ಮೇರು ನಟ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಕಾಲಿಕ ನಿಧನರಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಕಂಠೀರವ ಸ್ಟುಡಿಯೋದಲ್ಲಿ ಅಂತಿಮ ಸಂಸ್ಕಾರ ನಡೆಸುವುದಾಗಿ ಸರ್ಕಾರ ತಿಳಿಸಿದೆ.
ಮುಂಜಾಗ್ರತೆ ಕ್ರಮವಾಗಿ ನಗರದ ಶಾಲೆ, ಕಾಲೇಜುಗಳಿಗೆ ರಜೆ ನೀಡಲಾಗುತ್ತಿದೆ. ವಿದ್ಯಾರ್ಥಿಗಳನ್ನು ಶಾಲೆ-ಕಾಲೇಜುಗಳ ಆಡಳಿತ ಮಂಡಳಿಗಳು ಮನೆಗೆ ಕಳುಹಿಸುತ್ತಿವೆ. ರಾಜಧಾನಿಯಲ್ಲಿರುವ ಸಿನಿಮಾ ಮಂದಿಗಳನ್ನೂ ಮುಚ್ಚಲಾಗಿದೆ. ಬೆಂಗಳೂರು ನಗರದಲ್ಲಿರುವ ಖಾಸಗಿ ಕಂಪನಿಗಳೂ ತಮ್ಮ ಸಿಬ್ಬಂದಿಗಳನ್ನು ಮನೆಗೆ ಕಳುಹಿಸುತ್ತಿದ್ದಾರೆ. ಎಲ್ಲೆಡೆ ಬಿಗಿ ಭದ್ರತೆ ಕೈಗೊಳ್ಳಲು ಪೊಲೀಸರಿಗೆ ಸರಕಾರ ಸೂಚನೆ ನೀಡಿದೆ.
ಡಾ.ರಾಜ್‌ಕುಮಾರ್ ಸಮಾಧಿ ಸಮೀಪ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನೆರವೇರಿಸಲಾಗುತ್ತಿದೆ. ಡಾ.ರಾಜ್‌ಕುಮಾರ್ ಪ್ರತಿಷ್ಠಾನದ ಸ್ವಾಮ್ಯದಲ್ಲಿರುವ ಜಮೀನಿನಲ್ಲಿ ಪುನೀತ್ ರಾಜ್‌ಕುಮಾರ್ ಅವರ ಅಂತ್ಯ ಸಂಸ್ಕಾರವನ್ನು ನಡೆಸಲಾಗುವುದು ಎಂದು ಸರ್ಕಾರ ತಿಳಿಸಿದೆ.
ಲಭ್ಯವಿರುವ ಎಲ್ಲಾ ಸಿಬ್ಬಂದಿಗಳನ್ನು ಬಳಸಿಕೊಂಡು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಏರ್ಪಾಡು ಮಾಡಿಕೊಳ್ಳಲು ಬೆಂಗಳೂರು ಪೊಲೀಸ್ ಅಧೀಕ್ಷಕರು ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದಾರೆ.
ಬೆಂಗಳೂರು ನಗರದಲ್ಲಿ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಪುನೀತ್ ರಾಜ್‌ಕುಮಾರ್ ಅವರ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಶುಕ್ರವಾರ ಸಂಜೆ 5 ಗಂಟೆಯಿಂದ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿದೆ.
ಇದನ್ನೂ ಓದಿರಿ: ಹೊಸ ಪ್ರತಿಭೆಗಳ ಮಹಾನ್ ಪ್ರೋತ್ಸಾಹಕ ಪುನೀತ್ ರಾಜ್‌ಕುಮಾರ್
ಪುನೀತ್ ರಾಜ್‌ಕುಮಾರ್ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ರಾಜ್ಯದ ಜನರು ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ. ತಮ್ಮ ನೆಚ್ಚಿನ ನಟನ ಅಂತಿಮ ದರ್ಶನಕ್ಕಾಗಿ ಸರ್ಕಾರ ಎಲ್ಲ ರೀತಿಯ ಅಗತ್ಯ ವ್ಯವಸ್ಥೆಗಳನ್ನು ಮಾಡುತ್ತಿದೆ’ ಎಂದು ಹೇಳಿದ್ದಾರೆ.
‘ಕರ್ನಾಟಕದ ಜನತೆಯಲ್ಲಿ ನನ್ನ ಮನವಿ ಏನೆಂದರೆ, ಇಂತಹ ಮಹಾನ್ ನಟನನ್ನು ಕಳೆದುಕೊಂಡಾಗ ನೋವಾಗುವುದು ಸಹಜ, ಆದರೆ ಭಾವೋದ್ವೇಗಕ್ಕೆ ಒಳಗಾಗಬಾರದು ಮತ್ತು ತಾಳ್ಮೆ ಕಳೆದುಕೊಳ್ಳಬಾರದು. ಶಾಂತಿ ಕಾಪಾಡಬೇಕು. ಅವರನ್ನು (ಪುನೀತ್) ಶಾಂತಿಯುತವಾಗಿ ಕಳುಹಿಸಬೇಕು. ನಾವು ಅವರಿಗೆ ಸರಿಯಾದ ಗೌರವವನ್ನು ನೀಡಬೇಕು’ ಎಂದು ಬೊಮ್ಮಾಯಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಂತಿ ಕಾಪಾಡಲು ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ. ‘ಶನಿವಾರ ದಿನ ವಿಡೀ ಸಾರ್ವಜನಿಕರಿಗೆ ಅಂತಿಮ ನಮನ ಸಲ್ಲಿಸಲು ಕಂಠೀರವ ಸ್ಟೇಡಿಯಂನಲ್ಲಿ ವ್ಯವಸ್ಥೆ ಮಾಡಿದ್ದೇವೆ. ಆದ್ದರಿಂದ ಜನರು ಶಾಂತಿಯುತವಾಗಿ ಅಂತಿಮ ನಮನ ಸಲ್ಲಿಸಬೇಕು. ಅಭಿಮಾನಿಗಳು ಶಾಂತಿ ಕಾಪಾಡುವಂತೆ ಕೈ ಜೋಡಿಸಿ ವಿನಂತಿಸುತ್ತೇನೆ” ಎಂದಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿನ ಎಲ್ಲಾ ಲಿಕ್ಕರ್ ಶಾಪ್‌ಗಳನ್ನು ಮುಚ್ಚಲು ಸರಕಾರ ಆದೇಶ ನೀಡಿದೆ.
ಶುಕ್ರವಾರ ಮಧ್ಯಾಹ್ನ 3 ಗಂಟೆಯಿಂದ ಶನಿವಾರ ಮಧ್ಯರಾತ್ರಿ 12 ಗಂಟೆವರೆಗೆ ಬಾರ್‌ಗಳನ್ನು ಬಂದ್ ಮಾಡುವಂತೆ ಅಬಕಾರಿ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಬಾರ್ ಆಂಡ್ ರೆಸ್ಟೋರೆಂಟ್‌ಗಳನ್ನು ಮುಚ್ಚಲು ಆದೇಶ ನೀಡಲಾಗಿದೆ.
ಸ್ವಯಂ ಪ್ರೇರಿತ ಬಂದ್‌ಗೆ ಕರೆ: ಕನ್ನಡಪರ ಸಂಘಟನೆಯ ಮುಖಂಡರು ಸ್ವಯಂ ಪ್ರೇರಿತ ಬಂದ್‌ಗೆ ಕರೆ ನೀಡುತ್ತಿದ್ದಾರೆ. ಆದರೆ ಇದಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಏನಾದರೂ ಬಂದ್ ಆಚರಿಸಿದರೆ ದೂರದ ಜಿಲ್ಲೆಗಳಿಂದ ಪುನೀತ್ ಅವರ ಕೊನೆಯ ದರ್ಶನಕ್ಕೆ ಬರುವವರಿಗೆ ತೊಂದರೆಯಾಗಲಿದೆ ಎಂದು ಜನರು ಆತಂಕ ವ್ಯಕ್ತಪಡಿಸಿದ್ದಾರೆ. ರಾಜಾಜಿನಗರ, ವಿಜಯನಗರ ಸುತ್ತ ಮುತ್ತ ಒತ್ತಾಯಪೂರ್ವಕವಾಗಿ ಅಂಗಡಿಗಳನ್ನು ಕ್ಲೋಸ್ ಮಾಡಿಸಿರುವ ವರದಿಗಳಾಗಿವೆ.
ಇದನ್ನೂ ಓದಿರಿ: ಫ್ಯಾಕ್ಟ್‌ಚೆಕ್: ಜಿಮ್‌ನಲ್ಲಿ ಕುಸಿದು ಬೀಳುತ್ತಿರುವ ಈ ವಿಡಿಯೊ ‘ಪುನೀತ್ ರಾಜ್‌ಕುಮಾರ್’ ಅವರದಲ್ಲ



ಕಲಾಗ್ರಾಮ ಮತ್ತು ಕಂಠೀರವ ಸ್ಟುಡಿಯೊ ಕಲೆಗೆ ಮೀಸಲಾಗಲಿ ಅಲ್ಲಿ ಸಮಾಧಿ ಬೇಡ