದ ವಿರುದ್ಧದ ಹೋರಾಟವಾಗಿಯೂ ಕಾಣಿಸುತ್ತದೆ.

ಉಧಮ್ ಸಿಂಗ್ ಇಂಗ್ಲೆಂಡಿನಲ್ಲಿ ತನ್ನ ಕಾರ್ಯಸಾಧನೆಗಾಗಿ ಹಲವು ವರ್ಷಗಳ ಕಾಲ ಹತ್ತು ಹಲವು ಕೆಲಸಗಳನ್ನು ಮಾಡಿಕೊಂಡು ಜೀವನ ಸವೆಸುವ ದೃಶ್ಯಗಳು ಸಿನಿಮಾದ ಬಹುಭಾಗವನ್ನು ಆಕ್ರಮಿಸಿವೆ. ಅದರಲ್ಲಿ ಡ್ವಾಯರ್ ಜೊತೆಗೆ ಸ್ವಲ್ಪ ಸಮಯ ಕಳೆಯುವ ದೃಶ್ಯಗಳು, ಹೇಗೆ ಹತ್ಯಾಕಾಂಡದ ರೂವಾರಿಗಳು, ಸಾವಿರಾರು ನಿರಾಯುಧ ಜನರನ್ನು ಕೊಂದ ಬಗ್ಗೆ ಸಣ್ಣ ಪಶ್ಚಾತ್ತಾಪವನ್ನೂ ಉಳಿಸಿಕೊಂಡಿಲ್ಲ ಎಂಬುದನ್ನು ಚಿತ್ರಿಸುತ್ತದೆ. ಉಳಿದಂತೆ ಐರಿಷ್ ರೆವೊಲ್ಯೂಷನರಿ ಅಸೋಸಿಯೇಶನ್, ಎರಡನೇ ಮಹಾಯುದ್ಧದ ಸಂದರ್ಭ, ಕಮ್ಯುನಿಸ್ಟ್ ಚಳವಳಿ, ಎಚ್ ಎಸ್ ಆರ್ ಎ, ಇವೆಲ್ಲವೂ ಸಿನಿಮಾದ ಭಾಗವಾಗಿ ಹಾದುಹೋದರೂ ವಿವರಗಳ ಕೊರತೆಯಿಂದ ಸೊರಗುತ್ತವೆ. ಸಾಂದರ್ಭಿಕವಾಗಿ ಬಳಕೆಯಾಗಿರುವಂತೆ ಕಾಣುವ ಈ ಸಂಗತಿಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಒಳಗೊಂಡಿದ್ದರೆ ಆ ಪ್ರಕ್ಷುಬ್ಧ ದಿನಗಳ ಚಿತ್ರಣದ ವಿವರಗಳ ಹಿನ್ನೆಲೆಯಲ್ಲಿ ಉಧಮ್ ಸಿಂಗ್‌ನ ಕಥೆ ಇನ್ನಷ್ಟು ಜೀವಂತವಾಗಿರುತ್ತಿತ್ತು.

ಉಧಮ್ ಸಿಂಗ್

ಇನ್ನು ಸಿನಿಮಾದ ಕೊನೆಯ ಭಾಗದಲ್ಲಿ ಜಲಿಯನ್ ವಾಲಾಬಾಗ್ ಹತ್ಯಾಕಾಂಡವನ್ನು ವಿಸ್ತೃತವಾಗಿ ಹಿಡಿದಿಡುವ ಪ್ರಯತ್ನ ಮಾಡಲಾಗಿದೆ. ಇದನ್ನು ಕೂಡ ಮುಖ್ಯ ಕಥನದ ನಡುನಡುವಿನಲ್ಲಿ ಸೇರಿಸಿ, ಫ್ಲಾಷ್‌ಬ್ಯಾಕ್ ತಂತ್ರದ ಮೂಲಕ ಹೇಳಬಹುದಿತ್ತಾದರೂ, ಅದನ್ನು ವಿಭಿನ್ನ ಅಧ್ಯಾಯವನ್ನಾಗಿಸಿರುವುದು ಹೆಚ್ಚು ಪರಿಣಾಮ ಬೀರಲಿ ಎಂದೇನೋ! ಆದರೆ ಅದು ಸಿನಿಮಾದ ಕೊನೆಯ ಭಾಗಕ್ಕೆ ಪ್ರತ್ಯೇಕವಾದ ಸೇರ್ಪಡೆಯೆನಿಸಿ, ಸಿನಿಮಾದ ಇಡಿಯಾದ ನಿರೂಪಣೆಯ ಭಾಗವಾಗಿ ಸೇರಲಿಲ್ಲವೇನೋ ಎಂಬಂತೆ ಭಾಸವಾಗುತ್ತದೆ. ಜಲಿಯನ್ ವಾಲಾಬಾಗ್‌ಗೆ ಮೊದಲು ಮತ್ತು ನಂತರದ ದಮನಕಾರಿ ಘಟನೆಗಳ ಐತಿಹಾಸಿಕ ಚಿತ್ರಣವನ್ನು ದೃಶ್ಯರೂಪದಲ್ಲಿ ಕಾಣದೆ ಇರುವುದು ಕೂಡ ಅದಕ್ಕೆ ಕಾರಣವಾಗಿರಬಹುದು. ರೌಲತ್ ಆಕ್ಟ್ ಜಾರಿ, ಮಹಾತ್ಮ ಗಾಂಧಿಯವರ ಪ್ರತಿರೋಧ, ಡಾ. ಸತ್ಯಪಾಲ್ ಮತ್ತು ಸೈಫುದ್ದೀನ್ ಕಿಚ್‌ಲ್ಯೂ ಅವರ ಬಂಧನ ಇವೆಲ್ಲವೂ ಸಂಭಾಷಣೆಯಲ್ಲಿ ಮಾತ್ರ ಹೊಕ್ಕಿವೆ. ಇವುಗಳ ಜೊತೆಗೆ ಹತ್ಯಾಕಾಂಡದ ನಂತರದ ಹಲವು ದೌರ್ಜನ್ಯದ ಘಟನೆಗಳು (ಒಂದು ರಸ್ತೆಯನ್ನು ದಾಟುವಾಗ ಎಲ್ಲ ಭಾರತೀಯರೂ ತೆವಳಿ ಹೋಗಬೇಕು ಎಂಬ ಆದೇಶವನ್ನು ಡೈಯರ್ ನೀಡಿದ್ದು, ಸಾರ್ವಜನಿಕ್ವಾಗಿ ಜನರನ್ನು ನಗ್ನಗೊಳಿಸಿ ಥಳಿಸಿದ್ದು) ದೃಶ್ಯರೂಪದಲ್ಲಿ ಜಾಗಪಡೆಯಲು ಸಾಧ್ಯವಾಗಿದ್ದರೆ, ಅಂದರೆ ವಿವರಗಳು ಇನ್ನೂ ಪಕ್ವವಾಗಿ ದಾಖಲಾಗಿದ್ದರೆ ಸಿನಿಮಾ ಇನ್ನೂ ಮಹತ್ವದ್ದನ್ನು ಪರಿಣಾಮಕಾರಿಯಾಗಿ ಪ್ರೇಕ್ಷಕರಿಗೆ ದಾಟಿಸಲು ಸಾಧ್ಯವಾಗುತ್ತಿತ್ತು. ಜೊತೆಗೆ ಜಲಿಯನ್ ವಾಲಾಬಾಗ್ ಅನ್ನು ಬ್ರಿಟನ್ ಜನರಿಗೆ ತಿಳಿಸಲು ಪ್ರಯತ್ನಿಸಿದ ಪತ್ರಕರ್ತ ಹಾರ್ನಿಮನ್, ಹಂಟರ್ ಕಮಿಶನ್ ಭಾಗವಾಗಿದ್ದ ಮತ್ತು ದಿಟ್ಟತನದಿಂದ ವಿಚಾರಣೆ ನಡೆಸಿದ ಅಂದಿನ ಬ್ಯಾರಿಸ್ಟರ್ ಸೆತಲ್ವಾಡ್ – ಹೀಗೆ ಈ ಘಟನೆಗೆ ಸಂಬಂಧಿಸಿದ ಪ್ರಮುಖ ಐತಿಹಾಸಿಕ ವ್ಯಕ್ತಿಗಳನ್ನುಸಣ್ಣ ಅವಧಿಗಾದರೂ ಕಟ್ಟಿಕೊಡುವ ಅವಕಾಶವನ್ನು ನಿರ್ದೇಶಕರು ಕಳೆದುಕೊಂಡಿದ್ದಾರೆ.

ಉಧಮ್ ಸಿಂಗ್‌ನ ಈ ಕಥೆಯನ್ನು ಕಟ್ಟುವಾಗ ನಿರ್ದೇಶಕ ಶೂಜಿತ್ ಸರ್ಕಾರ್ ಹಲವು ಲಿಬರ್ಟಿಗಳನ್ನು ತೆಗೆದುಕೊಂಡಿದ್ದಾರೆ. ಅದಕ್ಕೆ ಒಂದು ಸಣ್ಣ ಉದಾಹರಣೆಯೆಂದರೆ, ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ದಿನ ಉಧಮ್ ಸಿಂಗ್ ಸ್ವತಃ ಗಾಯಗೊಂಡವರನ್ನು ರಕ್ಷಿಸಲು ಅಲ್ಲಿ ನೆರೆದಿದ್ದರೇ ಎಂಬುದರ ಬಗ್ಗೆ ನಿಖರ ದಾಖಲೆಗಳ ಬಗ್ಗೆ ಇತಿಹಾಸಕಾರರಲ್ಲಿ ಒಮ್ಮತವಿಲ್ಲ. ಆದರೆ ಅದೇ ಭಾಗವನ್ನು ನಿರ್ದೇಶಕರು ಹೆಚ್ಚು ವಿಸ್ತೃತವಾಗಿ ಹೆಣೆದಿದ್ದಾರೆ. ಈ ಲಿಬರ್ಟಿಯನ್ನು ಬಳಸಿ ಇಡೀ ಚಿತ್ರದ ಸಂಭಾಷಣೆಯನ್ನು ತಾತ್ವಿಕವಾಗಿ ವಸಾಹತುಶಹಿಯ ವಿರುದ್ಧ, ಪ್ರಭುತ್ವದ ಹಿಂಸೆಯ ವಿರುದ್ಧ ಚಿಂತನಾರ್ಹವಾಗಿ ಕಟ್ಟಿಕೊಡಲು ಬಳಸಬಹುದಿತ್ತು ಎಂಬ ಭಾವನೆ ಮೂಡದೆ ಇರದು

ಉಧಮ್ ಸಿಂಗ್ ಪಾತ್ರವನ್ನು ಪೋಷಿಸಿರುವ ವಿಕ್ಕಿ ಕೌಶಲ್ ಅವರಿಂದ ಮೊದಲು ಮಾಡಿ ಎಲ್ಲಾ ನಟರೂ ಚೊಕ್ಕವಾದ ನಟನೆಯನ್ನು ನೀಡಿರುವುದು ಪ್ರಶಂಸನೀಯ.

ಹಲವು ಕೊರತೆಗಳ ಹೊರತಾಗಿಯೂ, ಭಾರತದ ಸ್ವಾತಂತ್ರ್ಯ ಹೋರಾಟದ ಒಂದು ಪ್ರಮುಖ ಧಾರೆಯನ್ನು ಪ್ರತಿನಿಧಿಸಿರುವ, ಪ್ರಭುತ್ವದ ಹಿಂಸೆಯನ್ನು ಹಿಡಿಯಲು ಪ್ರಯತ್ನಿಸಿರುವ, ಕೇವಲ ಪ್ರತೀಕಾರದ ಕಥೆಯನ್ನಾಗಿಸದೆ ಅದಕ್ಕೆ ದೊಡ್ಡ ಕ್ಯಾನ್ವಾಸ್ ನೀಡಲು ಪ್ರಯತ್ನಿಸಿರುವ ಮತ್ತು ಈ ಹೋರಾಟದ ಧಾರೆಯನ್ನು ಪ್ರಸ್ತುತಪಡಿಸುವಾಗ ಅದು ಇಂದಿನ ದಿನಕ್ಕೆ ಎಲ್ಲ ಸಮುದಾಯಗಳನ್ನು, ಭಾಷಿಕರನ್ನು ಏಕೀಕೃತಗೊಳಿಸುವ ರಾಷ್ಟ್ರೀಯತೆಯನ್ನು ಉದ್ದೀಪನಗೊಳಿಸದಂತೆ ಎಚ್ಚರಿಕೆಯನ್ನು ಹೊಂದಿರುವುದಕ್ಕೆ ಸರ್ದಾರ್ ಉಧಮ್ ಸಿನಿಮಾ ವರ್ತಮಾನಕ್ಕೆ ಅಗತ್ಯವಿದ್ದ ಸೃಜನಶೀಲ ಪ್ರತಿಕ್ರಿಯೆಯಾಗಿ ಮುಖ್ಯವಾಗುತ್ತದೆ.


ಇದನ್ನೂ ಓದಿ: ನರಮೇಧದ ನೆನಪಿಗೆ ಸುಣ್ಣ ಬಣ್ಣ ಬಳಿಯುತ್ತಿರುವುದೇಕೆ?

ಇದನ್ನೂ ಓದಿ: ’ಲವ್ ಸ್ಟೋರಿ’: ಫ್ಯೂಡಲ್ ಮನಸ್ಥಿತಿಯ ತೆಲುಗು ಸಿನಿಮಾರಂಗದಲ್ಲೊಂದು ಸಣ್ಣ ಆಶಾವಾದದ ಮಿಂಚು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...